ಶನಿ ಮಹಾತ್ಮೆ

ವ್ಯಕ್ತಿಯ ಜಾತಕದಲ್ಲಿ ಶನಿಗ್ರಹದ ಸ್ಥಾನಮಾನ ಲೆಕ್ಕಿಸಿ ವ್ಯಕ್ತಿಯ ಜೀವಮಾನದ ಮಹತ್ತರ ಘಟನೆಗಳನ್ನು ಹೇಳುವುದು ಅತಿ ಮುಖ್ಯ. ಏಕೆಂದರೆ ಶನಿಯು ಜೀವನದ ಪ್ರಮುಖ ಘಟನೆಗಳ ಮೇಲೆ ತನ್ನ ಹತೋಟಿ ಹೊಂದಿರುತ್ತಾನೆ. ಈತ ನಿರಾಸೆ, ಜುಗುಪ್ಸೆ, ಅಸಮಾಧಾನ ನೀಡುವ ಗ್ರಹ. ಹೀಗಾಗಿ ಶನಿಯು ಜಾತಕದಲ್ಲಿ ಬಲವಾಗಿದ್ದರೆ ವ್ಯಕ್ತಿ ಜೀವನದಲ್ಲಿ ಸುಖ-ಸಂತೃಪ್ತಿ ಹೊಂದುತ್ತಾನೆ.
ಒಂದು ವೇಳೆ ಶನಿ ಜಾತಕದಲ್ಲಿ ನೀಚಸ್ಥಾನ, ಶತ್ರುಕ್ಷೇತ್ರ, ಶತ್ರು ನವಾಂಶದಲ್ಲಿ ಇದ್ದಲ್ಲಿ ಅಂತಹ ವ್ಯಕ್ತಿಗೆ ಜೀವಮಾನದಲ್ಲಿ ಯಾವುದೇ ಸುಖ, ಸಂತೃಪ್ತಿ ದೊರೆಯದೆ ವಿವಾಹವು ನಿಧಾನವಾಗಿ ಅಥವಾ ಉದ್ಯೋಗದಲ್ಲಿ ತೊಂದರೆ ಉಂಟಾಗಿ ಮಾನಸಿಕ ನೆಮ್ಮದಿ ಹಾಳಾಗುತ್ತದೆ.
ಶನಿ ಜಾತಕದಲ್ಲಿ ಯೋಗಕಾರಕನಾಗಿದ್ದರೂ ಆತ ದುಸ್ಥಾನ ಅಂದರೆ ಲಗ್ನದಿಂದ 6.8.12ನೇ ಮನೆಯಲ್ಲಿ ಇಲ್ಲವೆ ಚಿಕ್ಕಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸಬಹುದು. ಶನಿ ಜಾತಕದಲ್ಲಿ 1.2.7.8.12 ಅಂದರೆ ಲಗ್ನ-ಕುಟುಂಬ, ಕಳತ್ರ-ಆಯಸ್ಸು ಮತ್ತು ವ್ಯಯ ಸ್ಥಾನದಲ್ಲಿದ್ದರೆ ಸ್ತ್ರೀ-ಪುರುಷ ಯಾರೇ ಆದರೂ ಪ್ರಾಪ್ತ ವಯಸ್ಸಿನಲ್ಲಿ ವಿವಾಹವಾಗುವುದು ಕಷ್ಟ.
ಒಂದು ವೇಳೆ ಸ್ತ್ರೀ ಜಾತಕದಲ್ಲಿ ಶನಿ ಯೋಗಕಾರಕನಾದರೆ ಅಂತಹ ತರುಣಿಗೆ ವಿವಾಹ ಬಹಳ ಒಳ್ಳೆಯ ಕಡೆ ಆಗಿ ಗಂಡನಿಗೆ ಉನ್ನತ ಜೀವನ ಪ್ರಾಪ್ತವಾಗುತ್ತದೆ. ಸ್ತ್ರೀ ಜಾತಕದಲ್ಲಿ ಸಪ್ತಮ ಕಳತ್ರ ಸ್ಥಾನ ಹಾಗೂ ಅಷ್ಟಮ ಮನಾಂಗಲ್ಯ ಸ್ಥಾನದಲ್ಲಿ ಶನಿ ಇದ್ದರೆ ಮಾತ್ರ ತಡ ವಿವಾಹವಾಗುತ್ತದೆ.
ಶನಿ ದುಃಖ, ದುಮ್ಮಾನ, ಕಷ್ಟ- ಸಹಿಷ್ಣುತೆ ನೀಡುವ ಪರಮ ನ್ಯಾಯಾಧೀಶ. ಜೀವನದಲ್ಲಿ ಏರು- ಪೇರು ತಂದೊಡ್ಡುವ ಗ್ರಹವಾಗಿದ್ದರೂ, ಜಾತಕದಲ್ಲಿ 3.6.10.11ನೇ ಸ್ಥಾನದಲ್ಲಿದ್ದರೆ ಅಂತಹ ವ್ಯಕ್ತಿಗಳಿಗೆ ವಿದ್ಯಾ -ಯಶಸ್ಸು ಲಭಿಸಿ ಪ್ರಾಪ್ತ ವಯಸ್ಸಿನಲ್ಲಿ ಉದ್ಯೋಗ ವಿವಾಹವಾಗಿ ಅಷ್ಟೈಶ್ವರ್ಯ ಲಭಿಸುತ್ತದೆ.
ಶನಿಯ ದೃಷ್ಟಿ ಸ್ತ್ರೀ ಜಾತಕದಲ್ಲಿ ಕುಟುಂಬ-ಕಳತ್ರ-ಮಾಂಗಲ್ಯ ಸ್ಥಾನ (2.7.8ನೇ ಮನೆಗಳು)ದ ಮೇಲೆ ಬಿದ್ದರೆ ಕಂಕಣ ಭಾಗ್ಯಕ್ಕೆ ತಡೆ ಉಂಟಾಗುತ್ತದೆ. ಪರಿಹಾರಕ್ಕೆ ಶನಿಗ್ರಹ ಶಾಂತಿ ಮಾಡಬೇಕು. ಶನಿಗ್ರಹ ವಿಶೇಷವಾಗಿ 3 ಮತ್ತು 10ನೇ ಮನೆಯನ್ನು ಸಹ ದೃಷ್ಟಿಸುವುದರಿಂದ ಅಂತಹ ವೇಳೆ ವಿವಾಹ ನಿರ್ಣಯ ತೊಡಕಾಗುತ್ತದೆ.
ವೃಷಭ ಮತ್ತು ತುಲಾ ಲಗ್ನಕ್ಕೆ ಶನಿ ಯೋಗಕಾರಕನಾಗುವುದರಿಂದ ಅಂತಹ ಜಾತಕರಿಗೆ ಶುಭ ಫಲ ನೀಡುತ್ತಾನೆ. ಶನಿ ದೆಸೆ ಇವರ ಮಧ್ಯ ವಯಸ್ಸಿನಲ್ಲಿ ನಡೆದರೆ ವಿದ್ಯಾಯೋಗ ಲಭಿಸಿ ದಾಂಪತ್ಯ ಜೀವನದಲ್ಲಿ ಅಭಿವೃದ್ಧಿಯಾಗುತ್ತದೆ. ಶನಿ ಲಗ್ನಕ್ಕೆ 7ನೇ ಮನೆಯಲ್ಲಿದ್ದಾಗ ದಿಗ್ಬಲ ಉಂಟಾಗುತ್ತದೆ.
ಯಾವುದೇ ಜಾತಕದಲ್ಲಿ ಶನಿರಾಹು ಜೊತೆಯಲ್ಲಿ ಸೇರಿದರೆ ಸಾಧಾರಣ ಪ್ರಗತಿ ಇರುತ್ತದೆ. ಅದೇ ಜಾತಕದಲ್ಲಿ ವ್ಯಯ ಸ್ಥಾನದಲ್ಲಿ ಶನಿರಾಹು ಇದ್ದ ಪಕ್ಷದಲ್ಲಿ ವಿವಾಹ ನಂತರ ಪೂರ್ಣ ಸುಖ-ಶಾಂತಿ ಸಿಕ್ಕುವುದಿಲ್ಲ.
ಒಂದು ವೇಳೆ ಸ್ತ್ರೀ ಜಾತಕದಲ್ಲಿ ಶನಿ ರಾಹು 8ನೇ ಮನೆಯಲ್ಲಿದ್ದರೆ ಮಾಂಗಲ್ಯ ಭಾಗ್ಯಕ್ಕೆ ಮಾರಕನಾಗುತ್ತಾನೆ. ರಾಹು ಒಬ್ಬನೇ ಅಷ್ಟಮದಲ್ಲಿದ್ದರೆ ಸರ್ಪದೋಷ ಬರುವುದರಿಂದ ನಿವಾರಣೆಗಾಗಿ ಸರ್ಪಶಾಂತಿ ನಡೆಸಬೇಕು.
ಹೀಗೆ ಶನಿಯು ತನ್ನ ಸ್ಥಾನ ಬದಲಿಸಿದಂತೆ ಹಲವು ಒಳ್ಳೆಯ, ಕೆಟ್ಟ ಪರಿಣಾವಮನ್ನೂ ಉಂಟುಮಾಡುತ್ತಾನೆ.
- ಸಿ. ರಂಗನಾಥರಾವ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


