ಭಕ್ತಿ-ಜ್ಯೋತಿಷ್ಯ

ದೇವರನ್ನು ಹುಡುಕುತ್ತಾ...

ದೇವರನ್ನು ಹುಡುಕುತ್ತಾ...
Published On :

ದೇವರೇ ಕಾಪಾಡಪ್ಪ...! ಎಂದು ನಾವು ಉದ್ಗರಿಸುತ್ತೇವೆ. ಬುದ್ಧ ಭಗವಾನನೆಂದೂ, ಜನಮೂರ್ತಿಯೆಂದೂ ಸಾಯಿಬಾಬಾ, ಅಯ್ಯಪ್ಪ ಸ್ವಾಮಿಯೆಂದೂ ಪೂಜಿಸುವವರಿದ್ದಾರೆ. ಕಲ್ಲು, ಮಣ್ಣು, ಮರ ಎಲ್ಲವೂ ನಮಗೆ ದೇವರೇ. ಹೀಗೆ ಬೇರೆ ಬೇರೆಯಾಗಿ ನಾವು ಪೂಜಿಸುವ ಇಡೀ ಸೃಷ್ಟಿಯೇ ದೇವರು ಎಂದು ನಾವು ನಂಬುತ್ತೇವೆ. ಅಂದರೆ ಒಬ್ಬೊಬ್ಬರಿಗೆ ಒಬ್ಬೊಬ್ಬ ದೇವರಿದ್ದಾನೆ ಎಂದು ಹೇಳಬಹುದೆ?
ಇಲ್ಲ, ದೇವನೊಬ್ಬ ನಾಮ ಹಲವು ಎಂದು ಸಂತರು ಹೇಳುತ್ತಾರೆ. 'ಏಕಂ ಸತ್ ವಿಪ್ರಾ, ಬಹುಧಾ ವದಂತಿ' ಏಕಂ ಸತ್ ದೇವರು ಒಬ್ಬನೇ, ವಿಪ್ರಾ:- ಜ್ಞಾನಿಗಳು, ಬಹುಧಾವದಂತಿ ಅನೇಕ ರೂಪದಲ್ಲಿ ವರ್ಣಿಸುತ್ತಾರೆ. ಹಾಗಾದರೆ ಆ ಒಬ್ಬನೇ ದೇವರು ಯಾರು? ಎಲ್ಲಿದ್ದಾನೆ?
'ಗಾಡ್ ಓನ್ಲಿ ನೋಸ್ ಹೂ ಹಿ ಈಸ್‌' ಎಂಬುದು ಜಯದಯಾಲ್ ಗೋಯಂಕಾರವರ ನಿರೂಪಣೆ. ದೇವರು ಮಾತ್ರವೇ ತಾನು ಯಾರೆಂದು ತಿಳಿಯಬಲ್ಲ. ಅವನು ಸಾಮಾನ್ಯರ ತಿಳಿವಳಿಕೆಗೆ ಗೋಚರಿಸುವುದಿಲ್ಲ. ಇಟ್ ಇಸ್ ಆ್ಯನ್ ಇಂಟರ್‌ನಲ್ ಪವರ್, ಇಟ್ ಈಸ್ ಆ್ಯನ್ ಎನರ್ಜಿ- ಒಂದು ಅಗೋಚರ ಶಕ್ತಿಯೆಂದು ವಿಜ್ಞಾನಿಗಳು ನಿರೂಪಿಸುತ್ತಾರೆ.  ಸಕಲ ಜೀವಿಗಳ ಚಟುವಟಿಕೆಗಳಿಗೆ ಕಾರಣವಾದ ದಿವ್ಯ ಚೈತನ್ಯ ಅಂದರೆ ಆತ್ಮವೇ ದೇವರು ಎಂದು ವೇದಾಂತಿಗಳು ಪ್ರತಿಪಾದಿಸುತ್ತಾರೆ.
ಹೀಗೆ ಅನೇಕ ರೀತಿಯಲ್ಲಿ ನಿರೂಪಿಸಲ್ಪಡುವ ದೇವರನ್ನು ಎಲ್ಲಿದ್ದಾನೆಂದು ಹುಡುಕುವುದು ಹೇಗೆ? ಅವನನ್ನು ಹುಡುಕಲು ಎರಡು ವಿಧವಾದ ಕಣ್ಣುಗಳು, ಒಂದು ಅಂತಶ್ಚಕ್ಷು-ಒಳಗಣ್ಣು, ನಿರಂತರ ಧ್ಯಾನ, ತಪಸ್ಸಿಗೆ ಈ ಜ್ಞಾನದ ಕಣ್ಣಿಗೆ ಕಾಣಿಸುವ ಆತನನ್ನು ಹುಡುಕುವ ಏಕಾಗ್ರತೆಯನ್ನು ನಾವು ಕಳೆದುಕೊಂಡಿದ್ದೇವೆ. ಆದುದರಿಂದ ಲೌಕಿಕ ಕಣ್ಣುಗಳಿಂದ ದೇವರನ್ನು ಹುಡುಕುವುದು ಅನಿವಾರ್ಯವಾಯಿತು.
ಹೀಗಾಗಿ ಅವರವರ ಬೇಕು ಬೇಡಗಳಿಗೆ ಸ್ಪಂದಿಸುವುದಕ್ಕಾಗಿ, ಅವರವರನ್ನು ಸಂತೈಸುವುದಕ್ಕಾಗಿ, ಉದ್ಧಾರಕ್ಕಾಗಿ, ಕಷ್ಟ ನಿವಾರಣೆಗಾಗಿ, ಸುಖ-ಸಂತೋಷ ನೀಡುವುದಕ್ಕಾಗಿ ಬೇರೆ ಬೇರೆಯವರ ಕಣ್ಣುಗಳಿಗೆ ಪ್ರತ್ಯೇಕವಾಗಿ ತೋರುವುದಕ್ಕಾಗಿ ಬೇರೆ ಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಾನೆ.
ಇದೇ ಅವತಾರ, ಅವತರಣ ಅಂದರೆ ಕೆಳಗಿಳಿಯುವುದು ಎಂದು ಅರ್ಥ. ಕಷ್ಟ ಕೋಟಲೆಗಳ, ಬೇಕು ಬೇಡಗಳ ಹಾಳು ಬಾವಿಯಲ್ಲಿ ಬಿದ್ದು ತೊಳಲಾಡುತ್ತಿರುವ ಜೀವಿಗಳನ್ನು ಉದ್ಧರಿಸಲು (ಮೇಲಕ್ಕೆತ್ತಲು) ಅವನು ನಾನಾ ರೂಪದಲ್ಲಿ ಅವತರಿಸಿದ ಮುಂದೆಯೂ ಅವತರಿಸುತ್ತಲೇ ಇರುತ್ತಾನೆ ಯದಾಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಎಂಬ ಗೀತಾಚಾರ್ಯನ ವಚನದಂತೆ ಯಾವಾಗ ಲೋಕದಲ್ಲಿ ಧಾರ್ಮಿಕ ಪ್ರವೃತ್ತಿ ಮಸುಕಾಗಿ, ರಾಕ್ಷಸಿ ಪ್ರವೃತಿ ವಿಜೃಂಭಿಸುತ್ತಿದೆಯೋ, ಆಗ ಧಾರ್ಮಿಕ ಭಾವನೆಗಳ ಉದ್ಬೋಧನೆಗಾಗಿ ಅವನು ಅವತರಿಸುತ್ತಾನೆ.
ಹಾಗೆ ಅವತರಿಸಿದವರನ್ನು ವಿಗ್ರಹ ರೂಪದಲ್ಲಿ ಆವಾಹಿಸಿ, ಭಕ್ತಿಭಾವದಿಂದ ಪೂಜಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಲು ಪ್ರಾರಂಭಿಸಿದೆವು. ಅಂದರೆ ಈ ಪೂಜೆ 'ನಮಗಾಗಿ' 'ಅವನಿಗಾಗಿ' ಅಲ್ಲ, ಎಲ್ಲರನ್ನೂ ಸಲಹುವನು, ಇದಕ್ಕೆ ಸಂಶಯವಿಲ್ಲ ಎಂಬ ದಾಸವಾಣಿಯಂತೆ ಅನನ್ಯಗತಿಕರಾಗಿ ಯಾವುದೇ ರೂಪದಲ್ಲಿರುವ ಅವನನ್ನು ಆರಾಧಿಸಿದರೆ ಅವನು ಖಂಡಿತವಾಗಿಯೂ ಅನುಗ್ರಹಿಸುತ್ತಾನೆ.

- ಎಸ್. ವೆಂಕಟರಮಣ ಅಡಿಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.