ಭಕ್ತಿಗೆ 5

ದೇವರನ್ನು ನೋಡಲು ದೇವಸ್ಥಾನಕ್ಕೆ ಮಾತ್ರ ಹೋಗಬೇಕಿಲ್ಲ. ಪೂಜೆ, ಪುನಸ್ಕಾರಗಳನ್ನು ನೋಡಲು ತಟ್ಟೆ ಹಿಡಿದು ಪೂಜಾರಿ ಮುಂದೆ ನಿಲ್ಲುವ ಅಗತ್ಯವಿಲ್ಲ. ಎಲ್ಲವೂ ಕೂತ ಜಾಗದಲ್ಲೇ ಸಿಗುತ್ತದೆ. ಮನೆಯಲ್ಲೇ ಕೂತು ಭಕ್ತಿ ಪರವಶರಾಗಬಹುದು. ಹೌದು, ಮನೆಯಲ್ಲೇ ಕೂತು ಭಕ್ತಿ ಕಾರ್ಯಗಳನ್ನು ನೋಡುವ ಅವಕಾಶ ಕಲ್ಪಿಸಿರುವುದು 'ಶ್ರೀ ಶಂಕರ ವಾಹಿನಿ'. ಇದು ಒಂದು ರೀತಿಯಲ್ಲಿ ಕಿರುತೆರೆಯ ಪೂಜಾರಿ ಇದ್ದಂತೆ. ಆಧ್ಯಾತ್ಮಿಕ ಕಾರ್ಯಕ್ರಮಗಳ ಹೊರತಾಗಿ ಯಾವುದೇ ಕಾರ್ಯಕ್ರಮಗಳ ಪ್ರಸಾರವಿಲ್ಲ.
ಭಕ್ತಿ ಪ್ರಧಾನ ಕಾರ್ಯಕ್ರಮಗಳ ಪ್ರಸಾರವನ್ನೇ ಪ್ರಧಾನ ಉದ್ದೇಶವಾಗಿಸಿಕೊಂಡಿರುವ 'ಶ್ರೀ ಶಂಕರ ವಾಹಿನಿ'ಗೆ ಈಗ ಐದು ವರ್ಷಗಳ ಸಂಭ್ರಮ. ಮನೆ ಮನೆಯ ಪೂಜಾರಿ 5 ವರ್ಷ ಯಶಸ್ವಿಯಾಗಿ ಪೂರೈಸಿ, ಆರನೇ ವರ್ಷಕ್ಕೆ ಕಾಲಿಟ್ಟಿದೆ. ನಮಸ್ತೆ ಶಂಕರ, ಗೋಪೂಜೆ, ಭಜನ್ ಸಾಮ್ರಾಟ್, ಭಕ್ತಿ ಸಿಂಚನ, ಗುರುಕುಲಂ, ಸಂತವಾಣಿ, ಅನ್ನಬ್ರಹ್ಮ ಮುಂತಾದ ಕಾರ್ಯಕ್ರಮಗಳ ಪ್ರಸಾರ ಮೂಡುವ ಮೂಲಕ ಭಾರತ ಮಾತ್ರವಲ್ಲದೆ, 78ಕ್ಕೂ ಹೆಚ್ಚು ದೇಶಗಳಲ್ಲಿ ವೀಕ್ಷರನ್ನು ಹೊಂದಿರುವ ಶ್ರೀಶಂಕರ ವಾಹಿನಿ, ತನ್ನ 5ನೇ ವಾರ್ಷಿಕೋತ್ಸವ ಸಂಭ್ರಮಕ್ಕೆ ಸಿದ್ದವಾಗುತ್ತಿದೆ. ಭಾರತೀಯ ಕಲೆ, ಸಂಸ್ಕೃತಿ, ಆಧ್ಯಾತ್ಮಿಕ ವಿಚಾರ, ಚಿಂತನ-ಮಂಥನ, ಧಾರ್ಮಿಕ ಆಚಾರ-ವಿಚಾರಗಳು, ವೇದ-ಪುರಾಣಗಳು, ಇತಿಹಾಸ, ಸಾಮಾಜಿಕ ಕಳಕಳಿಯುಳ್ಳ ವೈವಿಧ್ಯಮ ಕಾರ್ಯಕ್ರಮಗಳನ್ನೂ ವಾಹಿನಿ ಪ್ರಸಾರ ಮಾಡುತ್ತಿದೆ.
'ನಮ್ಮ ವಾಹಿನಿಯನ್ನು ಅಪರೂಪದಲ್ಲೇ ಅಪರೂಪ ಎಂದು ವೀಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ' ಎನ್ನುತ್ತಾರೆ ವಾಹಿನಿಯ ಮುಖ್ಯಸ್ಥ ಹರಿಕೃಷ್ಣ. ಭಕ್‌ತಿ ಪ್ರಧಾನ ಕಾರ್ಯಕ್ರಮಗಳಷ್ಟೇ ಅಲ್ಲದೆ ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ, ರಾಜ್ಯೋತ್ಸವ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ, ಹಬ್ಬ-ಹರಿದಿನಗಳಂದು ಸಂದರ್ಭೋಚಿತ ಕಾರ್ಯಕ್ರಮಗಳನ್ನೂ ಪ್ರಸಾರ ಮಾಡುತ್ತಿದೆ. ಕನ್ಯಕಾ ಪರಮೇಶ್ವರಿ ಮಹಾತ್ಮ, ಮಹಾಸಾಧ್ವಿಯರು ಧಾರಾವಾಹಿಗಳು ಶೀಘ್ರದಲ್ಲೇ ಪ್ರಸಾರ ಆರಂಭಿಸಲಿವೆ ಎನ್ನುತ್ತಾರೆ ಅವರು.
ಐದರ ಸಂಭ್ರಮ
ಡಿ.21ರಂದು ಸಂಜೆ 6 ಗಂಟೆಗೆ ಐದು ವರ್ಷ ಪೂರ್ಣಗೊಳಿಸಿದ ಸಂಭ್ರಮಾಚರಣೆ ನಡೆಯಲಿದೆ. ನಂದಿಕೋಲು, ಬೀಸುಕಂಸಾಳೆ, ಕರಡಿ ಮಜಲು, ಹುಲಿವೇಷ, ಕೀಲುಕುದುರೆ, ಡೊಳ್ಳು ಕುಣಿತ, ಪಟ್ಟದ ಕುಣಿತ, ವೀರಗಾಸೆ ಮುಂತಾದ ಹತ್ತಕ್ಕೂ ಹೆಚ್ಚು ಸಾಂಸ್ಕೃತಿಕ ಕಾರ್ಯಕ್ರಮಗಳು ಅಂದು ನಡೆಯಲಿವೆ. ಇದೇ ಸಂದರ್ಭದಲ್ಲಿ ಭಜನ್ ಸಾಮ್ರಾಟ್‌ನ ಅಂತಿಮ ಸುತ್ತು ನಡೆಯಲಿದ್ದು, ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು. ಸಾರ್ವಜನಿಕರೂ ಭಾಗವಹಿಸಹುದು. ಮಾಹಿತಿಗೆ: (080) 40011241/222.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


