ಉಪವಾಸ ಸಹವಾಸ
ಏಕಾದಶಿ ಎಂದರೆ ಹನ್ನೊಂದು. ಈ ಹನ್ನೊಂದು ಯಾವುದು ಎಂದರೆ 5 ಕರ್ಮೇಂದ್ರಿಯ, 5 ಜ್ಞಾನೇಂದ್ರಿಯ ಮತ್ತು...

ಒಂದು ಮಾಸದಲ್ಲಿ ಎರಡು ಏಕಾದಶಿ ಬರುತ್ತವೆ. ಒಂದು ಶುಕ್ಲ ಪಕ್ಷದಲ್ಲಿ, ಮತ್ತೊಂದು ಕೃಷ್ಣಪಕ್ಷದಲ್ಲಿ. ಅಂದು ಬಹಳಷ್ಟು ಉಪವಾಸ ವೃತ ಮಾಡುತ್ತಾರೆ. ಏಕಾದಶಿಯಂದೇ ಉಪವಾಸ ಮಾಡುವುದೇಕೆ?
ಏಕಾದಶಿ ಎಂದರೆ ಹನ್ನೊಂದು. ಈ ಹನ್ನೊಂದು ಯಾವುದು ಎಂದರೆ 5 ಕರ್ಮೇಂದ್ರಿಯ, 5 ಜ್ಞಾನೇಂದ್ರಿಯ ಮತ್ತು ಮನಸ್ಸು. ಧರ್ಮ, ಕರ್ಮ, ಜ್ಞಾನ ಸಾಧನ ಕಾರಣಗಳಿಂದ ಭಗವತ್ ಚಿಂತನೆಗೆ ತೊಡಗಿಸುವ ಕ್ರಿಯೆಯೇ ಏಕಾದಶಿ. ಈ ಏಕಾದಶಿಗೆ ಸಾಕ್ಷಾತ್ ವಿಷ್ಣುವೇ ಅಭಿಮಾನಿ ದೇವರು.
ವಿಷ್ಣು ಎಂಬುದಕ್ಕೆ ವಿಶೇಷ ಅರ್ಥವಿದೆ. ಎಲ್ಲವನ್ನು ವ್ಯಾಪಿಸಿಕೊಂಡಿರುವವನು ಎಂದು ಮತ್ತು ಎಲ್ಲದರಲ್ಲೂ ಅಂತರ್ಗತನಾಗಿರುವವನು ಎಂದು. ವಿಷ್ಣುವಿಗೆ ಅನ್ವಯವಾಗುವ ಜನಪ್ರಿಯವಾದ ಮತ್ತೊಂದು ಹೆಸರು ನಾರಾಯಣ. ನಾ- ಎಂದರೆ ಕಾರಣ ರೂಪ ಜಲದ ಮೇಲೆ ನಿವಾಸವನ್ನು ಕಲ್ಪಿಸಿಕೊಂಡಿರುವವನು ಎಂದು. ರಾ- ಎಂದರೆ ಎಲ್ಲಾ ಮಾನವ ಜೀವಿಗಳೂ ನೆಲೆಗೊಳ್ಳುವ ಸ್ಥಾನ. ಯ- ಎಂದರೆ ಎಲ್ಲರ ಹೃದಯದಲ್ಲಿ ವಾಸಿಸುವವನು. ಣ- ಎಂದರೆ ಮಾನವ ಕೋಟಿಯ ಅಂತಿಮ ಗಮ್ಯ ಸ್ಥಾನಎಂದು.
ಈ ನಾರಾಯಣ ಜಪ ಏಕಾದಶಿ ದಿನ ನಿರಂತರವಾಗಿ ಜಪಿಸಿದರೆ ಅಂತ್ಯದಲ್ಲಿ ವೈಕುಂಠ ಸೇರಬಹುದು ಎಂದು ವಿಷ್ಣು ಪುರಾಣದಲ್ಲಿದೆ. ವಿಷ್ಣುವಿಗೆ 4 ಕೈಗಳು ಇವೆ. ಈ ಕೈಗಳಲ್ಲಿ ಶಂಖ, ಚಕ್ರ, ಗದೆ ಮತ್ತು ಪದ್ಮ ಇವೆ. ಶಂಖವು ಪಂಚಭೂತಗಳನ್ನೂ, ಚಕ್ರ ಸಮಸ್ತ ಚಿತ್ತಗಳನ್ನೂ ಗದೆ ಸಮಸ್ತ ಬುದ್ದಿಗಳ ಧ್ಯೋತಕ ಮತ್ತು ಪದ್ಮ ಸೃಷ್ಟಿಸಲ್ಪಡುವ ಪ್ರಪಂಚದ ಸಂಕೇತ.
ಈ ವಿಷ್ಣು ಸ್ಥಿತಿಕಾರ ಆಗಿರುವನು. ಧರ್ಮವು ಇಳಿಮುಖವಾಗಿ ಅಧರ್ಮವು ದೇಹಧಾರಿಯಾಗಿ ಅವತರಿಸುತ್ತಾನೆ. ಈತನದು ಮುಖ್ಯವಾಗಿ 10 ಅವತಾರ. ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ಶ್ರೀರಾಮ, ಬೌದ್ಧಾವತಾರ, ಶ್ರೀಕೃಷ್ಣ ಮತ್ತು ಕಲ್ಕಿ.
ಏಕಾದಶಿಯ ಮಹಾತ್ಮೆ
ಏಕಾದಶಿ ಎನ್ನುವ ದೇವಿ ವಿಷ್ಣುವಿನಿಂದ ಉದ್ಭವಳಾಗಿ 'ಮುರ' ಎನ್ನುವ ರಾಕ್ಷಸನನ್ನು ಸಂಹರಿಸಲು ವಿಷ್ಣುವಿಗೆ ಸಹಾಯ ಮಾಡುತ್ತಾಳೆ. ಇದರಿಂದ ಸಂಪ್ರೀತನಾದ ವಿಷ್ಣು ಏನಾದರೂ ವರ ಕೇಳು ಎಂದಾಗ ಏಕಾದಶಿ ದಿನ ಯಾರು ನಿನ್ನನ್ನು (ಉಪವಾಸದಲ್ಲಿದ್ದು) ನಿಯಮ ಬದ್ಧವಾಗಿ ಪೂಜಿಸುತ್ತಾರೋ ಅವರ ಪಾಪ ಪರಿಹರಿಸಿ ಮೋಕ್ಷವನ್ನು ಕರುಣಿಸು ಎಂದು ಏಕಾದಶಿ ದೇವಿ ವರ ಕೇಳುತ್ತಾಳೆ. ವಿಷ್ಣುವು ಅದರಂತೆ ಆಗಲಿ ಎಂದು ವರವನ್ನು ನೀಡುತ್ತಾನೆ.
ಉಪವಾಸ
ಉಪ ಎಂದರೆ ಹತ್ತಿರ ಎಂದು, ವಾಸ ಎಂದರೆ ಇರುವುದು ಎಂದು. ಪಂಚೇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡು ಕೆಟ್ಟ ಯೋಚನೆ ಮಾಡದೇ ಭಗವಂತನ ಸಮೀಪ ಇರುವುದು. ಆ ಸಮಯದಲ್ಲಿ ಧ್ಯಾನ, ಭಜನೆ, ವಿಷ್ಣು ಸಹಸ್ರನಾಮ ಪಠಣ ಮಾಡಬೇಕು. ಉಪವಾಸ ಮಾಡುವುದರಿಂದ ಶಾಂತಿ, ತಾಳ್ಮೆ ಸಿಗುವುದು. ರಕ್ತದೊತ್ತಡ, ರಕ್ತ ಹೀನತೆ ಇನ್ನೂ ಹಲವು ರೋಗ ರುಜಿನ ಇದ್ದರೆ ಗುಣವಾಗುವುದು.
ಯಾರ ಜಾತಕದಲ್ಲಿ ಬುಧ ಗ್ರಹ ನೀಚ ಸ್ಥಾನದಲ್ಲಿದ್ದರೆ, ಪಾಪಗ್ರಹಗಳು ಜೊತೆಯಲ್ಲಿದ್ದರೆ, ಪಾಪ ಗ್ರಹಗಳದೃಷ್ಟಿಗೆ ಒಳಗಾಗಿದ್ದರೆ ಅಂತಹವರು ಏಕಾದಶಿ ದಿನ ವಿಷ್ಣು ಸಹಸ್ರನಾಮ ಪಠಿಸಿದರೆ ಬುಧಗ್ರಹದಿಂದ ಆಗುವ ದುಷ್ಪರಿಣಾಮ ಕಡಿಮೆ ಆಗುವುದು.
ಹೊಟ್ಟೆಗೆ ಸಂಬಂಧಿಸಿದ ತೊಂದರೆ ಇರುವವರು, ದೇಹದ ತೂಕ ಹೆಚ್ಚಿಗೆಯಿರುವವರು, ಮನಸ್ಸಿಗೆ ನೆಮ್ಮದಿ ಇಲ್ಲದವರು ಈ ಏಕಾದಶಿ ಉಪವಾಸ ಮಾಡಿದರೆ ಉತ್ತಮವಾದ ಆರೋಗ್ಯ ಪಡೆಯಬಹುದು ಹಾಗೂ ಏಕಾದಶಿ ದಿನ ಮೌನ ಆಚರಿಸಿದರೆ ಇನ್ನೂ ಉತ್ತಮ ಫಲ ಸಿಗುವುದು. ಏಕಾದಶಿ ವ್ರತವನ್ನು ವರಿಷ್ಠರು, ದೇವಾನು ದೇವತೆಗಳು, ಋಷಿ, ಮುನಿಗಳು, ಆಚಾರ್ಯತ್ರಯರು ಹಾಗೂ ದಾನ ಶ್ರೇಷ್ಠರು ಶ್ರದ್ಧಾ ಭಕ್ತಿಯಿಂದ ಆಚರಿಸಿ ಮೋಕ್ಷ ಪಡೆದಿರುವರು.
- ಮಂಡಗದ್ದೆ ಪ್ರಕಾಶ ಬಾಬು ಕೆ.ಆರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


