ಮಾಯಾ ಗಣಿತ
ಸಂಖ್ಯೆಗಳು ಇಲ್ಲದೆ ಪ್ರಪಂಚದಲ್ಲಿ ಯಾವ ಕಾರ್ಯವೂ ನಡೆಯುವುದಿಲ್ಲ. ಎಲ್ಲಾ ಕಾಲಗಳಲ್ಲಿಯೂ ಲೋಕದ ಸೃಷ್ಟಿ ಸ್ಥಿತಿ...

ಮನುಷ್ಯನ ಭವಿಷ್ಯವನ್ನು ತಿಳಿಸುವ ಮೂರು ಶಾಸ್ತ್ರಗಳೆಂದರೆ ಜ್ಯೋತಿಷ್ಯ, ಹಸ್ತ ರೇಖಾಶಾಸ್ತ್ರ ಮತ್ತು ಸಂಖ್ಯಾ ಶಾಸ್ತ್ರ. ಜ್ಯೋತಿಷ್ಯ ಶಾಸ್ತ್ರ ಮತ್ತು ರೇಖಾಶಾಸ್ತ್ರ ಭವಿಷ್ಯವನ್ನು ಮಾತ್ರವೇ ತಿಳಿಸುವುದು. ಆದರೆ ಸಂಖ್ಯಾಶಾಸ್ತ್ರ ಭವಿಷ್ಯವನ್ನು ಸ್ವಾಗತಿಸಲು ಮತ್ತು ಸ್ವಲ್ಪಮಟ್ಟಿಗೆ ಹೊಂದಾಣಿಕೆ ಮಾಡಿಕೊಳ್ಳಲು ಬೇಕಾದ ಸಲಹೆ ನೀಡುತ್ತವೆ.
ಸಂಖ್ಯೆಗಳು ಇಲ್ಲದೆ ಪ್ರಪಂಚದಲ್ಲಿ ಯಾವ ಕಾರ್ಯವೂ ನಡೆಯುವುದಿಲ್ಲ. ಎಲ್ಲಾ ಕಾಲಗಳಲ್ಲಿಯೂ ಲೋಕದ ಸೃಷ್ಟಿ ಸ್ಥಿತಿ ಲಯಗಳನ್ನು ತಿಳಿಸುವುದು ಸಂಖ್ಯೆಗಳ ಮೂಲಕವೇ.
ಕೃತ, ತ್ರೇತಾ, ದ್ವಾಪರ ಮತ್ತು ಕಲಿಯುಗ ಎಂಬುದಾಗಿ ಕಾಲವನ್ನು 4 ಭಾಗಗಳಾಗಿ ವಿಭಾಗಿಸಿ ಒಂದೊಂದು ಯುಗಗಳಿಗೂ ವರ್ಷಗಳನ್ನು ನಿಗದಿಪಡಿಸಿ ಕೊನೆಗೆ ಪ್ರಳಯ ಎಂದು ಲೆಕ್ಕ ಮಾಡಿ ನಿಷ್ಕರ್ಷಿಸುವುದು ಸಂಖ್ಯೆಗಳ ಆಧಾರದಿಂದಲೇ.
ಬೆಳಗ್ಗೆಯಿಂದ ರಾತ್ರಿ ಮಲಗುವವರೆಗೂ ಪ್ರಪಂಚದ ಎಲ್ಲಾ ಕಾರ್ಯಗಳೂ ಸಂಖ್ಯೆಯನ್ನು ಅನುಸರಿಸಿಯೇ ಮುಂದುವರಿಸುತ್ತದೆ. ಸೊನ್ನೆಗೆ ಸ್ವತಃ ಸ್ಥಾನಮಾನ ಇಲ್ಲ. ಬೇರೊಂದು ಸಂಖ್ಯೆಯೊಂದಿಗೆ ಸೇರಿದರೆ ಅದರ ಬೆಲೆ ಬರುವುದು.
ಸಂಖ್ಯಾ ಶಾಸ್ತ್ರಕ್ಕೂ, ಜ್ಯೋತಿಷ್ಯ ಶಾಸ್ತ್ರಕ್ಕೂ ಸಂಬಂಧ ಇದೆ. ಏಕೆಂದರೆ 12 ರಾಶಿ, 9 ಗ್ರಹ, 27 ನಕ್ಷತ್ರಗಳು. 12 ರಾಶಿಯಲ್ಲಿ 27 ನಕ್ಷತ್ರಗಳು ಇವೆ. ಅಂದರೆ ಒಂದೊಂದು ರಾಶಿಗೂ ಸರಾಸರಿ ಎರಡೂವರೆ ನಕ್ಷತ್ರಗಳು. ಒಂದೊಂದು ನಕ್ಷತ್ರಕ್ಕೂ 4 ಪಾದಗಳು. 12 ರಾಶಿಗಳಿಗೆ ಒಟ್ಟು 108 ಪಾದಗಳು. ಇದರಿಂದ ತಿಳಿಯುವುದು ಜ್ಯೋತಿಷ್ಯ ಶಾಸ್ತ್ರದಲ್ಲಿಯೂ ಸಂಖ್ಯೆಗಳಲ್ಲಿ ಪ್ರಧಾನವಾಗಿರುವುದು ಕಂಡುಬರುತ್ತದೆ. ಸಂಖ್ಯಾ ಶಾಸ್ತ್ರದ ಪ್ರಕಾರ 4 ಬಗೆ. ಜನ್ಮ ಸಂಖ್ಯೆ, ಭಾಗ್ಯ ಸಂಖ್ಯೆ, ನಾಮ ಸಂಖ್ಯೆ ವರ್ಷ ಸಂಖ್ಯೆ.
ಜನ್ಮ ಸಂಖ್ಯೆ
ವ್ಯಕ್ತಿ ಹುಟ್ಟಿದ ತಾರೀಖನ್ನು ಏಕ ಸಂಖ್ಯೆಯಾಗಿ ಮಾಡಿದಾಗ ಬರುವ ಸಂಖ್ಯೆಯಾಗಿದೆ. 1 ರಿಂದ 31ರ ವರೆಗಿನ ತಾರೀಖಿನ ಆಧಾರದ ಮೇಲೆ ಇದನ್ನು ಲೆಕ್ಕ ಮಾಡಲಾಗುವುದು. ಉದಾ: 23 ಆಗಿದ್ದರೆ 2ಕ್ಕೆ 3ನ್ನು ಕೂಡಿದಾಗ 5 ಬರುವುದು. ಅದೇ ಜನ್ಮ ಸಂಖ್ಯೆ ಆಗುವುದು.
ಭಾಗ್ಯ ಸಂಖ್ಯೆ
ಇದನ್ನು ವ್ಯಕ್ತಿತ್ವದ ಸಂಖ್ಯೆ ಎನ್ನುತ್ತಾರೆ. ಯಾವುದೇ ವ್ಯಕ್ತಿಯ ಹುಟ್ಟಿದ ತಾರೀಖು ತಿಂಗಳು ಮತ್ತು ವರ್ಷದ ಸಂಖ್ಯೆಗಳನ್ನು ಕೂಡಿಸಿ ಬರುವ ಮೊತ್ತದ ಏಕ ಸಂಖ್ಯೆ. ಉದಾ; 10-12-1985. 1+0+1+2+1+9+8+5=27, 2+7=9
ನಾಮ ಸಂಖ್ಯೆ
ಒಬ್ಬ ವ್ಯಕ್ತಿಯ ಹೆಸರಿನಲ್ಲಿರುವ ಅಕ್ಷರಗಳ ಸಂಖ್ಯೆಯ ಮೊತ್ತವೇ ನಾಮ ಸಂಖ್ಯೆ ಇದರಿಂದ ವೈಯಕ್ತಿಕ ಆಸೆಗಳು ಹಾಗೂ ಅದೃಷ್ಟವನ್ನು ತಿಳಿಯಬಹುದು.
ವರ್ಷ ಸಂಖ್ಯೆ
ವ್ಯಕ್ತಿಯ ಜನನ ವರ್ಷದ ಎಲ್ಲಾ ಅಂತರಗಳನ್ನು ಕೂಡಿದರೆ ಬರುವ ಮೊತ್ತದ ಏಕ ಸಂಖ್ಯೆ. ಉದಾ: ಜನನ ವರ್ಷ 1964 ಆಗಿದ್ದರೆ ವರ್ಷಸಂಖ್ಯೆ 1+9+6+4 = 20. ಅಂದರೆ 2 + 0 = 2 ವರ್ಷ ಸಂಖ್ಯೆ.
ಇದು ಸಂಖ್ಯಾಶಾಸ್ತ್ರದ ಮೂಲ ತಳಹದಿಯಷ್ಟೇ. ಇವನ್ನೇ ಆಧಾರವಾಗಿಟ್ಟಿಕೊಂಡು ವ್ಯಕ್ತಿಯ ಭವಿಷ್ಯವನ್ನು ಬೇಳಬಹುದು; ಅನುಕೂಲಕರ ಸಂಖ್ಯೆ ಪಡೆಯಲು ಸಣ್ಣಪುಟ್ಟ ಮಾರ್ಪಾಡುಗಳನ್ನೂ ಮಾಡಿಕೊಳ್ಳಬಹುದು.
ಗೀತೆಯಲ್ಲಿ ಸಂಖ್ಯಾಮಾಯೆ
ಕುರುಕ್ಷೇತ್ರ ಯುದ್ಧದ ಸಮಯದಲ್ಲಿ ಅರ್ಜುನನು ರಣರಂಗದಲ್ಲಿ ದಾಯಾದಿಗಳು, ಬಂಧುಗಳನ್ನು ನೋಡಿ ಯುದ್ಧ ಮಾಡಲು ಹಿಂಜರಿದನು. ಆ ಸಮಯದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಕರ್ತವ್ಯ ಬೋಧನೆ ಮಾಡುತ್ತಾ ಭಗವದ್ಗೀತೆಯನ್ನು ಬೋಧಿಸಿದನು.
ಆ ದಿನ ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನವಾಗಿತ್ತು. ಶ್ರೀಕೃಷ್ಣ ಭಗವದ್ಗೀತೆಯ 18 ಅಧ್ಯಾಯವನ್ನು ಬೋಧಿಸಿದನು. ಯುದ್ಧದಲ್ಲಿ ಕಾಲಾಳುಗಳು 19,68,300 ಇದ್ದವು (1+ 9+ 6+ 8+ 3+ 0+ 0 ಏಕ ಸಂಖ್ಯೆ 9. ಕುದುರೆಗಳು 11,80,980. (1+ 1+ 8+ 0+ 9+ 8+ 0+ ಏಕ ಸಂಖ್ಯೆ 9). ಆನೆಗಳು 3,93,660. (3+ 9+ 3+ 6+ 6+ 0 ಏಕ ಸಂಖ್ಯೆ 9) ಸಂಖ್ಯಾ ಶಾಸ್ತ್ರದ ಪ್ರಕಾರ 9 ಪರಿಪೂರ್ಣ ಸಂಖ್ಯೆ. ಈ ರೀತಿ ನಾವು ಭಗವದ್ಗೀತೆಯಲ್ಲಿ ಸಹ ಸಂಖ್ಯೆ ಶಾಸ್ತ್ರದ ಮಹತ್ವ ತಿಳಿಯಬಹುದು.
- ಮಂಡಗದ್ದೆ ಪ್ರಕಾಶ ಬಾಬು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


