ಜಾತಕದ ನಿದ್ರಾಯೋಗ

ಚಿಂತೆ ಇಲ್ಲದವರಿಗೆ ಸಂತೆಯಲ್ಲೂ ನಿದ್ದೆ ಬರುವುದು ಎಂಬ ಮಾತೇನೋ ಇದೆ. ಆದರೆ ಚಿಂತೆಯನ್ನೇ ಹಾಸಿ ಹೊದ್ದವರಿಗೆ ಸುಪ್ಪತ್ತಿಗೆಯಲ್ಲೂ ನಿದ್ದೆ ಬರುವುದಿಲ್ಲ. ಮನಸ್ಸು ಹಾಗೂ ಶರೀರದ ಪಂಚೇಂದ್ರಿಯಗಳಿಗೆ ಆಯಾಸವಾದಾಗ ಅವುಗಳ ಕಾರ್ಯಗಳಿಗೆ ಬಿಡುವು ಕೊಟ್ಟರೆ ಆಗ ನಿದ್ರಾದೇವಿ ಆವರಿಸಿಕೊಳ್ಳುತ್ತಾಳೆ. ಪ್ರತಿಯೊಂದು ಜೀವಿಗಳಿಗೆ ಮೂರು ಅವಸ್ಥೆಗಳಿವೆ. ಎಚ್ಚರ, ನಿದ್ರೆ ಹಾಗೂ ಕನಸು. ಶರೀರವನ್ನು ಉತ್ತಮವಾಗಿ ಇರಿಸಲು ಹಿತಕರವಾದ ಆಹಾರ ಹೇಗೆ ಮುಖ್ಯವೊ ಹಾಗೆ ವಿಧಿಪೂರ್ವಕವಾಗಿ ಮಾಡಿದ ನಿದ್ದೆಯೂ ಅಷ್ಟೇ ಅವಶ್ಯ. ಏಕೆಂದರೆ ಸರಿಯಾದ ನಿದ್ದೆ ಮಾಡಿದರೆ ಮಾತ್ರ ಆ ದಿನ ಲವಲವಿಕೆಯಿಂದ ಇರಲು ಸಾಧ್ಯ.
ನಿದ್ದೆಯ ವಿಧಗಳು
ಆಯುರ್ವೇದದಲ್ಲಿ 7 ಬಗೆಯ ನಿದ್ದೆಗಳನ್ನು ಹೇಳಲಾಗಿದೆ.
ಮನಃಶ್ರಮ ನಿದ್ದೆ: ಇದು ಮನಸ್ಸಿಗೆ ದಣಿವಾದಾಗ ಬರುವ ನಿದ್ದೆ. ಆಗಂತುಕಿ ನಿದ್ದೆ: ಇದು ಕೆಲಸವಿಲ್ಲದೆ ಬೇಸರದಿಂದ ಆಲಸ್ಯದಿಂದ ಹಾಗೂ ನಶೆಯಿಂದ ಉಂಟಾಗುವ ನಿದ್ದೆ. ಶ್ಲೇಷ ಸಮುದ್ಭವ ನಿದ್ದೆ: ಇದು ಕಫ ದೋಷದಿಂದ ಉಂಟಾಗುವ ನಿದ್ದೆ. ತಮೋಭವ ನಿದ್ದೆ: ದೇಹದಲ್ಲಿ ತಮಸ್ಸು ಹೆಚ್ಚಾದಾಗ ಬರುವ ನಿದ್ದೆ. ರಾತ್ರಿ ಸ್ವಭಾವ ನಿದ್ದೆ: ಇದು ರಾತ್ರಿಯಲ್ಲಿ ಸ್ವಾಭಾವಿಕವಾಗಿ ಬರುವ ನಿದ್ದೆ. ಶರೀರ ಶ್ರಮ ಸಂಭವ ನಿದ್ದೆ: ಇದು ಶರೀರಕ್ಕೆ ಆಯಾಸವಾದಾಗ ಬರುವ ನಿದ್ದೆ. ವ್ಯಾಧಿ ನಿದ್ದೆ: ಇದು ಕಾಯಿಲೆಗಳಿಂದ ಉಂಟಾಗುವ ನಿದ್ದೆ.
ನಿದ್ರಾಹೀನತೆಗೆ ಕಾರಣ
ಪುರುಷ ಸೂಕ್ತದಲ್ಲಿ ಚಂದ್ರಮಾ ಮನಸೋಜಾತಃ ಎಂದು ಹೇಳಿರುವುದು ಅಂದರೆ ಚಂದ್ರನು ಮನಃಕಾರಕ ಎಂದು. ಶುಕ್ರ ಕಳತ್ರಕಾರಕ ಹಾಗೂ ಸುಖ ಕಾರಕ. ಚಿಂತೆ, ಸಿಟ್ಟು, ದುಃಖ, ವೃದ್ಧಾಪ್ಯ, ವಾತ-ಪಿತ್ತ, ಮಾನಸಿಕ ರೋಗದಿಂದ ಬಳಲುವಿಕೆ ನಿದ್ರಾಹೀನತೆಗೆ ಕಾರಣ.
ಮಲಗಿದ 20 ನಿಮಿಷದ ಒಳಗೆ ನಿದ್ರಾದೇವಿ ಬರದೇ ಇದ್ದರೆ, ಪದೇ ಪದೇ ಎಚ್ಚರವಾಗುತ್ತಿದ್ದರೆ, ತುಂಬಾ ಬೇಗ ಎಚ್ಚರವಾಗಿ ನಿದ್ರೆ ಬಾರದೆ ಇದ್ದರೆ ಅದನ್ನು ನಿದ್ರಾಹೀನತೆ ಎನ್ನುತ್ತಾರೆ. ವ್ಯಕ್ತಿಯ ಸುಖ ನಿದ್ದೆಗೆ ಜಾತಕದಲ್ಲಿ ಶುಭ ಗ್ರಹಗಳಾದ ಶುಕ್ರ ಹಾಗೂ ಚಂದ್ರ ಗ್ರಹಗಳು ಅತಿ ಮುಖ್ಯ. ಅವುಗಳನ್ನು ಸುಖ ನಿದ್ದೆ, ನಿದ್ದೆ ಕಡಿಮೆ ಎಂದು ವಿಭಾಗಿಸಬಹುದು.
ಸುಖನಿದ್ದೆ ಯಾವಾಗ?
ಲಗ್ನದಲ್ಲಿ ಚಂದ್ರ ಹಾಗೂ ಶುಕ್ರಗ್ರಹ ಇದ್ದರೆ, ಲಗ್ನದಿಂದ 2,9,11ರಲ್ಲಿ ಶುಕ್ರ ಹಾಗೂ ಚಂದ್ರನಿದ್ದರೆ, ಚಂದ್ರ ಹಾಗೂ ಶುಕ್ರನಿಗೆ ಗುರುಗ್ರಹದ ದೃಷ್ಟಿಯಿದ್ದರೆ, ಶುಕ್ರ ಉಚ್ಚ ಸ್ಥಾನ ಮತ್ತು ಸ್ವಂತ ಮನೆಯಲ್ಲಿದ್ದರೆ, ಚಂದ್ರನು ಕಟಕ ರಾಶಿಯಲ್ಲಿದ್ದರೆ ಸುಖನಿದ್ದೆ.
ನಿದ್ದೆ ಕಡಿಮೆ ಯಾವಾಗ?
ಲಗ್ನದಿಂದ 3,6,12ರಲ್ಲಿ ಶುಕ್ರ ಹಾಗೂ ಚಂದ್ರ ಇದ್ದರೆ, ಚಂದ್ರ ಹಾಗೂ ಶುಕ್ರನಿಗೆ ಪಾಪ ಗ್ರಹಗಳ ದೃಷ್ಟಿಯಿದ್ದರೆ, ಚಂದ್ರ ಹಾಗೂ ಶುಕ್ರ ಅಶುಭ ಗ್ರಹಗಳಾದ ಶನಿ, ರಾಹು, ಕೇತು, ಕುಜ, ರವಿ ಜೊತೆಯಲ್ಲಿದ್ದರೆ, ಶುಕ್ರನು ನೀಚ ಸ್ಥಾನದಲ್ಲಿದ್ದರೆ, ವ್ಯಕ್ತಿಗೆ ಸಾಡೇಸಾತ್ ನಡೆಯುತ್ತಿದ್ದರೆ ನಿದ್ದೆ ಕಡಿಮೆ.
ಅತಿ ನಿದ್ದೆ ಒಳ್ಳೆಯದಲ್ಲ. ಏಕೆಂದರೆ ಅದರಿಂದ ದೈನಂದಿನ ಕಾರ್ಯಗಳಿಗೆ ತೊಂದರೆ ಉಂಟಾಗುವುದು. ಆಹಾರ ಜೀರ್ಣವಾಗುವುದಿಲ್ಲ. ಶರೀರ ಭಾರವಾದಂತೆ ಅನಿಸುವುದು. ಹಾಗೂ ಆಲಸ್ಯ ಉಂಟಾಗುವುದು.
ಉತ್ತಮ ನಿದ್ದೆಗಾಗಿ
ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವುದು, ಮಲಗುವ ಒಂದು ಗಂಟೆ ಮೊದಲು ಕಾಪಿ, ಟೀ ಸೇವಿಸಬಾರದು. ಹಾಸಿಗೆಯಲ್ಲಿ ಮಲಗಿ ಓದುವುದು, ಬರೆಯುವುದು ಹಾಗೂ ಟಿ.ವಿ. ನೋಡುವುದು ನಿಷಿದ್ಧ. ಯಾವುದೇ ಕಾರಣಕ್ಕೂ ನಿದ್ರೆ ಮಾತ್ರೆ ತೆಗೆದುಕೊಳ್ಳಬೇಡಿ.
ಮಲಗುವ ಮೊದಲು 15 ನಿಮಿಷಗಳ ಕಾಲ ಧ್ಯಾನ, ಜಪ ಮಾಡಿ. ಹಗಲಿನಲ್ಲಿ ನಿದ್ದೆ ಮಾಡಬಾರದು. ಅಕಸ್ಮಾತ್ ಮಾಡಿದರೆ ಒಂದು ಗಂಟೆ ಮಾಡಿದರೆ ರಾತ್ರಿ 2 ಗಂಟೆ ನಿದ್ದೆ ಬರುವುದಿಲ್ಲ. ಅತಿಯಾದ ಆಹಾರ ಸೇವನೆ ಅಥವಾ ಮಧ್ಯಪಾನ, ಧೂಮಪಾನ ಮಾಡಿ ಮಲಗಬೇಡಿ. ಮಲಗುವ ಕೋಣೆಯಲ್ಲಿ ಬೆಳಕು ಕಡಿಮೆಯಿರಲಿ
ಸಮತಟ್ಟಾ ಜಾಗದಲ್ಲಿ ಚಾಪೆ ಮೇಲೆ ಮಲಗುವುದು ಉತ್ತಮ. ಮಲಗುವ ಮೊದಲು ಜಗಳ, ಗಲಾಟೆ ಮಾಡಿ ಮಲಗಬೇಡಿ. ಪ್ರತಿ ದಿನ ಯೋಗ, ವ್ಯಾಯಾಮ, ಸೂರ್ಯ ನಮಸ್ಕಾರ ಮಾಡುವ ಅಭ್ಯಾಸ ಮಾಡಿಕೊಳ್ಳಿ.
5 ವರ್ಷದಿಂದ 24 ವರ್ಷದವರಿಗೆ 10 ಗಂಟೆಗಳ ಕಾಲ ನಿದ್ದೆ ಅವಶ್ಯ. 25 ರಿಂದ 60 ವರ್ಷದವರಿಗೆ 8 ಗಂಟೆಗಳ ಕಾಲ ನಿದ್ದೆ ಅವಶ್ಯ. 61 ವರ್ಷದ ಮೇಲಿನವರಿಗೆ 6 ಗಂಟೆಗಳ ಕಾಲ ನಿದ್ದೆ ಅವಶ್ಯ ಎಂದು ಆಯುರ್ವೇದದಲ್ಲಿ ಹೇಳಿದೆ. ಪ್ರತಿ ದಿನವೂ ಸರಿಯಾದ ನಿದ್ರೆ ಮಾಡಿದರೆ ನವ ಚೈತನ್ಯದಿಂದ ಹಾಗೂ ಉತ್ತಮ ಆರೋಗ್ಯದಿಂದ ಇರಬಹುದು. ಮಾಹಿತಿಗಾಗಿ 886013956.
- ಮಂಡಗದ್ದೆ ಪ್ರಕಾಶ ಬಾಬು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


