ತುಲಾ, ಕುಂಭದವರಿಗೆ ಭಾಗ್ಯ ಫಲ
ಭಾಗ್ಯೋದಯ ಪ್ರತಿಯೊಬ್ಬ ಮನುಷ್ಯನ ಕನಸು, ಆದರೆ ಕೆಲವೊಮ್ಮೆ ಪೂರ್ವಾರ್ಜಿತ ಕರ್ಮಫಲಗಳೇ ಜಾತಕದಲ್ಲಿ ಗ್ರಹಚಾರ ದೋಷಗಳಾಗಿ ಕಂಡು ಬಂದು, ಆ ಕನಸು ನನಸಾಗದಂತೆ ತಡೆಯುತ್ತವೆ. ಇನ್ನು ಕೆಲವೊಮ್ಮೆ ಕೆಲವು ವರ್ಷ ಕೆಲವು ರಾಶಿಯವರು ಭಾಗ್ಯವಂತರಾಗಿರುತ್ತಾರೆ.
ಪ್ರಸಕ್ತ ಸಮಯದಲ್ಲಿ ಅಂದರೆ 19-6-2014 ತನಕ ಬಹಳ ಅದೃಷ್ಟವಂತರು ಹಾಗೂ ಭಾಗ್ಯವಂತರಂತೆ ಕಾಣಿಸುವವರು ತುಲಾ ಹಾಗೂ ಕುಂಭ ರಾಶಿಯವರು. ಕಾರಣ ಈ ಎರಡೂ ರಾಶಿಗಳಿಗೆ ಸಿಗುತ್ತಿರುವ ಗ್ರಹಬಲಗಳು.
ತುಲಾ ರಾಶಿಯನ್ನು ತೆಗೆದುಕೊಂಡರೆ ಮೇಲ್ನೋಟಕ್ಕೆ ಸಾಡೇ ಸಾತಿ (ಶನಿ ಪ್ರಭಾವ)ಯಿಂದ ಅವರು ಕಷ್ಟದಲ್ಲಿ ಇರುವಂತೆ ಕಂಡರೂ, ಶನಿ ತುಲಾರಾಶಿಯಲ್ಲಿ ಪರಮ ಉಚ್ಚ ಸ್ಥಿತಿಯಲ್ಲಿ ಇರುವುದರಿಂದ ಸಾಡೇಸಾತಿ ಸಮಯವಾದರೂ ಶನಿಯ ದುಷ್ಪ್ರಭಾವ ಅಷ್ಟಾಗಿ ಇರುವುದಿಲ್ಲ.
ಅಷ್ಟೇ ಅಲ್ಲದೆ ಅಂತಹ ಬಲಿಷ್ಠ ಶನಿಯೊಂದಿಗೆ ಇರುವ ಮತ್ತೊಂದು ಗ್ರಹ ರಾಹು! ರಾಹು ಗ್ರಹದಿಂದಾಗಿ ತುಲಾ ರಾಶಿಯವರಿಗೆ ಹಣದ ಖರ್ಚು ಹೆಚ್ಚಾದಂತೆ ಕಂಡರೂ ಒಳಹರಿವು ಜಾಸ್ತಿಯಾದರೆ ಮಾತ್ರ ಅಲ್ಲವೆ ಹೊರ ಹರಿವು ಜಾಸ್ತಿ ಮಾಡಲು ಸಾಧ್ಯ?
ತುಲಾರಾಶಿಯವರು ಭಾಗ್ಯವಂತರು ಎಂದು ಹೇಳಲು ಮತ್ತೊಂದು ಮುಖ್ಯವಾದ ಕಾರಣ ಗುರುಗ್ರಹ. 'ಗುರು ವಾಕ್ಯಂ ನವಮಂ, ಬುಧೈರಿಹ ಶುಭಂ ಧರ್ಮಸ್ತ ಪ ಶ್ಚೋಚ್ಯತೇ" ಎಂಬ ಮಾಧವೀಯ ಗ್ರಂಥೋಕ್ತ ವಾಕ್ಯದಂತೆ ವಿದ್ವಾಂಸರಿಂದ ಭಾಗ್ಯಸ್ಥಾನವಾದ ಒಂಭತ್ತನೇ ಮನೆಯನ್ನು ಶುಭದ ಮನೆ ಎಂದೂ 'ಗುರು' ಎಂದು ಕರೆಯಲ್ಪಟ್ಟಾಗ ತುಲಾ ರಾಶಿಯವರಿಗೆ ಈ ಸಮಯದಲ್ಲಿ ಒಂಭತ್ತನೆ ಮನೆಯಲ್ಲಿ ಸಾಕ್ಷಾತ್ ಗುರು ಗ್ರಹವೇ ನೆಲೆಸಿರುತ್ತಾನೆ.
ಭಾಗ್ಯದಲ್ಲಿ ಗುರು ತುಲಾ ರಾಶಿಯವರಿಗೆ ಸಂಪೂರ್ಣ ಗುರು ಬಲ ಕೊಟ್ಟು ಹೊಸಹೊಸ ಅವಕಾಶಗಳನ್ನು ಕರುಣಿಸಿ ಈ ಸಮಯದಲ್ಲಿ ಕಾಪಾಡುತ್ತಾನೆ.
ಕುಂಭ ರಾಶಿ: ಇನ್ನು ಕುಂಭರಾಶಿಯವರ ವಿಷಯಕ್ಕೆ ಬಂದಾಗ ಪಂಚಮಕ್ಕೆ ಬರುವ ಗುರುವು ಲಾಭ ಸ್ಥಾನವನ್ನು ವೀಕ್ಷಿಸುವುದರಿಂದ ಕುಂಭ ರಾಶಿಯವರಿಗೆ ಸಂತಾನ ಲಾಭ ಹಾಗೂ ಸಂತಾನದಿಂದಾಗಿ ಕೀರ್ತಿ ವೃದ್ಧಿ ಎರಡನ್ನೂ ಕರುಣಿಸುತ್ತಾನೆ.
ಬಹಳ ಮುಖ್ಯವಾಗಿ ಕುಂಭ ರಾಶಿಯವರಿಗೆ ಅವರ ಬುದ್ಧಿವಂತಿಕೆಯ ಪ್ರತಿಫಲ ಈಗ ಸಿಗುತ್ತದೆ. ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ಲಾಭ, ಉದ್ಯೋಗಿಗಳಿಗೆ ಹುದ್ದೆಯಲ್ಲಿ ಬಡ್ತಿ ಸಿಗುವುದಲ್ಲದೆ, ನಿರುದ್ಯೋಗಿಗಳಿಗೂ ಸಹ ಉದ್ಯೋಗ ಪ್ರಾಪ್ತಿ ಇದೆ. ಇನ್ನು ಕುಂಭ ರಾಶಿಯವರಿಗೆ ಮತ್ತೊಂದು ಲಾಭದಾಯಕವಾದ ವಿಷಯ ಎಂದರೆ ಸ್ವತಃ ರಾಶ್ಯಾಧಿಪತಿ ಆದ ಶನಿಯು ಭಾಗ್ಯ ಸ್ಥಾನವಾದ ತುಲಾದಲ್ಲಿ ಉಚ್ಚ ಸ್ಥಿತಿಯಲ್ಲಿ ಇರುವುದು!
ಅಷ್ಟಮ ಶನಿಯ ದುಷ್ಪ್ರಭಾವದಲ್ಲಿ ಇಷ್ಟು ದಿನ ಬಾಡಿ ಬಳಲಿದ ಕುಂಭ ರಾಶಿಯವರಿಗೆ ರಾಶ್ಯಾಧಿಪತಿ ಭಾಗ್ಯಕ್ಕೆ ಬಂದು ಪರಮೋಚ್ಚ ಸ್ಥಾನದಲ್ಲಿ ಇರುವುದರಿಂದಾಗಿ ಕುಂಭ ರಾಶಿಯವರ ಬಹಳ ದಿನಗಳಿಂದ ಆಗದೇ ನಿಂತುಹೋದ ಕೆಲಸಗಳು ಮತ್ತೆ ಪ್ರಾರಂಭಗೊಂಡು ಹೊಸ ಚೈತನ್ಯ ಕಾಣುತ್ತವೆ.
- ಪಂ. ವಿಠಲ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

