ಷರತ್ತಿಲ್ಲದೇ ಪ್ರೀತಿಸಿ ನೋಡಿ
ಅದೊಂದು ಅದ್ಭುತ ಅಂತ ನಿಮಗೆ ಅನ್ನಿಸಿಯೇ ಇಲ್ಲವೆ? ಯಾವುದೇ ಮಹಾಕಾವ್ಯಗಳ ಪ್ರೇಮಕಥೆಗಳನ್ನು ತೆಗೆದುಕೊಳ್ಳಿ. ಅವೆಲ್ಲವೂ ಅಂತ್ಯವಾಗುವುದು ದುರಂತದಲ್ಲೇ. ಇದೇಕೆ ಹೀಗೆ ಎನ್ನುವುದನ್ನು ತಿಳಿಯುವ ಕುತೂಹಲವಿಲ್ಲವೆ?
ಹೀಗೆ ಮಾಡಿ. 'ನಾನು ಪ್ರೀತಿಸುತ್ತಿದ್ದೇನೆ' ಎಂದು ಹೇಳಿಕೊಳ್ಳುತ್ತಿರುವ ವ್ಯಕ್ತಿಗಳನ್ನೊಮ್ಮೆ ನೋಡಿ. ಮಹಾಕಾವ್ಯಗಳ ಪ್ರೇಮಕಥೆಗಳನ್ನು ಮತ್ತೊಮ್ಮೆ ಓದಿ ನೋಡಿ. ಅದೆಲ್ಲ ಕಷ್ಟ ಅಂತನ್ನಿಸಿದರೆ ನಿಮ್ಮನ್ನೇ ನೀವು ನೋಡಿಕೊಳ್ಳಿ. ನಿಮ್ಮ ಸುತ್ತಮುತ್ತಲಿನ ಪರಿಸರದಲ್ಲಾಗಲೀ, ನಿಮ್ಮಲ್ಲೇ ಆಗಲಿ ಪ್ರೀತಿ ಅನ್ನುವುದು ಪರಿಶುದ್ಧವಾದ ಆಲೋಚನೆಗಳಿಂದ, ಮುಕ್ತ ಮನಸ್ಸಿನಿಂದ ಕೂಡಿಲ್ಲ. ಎಲ್ಲರಿಗೂ ಅವರವರ ಸಂತೋಷವೇ ಮುಖ್ಯವೇ ವಿನಾ ಬೇರೆಯವರು ಎಷ್ಟು ಸಂತೋಷದಿಂದ ಇದ್ದಾರೆ ಅಥವಾ ನಮ್ಮ ಸಂತೋಷಕ್ಕೆ ಇತರರ ಸಂತೋಷವನ್ನು ಬಲಿ ಕೊಡುತ್ತಿದ್ದೇವಾ ಎಂಬ ಬಗ್ಗೆ ಆಲೋಚಿಸುವುದೇ ಇಲ್ಲ. ಪ್ರೀತಿಗೆ ನಾವು ನಮ್ಮದೇ ಆದ ಷರತ್ತುಗಳನ್ನು ವಿಧಿಸಿಕೊಂಡಿರುತ್ತೇವೆ ಮತ್ತು ಅದೇ ಸರಿ ಎನ್ನುವ ಭಾವನೆಯಲ್ಲಿರುತ್ತೇವೆ. ಇತರರು ಅದನ್ನು ಒಪ್ಪದಿದ್ದರೂ ನಾವದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಏಕೆಂದರೆ ನಮಗೆ ನಮ್ಮದೇ ಸರಿ.
ಪ್ರೀತಿ ಎನ್ನುವ ಶಬ್ದದಲ್ಲೇ ಒಂಥರಾ ಮೋಡಿ ಇದೆ. ಲವ್ ಅನ್ನೋದು ಮ್ಯಾಜಿಕ್ ಥರ. ಜಗತ್ತಿನಾದ್ಯಂತ ಪ್ರೀತಿಯ ಕುರಿತಾಗಿ ಕೋಟ್ಯಾಂತರ ಪುಟಗಳಷ್ಟು ಸಾಹಿತ್ಯ ಬಂದಿರಬಹುದು, ಬರುತ್ತಲೇ ಇದೆ. ಒಂದು ಪ್ರಸಿದ್ಧ ಮಾತಿದೆ, 'ನೀವು ಯಾರನ್ನಾದರೂ ಪ್ರೀತಿಸುತ್ತೀರಿ ಅಂತಾದರೆ ಮುಕ್ತವಾಗಿ ಪ್ರೀತಿಸಿ. ಅದು ನಿಮಗೇ ಮರಳುತ್ತದೆ ಮತ್ತು ಅದು ನಿಮ್ಮದೇ. ಷರತ್ತು ವಿಧಿಸಿದಿರಿ ಅಂತಾದರೆ ಅದು ನಿಮಗೆ ಮರಳುವುದೂ ಇಲ್ಲ, ಅದು ನಿಮ್ಮದಾಗುವುದೂ ಇಲ್ಲ'. ಪ್ರೀತಿಯ ಕುರಿತಾದ ಈ ವ್ಯಾಖ್ಯಾನ ಸಾರ್ವಕಾಲಿಕವಾದದ್ದು. ಎಲ್ಲ ಧರ್ಮ, ಸಮುದಾಯಗಳೂ ಒಪ್ಪಿರುವಂಥದ್ದು. ತಾಯಿ ತನ್ನ ಮಗುವನ್ನು ಪ್ರೀತಿಸುತ್ತಾಳಲ್ಲ, ಅದು ಪರಿಶುದ್ಧ ಪ್ರೀತಿ.
ಸಮಸ್ಯೆ ಶುರುವಾದದ್ದು ಎಲ್ಲಿ ಎಂದರೆ ಪ್ರೀತಿಯ ಜತೆ ಭೋಗ ಮತ್ತು ದೈಹಿಕ ವಾಂಛೆಗಳನ್ನು ತಳುಕು ಹಾಕಿದಾಗ. ಆಗ ಭಾವನೆಗಳು ಹಿಮ್ಮೆಟ್ಟುತ್ತವೆ, ಬಯಕೆಗಳೇ ಮುಖ್ಯವಾಗುತ್ತವೆ. ಪ್ರೀತಿಯಲ್ಲಿರುವ ಪಾವಿತ್ರ್ಯ, ಜಾದೂಶಕ್ತಿಗಳೆಲ್ಲ ಮಾಯವಾಗುತ್ತವೆ.
ನಮ್ಮ ಎದೆ ಭಾಗದಲ್ಲಿರುವ ಆನಂದಚಕ್ರವು ಪ್ರೀತಿಯ ಅವಶ್ಯಕತೆಗಳನ್ನು ಆಳುತ್ತದೆ. ಸನಾತನ ಕ್ರಿಯಾದಂಥ ಯೋಗವನ್ನು ಅಭ್ಯಸಿಸುವ ಅಥವಾ ಪೂರ್ವಜನ್ಮದಲ್ಲಿ ಒಳ್ಳೆಯ ಕರ್ಮ ಮಾಡಿದ್ದ ಕೆಲವೇ ಕೆಲವರು ಮಾತ್ರ ಈ ಚಕ್ರದೊಂದಿಗೆ ಸಂಪರ್ಕ ಸಾಧಿಸಬಲ್ಲರು. ಬಹುತೇಕರು ಕೆಳಹಂತದ ಚಕ್ರಗಳು ಅಂದರೆ ಭೋಗಗಳನ್ನು ಈಡೇರಿಸಿಕೊಳ್ಳಲು ಮೂಲಾಧಾರ, ಲೈಂಗಿಕ ತೃಪ್ತಿಗಾಗಿ ಸ್ವಾದಿಷ್ಟಾನ, ಅಧಿಕಾರ- ಅಂತಸ್ತಿಗಾಗಿ ಮಣಿಪೂರಕ ಚಕ್ರಗಳೊಟ್ಟಿಗೆ ಮಾತ್ರವೇ ಸಂಪರ್ಕ ಸಾಧಿಸಿರುತ್ತಾರೆ.
-ಯೋಗಿ ಅಶ್ವಿನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

