ವಾಸ್ತು ವಾಸ್ತವ
ನಗರ ಪ್ರದೇಶದಲ್ಲಿ ಸೈಟು ಸಿಕ್ಕಿತೆಂದು ಮನೆ ಕಟ್ಟಿ ಬಿಡುತ್ತೇವೆ. ಆದರೆ ಒಂದೊಂದೇ ಸಮಸ್ಯೆಗಳು ಎದುರಾದಾಗ...

ನಗರ ಪ್ರದೇಶದಲ್ಲಿ ಸೈಟು ಸಿಕ್ಕಿತೆಂದು ಮನೆ ಕಟ್ಟಿ ಬಿಡುತ್ತೇವೆ. ಆದರೆ ಒಂದೊಂದೇ ಸಮಸ್ಯೆಗಳು ಎದುರಾದಾಗ ತಿಳಿಯುತ್ತದೆ ಅದು ವಾಸ್ತುದೋಷದ ಕಾರಣದಿಂದ ಎಂದು. ಕೆಲವೊಮ್ಮೆ ಮನೆಯಲ್ಲಿ ಆಗುತ್ತಿರುವ ಅಪಘಾತಗಳಿಗೆ ಕಾರಣವೇ ತಿಳಿಯುವುದಿಲ್ಲ. ಆದರೆ ಸೂಕ್ಷ್ಮವಾಗಿ ಅವಲೋಕಿಸಿದಾಗ ಅಂಥ ಎಲ್ಲಾ ಘಟನೆಗಳಿಗೆ ವಾಸ್ತುವೇ ಕಾರಣವಾಗಿರುತ್ತದೆ.
ಆದರೆ, ವಾಸ್ತು ದೋಷವಿದೆಯೆಂದು ಮನೆಯನ್ನೇ ಮರು ನಿರ್ಮಿಸಲು ಸಾಧ್ಯವೇ? ಅದಕ್ಕಾಗಿಯೇ ವಾಸ್ತುವಿನ ಶುದ್ಧೀಕರಣ ಅತ್ಯಗತ್ಯ. ಮನೆಯಲ್ಲೇ ನಯಾ ಪೈಸೆ ಖರ್ಚಿಲ್ಲದೇ ಪಾಲಿಸಬಹುದಾದಂಥ, ಧರ್ಮಗ್ರಂಥದಲ್ಲಿ ಹೇಳಿರುವಂಥ ಕೆಲವು ವಾಸ್ತು ಶುದ್ಧೀಕರಣದ ಟಿಪ್ಸ್ ಇಲ್ಲಿವೆ...
ಗೋಮೂತ್ರ ರಾಮಬಾಣ
ವಾಸ್ತುದೋಷವಿದ್ದರೂ, ಇಲ್ಲದಿದ್ದರೂ ಮನೆಗಳಲ್ಲಿ ಕೇವಲ ಗೋಮೂತ್ರ ಸಿಂಪಡಿಸುವಿಕೆಯಿಂದ ಕೆಟ್ಟ ಶಕ್ತಿಗಳ ರಜೋಗುಣ ಮತ್ತು ತಮೋ ಗುಣಗಳು ಕಡಿಮೆಯಾಗುತ್ತವೆ. ನಮ್ಮ ಮನಸ್ಸು ಸತ್ವ ಗುಣಗಳೆಡೆಗೆ ಸಾಗುವಂತಾಗುತ್ತದೆ. ಉಸಿರಾಡುವ ಗಾಳಿಯಲ್ಲಿರುವ ರೋಗಕಾರಕ ಅಂಶ ಮಾಯವಾಗಿ, ಶ್ವಾಸಕೋಶಗಳಿಗೆ ಉತ್ತಮ ಗಾಳಿಯೂ ಲಭಿಸುತ್ತದೆ.
ವಿಭೂತಿ ಪರಿಣಾಮಕಾರಿ
ಯಜ್ಞದ ಅಥವಾ ಪುಣ್ಯಕ್ಷೇತ್ರಗಳ ವಿಭೂತಿಯನ್ನು ಶುದ್ಧ ನೀರಿನಲ್ಲಿ ಮಿಶ್ರಣ ಮಾಡಿ ಮನೆಯಲ್ಲಿ ಸಿಂಪಡಿಸಿದರೆ ಅದರ ಪರಿಣಾಮ ಬಹಳ ದಿನಗಳ ಕಾಲ ಉಳಿದು ವಾಸ್ತು ಶುದ್ಧೀಕರಣವಲ್ಲದೇ, ಕೆಟ್ಟ ಶಕ್ತಿಗಳನ್ನು ತಡೆದು ಜೀವಿಗಳ ರಕ್ಷಣೆಯೂ ಸಾಧ್ಯವಾಗುತ್ತದೆ.
ಧೂಪದ ಶಕ್ತಿ ಮನೆಯ ಶಕ್ತಿ
ಮನೆಯಲ್ಲಿ ಧೂಪವನ್ನು ದಿನಕ್ಕೆ ಎರಡು ಸಲ ಹಚ್ಚಿಡಬೇಕು. ಇದರಿಂದ ವಾಸ್ತುವಿನಲ್ಲಿನ ಒಳ್ಳೆಯ ಶಕ್ತಿಗಳು ಆಕರ್ಷಿತರಾಗಿ ವಾಸ್ತುವಿನ ಸಾತ್ವಿಕತೆಯೂ ಹೆಚ್ಚಾಗುತ್ತದೆ. ಧೂಪದ ಪರಿಮಳ ನಮ್ಮ ಮನಸ್ಸಿಗೂ ಹೊಸ ಹುಮ್ಮಸ್ಸನ್ನು ನೀಡುತ್ತದೆ.
ಕೆಟ್ಟ ಮಾತುಗಳು ಬೇಡ
ಮನೆಯಲ್ಲಿ ಕೆಟ್ಟ ಮಾತುಗಳು, ಅಪಶಕುನದ ಮಾತುಗಳನ್ನು ಕಡಿಮೆ ಮಾಡುವುದಕ್ಕಿಂತಲೂ, ಪೂರ್ತಿಯಾಗಿ ನಿಲ್ಲಿಸುವುದೇ ಉತ್ತಮ. ಇದರಿಂದ ನಿಮ್ಮ ವಾಸ್ತು ಪುರುಷನೂ ಸಂತುಷ್ಟನಾಗಿ ಶುಭಲಾಭವನ್ನು ತರುವುದರಲ್ಲಿ ಯಾವುದೇ ಅನುಮಾನವಿಲ್ಲ.
ದೇವರನಾಮ ಜಪ
ಸದಾ ಮನೆಯಲ್ಲಿದ್ದಷ್ಟು ಹೊತ್ತು ದೇವರ ನಾಮ ಜಪಿಸಬೇಕು. ಕೆಲವೊಮ್ಮೆ ನಾಮಜಪವನ್ನು ಉಚ್ಚರಿಸಿರುವ ಸಿಡಿಯನ್ನು ಹಾಕಿಡಬಹುದು. ಏಕೆಂದರೆ ನಾಮಜಪದ ಅಪಶಬ್ಧ ಉಚ್ಛಾರಣೆಯಿಂದ ಉಪಾಸ್ಯ ದೇವತೆಗಳ ವಿಕೋಪಕ್ಕೆ ನೀವು ತುತ್ತಾಗಬಹುದು. ದೇವರ ನಾಮಜಪದ ಫಲ ಉಳಿದ ಪದ್ಧತಿಗಿಂತಲೂ ಶ್ರೇಷ್ಠ ಮತ್ತು ಶೀಘ್ರ ಫಲಕಾರಿ.
ಫ್ಯಾಷನ್ ವಿಗ್ರಹ ಬೇಡ
ಮಾರುಕಟ್ಟೆಯಲ್ಲಿ ಸಿಗುವ, ಮನೆಯ ಅಲಂಕಾರಕ್ಕಾಗಿಯೇ ನಿರ್ಮಾಣ ಮಾಡಲಾದ ದೇವತೆಗಳ ಫ್ಯಾಷನ್ ವಿಗ್ರಹಗಳು, ಪೋಸ್ಟರ್‌ಗಳು, ಚಿತ್ರ ಕಲೆಗಳು ಇನ್ನಿತರೆ ವಸ್ತುಗಳನ್ನು ಮನೆಯಲ್ಲಿಡುವುದರಿಂದ ಆಯಾ ದೇವತೆಗಳನ್ನು ವಿರೂಪ ಮಾಡಿ ಕೆಟ್ಟ ಫಲಗಳಿಗೆ ಪಾತ್ರರಾಗುತ್ತೀರಿ.
ಅನವಶ್ಯಕ ವಸ್ತು ಬೇಡ
ಮನೆಗಳಲ್ಲಿ ನೀವು ಬಳಸದ ವಸ್ತುಗಳನ್ನು ಇಡುವುದೇ ಬೇಡ. ಏಕೆಂದರೆ ಬಳಸದೇ ಇರುವ ವಸ್ತುಗಳ ಮೇಲೆ ಕೆಟ್ಟ ಶಕ್ತಿಗಳು ಆಕ್ರಮಿಸಿಕೊಂಡಿರುತ್ತವೆ. ಇದರಿಂದ ಸಮಸ್ಯೆ ಹೆಚ್ಚುತ್ತವೆ. ಆದ್ದರಿಂದ ನಿತ್ಯ ಬಳಸುವ ವಸ್ತುಗಳನ್ನು ವ್ಯವಸ್ಥಿತವಾಗಿಡುವುದು ಉತ್ತಮ ಹಾಗೂ ಫಲದಾಯಕ.
ಇದು ವಿದ್ಯಾರ್ಥಿಗಳಿಗೆ...
* ರೂಮಿನ ಗೋಡೆಗಳಿಗೆ ಕೆಂಬಣ್ಣ ಹೊಡೆಸಬಾರದು. ಏಕೆಂದರೆ ಕೆಂಪು ಕ್ರೂರತೆಯನ್ನು ತೋರಿಸುವಂಥದ್ದು. ವಿದ್ಯಾರ್ಥಿಗಳಿಗೆ ಕೋಪ ತರಿಸುವ ಬಣ್ಣವೂ ಹೌದು. ಬದಲಿಗೆ ಬಿಳಿ, ಹಳದಿ ಮತ್ತು ಇನ್ನಿತರ ತಿಳಿ ಬಣ್ಣಗಳನ್ನು ಬಳಸಬಹುದು. ಡಾರ್ಕ್ ಕಲರ್ ಬೇಡ.
* ವಾಣಿಜ್ಯ ವಿದ್ಯಾರ್ಥಿಗಳು ಪಶ್ಚಿಮದ ಕಡೆ ಮುಖ ಮಾಡಿ, ಆರ್ಟ್ಸ್ ವಿದ್ಯಾರ್ಥಿಗಳು ಉತ್ತರದ ಕಡೆ ಮುಖ ಮಾಡಿ, ವಿಜ್ಞಾನ ವಿದ್ಯಾರ್ಥಿಗಳು ಪೂರ್ವದ ಕಡೆ ಮುಖ ಮಾಡಿ ಕುಳಿತು ಅಭ್ಯಸಿಸುವುದು ಉತ್ತಮ.
* ವಿದ್ಯಾರ್ಥಿಗಳು ಹಾಸಿಗೆಯ ಮೇಲೆ ಅಥವಾ ಅಡುಗೆ ಮನೆಯಲ್ಲಿ ಓದುವ ಅಭ್ಯಾಸವಿದ್ದರೆ ಅದು ನೀರಿನಲ್ಲಿ ಹೋಮ ಮಾಡಿದಷ್ಟೇ ಫಲಕಾರಿ. ಹಾಗಾಗಿ ಆ ಅಭ್ಯಾಸವನ್ನು ಬಿಡುವುದೇ ಬೆಸ್ಟ್.
* ವಿದ್ಯಾರ್ಥಿಗಳು ಓದುವ ಟೇಬಲ್ ಹೆಚ್ಚು ದೊಡ್ಡ ಇರಬಾರದು. ಸಣ್ಣದಾಗಿಯೂ ಇರಬಾರದು. ಏಕೆಂದರೆ ಸಣ್ಣ ಟೇಬಲ್‌ಗಳು ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಹಿಂಸಿಸುತ್ತವೆ ಮತ್ತು ದೊಡ್ಡ ಟೇಬಲ್‌ಗಳು ನಿಮ್ಮ ಸಾಮರ್ಥ್ಯವನ್ನು ಕುಂದಿಸುತ್ತವೆ.
* ವಿದ್ಯಾರ್ಥಿಗಳ ಟೇಬಲ್ ಮೇಲೆ ಬೇಡದ ಪುಸ್ತಕಗಳು ಮತ್ತು ಇನ್ನಿತರ ಅನವಶ್ಯಕ ವಸ್ತುಗಳು ಹರಡಿದ್ದರೆ ಅದು ವಿದ್ಯಾರ್ಥಿಗಳಿಗೆ ಬೇಡದ ಪ್ರೆಶರ್ ಉಂಟುಮಾಡುತ್ತದೆ. ಹೆಚ್ಚು ಬಳಸುವ ಪುಸ್ತಕಗಳು ಮಾತ್ರ ಟೇಬಲ್ ಮೇಲಿರಲಿ.
* ಓದುವ ಕೋಣೆಯಲ್ಲಿ ವಿದ್ಯಾ ಗಣಪತಿ ಅಥವಾ ವಿದ್ಯಾಧರೆ ಸರಸ್ವತಿಯ ವಾಲ್ ಪೋಸ್ಟ್‌ಗಳಿರಲಿ. ಇದು ವಿದ್ಯಾರ್ಥಿಗಳಿಗೆ ಪಾಸಿಟಿವ್ ವೈಬ್ರೇಷನ್‌ಗಳನ್ನು ಸೃಷ್ಟಿಸುತ್ತದೆ.
-ಚಿರಂಜೀವಿ ಭಟ್
chirubhat007@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


