ಭಕ್ತಿ-ಜ್ಯೋತಿಷ್ಯ

ಯುಗದ ಆದಿ

ಭೂಮಿ ಮತ್ತು ಸೂರ್ಯಚಂದ್ರರ ಚಲನೆಯನ್ನು ಗುಣಿಸಿ, ಯುಗಾದಿಯ ಆರಂಭವನ್ನು ನಿರ್ಧರಿಸಲಾಗುತ್ತದೆ.

ಯುಗದ ಆದಿ
Published On :

ಯುಗಾದಿ ಎಂದರೆ ಹೊಸತು. ಹೊಸ ಋತುವಿನತ್ತ ಪಯಣ. ಭೂಮಿ ಮತ್ತು ಸೂರ್ಯಚಂದ್ರರ ಚಲನೆಯನ್ನು ಗುಣಿಸಿ, ಯುಗಾದಿಯ ಆರಂಭವನ್ನು ನಿರ್ಧರಿಸಲಾಗುತ್ತದೆ.
ಮಹಾಭಾರತದಲ್ಲಿ ಪಾಂಡುವಿನ ಅವಸಾನದಲ್ಲಿ ವಸಂತವನ್ನು ಕವಿ ರಾಜನಿಗೆ ಹೋಲಿಸುತ್ತಾನೆ. ವಸಂತ ಮಾಸದಲ್ಲಿ ಯಾರೂ ಸಂತರಲ್ಲ. ಪಾಂಡು ಅರಣ್ಯದಲ್ಲಿರುತ್ತಾನೆ. ಅವನ ನಿಗ್ರಹ ಸಡಿಲಗೊಳ್ಳುತ್ತಿದೆ. ಸುತ್ತಲಿನ ಪ್ರಕೃತಿಯ ಬದಲಾವಣೆಯ ಜೊತೆಗೆ ಮನುಷ್ಯನ ಇಂದ್ರಿಯಗಳಲ್ಲಾಗುವ ಸ್ಥಿತ್ಯಂತರಗಳನ್ನು ವರ್ಣಿಸುತ್ತಾರೆ.  ಕವಿ ಇಲ್ಲಿ ವಸಂತನನ್ನು ಸೇನೆಗೆ ಹೋಲಿಸುತ್ತಾನೆ.
ವಸಂತನ ಸೇನೆ ಹೇಗಿರುತ್ತದೆ ಅಂದರೆ ಮಾವಿನ ಮರಗಳೇ ಗಜ ಸೇನೆಯಾಗಿರುತ್ತದೆ. ದುಂಬಿಗಳು ರಾಜನ ಸ್ತುತಿ ಪಾಠಕರಾಗಿರುತ್ತಾರೆ. ಕೋಗಿಲೆಗಳೇ ಪಂಡಿತರು. ಅವೆಲ್ಲ ದಂಡು ದಾಳಿ ಕಟ್ಟಿ ಪಾಂಡುರಾಜನ ಮೇಲೆ ದಾಳಿ ಮಾಡುತ್ತವೆ.
ಪರ್ವಕಾಲ
ಭಾರತೀಯ ವರ್ಷದ ಆದಿ ದಿನವಾದ ಯುಗಾದಿಯು ಪರಿಸರದಲ್ಲೆಲ್ಲ ಪ್ರಸನ್ನತೆಯನ್ನು ಪ್ರಚೋದಿಸುವ ಪರ್ವಕಾಲ. ಈ ಹಬ್ಬಕ್ಕೆ ಅಧ್ಯಾತ್ಮಿಕ, ವೈಜ್ಞಾನಿಕವಾಗಿ ಮನಃಶ್ಶಾಸ್ತ್ರ ಸಂಬಂಧ ಇರುವ ಮಹತ್ವ ವಿಶೇಷವಾಗಿದೆ. ದೇವತೆಗಳು, ಯಕ್ಷ, ಗಂಧರ್ವ ಮಾನವರಿಗೆಲ್ಲ ಕಾಲ ಗಣನೆಯೇ ಆದಿಯಾಗಿರುವುದರಿಂದ ಇದನ್ನು ಯುಗ ಪ್ರತಿಪದೆ ಅಥವಾ ಯುಗಾದಿ ಎನ್ನುವರು.
ಅಖಂಡವಾದ ಕಾಲವನ್ನು ವ್ಯವಹಾರ ದೃಷ್ಟಿಯಿಂದ ವರ್ಷ, ಅಯನ, ಋತು, ಮಾಸ, ವಾರಗಳಾಗಿ ವಿಭಾಗಿಸಲಾಗಿದೆ. ಕಾಲವನ್ನು ವಿಭಜಿಸುವ ಕಾರ್ಯದ ಮೊದಲನೇ ದಿನವೇ ಯುಗಾದಿ. ಯುಗಾದಿಯು ಒಂದು ವರ್ಷದ ಕಾಲಮಿತಿಯನ್ನು, ಆಗುಹೋಗುಗಳನ್ನು ಸ್ಥೂಲವಾಗಿ ಸೂಚಿಸುತ್ತದೆ.
ವರ್ಷಕಾಲ ಭೂಮಿಯಲ್ಲಿ ಬೀಜದ ಸಂಪರ್ಕವಾದಾಗ ಅದನ್ನು ಅಂಕುರಿಸುವಂತೆ ಮಾಡುತ್ತದೆ. ಗ್ರೀಷ್ಮದಲ್ಲಿ ಆ ಕಾರ್ಯ ಆಗುವುದಿಲ್ಲ. ಸೃಷ್ಟಿಯಲ್ಲಿ ಉತ್ಸಾಹ ತುಂಬಿ ಪ್ರಸನ್ನತೆಯನ್ನುಂಟು ಮಾಡುವ ಕಾಲ ವಸಂತ. ಅದರ ಆರಂಭವೇ ಯುಗಾದಿ.
ಯುಗಾದಿಯ ಅಭ್ಯಂಜನವು ಆದಿ ಭೌತಿಕ. ಇದು ದೇಹದಾರ್ಢ್ಯ ಆಕರ್ಷಣೆಗೆ ಸಹಾಯಕ. ದೇಹ ಮತ್ತು ಮನಸ್ಸಿಗೆ ಹೊಸ ಚೈತನ್ಯ ನೀಡುತ್ತದೆ. ಪಂಚಾಂಗ ಶ್ರವಣ ನಮ್ಮ ಜೀವನದ ದಿಶೆಯನ್ನು ತೋರಿಸುವುದು. ನಮ್ಮ ದೇಶ, ನಮ್ಮ ದೇಹ, ನಮ್ಮ ಚಟುವಟಿಕೆಗಳ ಮೇಲೆ ಭವಚಕ್ರದ ಗತಿಯ ಪರಿಣಾಮವೇನೆಂಬುದನ್ನು ತಿಳಿದುಕೊಂಡಲ್ಲಿ ನಮ್ಮ ಅನುಕೂಲಕ್ಕೆ ತಕ್ಕಂತೆ ವ್ಯವಹಾರ ರೂಪಿಸಿಕೊಳ್ಳಬಹುದು. ಬೇವು ಬೆಲ್ಲಗಳ ಸೇವನೆ ಅಧ್ಯಾತ್ಮ ಸಂಕೇತ. ಸುಖದುಃಖಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂಬ ಆಶಯ ಇದರ ಹಿಂದಿದೆ.
ವರ್ಷೋದಯ, ಹರ್ಷೋದಯ
ಚೈತ್ರ ಶುದ್ಧ ಪ್ರತಿಪದೆ. ಯುಗಾದಿಯ ಅರುಣೋದಯ ನಿಜಕ್ಕೂ ಹರ್ಷೋದಯ. ಮನೆಯ ಸರ್ವ ತನುಮನಗಳಿಗೆ ಉಲ್ಲಾಸ, ಉತ್ಸಾಹ ತುಂಬುವ ಪ್ರಕೃತಿಯ ಕ್ರಿಯೆ.
ಯುಗಾದಿ ಅಂದ್ರೆ ಜೀವಂತಿಕೆ
ಏನೇ ಹೇಳಿ, ಯುಗಾದಿಗೆ ಇರುವ ಜೀವಂತಿಕೆ ಜನವರಿಗೆ ಇರದು. ಇಡೀ ಪ್ರಕೃತಿಯೇ ಹೊಸ ವರ್ಷ ಆಚರಿಸುವ ಸಂಭ್ರಮದಲ್ಲಿರುತ್ತದೆ. ಎಷ್ಟು ಹೊತ್ತಾದರೂ ಮುದುರಿ ಮಲಗಬೇಕೆನ್ನುವ ಜನವರಿ ಯುಗಾದಿಗೆ ಸಾಟಿಯೇ ಅಲ್ಲ.
ಚೈತ್ರಮಾಸ ಹೀಗಿಲ್ಲ. ಹೊಸ ಸಮೃದ್ಧಿ ನಮ್ಮ ಭವ್ಯ ಆಚರಣೆಗೆ ಭದ್ರ ಬುನಾದಿ. ಸಂ- ಚೆನ್ನಾಗಿ, ವತ್ಸ- ರಕ್ಷಿಸುವ ಕಾಲನಾಮಕ ಭಗವಂತನ ನೂತನ ಸಂಪುಟವೇ ಈ ಸಂವತ್ಸರ. ನೂತನ ಆನಂದ, ಯೌವನೋತ್ಸಾಹಗಳನ್ನು ಬೆಳೆಸುವ ವಸಂತನ ಆಗಮನ ಕೂಡ ಯುಗಾದಿಯಿಂದಲೇ.
ಔಷಧಿಯ ಪೂರೈಕೆ
ನೆತ್ತಿಗೆ ಬೆಳಕಾದರೆ ಕಾಲುಗಳಿಗೆ ಕತ್ತಲು. ಕರ್ಕಾಟಕ ವೃತ್ತಕ್ಕೆ ಬಿಸಿಲಿನ ಸೇಚನೆಯಾದರೆ, ಮಕರ ರೇಖೆಗೆ ಮಂಜಿನ ಹೊದಿಕೆ. ಭೂಮಿಯೊಡಳನ್ನಾಶ್ರಯಿದ ಕೋಟ್ಯಂತರ ಜೀವಿಗಳಿಗೆ ಔಷಧಿಯ ಪೂರೈಕೆ, ಸಸ್ಯಲೋಕದಲ್ಲಾದರೋ ಬಿಸಿಲಿನ, ಋತುಗಳ ಆಚರಣೆಯಿಂದ ಚಿಗುರು-ಹೂ- ಹಣ್ಣುಗಳ ಮೆರವಣಿಗೆ. ಕವಿಗಳ ಬಣ್ಣನೆಗೆ ಕೋಡು. ಪ್ರಕೃತಿಯ ಪರ್ವಕಾಲ.
ಇಂದಿನ ದಿನ ಶ್ರೀರಾಮನು ರಾವಣನನ್ನು ಜಯಿಸಿ ಮರಳಿ ಅಯೋಧ್ಯೆಗೆ ಬಂದು ರಾಜ್ಯಭಾರ ಮಾಡಿದನೆಂಬ ಪ್ರತೀತಿ. ಇಂದಿನ ದಿನವೇ ವಿಷ್ಣುವು ಮತ್ಸ್ಯಾವತಾರ ತಳೆದದ್ದೆಂದೂ ಶಾಲಿವಾಹನ ವಿಕ್ರಮಾದಿತ್ಯನನ್ನು ಜಯಿಸಿ ಶಾಲಿವಾಹನ ಶಕೆ ಎಂದೂ ನವಭಾರತವನ್ನು ನಿರ್ಮಿಸಿದನೆಂದೂ ಚರಿತ್ರೆಯಲ್ಲಿ ನಮೂದಿಸಿರುವರು.
ಯುಗಾದಿ ಹತ್ತು ಹಲವು ಪರಂಪರೆಯ ಆರಂಭ ದಿನ, ವರ್ಷದ ಹಗಲು ಮತ್ತು ರಾತ್ರಿ ಎರಡೂ ಸಮನಾಗಿರುವ ದಿವಸ. ವರ್ಷದ ಮೂರೂವರೆ ಶುಭ ದಿನಗಳಲ್ಲಿ ಮೊದಲ ಮುಹೂರ್ತ ದಿನ.
'ಋತೂನಾಂ ಕುಸುಮಾಕರ' ಎಂಬ ಗೀತಾಚಾರ್ಯನ ವಾಣಿಯಂತೆ ಋತುರಾಜ ವಸಂತದ ಶುಭಾಗಮನ ದಿನ. ಅಭ್ಯಂಜನ ಸ್ನಾನ ಬಹಿರಂಗ ಶುದ್ಧಿಯ ಸಾಧನ. ಶುಭನೂತನ ವಸ್ತ್ರಧಾರಣೆ ಅಲಂಕಾರದ ಸಾಧನ. ದೇವತಾಪೂಜೆ ಪರಮಶಕ್ತಿಗೆ ತೋರುವ ಕೃತಜ್ಞತೆ.  ಬಿಸಿಲು ಕೊಟ್ಟ ಪ್ರಕೃತಿ, ಅದರ ಜೊತೆ ಎಲೆ, ಹೂವು, ಕಾಯಿಗಳಿಂದ ತುಂಬಿದ ಮರವನ್ನು, ಅದರ ನೆರಳನ್ನೂ ಕೊಟ್ಟಿತು. ಮರ ಬೇವನ್ನು ಕೊಟ್ಟಿತು. ಗದ್ದೆ ಕಬ್ಬನ್ನು ಕೊಟ್ಟಿತು. ಅದು ಬೆಲ್ಲವಾಯಿತು. ಪ್ರಕೃತಿಯಲ್ಲಿ ಯಾವುದೇ ಅತಿರೇಕ ಇರುವುದಿಲ್ಲ ಎಂಬುದಕ್ಕೆ ಇದಕ್ಕಿಂತ ಒಳ್ಳೆಯ ಉದಾಹರಣೆ ಬಹುಶಃ ಬೇರೆ ಇಲ್ಲ.
ಎಲ್ಲಾ ಸಲವೂ ನಾನು ಬೆಲ್ಲವನ್ನೇ ತಿಂದರೆ ಡಯಾಬಿಟೀಸ್ ಬರುತ್ತದೆ. ಡಯಾಬಿಟೀಸ್ ಇದ್ದವರಿಗೆ ಡಾಕ್ಟರ್ ಬೇವು ತಿನ್ನಲು ಸೂಚಿಸುತ್ತಾರೆ. ಒಂದು ಹಬ್ಬದಲ್ಲಿ ಒಂದು ಕಾಲದಲ್ಲಿ ಪ್ರಕೃತಿ ಹೀಗೆ ಹಲವು ವಿಸ್ಮಯಗಳನ್ನು ತುಂಬಿಟ್ಟಿರುತ್ತದೆ.  ಏನೇ ಇರಲಿ, ನಾವು ಸೋತು ಹತಾಶರಾಗುವುದು ಬೇಡ. ಯುಗಾದಿಯಿಂದ ಬದುಕಲ್ಲಿ ನಿತ್ಯದ ಹಬ್ಬಗಳನ್ನು ತರುವ ಗಾದಿಯನ್ನೇರುವಂತಾಗಲಿ...

- ಗುರುರಾಜ ಪೋಶೆಟ್ಟಿಹಳ್ಳಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.