ಹಾರಕ
ಕೆಲ ವರ್ಷಗಳ ಹಿಂದಿನ ಮಾತು, ಹೈಬ್ರಿಡ್ ತಳಿಗಳ ಅಬ್ಬರಕ್ಕೆ ಸಿರಿಧಾನ್ಯಗಳು ನಶಿಸಿಯೇ ಬಿಟ್ಟವು ಎಂದು ...

ಕೆಲ ವರ್ಷಗಳ ಹಿಂದಿನ ಮಾತು, ಹೈಬ್ರಿಡ್ ತಳಿಗಳ ಅಬ್ಬರಕ್ಕೆ ಸಿರಿಧಾನ್ಯಗಳು ನಶಿಸಿಯೇ ಬಿಟ್ಟವು ಎಂದು ಬಹಳಷ್ಟು ಮಂದಿ ಭಾವಿಸಿದ್ದರು. ಅಂಥದ್ದೊಂದು ಆತಂಕದ ಮಧ್ಯ ಭರವಸೆಯ ಆಶಾಕಿರಣ ಮೂಡಿದೆ. ಯಾಕೆಂದರೆ ಸಿರಿಧಾನ್ಯಗಳ ಬಗ್ಗೆ ಜನರಲ್ಲಿ ಅರಿವು ಮೂಡುತ್ತಿದೆ. ಬಹಳಷ್ಟು ಜನರು ಕಿರುಧಾನ್ಯಗಳ ಮಹತ್ವ ಅರಿತು ಅವುಗಳನ್ನು ಬಳಸತೊಡಗಿದ್ದಾರೆ. ಹಲವು ನಮೂನೆಯ ಪೋಷಕಾಂಶ ತನ್ನ ಒಡಲಲ್ಲಿ ಇಟ್ಟುಕೊಂಡಿರುವ ಈ ಕಿರುಧಾನ್ಯಗಳನ್ನು ಉಳಿಸಲು ಹಲವು ಸ್ವಯಂಸೇವಾ ಸಂಸ್ಥೆಗಳು, ದೇಸೀಯ ಬೀಜಗಳನ್ನು ಉಳಿಸಬೇಕೆಂಬ ಮನಸ್ಸುಗಳು ಸಾಕಷ್ಟು ಪ್ರಯತ್ನ ಮಾಡಿವೆ ಎಂಬುದು ಸುಳ್ಳಲ್ಲ. ಇದರಿಂದ ಬಹಳಷ್ಟು ರೈತರು ಕಿರುಧಾನ್ಯಗಳತ್ತ ಮುಖ ಮಾಡಿದ್ದಾರೆ. ಅದೇ ರೀತಿ ಹಾರಕವೂ ವಿಶಿಷ್ಟ ಕಿರುಧಾನ್ಯ. ಇದನ್ನು ಸಿರಿಧಾನ್ಯಗಳ ಮಹಾರಾಣಿ ಅಂತಲೇ ಕರೆಯುತ್ತಾರೆ. ಪಾಸ್ಪಲಮ್ ಸ್ಕ್ರೋಬಿಕುಲೇಟಮ್(Paspalum scrobiculatum) ಎಂಬುದು ಇದರ ವೈಜ್ಞಾನಿಕ ಹೆಸರು. ರಾಜ್ಯದ ಹಲವು ಭಾಗಗಳಲ್ಲಿ ಇದನ್ನು ಬೆಳೆಯುತ್ತಾರೆ.
ಬೆಳೆಯುವ ವಿಧಾನ
ಇದು 5 ತಿಂಗಳ ಬೆಳೆ. ಕಡಿಮೆ ಫಲವತ್ತತೆ, ತೀರಾ ಕಡಿಮೆ ಮಳೆಯಾಗುವ ಪ್ರದೇಶದಲ್ಲೂ ಚೆನ್ನಾಗಿ ಬೆಳೆಯಬಲ್ಲದು. ಹಾಗಾಗಿಯೇ ಇದಕ್ಕೆ ಬರಸಹಿಷ್ಣು ಎಂದು ಕರೆಯುತ್ತಾರೆ. ಮೇ- ಜುಲೈ ಹಾರಕ ಬಿತ್ತನೆಗೆ ಸಕಾಲ. ಬಿತ್ತನೆಗೆ ಜಮೀನನ್ನು ಸಜ್ಜುಗೊಳಿಸಿದ ಬಳಿಕ ಬೀಜವನ್ನು ಸಾಲಿನಿಂದ ಸಾಲಿಗೆ 1 ಅಡಿ ಅಂತರ ಮತ್ತು ಬೀಜದಿಂದ ಬೀಜಕ್ಕೆ 3 ಇಂಚು ಅಂತರದಲ್ಲಿ ಬಿತ್ತಬೇಕು. ಎಕರೆಗೆ 10- 12 ಕೆಜಿ ಬೀಜ ಬೇಕಾಗುತ್ತದೆ. ಬಿತ್ತಿದ ವಾರದೊಳಗೆ ಬೀಜ ಮೊಳಕೆಯೊಡೆಯುತ್ತದೆ. 20 ದಿನದ ನಂತರ ಸಾಲು ಮಾಡಬೇಕು. 5 ತಿಂಗಳೊಳಗೆ ಕಟಾವಿಗೆ ಬರುತ್ತದೆ. ಇದಕ್ಕೆ ಯಾವುದೇ ನಮೂನೆ ರೋಗ ತಗುಲದು. ಹೆಚ್ಚಿನ ನಿರ್ವಹಣೆಯನ್ನೂ ಬಯಸದು.
ತಳಿಗಳು
ಇದರಲ್ಲಿ ನಾಟಿ ಹಾರಕ, ಆರ್ಬಿಕೆ- 155 ಮತ್ತು ಬಿಪಿಯುಕೆ- 3 ಎಂಬ ತಳಿಗಳು ರಾಜ್ಯದಲ್ಲಿ ಬಳಕೆಯಲ್ಲಿವೆ.
ಕ್ಯಾನ್ಸರ್ ನಿಯಂತ್ರಣ!
ಹಾರಕದಲ್ಲಿ ನಾರು, ಕಬ್ಬಿಣಾಂಶ ಸೇರಿದಂತೆ ಹಲವು ಬಗೆಯ ಪೌಷ್ಟಿಕಾಂಶಗಳಿವೆ. ಅದರಲ್ಲೂ ಮುಖ್ಯವಾಗಿ ಇದರ ಸೇವನೆಯಿಂದ ಕ್ಯಾನ್ಸರ್, ಮಧುಮೇಹ ಮತ್ತು ಮಲ್ಲಬದ್ಧತೆಯನ್ನು ನಿಯಂತ್ರಿಸಬಹುದು. ಹಾಗಾಗಿಯೇ ಸಿರಿಧಾನ್ಯ ತಿನ್ನುವವನೇ ನಿಜವಾದ ಸಿರಿವಂತ ಎಂಬ ಮಾತು ಅಕ್ಷರಶಃ ಸತ್ಯ. ಹೆಚ್ಚಿನ ಮಾಹಿತಿಗಾಗಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಪಾಲಹಳ್ಳಿಯ 'ಹಾರಕ ಬೆಳೆಗಾರರ ಸಂಘ'ದ ಜಿ.ಎಸ್. ರಘು(ಮೊ. 9449162418) ಅವರನ್ನು ಸಂಪರ್ಕಿಸಬಹುದು.
ಮಹೇಶ್ ಅರಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


