ಸಾಹೇಬರ ತೋಟ
ವ್ಯವಸಾಯ ಎಂದರೆ ನೀ ಸಾಯ, ನಾ ಸಾಯ ಮನೆ- ಮಂದಿಯೆಲ್ಲಾ ಸಾಯ ಎಂಬ ಪರಿಸ್ಥಿತಿ ಹಲವೆಡೆ ಇದೆ...

ವ್ಯವಸಾಯ ಎಂದರೆ ನೀ ಸಾಯ, ನಾ ಸಾಯ ಮನೆ- ಮಂದಿಯೆಲ್ಲಾ ಸಾಯ ಎಂಬ ಪರಿಸ್ಥಿತಿ ಹಲವೆಡೆ ಇದೆ. ಆದರೆ, ಬುದ್ಧಿವಂತಿಕೆ, ಕಠಿಣ ಶ್ರಮ ಇದ್ದರೆ ವ್ಯವಸಾಯ ಕುಟುಂಬದ ನೆರವಿಗೆ ಬರುತ್ತದೆ ಎಂಬುದಕ್ಕೆ ಇಲ್ಲೊಂದು ತಾಜಾ ನಿದರ್ಶನವಿದೆ.
ಅಂಥದ್ದೊಂದು ಸಾಧನೆ ಮಾಡಿದವರು ಹರಪನಹಳ್ಳಿಯ ರೈತ ಕೆ. ಮಹಬೂಬ್. ಈ ಯುವ ರೈತ ಪದವಿ ಮುಗಿಸಿ ಸಣ್ಣ-ಪುಟ್ಟ ಗುತ್ತಿಗೆ ಕೆಲಸ ಮಾಡಿಕೊಂಡಿದ್ದ. ಅವರಿವರ ತೋಟ, ಜಮೀನು ನೋಡಿ, 'ನಾನೂ ಯಾಕೆ ತೋಟ ಮಾಡಬಾರದು' ಎಂದೆನಿಸಿತು. ನಿರ್ಧಾರ ಕೈಗೊಂಡೇಬಿಟ್ಟ ಮಹಬೂಬ್.
ಟೀಕೆಗೆ ಅಂಜಲಿಲ್ಲ
7 ವರ್ಷದ ಹಿಂದೆ ಬರೀ ಕಲ್ಲಿನಿಂದ ತುಂಬಿದ್ದ ಬರಡಾದ, ಕೃಷಿಗೆ ಯೋಗ್ಯವಲ್ಲದ 10 ಎಕರೆ ಭೂಮಿಯನ್ನು ಸ್ವಲ್ಪ ಹಣದಲ್ಲಿ ಖರೀದಿಸಿದ. ಆಗ ಆ ಜಮೀನು ನೋಡಿದವರು ಈ ಹುಡುಗನಿಗೆ ಬುದ್ಧಿ ಇಲ್ಲ, ಇದರಲ್ಲಿ ಏನು ಬೆಳೆಯುತ್ತಾನೆ ಎಂದು ಕುಹಕವಾಡಿದ್ದರು.
ಸಹಾಯಕ್ಕೆ ನಿಂತ ಸಹೋದರ
ಯಾರ ಮಾತಿಗೂ ಕಿವಿಗೊಡದ ರೈತ ಮಹಬೂಬ್ ಮೊದಲಿಗೆ ಕಲ್ಲುಗಳನ್ನು ತಮ್ಮ ಸಹೋದರ ರಾಜಾಸಾಹೇಬ್ನೊಂದಿಗೆ ಆರಿಸಲು ಆರಂಭಿಸಿದ. ಆರಿಸಿದಷ್ಟು ಕಲ್ಲುಗಳು ಹೆಚ್ಚೆಚ್ಚು ಸಿಗತೊಡಗಿದವು. ಭೂಮಿ ಬಗೆದಷ್ಟು ದೊಡ್ಡ ಗಾತ್ರದ ಕಲ್ಲುಗಳು ಕಾಣಿಸತೊಡಗಿದವು. ಆದರೂ ಧೃತಿಗೆಡದೆ ಸಿಕ್ಕ ಕಲ್ಲುಗಳನ್ನು ಹೊಲದ ಸುತ್ತ ಮೇರೆಗೆ ಹಾಕುತ್ತಾ ಬದು ಮಾಡಿದರು.
ನೂರಾರು ಹಣ್ಣಿನ ಗಿಡಗಳು
ಜಮೀನನ್ನು ನೇಗಿಲು ಹೊಡೆದು ಕೆರೆ ಮಣ್ಣನ್ನು ಹಾಕಿದರು. ಇದ್ದುದರಲ್ಲೇ ಸ್ವಲ್ಪಮಟ್ಟಿಗೆ ಹದ ಮಾಡಿದರು. ಹೀಗೆ 5 ವರ್ಷ ಕಷ್ಟಪಟ್ಟು ಬೆವರು ಹರಿಸಿದರು. ನಂತರ 700 ಮಾವು, 100 ತೇಗ, 100 ತೆಂಗಿನ ಗಿಡ, 25 ನಿಂಬೆ, 5 ಪೇರಲ, 5 ಶ್ರೀಗಂಧ, 5 ಮೂಸಂಬಿ, 10 ಪಪ್ಪಾಯಿ, 10 ಕರಿಬೇವು, ನುಗ್ಗೆ, ನೆಲ್ಲಿಕಾಯಿ ಗಿಡ 25 ಸಪೋಟ, ಬಾಳೆ ಹಣ್ಣಿನ ಗಿಡ ಹೀಗೆ ಗಿಡ ಹಾಕಿದರು.
ಜಮೀನು ಖರೀದಿಸಿದ್ದಾಗ 4 ಕೊಳವೆ ಬಾವಿಗಳಿದ್ದರೂ ಎರಡರಲ್ಲಿ ಮಾತ್ರ ಕೇವಲ ಒಂದೂವರೆ ಇಂಚು ನೀರಿತ್ತು. ಹನಿ ನೀರಾವರಿ ಅಳವಡಿಸಿದ.
ಫಸಲು ಸಿದ್ಧ
ಮಾವು, ಪಪ್ಪಾಯಿ, ಕರಿಬೇವು ಈ ವರ್ಷ ಫಲ ನೀಡಲು ಮುಂದಾಗಿವೆ. ಈ ಬಾರಿ ಈ ಫಸಲನ್ನು ಮಾರುವುದಿಲ್ಲ. ಮೊದಲ ಬೆಳೆಯನ್ನು ಸಂಬಂಧಿಕರು, ಸ್ನೇಹಿತರಿಗೆ, ಬಡವರಿಗೆ ಉಚಿತವಾಗಿ ಹಂಚುತ್ತೇನೆ. ನಂತರದ ಫಸಲನ್ನು ಮಾರುತ್ತೇನೆ ಎಂದು ರೈತ ತಿಳಿಸುತ್ತಾನೆ.
ಹಲಸು, ದ್ರಾಕ್ಷಿ, ಕಿತ್ತಾಳೆ, ದಾಳಿಂಬೆ ಹಾಕಲು ಸಿದ್ಧತೆ ನಡೆಸಿದ್ದಾನೆ. ಈಗ ಅಂದಾಜು 1 ಟನ್ ಮಾವು ಬಂದಿದೆ. ತೋಟದಲ್ಲಿ ಆಪುಸ್, ರಸಪುರಿ, ಬೇನಿಷ, ತೋತಾಪುರಿ, ಮಲ್ಲಿಕ್ ಹೀಗೆ ವಿವಿಧ ತಳಿಯ ಮಾವಿನ ಕಾಯಿಗಳು ಆಕರ್ಷಕವಾಗಿ ತೊನೆದಾಡುತ್ತಿವೆ. ಇನ್ನು ಔಷಧ ಸಸ್ಯಗಳನ್ನು ಹಾಕಿದ್ದಾರೆ. ಈಗ ಜನರು ಈ ತೋಟ ನೋಡಿ ಮೂಗಿನ ಮೇಲೆ ಬೆರಳು ಇಡುತ್ತಾರೆ. 7 ವರ್ಷದ ಶ್ರಮ ಈ ಮಟ್ಟಕ್ಕೆ ಬಂದಿದೆ. ಇನ್ನೂ ಸಾಕಷ್ಟು ಅಭಿವೃದ್ಧಿಯ ಕನಸಿದೆ. ಈ ಕಾಯಕಕ್ಕೆ ನನ್ನ ಸಹೋದರ ರಾಜಾಸಾಹೇಬ್ ಸಹಕಾರ ಬಹಳಷ್ಟಿದೆ ಎಂದು ಸ್ಮರಿಸುತ್ತಾನೆ. ಈಗ ರಾಜಾಸಾಹೇಬ್ ಬೇಲ್ದಾರ್ (ಗಾರೆ) ಕೆಲಸಕ್ಕೆ, ಮಹಬೂಬ್ ಗುತ್ತಿಗೆ ಕೆಲಸಕ್ಕೆ ಗುಡ್ ಬೈ ಹೇಳಿ ಸಂಪೂರ್ಣವಾಗಿ ತೋಟದ ಕಡೆ ಗಮನ ಹರಿಸಿದ್ದಾರೆ. ದೇಶದ ಬೆನ್ನೆಲುಬು ಎಂದೆನಿಸಿಕೊಂಡರುವ ರೈತನು ಸರ್ಕಾರ, ಸಂಘ- ಸಂಸ್ಥೆಗಳ ಕಡೆ ನೋಡಬಾರದು. ಜಾಣ್ಮೆಯಿಂದ ಬೆವರು ಸುರಿಸಿದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ರೈತ ಮಹಬೂಬ್ ಒಂದು ಉದಾಹರಣೆ. ಮಹಬೂಬ್ ಸಾಹೇಬರಿಗೆ ನೀವೊಂದು ಹಲೋ ಹೇಳಿ, ಮೊ. 9448217836.
- ಬಿ. ರಾಮಪ್ರಸಾದ್ ಗಾಂಧಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


