ಬಾಳೆ ಚಿಪ್ಳಿ
ಗ್ರಾಮೀಣ ಮಹಿಳೆ ಬರೀ ಮನೆಗೆಲಸದಲ್ಲಿ ತೊಡಗುವುದಲ್ಲ, ಕೃಷಿಯಲ್ಲೂ ಯಶಸ್ಸು ಸಾಧಿಸಬಹುದು...

ಗ್ರಾಮೀಣ ಮಹಿಳೆ ಬರೀ ಮನೆಗೆಲಸದಲ್ಲಿ ತೊಡಗುವುದಲ್ಲ, ಕೃಷಿಯಲ್ಲೂ ಯಶಸ್ಸು ಸಾಧಿಸಬಹುದು. ಆ ಮೂಲಕ ಸುತ್ತಮುತ್ತಲಿನ ಗೃಹಿಣಿಯರಿಗೆ ಮಾದರಿಬಲ್ಲಳು ಎಂಬುದಕ್ಕೆ ಈ ಮಹಿಳೆ ಉದಾಹರಣೆಯಾಗಬಲ್ಲಳು. ಸಾಗರ ತಾಲೂಕಿನ ಚಿಪ್ಳಿ ಗ್ರಾಮದ ನಾಗರತ್ನ ಶಿವಣ್ಣೇಗೌಡ ಅಂಗಾಂಶ ಕಸಿ ಬಾಳೆ ಕೃಷಿ ಕೈಗೊಂಡು ಯಶಸ್ವಿ ರೈತ ಮಹಿಳೆ ಎನಿಸಿದ್ದಾರೆ. ಅವರಿಗೆ ಪತಿ ಶಿವಣ್ಣೇಗೌಡ ಅವರ ನಿರಂತರ ಪ್ರೋತ್ಸಾಹ ನೀಡುತ್ತಿದ್ದಾರೆ.
ಕೃಷಿ ಹೇಗೆ?
ಮನೆಯ ಮುಂಭಾಗದ ಖಾಲಿ ಬ್ಯಾಣದಲ್ಲಿ ಕೃಷಿ ಆರಂಭಿಸಿದರು. ಇವರ ಕಾರ್ಯಕ್ಕೆ ಪತಿಯೂ ಪ್ರೋತ್ಸಾಹಿಸಿದರು. ಸನಿಹದ ಗದ್ದೆಯಲ್ಲಿ ವಿಶಾಲವಾದ ತೆರೆದ ಬಾವಿ ಇದೆ. ಅದಕ್ಕೆ ಪಂಪ್ ಅಳವಡಿಸಿ ನೀರಾವರಿ ವ್ಯವಸ್ಥೆ ಮಾಡಿದ್ದಾರೆ. ಸಾಲಿನಿಂದ ಸಾಲಿಗೆ 8 ಅಡಿ ಮತ್ತು ಗಿಡದಿಂದ ಗಿಡಕ್ಕೆ 8 ಅಡಿ ಅಂತರದಲ್ಲಿ ಬಾಳೆ ಸಸಿ ನೆಟ್ಟರು. ಗುಂಡಿಗೆ ಸಗಣಿ ಗೊಬ್ಬರ, ಒಣಗಿದ ಎಲೆ, ಬೂದಿ ಹಾಕಿ ಅಂಗಾಂಶ ಕಸಿ ಜಿ- 9 ತಳಿಯ ಬಾಳೆ ಗಿಡ ನೆಟ್ಟರು. ನಂತರ ಕಾಡು ಮಣ್ಣು ಮತ್ತು ಜೀವಾಂಶ ಗೊಬ್ಬರವನ್ನು ಪ್ರತಿ 25 ದಿನಕ್ಕೆ ಒಮ್ಮೆಯಂತೆ ಗಿಡದ ಬುಡಕ್ಕೆ ಹಾಕಿದರು.
40 ಕೆಜಿ ತೂಕದ ಬಾಳೆ ಗೊನೆ
ತಿಂಗಳಿಗೊಮ್ಮೆ ಗೋಬರ್ ಗ್ಯಾಸ್ ಸ್ಲರಿ ನೀಡಿದರು. ಸ್ಪಿಂಕ್ಲರ್ ಮೂಲಕ 3 ದಿನಕ್ಕೊಮ್ಮೆ ನೀರು ಹಾಯಿಸಿದರು. ಗಿಡಗಳು ಹುಲುಸಾಗಿ ಬೆಳೆಯತೊಡಗಿ 10 ತಿಂಗಳಿಗೆ ಗೊನೆ ಆರಂಭಗೊಂಡವು. ಗಿಡದ ಸುತ್ತ ಮರಿ ಗಡ್ಡೆಗಳು ಬೆಳೆದಾಗ ಅವುಗಳನ್ನು ಹಿಸುಕಿ ಹಾಕಿ ಗೊನೆಯ ವಿರುದ್ಧ ದಿಕ್ಕಿನಲ್ಲಿ ಚಿಗುರಿದ ಬಾಳೆ ಕಂದನ್ನು ಮಾತ್ರ ಗಿಡವಾಗಿ ಬೆಳೆಯಲು ಅವಕಾಶ ನೀಡಿದರು. ಒಂದು ಮರಕ್ಕೆ ಒಂದು ಮರಿ ಗಿಡದಂತೆ ಉಳಿಸಿದ ಇವರು ಎರಡನೇ ಫಸಲು ಪಡೆಯಲು ವೇದಿಕೆ ಸಿದ್ಧಪಡಿಸಿದರು. ಪ್ರತಿ ಬಾಳೆ ಮರದಿಂದ ಸರಾಸರಿ 40 ಕೆಜಿ ತೂಕದ ಬಾಳೆ ಗೊನೆ ತೊನೆದಾಡುತ್ತಿವೆ.
ಲಾಭ ಹೇಗೆ?
ಒಂದು ಸಸಿಗೆ ರು. 15ರಂತೆ ಈ ಅಂಗಾಂಶ ಕಸಿಯ ಬಾಳೆ ಗಿಡ ಖರೀದಿಸಿದ ಇವರು ಭೂಮಿ ಸಮತಟ್ಟುಗೊಳಿಸುವಿಕೆ, ಗುಂಡಿ ನಿರ್ಮಾಣ, ಗೊಬ್ಬರ ಕೂಲಿ ನಿರ್ವಹಣೆ, ನೀರಾವರಿ ವ್ಯವಸ್ಥೆ, ಗೊಬ್ಬರ ವೆಚ್ಚ ಹೀಗೆ ಒಂದು ಗಿಡಕ್ಕೆ ಸರಾಸರಿ 50 ವೆಚ್ಚ ಮಾಡಿದ್ದಾರೆ. ಒಟ್ಟು 100 ಬಾಳೆ ಗಿಡ ಬೆಳೆಸಿದ್ದಾರೆ. ಮೊದಲ ಫಸಲಿನಲ್ಲಿ ಪ್ರತಿ ಗಿಡಕ್ಕೆ ಸರಾಸರಿ 40 ಕೆಜಿಯಂತೆ 100 ಗಿಡದಿಂದ 4 ಟನ್ ಬಾಳೆ ಇಳುವರಿ ಬಂದಿದೆ. ಕೆಜಿಗೆ ರು. 7ರಂತೆ ಮಾರಿದ್ದಾರೆ. ಅಂದರೆ ಒಂದು ಗಿಡದಿಂದ ಸರಾಸರಿ ರು. 280 ಆದಾಯ ದೊರೆತಿದೆ. ಒಂದು ಗಿಡಕ್ಕೆ ಒಟ್ಟು ಸರಾಸರಿ ವೆಚ್ಚ ರು. 30 ಆಗಿದ್ದು, ರು. 250 ಲಾಭವಾಗಿದೆ. ಮಾಹಿತಿಗೆ ದೂ. 08183- 256166, ಮೊ. 9448406129 ಸಂಪರ್ಕಿಸಬಹುದು.
- ಎನ್.ಡಿ. ಹೆಗಡೆ ಆನಂದಪುರಂ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


