ಕೃಷಿ-ಪರಿಸರ

ಭಲೇ ಬೆಂಡೆ

ನೀರಾವರಿ ವ್ಯವಸ್ಥೆ ರೂಪಿಸಿಕೊಂಡ ಹಲವು ರೈತರು ಬಹುವಾರ್ಷಿಕ ಬೆಳೆಗಳಿಗಿಂತ ತರಹೇವಾರಿ ತರಕಾರಿ ಕೃಷಿಯಲ್ಲಿ ಸಾಕಷ್ಟು...

ಭಲೇ ಬೆಂಡೆ
Published On :

ನೀರಾವರಿ ವ್ಯವಸ್ಥೆ ರೂಪಿಸಿಕೊಂಡ ಹಲವು ರೈತರು ಬಹುವಾರ್ಷಿಕ ಬೆಳೆಗಳಿಗಿಂತ ತರಹೇವಾರಿ ತರಕಾರಿ ಕೃಷಿಯಲ್ಲಿ ಸಾಕಷ್ಟು ಆದಾಯ ಗಳಿಸಿ ಲಢಾಭದ ಹಾದಿಯಲ್ಲಿ ಮುನ್ನಡೆಯುತ್ತಾರೆ. ಆ ಪೈಕಿ ಶಿವಮೊಗ್ಗ ತಾಲೂಕು ಸವಳಂಗದ ಸಮೀಪದ ಸುತ್ತುಕೋಟೆ ಸಿದ್ದೇಶ ವರ್ಷವಿಡಿ ಬೆಂಡೆ ಕೃಷಿ ಕೈಗೊಂಡು ಯಶಸ್ಸಿನ ಹಾದಿಯಲ್ಲಿ ಸಾಗಿದ್ದಾರೆ.
ಅವರು ತಮ್ಮ ಮನೆಯ ಹಿಂಭಾಗದ ಸುಮಾರು 2 ಎಕರೆ ಹೊಲವನ್ನು 4 ಭಾಗವಾಗಿ ವಿಂಗಡಿಸಿ ಬೆಂಡೆ ಕೃಷಿ ನಡೆಸುತ್ತಿದ್ದಾರೆ. ಒಂದು ಭಾಗದಲ್ಲಿ ಫಸಲು ಆರಂಭವಾಗುತ್ತಿದ್ದಂತೆ ಇನ್ನೊಂದು ಭಾಗದಲ್ಲಿ ಬೆಂಡೆ ಬೀಜ ಹಾಕಲು ತೊಡಗಿಕೊಳ್ಳುತ್ತಾರೆ. ತಮ್ಮ ಹೊಲದಲ್ಲಿ ವರ್ಷವಿಡೀ ಬೆಂಡೆ ಫಸಲು ಪಡೆಯುತ್ತಾರೆ. ಅಲ್ಲದೆ, ಲಾಭದಾಯಕವಾಗಿ ಈ ಕೃಷಿ ನಡೆಸುವ ತಂತ್ರ ರೂಪಿಸಿಕೊಂಡಿದ್ದಾರೆ. ಶಿವಮೊಗ್ಗ- ಶಿಕಾರಿಪುರ ರಾಜ್ಯ ಹೆದ್ದಾರಿಗೆ ತಾಗಿಕೊಂಡೆ ಇವರ ಹೊಲವಿರುವ ಕಾರಣ ತರಕಾರಿ ವ್ಯಾಪಾರಿಗಳು ಇಲ್ಲಿಗೆ ಅಗಮಿಸಿ ತರಕಾರಿ ಖರೀದಿಸುತ್ತಾರೆ.

ಕೃಷಿ ಹೇಗೆ?
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಹೊಲ ಉಳುಮೆ ಮಾಡಿ ಹದಗೊಳಿಸಿ ಬೆಂಡೆ ಕೃಷಿ ಕೈಗೊಂಡಿದ್ದಾರೆ. ಸುಮಾರು 20 ಗುಂಟೆ ವಿಸ್ತೀರ್ಣದಲ್ಲಿ ಬೆಂಡೆ ಕೃಷಿ ನಡೆಸಿದ್ದಾರೆ. ಹದಗೊಳಿಸಿದ ನಂತರ ಹೊಲದಲ್ಲಿ ಸಾಲಿನಿಂದ ಸಾಲಿಗೆ ಎರಡೂವರೆ ಅಡಿ ಅಂತರದಲ್ಲಿ ಸುಮಾರು 1 ಅಡಿ ಎತ್ತರದ ಪಟ್ಟೆಸಾಲು ನಿರ್ಮಿಸಿದರು. ಪ್ರತಿಯೊಂದು ಸಾಲು ಸುಮಾರು 80 ಅಡಿ ಉದ್ದವಿದೆ. ಈ ಪಟ್ಟೆಗಳಲ್ಲಿ ಗಿಡದಿಂದ ಗಿಡಕ್ಕೆ ಒಂದು ಅಡಿ ಅಂತರದಂತೆ ಬೆಂಡೆ ಬೀಜ ಬಿತ್ತಿದರು. ಜತೆಗೆ ಗೊಬ್ಬರ ಹಾಕಿದರು. ಕೊಳವೆ ಬಾವಿಯ ನೀರನ್ನು 2 ದಿನಕ್ಕೊಮ್ಮೆ ನೀರು ಹಾಯಿಸಿದರು. ನಂತರ 25 ದಿನಕ್ಕೆ ಒಮ್ಮೆಯಂತೆ 2 ಸಲ ಗೊಬ್ಬರ ನೀಡಿ ಮಣ್ಣು ಏರಿಸಿಕೊಟ್ಟರು. ಗಿಡಗಳಿಗೆ 1 ತಿಂಗಳಾಗುತ್ತಿದ್ದಂತೆ ಹೂವು ಬಿಟ್ಟು ಮಿಡಿಯಾಗಲಾರಂಭಿಸಿದವು. 45ನೇ ದಿನದಿಂದ ಬೆಂಡೆ ಕಾಯಿ ಕಟಾವಿಗೆ ಸಿದ್ಧವಾದವು.
ಬೆಂಡೆ ಕೃಷಿಯಲ್ಲಿ ಯಶಸ್ಸು ಕಂಡಿರುವ ಇವರು ಸುತ್ತಮುತ್ತಲ ರೈತರಲ್ಲಿ ಅಚ್ಚರಿ ಮೂಡಿಸಿದ್ದಾರೆ. ಮಾಹಿತಿಗಾಗಿ ಅವರ ಮೊ. 9916655112.



ಕಡಿಮೆ ಖರ್ಚು, ಅಧಿಕ ಲಾಭ
ವರ್ಷಕ್ಕೆ ಪ್ರತಿ ಗಿಡದಿಂದ ಸರಾಸರಿ 5 ರಿಂದ 7 ಕೆಜಿ ಬೆಂಡೆ ಫಸಲು ಸಿಗುತ್ತದೆ. ಮಾರುಕಟ್ಟೆಯಲ್ಲಿ ಕೆಜಿಗೆ 10 ರಿಂದ 12 ವರೆಗೂ ಧಾರಣೆಯಿದೆ. ಇವರು ಈ ವರ್ಷ ಒಟ್ಟು ಸುಮಾರು 4000 ಬೆಂಡೆ ಗಿಡ ನೆಟ್ಟಿದ್ದಾರೆ. ಸುಮಾರು 90 ದಿನದವರೆಗೆ 2 ದಿನಕ್ಕೊಮ್ಮೆ ಬೆಂಡೆಕಾಯಿ ಕಟಾವು ಮಾಡುತ್ತಾರೆ. 4000 ಗಿಡದಿಂದ ಈ ಹಂಗಾಮಿನಲ್ಲಿ ಸರಾಸರಿ ಒಂದು ಗಿಡದಿಂದ ಕನಿಷ್ಠ 5 ಕೆಜಿ ಬೆಂಡೆ ದೊರೆತರೂ 200 ಕ್ವಿಂಟಲ್ ಬೆಂಡೆ ಸಿಗಲಿದೆ. ಕ್ವಿಂಟಲ್‌ಗೆ 1000 ದರ ದೊರೆತರೆ 2 ಲಕ್ಷ ಆದಾಯ ಸಿಗುತ್ತದೆ. ಸುಮಾರು 50 ರಿಂದ 60 ಸಾವಿರ ವೆಚ್ಚವಾಗುತ್ತದೆ. ಅದರೂ 1.5 ಲಕ್ಷ ಲಾಭ ದೊರೆಯುತ್ತದೆ.



- ಎನ್.ಡಿ. ಹೆಗಡೆ ಆನಂದಪುರಂ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.