ಕೃಷಿ-ಪರಿಸರ

ನಾಲು ಮಿಡಿತ

ಹಿಂದೆಲ್ಲ ಬೇಸಾಯಕ್ಕೆ ರೈತರು ಎತ್ತುಗಳನ್ನೇ ನೆಚ್ಚಿಕೊಂಡಿದ್ದರು. ಉಳುಮೆಗಾಗಿ, ಸರಕು ಸಾಗಾಣಿಕೆಗಾಗಿ ಎತ್ತಿನ ಬಂಡಿ ಬಳಸುತ್ತಿದ್ದರು...

ನಾಲು ಮಿಡಿತ
Published On :

ಹಿಂದೆಲ್ಲ ಬೇಸಾಯಕ್ಕೆ ರೈತರು ಎತ್ತುಗಳನ್ನೇ ನೆಚ್ಚಿಕೊಂಡಿದ್ದರು. ಉಳುಮೆಗಾಗಿ, ಸರಕು ಸಾಗಾಣಿಕೆಗಾಗಿ ಎತ್ತಿನ ಬಂಡಿ ಬಳಸುತ್ತಿದ್ದರು. ತಮ್ಮ ಗ್ರಾಮದಿಂದ ಸಂತೆಗೆ ಹೋಗಲು ಅಗತ್ಯ ವಸ್ತು ಖರೀದಿಸಿ ತರಲು ಸಾಗಾಣಿಕೆಯ ವಾಹನಕ್ಕಾಗಿ ಎತ್ತು ಬಳಸುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ವಾಹನಗಳ ಭರಾಟೆ ಜಾಸ್ತಿಯಾದಂತೆ ಸಂಚಾರಕ್ಕಾಗಿ ಪ್ರಾಣಿಗಳ ಬಳಕೆ ಅದರಲ್ಲೂ ಎತ್ತುಗಳ ಬಳಕೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇದರೊಂದಿಗೆ ಎತ್ತುಗಳಿಗೆ ಪಾದರಕ್ಷೆ(ನಾಲು) ಜೋಡಿಸುವ ಕೆಲಸವೂ ಮಾಯವಾಗುತ್ತಿದೆ.
ನಡೆದಾಡಲು ಅನುಕೂಲ
ನಾಲ ಎಂದರೆ ಅರ್ಧ ಚಂದ್ರಾಕೃತಿಯಲ್ಲಿರುವ ಕಬ್ಬಿಣದ ಪಟ್ಟಿ. ಅವುಗಳನ್ನೇ ನಾಲ್ಕು ಕಾಲುಗಳಲ್ಲಿ ಜೋಡಿಸುವರು. ಅವು ನಡೆದಾಡಲು ಅನುಕೂಲ. ಅವುಗಳ ಸವೆತ ಉಂಟಾದರೆ ಪಾದಗಳಿಂದ ರಕ್ತ ಬರುವ ಸಾಧ್ಯತೆಯಿರುತ್ತದೆ. ಇದನ್ನು ತಡೆಯಲು ನಾಲುಗಳನ್ನು ಕನಿಷ್ಠ ತಿಂಗಳಿಗೆ ಒಮ್ಮೆ ಕಟ್ಟಿಸುತ್ತಾರೆ. ಇದನ್ನು ಹಲ್ಲೆ ಹೊಡೆಸುವುದು ಎಂದೂ ಕರೆಯತ್ತಾರೆ.
ನಾಲ ಕಟ್ಟುವವರ ಬಳಿ ಒಂದು ಚೀಲವಿರುತ್ತದೆ. ಅದರಲ್ಲಿ ಕಬ್ಬಿಣದಿಂದ ತಯಾರಾದ ನಾಲಗಳು ಸುತ್ತಿಗೆ, ಇಕ್ಕಳ, ಉಳಿ, ಮೊಳೆಗಳು, ಪಾಗಾರ, ಚಾಣಾ, ಹಗ್ಗ ಇತರೆ ಸಾಮಗ್ರಿಗಳು ಇರುತ್ತವೆ. ಈ ಚೀಲವನ್ನೇ ನೇತು ಹಾಕಿಕೊಂಡು ಹೆಗಲಿಗೆ ಹಗ್ಗ ಇಟ್ಟುಕೊಂಡು ಊರೂರು ಅಲೆಯುತ್ತಾರೆ. ಯಾವ ರೈತರು ಕರೆಯುತ್ತಾರೋ ಅವರ ಎತ್ತುಗಳಿಗೆ ನಾಲು ಕಟ್ಟುತ್ತಾರೆ. ಈ ಕಾರ್ಯದ ವೇಳೆಗೆ ಎತ್ತಿಗೆ ಹಗ್ಗ ಹಾಕಿ ಮಲಗಿಸಬೇಕಾದರೆ, ಎತ್ತಿನ ಮಾಲೀಕರು ಜೊತೆಗಿರಬೇಕು. ಇಲ್ಲದಿದ್ದರೆ ಎತ್ತುಗಳು ಬೆದರಿ ಅನಾಹುತಕ್ಕೆ ಕಾರಣವಾಗಬಹುದು.

ಹೇಗೆ ಕಾರ್ಯವೈಖರಿ?
ಮೊದಲು ಎತ್ತಿನ ಕೊಂಬುಗಳ ಮೂಲಕ ಹಗ್ಗ ಹಾಕಿ ಹೊಟ್ಟೆ ಕಾಲುಗಳ ಭಾಗದಲ್ಲಿ ವ್ಯವಸ್ಥಿತವಾಗಿ ಬಂಧಿಸಿ ಕೆಳಗೆ ಮಲಗಿಸುವರು. ನಂತರ ಕಾಲುಗಳನ್ನು ಎತ್ತರಕ್ಕೆ ಇಡಲು ಕಟ್ಟಿಗೆ ಸಿಕ್ಕಿಸಿ ಮೊದಲು ಹಾಕಿದ ನಾಲುಗಳನ್ನು ಇಕ್ಕಳದಿಂದ ಕಿತ್ತು ತೆಗೆಯಲಾಗುವುದು. ನಂತರ ಹೊಸ ನಾಲುಗಳನ್ನು ಇಟ್ಟು ಮೊಳೆ ಬಡಿಯುತ್ತಾರೆ. ನಂತರ ಹಿಂಗಾಲುಗಳಿಗೂ ಇದೇ ರೀತಿ ಮಾಡುವರು.
ರಕ್ಷಾಕವಚ
ಹೊಲ, ಗದ್ದೆ ಹಾಗೂ ಕಲ್ಲು, ಮುಳ್ಳಿನ ಹಾದಿಗಳಲ್ಲಿ ಸಂಚರಿಸುವ ಎತ್ತುಗಳ ಪಾದರಕ್ಷಣೆಗೆ ಈ ನಾಲು ಬಡಿಸುವುದು ಅತ್ಯಗತ್ಯ. ನಾಲು ಕಟ್ಟುವ ಕೆಲಸ ಮಾಡಿಕೊಂಡೇ ಜೀವನ ಸಾಗಿಸುತ್ತಿರುವ ಕುಟುಂಬಗಳು ಇತ್ತೀಚೆಗೆ ಕೆಲಸವಿಲ್ಲದೆ ಅತಂತ್ರ ಸ್ಥಿತಿ ಎದುರಿಸುವಂತಾಗಿದೆ. ಈ ಕೆಲಸ ಮಾಡುತ್ತಿರುವ ಅನೇಕ ಕುಟುಂಬಗಳು ವಿಧಿ ಇಲ್ಲದೇ ಈ ಉದ್ಯೋಗ ತ್ಯಜಿಸುತ್ತಿದ್ದಾರೆ. ಒಂದು ಜೋಡಿ ಎತ್ತಿಗೆ ನಾಲು ಬಡಿಯಲು 400- 450 ರು. ಪಡೆಯಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸುತ್ತಿರುವುದರಿಂದ ಒಕ್ಕಲುತನ ವಿಧಾನಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಎತ್ತು, ಚಕ್ಕಡಿ ಬದಲಾಗಿ ಟ್ರ್ಯಾಕ್ಟರ್ ಮತ್ತಿತರ ವಾಹನ ಬಳಸುತ್ತಿದ್ದಾರೆ. ಎತ್ತುಗಳೂ ಈಗ ಅಷ್ಟಿಲ್ಲ. ನಾಲು ಕಟ್ಟುವ ವೃತ್ತಿಯು ಕ್ರಮೇಣ ಮಾಯವಾಗುತ್ತಿದೆ.

- ಫಕ್ಕೀರೇಶ ಗು. ಕುಂದಗೋಳ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.