ಸಾವಯವ ಸಾಗುವಳಿ
ಅತಿಯಾದ ರಾಸಾಯನಿಕ ಬಳಕೆಯಿಂದ 20 ಎಕರೆ ಜಮೀನು ಹಾಳಾಗಿ ಕಲ್ಲು ಬೆಳೆಯುವ ಭೂಮಿಯಾಗಿ ಪರಿವರ್ತನೆಗೊಂಡಿತ್ತು. ಆದರೆ,...

ಅತಿಯಾದ ರಾಸಾಯನಿಕ ಬಳಕೆಯಿಂದ 20 ಎಕರೆ ಜಮೀನು ಹಾಳಾಗಿ ಕಲ್ಲು ಬೆಳೆಯುವ ಭೂಮಿಯಾಗಿ ಪರಿವರ್ತನೆಗೊಂಡಿತ್ತು. ಆದರೆ, ಇದೀಗ ಅದೇ ಭೂಮಿ ಸಾವಯವ ಕೃಷಿಯಿಂದಾಗಿ ಹೊನ್ನು ಬೆಳೆಯುವ ಭೂಮಿಯಾಗಿ ಮಾರ್ಪಟ್ಟಿದೆ!
ಧಾರವಾಡ ತಾಲೂಕಿನ ದಾಸನಕೊಪ್ಪ ಗ್ರಾಮದ ದೇಸಾಯಿ ಮನೆತನದವರಾದ ಮಹಮ್ಮದ್ ಅಲಿ ಸರದೇಸಾಯಿ ಎಂಬುವರೇ ಸಾವಯವ ಕೃಷಿಯನ್ನು ಮುನ್ನಡೆಸುತ್ತಿದ್ದಾರೆ. 70 ವಯಸ್ಸಿನ ಆಸುಪಾಸಿನಲ್ಲಿರುವ ಮಹಮ್ಮದ್ ಅಲಿ ಅವರು 20 ಎಕರೆ ಪ್ರದೇಶದಲ್ಲಿ ಸಾವಯವ ಕೃಷಿ ಮಾಡುತ್ತಿದ್ದು, ಸುತ್ತ ಹಳ್ಳಿಗಳಿಗೆ ಇವರ ಈ ಸಾವಯವ ಕೃಷಿ ಪದ್ಧತಿ ಮಾದರಿಯಾಗಿದೆ.
ಭಾರಿ ಬೇಡಿಕೆ
ಈ ಹಿಂದೆ ಇದೇ ಭೂಮಿಯಲ್ಲಿ ಆಧುನಿಕ ಕೃಷಿ ಮಾಡಲಾಗುತ್ತಿತ್ತು. ರಾಸಾಯನಿಕಗಳ ಬಳಕೆ ಹೆಚ್ಚಾಗಿದ್ದರಿಂದ ಇಳುವರಿಯಲ್ಲಿ ತೀವ್ರ ಇಳಿಕೆಯಾಯಿತು. ಈ ಹಿನ್ನೆಲೆಯಲ್ಲಿ ಮಹಮ್ಮದ್ ಅಲಿ ರಾಸಾಯನಿಕ ಬಳಕೆ ಬಿಟ್ಟು ಎಂಟು ವರ್ಷಗಳಿಂದ ಸಾವಯವ ಕೃಷಿ ಕೈಗೊಂಡಿದ್ದಾರೆ. ಮೆಣಸು, ಬೆಂಡಿ, ಮುಳ್ಳು ಬದನೆ, ಹಾಗಲಕಾಯಿ, ಹಿರೇಕಾಯಿ, ಕೊತಂಬರಿ, ಚವಳಿ, ಮೆಂತೆ, ಸಬ್ಬಸಗಿ, ಕರಿಬೇವು, ನುಗ್ಗೆ, ಮಸಾಲೆ ಸಾಮಗ್ರಿ ಸೇರಿದಂತೆ ತರಕಾರಿ ಮತ್ತು ಹಸಿರು ಸೊಪ್ಪನ್ನು ಬೆಳೆಯಲಾಗುತ್ತದೆ. ಅಲ್ಲದೆ, ತರಹೇವಾರಿ ಹಣ್ಣು ಮತ್ತು ಎಣ್ಣೆ ಕಾಳು ಪದಾರ್ಥಗಳನ್ನೂ ಇಲ್ಲಿ ಬೆಳೆಯಲಾಗುತ್ತದೆ.
ಸದ್ಯ ಮಾರುಕಟ್ಟೆಯಲ್ಲಿ ಸಾವಯವ ಕೃಷಿ ಮೂಲಕ ಬೆಳೆದ ತರಕಾರಿ ಮತ್ತು ಹಸಿರು ಸೊಪ್ಪಿಗೆ ಉತ್ತಮ ಬೇಡಿಕೆ ಇದೆ.
ರಾಸಾಯನಿಕ ಬಳಸಲ್ಲ
ಇವರು ಕೃಷಿಯಲ್ಲಿ ಸದ್ಯ ಯಾವುದೇ ರಾಸಾಯನಿಕ ಗೊಬ್ಬರ ಹಾಗೂ ಔಷಧಿ ಬಳಸುವುದಿಲ್ಲ. ಒಂದು ವೇಳೆ ಬೆಳೆಗೆ ಕೀಟಗಳ ಬಾಧೆ ಅಥವಾ ಯಾವುದೇ ರೋಗ ಬಿದ್ದರೂ ಸಾವಯವ ಔಷಧೋಪಚಾರ ಮಾಡುವ ಪದ್ಧತಿ ರೂಢಿಸಿಕೊಂಡಿದ್ದಾರೆ. ಅಲ್ಲದೆ, ಭೂಮಿಯ ಫಲವತ್ತತೆ ಹೆಚ್ಚಿಸಲು ಸಗಣಿ ಗೊಬ್ಬರ ಹಾಗೂ ಎರೆಹುಳು ಗೊಬ್ಬರ ನೀಡುತ್ತಾರೆ. <
ಉತ್ತರ ಕರ್ನಾಟಕದಲ್ಲಿ ಕಾಫಿ ತೋಟ
ಮಹಮ್ಮದ್ ಅಲಿ ಅವರು ಸಾವಯವ ಕೃಷಿಯ ಮೂಲಕವೇ ಈ ಭಾಗದಲ್ಲಿಯೂ ಪ್ರಥಮ ಬಾರಿಗೆ ಕಾಫಿ ತೋಟವೊಂದನ್ನು ಮಾಡಿದ್ದಾರೆ. ಸುಮಾರು ನಾಲ್ಕು ಎಕರೆಯಲ್ಲಿ ಈ ತೋಟ ಸಿದ್ಧಪಡಿಸಿದ್ದಾರೆ. ಸ್ವಲ್ಪ ಇಳಿಜಾರಿನ ಪ್ರದೇಶದಲ್ಲಿ ಕಾಫಿ ತೋಟ ನಿರ್ಮಿಸಿ ಉತ್ತರ ಕರ್ನಾಟಕದಲ್ಲೂ ಕಾಫಿ ಬೆಳೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಮುಖ್ಯವಾಗಿ ಕಾಫಿ ಬೆಳೆಗೆ ನೆರಳು ಅವಶ್ಯಕವಾಗಿದ್ದರಿಂದ ತೆಂಗು, ನೇರಳೆ, ಪಪ್ಪಾಯಿ, ನಾರಂಗಿ, ಪೇರಲ, ಮಲ್ಬರಿ ಸೇರಿದಂತೆ ಅನೇಕ ತರಹದ ಹಣ್ಣಿನ ಗಿಡ ನೆಟ್ಟಿದ್ದಾರೆ. ಈ ಮೂಲಕ ಕಾಫಿ ಬೆಳೆಯ ಜತೆಗೆ ಹಣ್ಣುಗಳನ್ನು ಬೆಳೆದು ಉಳಿದೆಲ್ಲ ರೈತರಿಗೆ ಮಾದರಿಯಾಗಿದ್ದಾರೆ.
ಮೊದಲು ಎರಡು ವರ್ಷ ಸಾವಯವ ಕೃಷಿಯಲ್ಲಿ ಯಾವುದೇ ಲಾಭ ಬರಲಿಲ್ಲ. ಕ್ರಮೇಣ ಗೊಬ್ಬರ ನೀಡುತ್ತ ಸಾಗಿದಂತೆ ವರ್ಷಕ್ಕಿಂತ ವರ್ಷಕ್ಕೆ ಇಳುವರಿ ಜಾಸ್ತಿಯಾಗುತ್ತಿದೆ. ನಿಸರ್ಗದತ್ತವಾಗಿ ಬಂದ ಸಾವಯವ ಕೃಷಿ ಮಾಡುವುದರಿಂದ ಭೂಮಿ ಫಲವತ್ತತೆ ಕಾಯ್ದುಕೊಳ್ಳಲು ಅನುಕೂಲವಾಗುತ್ತದೆ.
-ಮಹಮ್ಮದ್ ಅಲಿ ಸರದೇಸಾಯಿ, ದಾಸನಕೊಪ್ಪದ ಕೃಷಿಕ
- ಕಲ್ಮೇಶ ಪಟ್ಟಣದವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


