ಮಿಲಿಯಾದುಬಿಯಾ ಬೆಳೆದವ ಲಕ್ಷಾಧಿಪತಿ!
ಕೇವಲ ಮಳೆ ನೀರಿನಿಂದಲೇ ಎಕರೆಗೆ ಲಕ್ಷಾಂತರ ರು. ಗಳಿಸುವ ಮಿಲಿಯಾದುಬಿಯಾ ಬೆಳೆದು ಮಿಲಿಯಾಧಿಪತಿ ಆಗಬಹುದು!...

ಕೇವಲ ಮಳೆ ನೀರಿನಿಂದಲೇ ಎಕರೆಗೆ ಲಕ್ಷಾಂತರ ರು. ಗಳಿಸುವ ಮಿಲಿಯಾದುಬಿಯಾ ಬೆಳೆದು ಮಿಲಿಯಾಧಿಪತಿ ಆಗಬಹುದು!
ಪ್ಲೈವುಡ್ ತಯಾರಿಕೆಯಲ್ಲಿ ಅತಿ ಹೆಚ್ಚು ಬಳಕೆಯಾಗುತ್ತಿರುವ ಕಚ್ಚಾ ಸಾಮಗ್ರಿ ಮಿಲಿಯಾದುಬಿಯಾ. ಇದು ಅತ್ಯಂತ ಕಡಿಮೆ ಖರ್ಚು, ಹೆಚ್ಚು ಕೂಲಿ ಕಾರ್ಮಿಕರ ಅವಶ್ಯಕತೆ ಇಲ್ಲದೇ, ಕಡಿಮೆ ನೀರಲ್ಲಿ ಮುಖ್ಯವಾಗಿ ಮಳೆ ನೀರಿಗೂ ಬೆಳೆಯುವ ಅರಣ್ಯ ಬೆಳೆ.
ಯಾವುದೆ ತರಹದ ಮಣ್ಣು, ಹವಾಮಾನಕ್ಕೆ ಹೊಂದಿಕೊಂಡು ಬೆಳೆಯುವ ಬೆಳೆ. ಸಸಿ ನೆಟ್ಟು ನಾಲ್ಕನೆ ವರ್ಷಕ್ಕೆ ಎಕರೆಗೆ ಕನಿಷ್ಠ ಎರಡರಿಂದ ಮೂರು ಲಕ್ಷವರೆಗೂ ಆದಾಯ ತರುವ ತಾಕತ್ತಿರುವ ಬೆಳೆ. ಇತ್ತಿಚಿನ ದಿನಗಳಲ್ಲಿ ರೈತರು ಮಿಲಿಯಾದುಬಿಯಾದತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದಕ್ಕೆ ನೀರು ಹಾಯಿಸಬೇಕು, ಕಳೆ ತೆಗೆಯಬೇಕು, ರೋಗ ಬಾಧೆಯಿಂದ ಕಾಪಾಡಬೇಕು ಎಂಬ ಪ್ರಮೇಯೇ ಇಲ್ಲ.
ಮಿಲಿಯದುಬಿಯಾವನ್ನು ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣದ ಬಸವರಾಜ ಬೆಳೆಯುತ್ತಿದ್ದಾರೆ. ಸದ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಲೇ ಗ್ರಾಮಕ್ಕೆ ಹೊಂದಿಕೊಂಡಂತಿರುವ ಮೂರು ಎಕರೆ ಒಣ ಭೂಮಿಯಲ್ಲಿ ಮಿಲಿಯಾದುಬಿಯಾ ಮರ ಬೆಳೆಸಿದ್ದಾರೆ. ಕಳೆದ ಮಳೆಗಾಲದಲ್ಲಿ ಸಸಿ ನೆಟ್ಟಿರುವುದರಿಂದ ಈಗಾಗಲೆ ಹತ್ತು ತಿಂಗಳ ಮಿಲಿಯಾದುಬಿಯಾ ಬಸವರಾಜ ಹೊಲದಲ್ಲಿ ನಳನಳಿಸುತ್ತಿದೆ.
800 ಸಸಿ
ಸಾಲಿನಿಂದ ಸಾಲಿಗೆ 12 ಅಡಿ ಹಾಗೂ ಗಿಡದಿಂದ ಗಿಡಕ್ಕೆ 12 ಅಡಿಗಳ ಅಂತರದಲ್ಲಿ ಮೂರು ಎಕರೆ ಭೂಮಿಯಲ್ಲಿ ಬಸವರಾಜ 800 ಮಿಲಿಯಾದುಬಿಯಾ ಗಿಡ ನೆಟ್ಟಿದ್ದಾರೆ. ಈ ಎಲ್ಲ ಗಿಡಗಳು ಈಗಾಗಲೆ ಅರೇಳು ಅಡಿ ಎತ್ತರಕ್ಕೆ ಬೆಳೆದು ನಿಂತಿವೆ. ನಾಲ್ಕನೆ ವರ್ಷಕ್ಕೆ ಕಟಾವು ಮಾಡಿದರೆ ಒಂದು ಮರದಿಂದ ಕನಿಷ್ಠ ಸಾವಿರ ರು. ಮೌಲ್ಯದ ಕಟ್ಟಿಗೆ ದೊರಕುತ್ತದೆ. ಅಲ್ಲಿಗೆ 800 ಮರಗಳಿಂದ 8 ಲಕ್ಷ ಆದಾಯ ಸಿಗುತ್ತದೆ ಎನ್ನುತ್ತಾರೆ ಬಸವರಾಜ. ಇದೇ ಮರವನ್ನು ಎಂಟು ವರ್ಷಕ್ಕೆ ಕಟಾವು ಮಾಡಿದರೆ ಲಾಭ ದುಪ್ಪಟ್ಟು ಆಗುತ್ತದೆ ಎನ್ನುತ್ತಾರೆ.
ಎಲ್ಲೆಲ್ಲಿ ಬಳಕೆ?
ಮರವಾಗಿ ಬೆಳೆಯುವ ಮಿಲಿಯಾದುಬಿಯಾ ಶೇ. 80ರಷ್ಟು ಪ್ಲೈವುಡ್ ತಯಾರಿಕೆಗೆ ಬಳಕೆಯಾದರೆ ಶೇ. 20ರಷ್ಟು ಕಾಗದ, ಬೆಂಕಿ ಕಡ್ಡಿ ಉತ್ಪಾದನೆಗೆ ಬಳಸಲಾಗುತ್ತದೆ. ಇತ್ತಿಚಿನ ದಿನಗಳಲ್ಲಿ ನಿರ್ಮಾಣ ಕ್ಷೇತ್ರ ಆಗಾಧ ರೂಪ ಪಡೆದುಕೊಂಡ ಮೇಲೆ ಪ್ಲೈವುಡ್ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ.
ಬೆಳೆಯುವ ಬಗೆ
ಮಳೆಗಾಲ ಆರಂಭದಲ್ಲೇ ಸಸಿ ನೆಡಲು ಸೂಕ್ತ ಸಕಾಲ. ಒಂದೂವರೆ ಅಡಿ ಅಗಲ- ಉದ್ದ ಹಾಗೂ ಎರಡು ಅಡಿ ಅಳದ ಗುಂಡಿ ತೋಡಿ, ಕೊಟ್ಟಿಗೆ ಗೊಬ್ಬರ ಹಾಕಿ ಸಸಿ ನೆಟ್ಟರೆ ಸಾಕು. ಇದು ಸಂಪೂರ್ಣ ಮಳೆಯಾಧಾರಿತ ಬೆಳೆ. ಇನ್ನೂ ಸಸಿ ನೆಡುವ ಸಮಯದಲ್ಲಿ ಕೂಲಿ ಕಾರ್ಮಿಕರು ಬೇಕು. ಆಮೇಲೆ ಅವರ ಅಗತ್ಯವೇ ಬೀಳದು. ಮರ ರಕ್ಷಿಸಲು ನಿತ್ಯ ಒಬ್ಬ ಕೂಲಿ ಕಾರ್ಮಿಕರನ್ನು ನೇಮಕ ಮಾಡಿಕೊಂಡರೆ ಸಾಕು. ನೀರಾವರಿ ಸೌಲಭ್ಯ ಇದ್ದರೆ ನೀರು ಹಾಯಿಸಬಹುದು ಎನ್ನುತ್ತಾರೆ ಬಸವರಾಜ. ಅರಣ್ಯ ಇಲಾಖೆ ಹಾಗೂ ಖಾಸಗಿ ನರ್ಸರಿಗಳಲ್ಲಿ ಮಿಲಿಯಾದುಬಿಯಾ ಸಸಿಗಳು ಮಾರಾಟಕ್ಕೆ ಸಿಗುತ್ತವೆ. ಮತ್ತಷ್ಟು ಮಾಹಿತಿಗಾಗಿ ಬಸವರಾಜ ಮೊ. 8861188699.
-ಹುಳ್ಳಿ ಪ್ರಕಾಶ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


