ನೀರುತ್ಸಾಹವೇಕೆ?
ನಾಡಿನ ಒಂದೆಡೆ ವಿಪರೀತ ಮಳೆ. ಮತ್ತೊಂದೆಡೆ ನೀರಿಗೆ ತತ್ವಾರ. ಕುಡಿಯುವ ನೀರಿಗೂ ಪರಿತಪಿಸುವ ಪರಿ. ಈಚೆಗೆ ಹುಬ್ಬಳ್ಳಿ ಸುತ್ತಮುತ್ತ ಪ್ರವಾಸದಲ್ಲಿದ್ದಾಗ ಕೆಲವು ಹಳ್ಳಿಗಳ...

ನಾಡಿನ ಒಂದೆಡೆ ವಿಪರೀತ ಮಳೆ. ಮತ್ತೊಂದೆಡೆ ನೀರಿಗೆ ತತ್ವಾರ. ಕುಡಿಯುವ ನೀರಿಗೂ ಪರಿತಪಿಸುವ ಪರಿ. ಈಚೆಗೆ ಹುಬ್ಬಳ್ಳಿ ಸುತ್ತಮುತ್ತ ಪ್ರವಾಸದಲ್ಲಿದ್ದಾಗ ಕೆಲವು ಹಳ್ಳಿಗಳ ಸಾರ್ವಜನಿಕ ನೀರು ಸರಬರಾಜಿನ ನಲ್ಲಿಗಳಲ್ಲಿ ದಿನವಿಡೀ ಸೋರಿ ಪೋಲಾಗುವುದನ್ನು ಕಂಡೆ. ಯಾವುದೇ ನಲ್ಲಿಗಳಲ್ಲಿ ತಿರುಗಣೆಯಿಲ್ಲ. ಆಡಳಿತ ವರಿಷ್ಠರು ತಿರುಗಣೆಯನ್ನು ಫಿಟ್ ಮಾಡಿದರೆ ಒಂದೆರಡು ದಿನದಲ್ಲಿ ಮಾಯ.
ಹುಬ್ಬಳ್ಳಿಯಿಂದ ನಲವತ್ತು ಕಿಮೀ ದೂರದ ಸವದತ್ತಿಯಿಂದ ನೀರು ಬರುತ್ತಿದೆ. ಜೀವನಕ್ಕೆ ಸಮಸ್ಯೆಯಾಗದಷ್ಟು ವರ್ಷವಿಡೀ ನೀರು ಯಥೇಚ್ಛ. ಹಾಗಾಗಿ ಟ್ಯಾಪ್‌ಗಳು ಇಲ್ಲಿ ಬಂದ್ ಆಗುವುದಿಲ್ಲ, ಮಾಡುವವರೂ ಇಲ್ಲ. ಬಂದ್ ಮಾಡಬೇಕೆಂಬ ಅರಿವೂ ಇಲ್ಲ. ಅಲ್ಲೇ ಸ್ನಾನ ಮಾಡುತ್ತಾರೆ, ಎಲ್ಲವನ್ನೂ ಪೂರೈಸುತ್ತಾರೆ. ಜತೆಗಿದ್ದ ಸೀತಾರಾಮ ಶೆಟ್ಟರು ವಾಸ್ತವ ಚಿತ್ರಣ ನೀಡಿದರು.
ಸವದತ್ತಿಯ ನೀರಿನ ಪೂರೈಕೆಯ ಹಿಂದೆ ನಾಗರಿಕರು ಬದುಕನ್ನು ಕಟ್ಟಿಕೊಳ್ಳಬೇಕೆಂಬ ಆಶಯ ಸರ್ಕಾರದ್ದು. ಅದಕ್ಕಾಗಿ ಕೋಟಿಗಟ್ಟಲೆ ರುಪಾಯಿ ವ್ಯಯವಾಗಿಲ್ವಾ? ಆ ಹಣವೆಲ್ಲವೂ ನಮ್ಮ ತೆರಿಗೆಯದಲ್ವಾ? ಈ ನೀರು ಇಲ್ಲದಿದ್ದರೆ ಜನಜೀವನ, ಕೃಷಿ ಉಸಿರಾಡುತ್ತಿತ್ತೇ? ನಮ್ಮ ಅಂತರಂಗ ಪ್ರಶ್ನಿಸಬೇಕಾದ ಪ್ರಶ್ನೆಗಳಿವು.
ನಾಡಿನಾದ್ಯಂತ ನೋಡುತ್ತೇವೆ. ಒಂದಲ್ಲ ಒಂದು ಹೋರಾಟ, ಧರಣಿ, ಮುಷ್ಕರ. ಹಕ್ಕಿಗಾಗಿ ಕೈಯೆತ್ತುತ್ತೇವೆ. ರಸ್ತೆ ತಡೆ ಮಾಡುತ್ತೇವೆ. ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ. ಗಂಟೆಗಟ್ಟಲೆ ಹಕ್ಕಿನ ವಿಚಾರವಾಗಿ ಮಾತನಾಡುತ್ತೇವೆ. ಉಗ್ರ ಶಬ್ದಗಳಲ್ಲಿ ಹಗುರವಾಗಿ ಮಾತನಾಡುತ್ತೇವೆ. ಯಾಕೆಂದರೆ ವಾಕ್ ಸ್ವಾತಂತ್ರ್ಯ ಇದೆಯಲ್ಲಾ. ಆದರೆ, ನಾಗರಿಕರು ಪಾಲಿಸಲೇ ಬೇಕಾದ ಸಾಮಾಜಿಕ ಕರ್ತವ್ಯಗಳು ನಮಗೆಷ್ಟು ಗೊತ್ತಿದೆ? ಅದನ್ನು ತಿಳಿಯಬೇಕೆನ್ನುವ ಧಾವಂತ ನಮಗೆ ಯಾಕಿಲ್ಲ? ನೀರಿನ ಮಿತ ಬಳಕೆಯ ಜ್ಞಾನವನ್ನು ಜನರಿಗೆ ಕೊಡಬೇಕಾದ ಅಗತ್ಯವಿದೆ. ಎಲ್ಲವೂ ಪಂಚಾಯಿತಿ ಮಾಡಲಿ, ಸರ್ಕಾರ ಗಮನಕೊಡಲಿ ಎಂಬ ಭಾವನೆ. ಮನೆ ಮುಂದೆ ಕೊಳೆಯಿದ್ದರೂ ಪಂಚಾಯತಿನವರು ಬಂದಿಲ್ಲ ಎಂದು ಕಾಯುತ್ತಾ ಕೂಡ್ರುತ್ತಾರೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಜಯಶಂಕರ ಶರ್ಮ ಬದುಕಿನ ಒಂದು ಮುಖವನ್ನು ಹೇಳುತ್ತಾರೆ.
ನಲ್ಲಿಯಿಂದ ಸೋರುವ ನೀರು ಚರಂಡಿ ಸೇರುತ್ತದೆ. ಕೊಳಕು ರಾಡಿ ಉತ್ಪನ್ನವಾಗುತ್ತದೆ. ಭೂಮಿ ಜವುಳಾಗುತ್ತದೆ. ಮನೆ ಮುಂದೆ ಜೋಡಿಸಿದ ನಲ್ಲಿಯಲ್ಲಿ ವ್ಯರ್ಥವಾಗುವ ನೀರನ್ನು ಬಂದ್ ಮಾಡಲು ಪಂಚಾಯಿತಿ ವರಿಷ್ಠರೇ ಬರಬೇಕೆಂದಿಲ್ಲ. ಪ್ರತಿಯೊಬ್ಬರೂ ಮಾಡಬಹುದಾದ ಕರ್ತವ್ಯ.
ನಗರಗಳು ವಿಸ್ತರಣೆಯಾಗುತ್ತಿದ್ದಂತೆ ಕಟ್ಟಡ ಕಾಮಗಾರಿಗಳಿಗೆ ಬೀಸುಹೆಜ್ಜೆ. ಜತೆಗೆ ಸರ್ಕಾರದ ಅಭಿವೃದ್ಧಿ ಕೆಲಸಗಳು. ನಲ್ಲಿಗಳ ನೀರು ಕಾಮಗಾರಿಗಳಿಗೆ ಬಳಕೆ. ನೀರಿನ ಪೋಲು ಆಡಳಿತದ ಗಮನಕ್ಕೆ ಬರುತ್ತಿಲ್ಲ. ಬರಲೂ ಬಿಡುತ್ತಿಲ್ಲ. ಓಣಿಗಳಲ್ಲಿ ನಡೆದುಕೊಂಡು ಹೋದರೆ ಸಾಕು. ನೀರು ರಾಡಿಯಾಗಿ ರಸ್ತೆಯಲ್ಲಿ ಹರಿಯುವ ಪರಿ. ಅದರಲ್ಲೇ ಅತ್ತಿತ್ತ ಓಡಾಡುವ ಮಂದಿಗೆ ಅದು ಮಾಮೂಲಿ.
ಗ್ರಾಮಾಭಿವೃದ್ಧಿ ಯೋಜನೆಯು ಮಳೆ ಕೊಯ್ಲು, ನೀರಿನ ಮಿತ ಬಳಕೆ ಅರಿವನ್ನು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಕೆಲವು ಸ್ವಯಂಸೇವಾ ಸಂಸ್ಥೆಗಳು ನೀರಿನ ಕುರಿತು ಮಾತನಾಡುತ್ತಿವೆ. ಮಳೆ ನೀರನ್ನು ಹಿಡಿದಿಟ್ಟು ಬಳಸುವ ಪ್ರಕ್ರಿಯೆ ಅಲ್ಲಿಲ್ಲಿ ಶುರುವಾಗುತ್ತಿದೆ. ನಲ್ಲಿ ಸೋರುತ್ತಿದ್ದರೆ ಅದನ್ನು ಬಂದ್ ಮಾಡುವ ಬೆರಳೆಣಿಕೆಯ ಮನಸ್ಸುಗಳು ರೂಪುಗೊಳ್ಳುತ್ತಿವೆ.
ಮಳೆಗಾಗಿ ಪ್ರಾರ್ಥಿಸುವ, ಪೂಜೆ ಪುನಸ್ಕಾರ ಮಾಡುವ, ಕಪ್ಪೆಗಳ ಮದುವೆಗಳನ್ನು ಮಾಡಿಸಿದರೂ ಮಳೆ ಅಷ್ಟಕ್ಕಷ್ಟೇ. ಇತ್ತ ಕರಾವಳಿಯಲ್ಲಿ ಯಥೇಚ್ಛ ಮಳೆ ಬಿದ್ದಿದೆ. ಸಾಕೋ ಬೇಕೋ ಅಂತ ಗೋಳಾಡಿಸಿದೆ. ಮುಖ್ಯ ಕೃಷಿ ಅಡಕೆಯ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಕೃಷಿ ಬದುಕಿನ ಸಂಕಟ ಕೇಳುವವರಿಲ್ಲ. ಚಿಲ್ಲರೆ ಪರಿಹಾರ ನೀಡಿ ಕೈ ತೊಳೆದುಕೊಳ್ಳುವ ಸರ್ಕಾರದ ನೀತಿ ಬೇಸತ್ತು ಹೋಗಿದೆ.
ಸರ್ಕಾರಿ ಫೈಲನ್ನು ತೆಗೆಸಿದರೆ ಅದರಲ್ಲಿ ಅರಿವು ಮೂಡಿಸುವ ಕೆಲಸಗಳು ಆಗಿವೆ, ಆಗುತ್ತಿವೆ. ಆದರೆ, ಹೇಳುವಂತಹ ಪರಿಣಾಮವಿಲ್ಲ. ನೀರಿನ ಕನಿಷ್ಠ ಬಳಕೆಯ ಕುರಿತು ಮಕ್ಕಳಿಗಲ್ಲ, ಹಿರಿಯರಿಗೂ ಪಾಠ ಬೇಕು. ನೀರಿನ ಕುರಿತಾಗಿಯೇ ಇರುವ ಇಲಾಖೆಗಳಿವೆ. ಅಧಿಕಾರಿಗಳಿದ್ದಾರೆ. ಅಲ್ಲೋ ಇಲ್ಲೋ ಪ್ರಾಮಾಣಿಕ ಅಧಿಕಾರಿಗಳಿಂದ ಉತ್ತಮ ಕೆಲಸ ನಡೆಯುತ್ತಿದೆ.
ನೀರಿನ ಅರಿವು, ಬಳಕೆ, ಮರುಪೂರಣ, ಇಂಗಿಸುವಿಕೆಯಂತಹ ಕೆಲಸಗಳು ಪಂಚಾಯಿತಿ ಮಟ್ಟದಲ್ಲಿ ಮೊದಲಾದ್ಯತೆಯಲ್ಲಿ ಆಗಬೇಕಾಗಿದೆ. ಮಠ ಮಂದಿರಗಳಿಗೆ, ಐಟಿ- ಬಿಟಿಗಳಿಗೆ, ಉದ್ಯಮಿಗಳಿಗೆ, ಕೈಗಾರಿಕೋದ್ಯಮಿಗಳಿಗೆ ಕೋಟಿ ಕೋಟಿ ಸುರಿವ ಸರ್ಕಾರವಿರುವಾಗ ಭಯವೇಕೆ? ನೀರಿನ ಕೆಲಸಕ್ಕೆ ಒಂದಷ್ಟು ಕೋಟಿ ನೀಡಲಿ. ಆದರೆ, ಕೋಟಿ ತರುವ ಜನನಾಯಕರು ಎಷ್ಟಿದ್ದಾರೆ?
- ನಾ. ಕಾರಂತ ಪೆರಾಜೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


