ಜಲಜನಕ
ಮನೆ ಕೇವಲ ವಾಸಿಸುವುದಕ್ಕೆ ಮಾತ್ರವಲ್ಲ. ಅದು ಪರಿಸರ ಸ್ನೇಹಿಯಾಗಿದ್ದರೆ ವಾಸಿಸುವವರ...

ಆ ಪ್ರದೇಶದ ನೀರು ಕುಡಿಯಲು ಯೋಗ್ಯವಿರಲಿಲ್ಲ. ಅಡುಗೆಗೂ ಬಳಸಲು ಬರಲ್ಲ. ಅನ್ನ ಮಾಡಿದರೆ ಹಳದಿ ಬಣ್ಣಕ್ಕೆ ತಿರುಗುತ್ತಿತ್ತು. ಸಂಜೆ ವೇಳೆಗೆ ಹಳಸುತ್ತಿತ್ತು. ಆಗ ರಮೇಶ್ ಏನು ಮಾಡಿದರು? ಇಲ್ಲಿ ಓದಿ...
ಮನೆ ಕೇವಲ ವಾಸಿಸುವುದಕ್ಕೆ ಮಾತ್ರವಲ್ಲ. ಅದು ಪರಿಸರಸ್ನೇಹಿಯಾಗಿದ್ದರೆ ಮನೆಯಲ್ಲಿ ವಾಸಿಸುವವರ ಆರೋಗ್ಯವೂ ಚೆನ್ನಾಗಿರುತ್ತದೆ. ಇದಕ್ಕೆ ಮೈಸೂರಿನ ಬೋಗಾದಿಯಲ್ಲಿ ಜಲಸಂಪನ್ಮೂಲ ಇಲಾಖೆಯ ಸಹಾಯಕ ಎಂಜಿನಿಯರ್ ಎಚ್. ರಮೇಶ್ ನಿರ್ಮಿಸಿರುವ 'ಸುಮುಖ್' ಮನೆಯೇ ನಿದರ್ಶನ.
ಮೂಲತಃ ಹಾಸನ ಜಿಲ್ಲೆ ಹೆಬ್ಬಾಲೆಯವರಾದ ರಮೇಶ್, ಈ ಮೊದಲು ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ವಾಸವಾಗಿದ್ದರು. ವಿದ್ಯಾರಣ್ಯಪುರಂ ಮೈಸೂರಿನ ಹಳೆಯ ಬಡಾವಣೆಗಳಲ್ಲಿ ಒಂದು. ಅಲ್ಲಿಗೆ ಕಾವೇರಿ ನೀರು ಸರಬರಾಜಾಗುತ್ತದೆ. ಹೀಗಾಗಿ ಅಲ್ಲಿರುವಷ್ಟು ದಿನ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ, ಅವರು ಬೋಗಾದಿಯಲ್ಲಿ ನಿವೇಶನ ಖರೀದಿಸಿ, ಮನೆ ನಿರ್ಮಾಣ ಶುರುಮಾಡಿದರು. ನಿರ್ಮಾಣಕ್ಕೆ ಸಹಕಾರಿ ಆಗಲೆಂದು ಅಲ್ಲಿ ಬಾಡಿಗೆ ಮನೆ ಹಿಡಿದಾಗಲೇ ಅವರಿಗೆ ನೀರಿನ ಕಷ್ಟ ಅರಿವಾಗಿದ್ದು. ಹೊಸ ಬಡಾವಣೆಯಾದ ಅಲ್ಲಿಗೆ ಕಾವೇರಿ ನೀರು ಪೂರೈಕೆಯಾಗುವುದಿಲ್ಲ. ಕೊಳವೆ ಬಾವಿಯ ನೀರೇ ಗತಿ. ಅದು ಕುಡಿಯಲು, ಅಡುಗೆ ಮಾಡಲು ಯೋಗ್ಯವಾಗಿಲ್ಲ ಎಂಬುದು ಹಲವು ಪ್ರಯೋಗಗಳಿಂದ ವ್ಯಕ್ತವಾಗಿದೆ. ಇದು ರಮೇಶ್ ಅವರ ಅನುಭವಕ್ಕೂ ಬಂತು. ಏಕೆಂದರೆ ಆ ನೀರಿನಲ್ಲಿ ಅನ್ನ ಮಾಡಿದರೆ ಹಳದಿಯಾಗುತ್ತಿತ್ತು. ಸಂಜೆ ವೇಳೆಗೆ ಹಳಸುತ್ತಿತ್ತು. ಬಟ್ಟೆಗಳ ಕೊಳೆಯೇ ಹೋಗುತ್ತಿರಲಿಲ್ಲ. ಸೋಪುಗಳು ಬೇಗ ಖರ್ಚಾಗುತ್ತಿದ್ದವು.
ಮಳೆ ನೀರು ಕೊಯ್ಲು ಪದ್ಧತಿ
ರಮೇಶ್ ಮೊದಲಿಗೆ ತಮ್ಮ ಮನೆಯಲ್ಲೇ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳಲು ಮುಂದಾದರು. ಈಗ ಅದು ಎಷ್ಟರ ಮಟ್ಟಿಗೆ ಇದೆ ಎಂದರೆ ಅವರ ಮನೆಯಲ್ಲಿ ಅಡುಗೆಗೆ, ಕುಡಿಯಲು, ಸ್ನಾನಕ್ಕೆ, ಕೆಲವೊಂದು ಗಿಡಗಳಿಗೆ ಮಳೆ ನೀರನ್ನೇ ಬಳಸಲಾಗುತ್ತಿದೆ. ಪಾಲಿಕೆಯು ಪೂರೈಸುವ ಕೊಳವೆ ಬಾವಿ ನೀರನ್ನು ಶೌಚಾಲಯ, ಬಟ್ಟೆ ಒಗೆಯುವುದು ಮತ್ತಿತರ ಕಾರ್ಯಗಳಿಗೆ ಬಳಸಲಾಗುತ್ತಿದೆ. ರಮೇಶ್‌ರ ಮನೆಯೇ ಮಳೆ ನೀರು ಕೊಯ್ಲು ಅಚ್ಚುಕಟ್ಟು ಪ್ರದೇಶ. ನಾಲ್ಕು ಕಡೆ ಮಳೆ ನೀರು ಪೈಪು ಅಳವಡಿಸಿದ್ದಾರೆ. ವರ್ಷವಿಡಿ ಈ ನೀರು ಸಾಕಾಗುತ್ತದೆ. ಮಳೆ ಬಾರದ ವರ್ಷಗಳಲ್ಲಿ ಒಂದೆರೆಡು ತಿಂಗಳು ಸಮಸ್ಯೆಯಾದಾಗ ರಮೇಶ್ ಕುಟುಂಬದವರು ಕೊಳವೆ ಬಾವಿ ನೀರು ಕುಡಿಯಲಾಗದೆ ಪರದಾಡಿದ್ದು ಉಂಟು. ಆದರ ಅವರ ಪ್ರಕಾರ, ಈಗ ಹೆಚ್ಚು ಕಡಿಮೆ ವರ್ಷವಿಡಿ ಮಳೆ ನೀರು ಕುಡಿಯುಲು ಮತ್ತು ಅಡುಗೆಗೆ ಸಾಕಾಗುತ್ತದೆ.
ಹೇಗೆ ಬಳಕೆ?
ನೆಲಮಟ್ಟದಿಂದ ಮೇಲ್ಭಾಗದಲ್ಲಿ 5000 ಲೀಟರ್, ಸಂಪ್‌ನಲ್ಲಿ 6000 ಲೀಟರ್ ಮಳೆ ನೀರು ಸಂಗ್ರಹಿಸಲಾಗುತ್ತಿದೆ. 1000 ಲೀಟರ್ ಕುಡಿಯುವ ನೀರಿನ ಟ್ಯಾಂಕ್‌ನಲ್ಲಿ ಸಂಗ್ರಹವಾಗಿರುತ್ತದೆ. ಅದಕ್ಕೆ 1 ಚಮಚ ಬ್ಲೀಚಿಂಗ್ ಪೌಡರ್ ಹಾಕಿ, ಕ್ಯಾಂಡಲ್ ಫಿಲ್ಟರ್ ಮೂಲಕ ಸೋಸಿ, ಬಳಸಲಾಗುತ್ತಿದೆ. ಈ ನೀರು ಅತ್ಯಂತ ಸಿಹಿ. ಅನ್ನ ಮಾಡಿದರೆ ಮಲ್ಲಿಗೆ ಹೂವಿನಂತಾಗುತ್ತದೆ. ಎರಡು ದಿನ ಇಟ್ಟರೂ ಹಳಸುವುದಿಲ್ಲ.
ಪ್ರತ್ಯೇಕ ನಲ್ಲಿ
ಮಳೆ ನೀರಿಗೆ ಪ್ರತ್ಯೇಕ ನಲ್ಲಿ ಸಂಪರ್ಕಗಳಿವೆ. ಅಡುಗೆಮನೆ ಹಾಗೂ ಸ್ನಾನದ ಮನೆಯಲ್ಲಿ ಮಳೆ ನೀರನ್ನು ಗುರುತ್ವಾಕರ್ಷಣೆಯ ಮೂಲಕವೇ ಬಳಸಲಾಗುತ್ತಿದೆ. ಮೋಟಾರ್ ಆನ್ ಮಾಡುವುದಿಲ್ಲ. ಮಳೆ ನೀರು ಸಂಗ್ರಹಿಸುವಾಗ ಸೂರ್ಯನ ಕಿರಣ ಬೀಳದಂತೆ ನೋಡಿಕೊಳ್ಳಬೇಕು. ಏಕೆಂದರೆ ಸೂರ್ಯನ ಕಿರಣ ಬಿದ್ದಲ್ಲಿ ಪಾಚಿ ಕಟ್ಟಿ, ಕುಡಿಯಲು ಬಳಕೆ ಮಾಡದಂತೆ ಆಗುತ್ತದೆ. ಮಳೆ ನೀರನ್ನು ಸಂಪ್‌ಗೆ ಹೋಗುವ ಮುನ್ನ ಎಲೆ, ಹುಳು ಸೇರದಂತೆ ಸೋಸುವ ವ್ಯವಸ್ಥೆ ಮಾಡಬೇಕು. ಹೆಚ್ಚಾದ ಮಳೆ ನೀರು ಸಂಪ್‌ನಿಂದ ಹರಿದಾಗ ಮನೆಯ ಮುಂದೆಯೇ ಇಂಗಲಿ ಎಂದು ಇಂಗುಗುಂಡಿ ನಿರ್ಮಿಸಲಾಗಿದೆ.
ಗಿಡಗಳ ಆಗರ
ಮನೆಯ ಎದುರು ಹಾಗೂ ಅಕ್ಕಪಕ್ಕ ಇರುವ ಜಾಗದಲ್ಲಿ ಸಸ್ಯಕಾಶಿಯೇ ನೆಲೆಸಿದೆ. ಅಮೃತಬಳ್ಳಿ, ಅಲೊವೇರ, ನಾಗರಾಳಿ, ತುಳಸಿ, ಶ್ರೀಗಂಧ, ನಂಜನಗೂಡು ರಸಬಾಳೆ, ಚಕ್ರಮುನಿ ಸೊಪ್ಪು, ದಾಸವಾಳ, ವಿಳ್ಯೆದೆಲೆ, ಮೆಣಸಿನಕಾಯಿ, ಕರಿಬೇವಿನ ಸೊಪ್ಪು, ಸ್ಟ್ರಾಬೆರಿ, ಮಲ್ಲಿಗೆ, ದೊಡ್ಡಪತ್ರೆ, ಲಾವಂಚ, ಸಿಟ್ರನೆಲ್ಲಾ, ಬೃಂಗರಾಜ, ಆಡಸೋಗೆ, ಸೇವಂತಿಗೆ, ಬಿಳಿ, ಪರ್ಪಲ್, ಕ್ರೋಟಾನ್, ಗಂಧಸಾಲೆ, ಚೆಂಡುಹೂವು, ನಂಜಬೆಟ್ಟಲು, ಬೆಟ್ಟದಾವರೆ, ಗುಲಾಬಿ, ಮುರುಗ, ನಿಂಬೆ, ಪಪ್ಪಾಯಿ, ಸೌಗಂಧಿಕ ಪುಷ್ಪ, ಬದನೆಕಾಯಿ, ದಂಟಿನ ಸೊಪ್ಪು, ಬೀನ್ಸ್, ತೊಂಡೆಕಾಯಿ ಗಿಡಗಳಿವೆ. ಐದು ಬಗೆಯ ದಾಸವಾಳದ ಹೂವುಗಳಿವೆ. ಐದು ಬಗೆಯ ನೈದಿಲೆ, ಟಿಂಚರ್ ಗಿಡ ಕೂಡ ಇವೆ. ಇವುಗಳನ್ನೆಲ್ಲಾ ರಮೇಶ್ ಹಾಗೂ ಅವರ ಪತ್ನಿ ವಾಣಿ ಅವರೇ ಆರೈಕೆ ಮಾಡುತ್ತಿರುವುದು ವಿಶೇಷ.
ಮನೆಗೆ ಸೋಲಾರ್ ಸೌಲಭ್ಯವಿದೆ. ಮಳೆಗಾಲದಲ್ಲಿ ಇರಲಿ ಎಂದು ಸ್ನಾನಗೃಹದಲ್ಲಿ ಅಸ್ತ್ರ ಒಲೆ ನಿರ್ಮಿಸಿದ್ದಾರೆ. ಒಲೆಯಿಂದ ಹೊಗೆ ಮನೆ ಒಳಗೆ ಬರಬಾರದು ಎಂಬ ಕಾರಣಕ್ಕಾಗಿ ಹಂಡೆಯ ಸುತ್ತ ವೃತ್ತಾಕಾರದಲ್ಲಿ ಹೊಗೆ ಸುತ್ತಿಕೊಂಡು ಮೇಲಿನ ಕೊಳವೆಗೆ ಹೋಗುವಂತೆ ವ್ಯವಸ್ಥೆ ಮಾಡಿದ್ದಾರೆ.
ಚೆನ್ನೈನಲ್ಲಿ ಇರುವಂತೆ ಮೈಸೂರಿನಲ್ಲೂ ಮಳೆ ನೀರು ಕೇಂದ್ರ ಆಗಬೇಕು. ಅಲ್ಲಿ ಎಲ್ಲ ಮಾದರಿಗಳು ಇರಬೇಕು. ಚೆನ್ನೈನಲ್ಲಿ ಸಮುದ್ರದ ಪಕ್ಕದಲ್ಲೇ ಸಿಹಿ ನೀರುವ ಸಿಗುವ ವ್ಯವಸ್ಥೆ ಮಾಡಿದ್ದಾರೆ. ಮಳೆ ನೀರು ಕೊಯ್ಲು ಸಮರ್ಪಕ ಬಳಕೆ ಇದಕ್ಕೆ ಕಾರಣ ಎನ್ನುತ್ತಾರೆ ರಮೇಶ್ (ಮೊ.9481169733).
- ಅಂಶಿ ಪ್ರಸನ್ನಕುಮಾರ್
ಚಿತ್ರ: ಎಸ್. ಮಂಜುನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


