ಮೃತ್ಯು ಜಲ
ನೀರಿದೆ, ಕುಡಿಯುವಂತಿಲ್ಲ. ಕೊಳವೆಬಾವಿ ನೀರನ್ನು ಕೃಷಿಗೆ ಬಳಸುವಂತಿಲ್ಲ...

ನೀರಿದೆ, ಕುಡಿಯುವಂತಿಲ್ಲ. ಕೊಳವೆಬಾವಿ ಇಳುವರಿ ಚೆನ್ನಾಗಿದೆ, ಆ ನೀರನ್ನು ಕೃಷಿಗೆ ಬಳಸುವಂತಿಲ್ಲ. ಏಕೆಂದರೆ ಫ್ಲೋರೈಡ್ ಅಪಾಯಕಾರಿ ಮಟ್ಟದಲ್ಲಿದೆ. ಭಾರತವೂ ಸೇರಿದಂತೆ ವಿಶ್ವವನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಫ್ಲೋರೈಡ್‌ಯುಕ್ತ ನೀರು ಕೂಡ ಒಂದು!
ಫ್ಲೋರೈಡ್‌ಯುಕ್ತ ನೀರು!
ಇಂದು ವಿಶ್ವದಾದ್ಯಂತ ಕೋಟ್ಯಂತರ ಜನರನ್ನು ಕಾಡುತ್ತಿರುವ ಸಮಸ್ಯೆ. ಜಗತ್ತಿನ 25ಕ್ಕೂ ಹೆಚ್ಚು ದೇಶಗಳ ನೀರಿನಲ್ಲಿ ಫ್ಲೋರೈಡ್ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿದ್ದು, ಫ್ಲೋರೋಸಿಸ್ ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ.
ಅತಿಯಾದ ಫ್ಲೋರೈಡ್ ಸೇವನೆಯಿಂದ ನಮ್ಮ ದೇಶದಲ್ಲಿ ಸುಮಾರು 62 ದಶಲಕ್ಷಕ್ಕೂ ಹೆಚ್ಚು ಜನರು ವಿವಿಧ ಕಾಯಿಲೆಗೆ ತುತ್ತಾಗುತ್ತಿದ್ದಾರೆ ಎಂದು ಸಮೀಕ್ಷೆಗಳು ಹೇಳುತ್ತವೆ. ರಾಜ್ಯದಲ್ಲಿ ಶೇ. 50ಕ್ಕಿಂತ ಹೆಚ್ಚು ಪ್ರದೇಶದ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿದೆ.
ಫ್ಲೋರೈಡ್ ಅಂದರೇನು?
ಇದೊಂದು ಸಂಯುಕ್ತ ವಸ್ತು. ಫ್ಲೋರಿನ್ ಎಂಬ ಮೂಲವಸ್ತುವಿನಿಂದ ಸೃಷ್ಟಿಯಾದದ್ದು. ವಿಷಕಾರಕ ಗುಣ ಹೊಂದಿದೆ. ಭೂಮಿಯಡಿ, ಬಂಡೆಗಲ್ಲುಗಳಲ್ಲಿ ನೈಸರ್ಗಿಕವಾಗಿ ಹೇರಳ ಪ್ರಮಾಣದಲ್ಲಿ ಲಭ್ಯವಿದೆ. ಯಾವುದೇ ಮೂಲ ಅಥವಾ ಸಂಯುಕ್ತ ವಸ್ತುವಿನೊಂದಿಗೆ ಸುಲಭವಾಗಿ ಬೆರೆಯಬಲ್ಲದು. ಘನ, ದ್ರವ ಅಥವಾ ಅನಿಲ ರೂಪವನ್ನೂ ಪಡೆಯಬಹುದು. ನೀರಿನಲ್ಲಿ ಸಹಜವಾಗಿಯೇ ಬೆರೆಯಬಲ್ಲದು. ನೀರಿನೊಂದಿಗೆ ಬೆರೆತಾಗ ರುಚಿ, ಬಣ್ಣದಲ್ಲಿ ವ್ಯತ್ಯಾಸವಾಗುವುದಿಲ್ಲ. ಅಂತರ್ಜಲ, ನದಿ, ಕಾಲುವೆ, ಕೊಳವೆಬಾವಿ ಅಥವಾ ಭೂಮಿಯ ಮೇಲ್ಮೈನಲ್ಲೂ ಸೇರಿಕೊಂಡಿದೆ. ಕೆಲವು ಸಸ್ಯ, ಹಣ್ಣು, ಆಹಾರ ಪದಾರ್ಥಗಳಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಫ್ಲೋರೈಡ್ ಇರುವುದು ಪತ್ತೆಯಾಗಿದೆ. ಕೆಲವೆಡೆ ಗಾಳಿಯಲ್ಲೂ ಅಲ್ಪ ಪ್ರಮಾಣದಲ್ಲಿ ಕಂಡುಬಂದಿದೆ.
ಬಳಕೆ ಯಾಕೆ?
1940ರ ದಶಕದಲ್ಲಿ ವಿಜ್ಞಾನಿಗಳು ಹಲ್ಲು-ದಂತದ ಆರೋಗ್ಯಕ್ಕೆ ನಿಗದಿತ ಪ್ರಮಾಣದ ಫ್ಲೋರೈಡ್ ಅಗತ್ಯ ಎಂದು ಕಂಡುಕೊಂಡರು. ಬೆಳೆಯುವ ಮಕ್ಕಳಿಗೆ ಫ್ಲೋರೈಡ್ ತೀರಾ ಅವಶ್ಯಕ ಎಂದು ಅಭಿಪ್ರಾಯಪಟ್ಟರು. ಆಹಾರದೊಂದಿಗೆ ಬೆರೆತಿರುವ ಆಮ್ಲ ಹಲ್ಲಿನ ಮೇಲೆ ಕುಳಿತು ಅದನ್ನು ದುರ್ಬಲಗೊಳಿಸುತ್ತದೆ. ಫ್ಲೋರೈಡ್ ಆಮ್ಲವನ್ನು ತೊಡೆದು ಹಾಕಿ ಹಲ್ಲು, ದಂತವನ್ನು ಗಟ್ಟಿಗೊಳಿಸುತ್ತದೆ ಎಂದು ವಾದಿಸಿದರು. ಆಮೇಲೆ ಟೂಥ್‌ಪೇಸ್ಟ್‌ಗಳಲ್ಲಿ ಫ್ಲೋರೈಡ್ ಸೇರಿಸುವ, ಹಲವು ದೇಶಗಳಲ್ಲಿ ಕುಡಿಯುವ ನೀರಿಗೆ ಫ್ಲೋರೈಡ್ ಬೆರೆಸುವ ಕ್ರಮ ಆರಂಭಿಸಲಾಯಿತು. ಹಲವು ಕಂಪನಿಗಳು 'ಫೋರೈಡ್‌ಯುಕ್ತ' ಟೂಥ್‌ಪೇಸ್ಟ್‌ಗಳನ್ನು ಹೊರತಂದವು. ಆದರೆ 1980ರ ದಶಕದ ಬಳಿಕ ವಿಜ್ಞಾನಿಗಳು ಎಚ್ಚೆತ್ತರು. ಫ್ಲೋರೈಡ್ ಬಳಕೆ ಕುರಿತು ವಾದ-ವಿವಾದಗಳು ಹುಟ್ಟಿಕೊಂಡವು. ನಾವು ಬಳಸುವ ಆಹಾರ, ನೀರು, ಗಾಳಿಯಲ್ಲಿ ಮನುಷ್ಯರ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಫ್ಲೋರೈಡ್ ಇರುತ್ತದೆ. ಹಾಗಾಗಿ ಕುಡಿಯುವ ನೀರು, ಟೂಥ್‌ಪೇಸ್ಟ್‌ಗಳಲ್ಲಿ ಸೇರಿಸುವ ಅಗತ್ಯವಿಲ್ಲ ಎಂದು ವಾದಿಸಿದರು. ನಿಗದಿಗಿಂತ ಹೆಚ್ಚು ಫ್ಲೋರೈಡ್ ಸೇವನೆ ಅಪಾಯಕಾರಿ ಎಂಬುದನ್ನು ಕಂಡುಕೊಂಡರು. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಇಂದಿಗೂ ಈ ಕುರಿತು ಸಾಕಷ್ಟು ಜಾಗೃತಿ ಮೂಡಿಲ್ಲ. ಬಹುತೇಕ ಕಂಪನಿಗಳು ಟೂಥ್‌ಪೇಸ್ಟ್‌ನಲ್ಲಿ ಇನ್ನೂ ಫ್ಲೋರೈಡ್ ಸೇರಿಸುತ್ತಿವೆ.
ಆರೋಗ್ಯದ ಮೇಲೆ ಪರಿಣಾಮ
ಅತಿಯಾದ ಫ್ಲೋರೈಡ್ ಸೇವನೆಯಿಂದ ಪ್ರಮುಖವಾಗಿ ಡೆಂಟಲ್ ಫ್ಲೋರೋಸಿಸ್, ಸ್ಕೆಲಿಟಲ್ ಫ್ಲೋರೋಸಿಸ್ ಉಂಟಾಗುತ್ತಿದೆ. ಮಕ್ಕಳು ಅಧಿಕ ಫ್ಲೋರೈಡ್ ಸೇವಿಸಿದರೆ ಹಲ್ಲು ನಿಧಾನವಾಗಿ ನೈಸರ್ಗಿಕ ಬಣ್ಣ ಕಳೆದುಕೊಂಡು, ಅಚ್ಚ ಬಿಳಿ, ಹಳದಿ, ಕಂದು, ಕಪ್ಪು ಬಣ್ಣಕ್ಕೆ ತಿರುಗುತ್ತದೆ. ನಿಧಾನವಾಗಿ ದುರ್ಬಲಗೊಂಡು ದಂತಕ್ಷಯ ಉಂಟಾಗುತ್ತದೆ.
ಮಧ್ಯ ವಯಸ್ಕರಲ್ಲಿ ಎಲುವಿನ ರೋಗ ಆರಂಭವಾಗುತ್ತದೆ. ಎಲುವು ನೋವು, ಬೆನ್ನು ಹುರಿ ನೋವು, ಸಂದು ನೋವು ಉಂಟಾಗುತ್ತದೆ. ಕಾಲಕ್ರಮೇಣ ಎಲುವು ದುರ್ಬಲಗೊಳ್ಳುತ್ತದೆ. ಅಕಾಲ ವೃದ್ಧಾಪ್ಯ ಬರುತ್ತದೆ. ಈ ಕಾಯಿಲೆಗಳಿಗೆ ಸದ್ಯಕ್ಕೆ ಚಿಕಿತ್ಸೆ ಇಲ್ಲ. ಫ್ಲೋರೈಡ್ ಸೇವನೆ ಕಡಿಮೆ ಮಾಡಿ, ರೋಗ ಬರದಂತೆ ತಡೆಯುವುದೇ ಪರಿಹಾರ.
ಇದಲ್ಲದೆ, ಮಾಂಸಖಂಡ, ದುರ್ಬಲತೆ, ಕಿಡ್ನಿ, ನರವ್ಯೂಹಕ್ಕೆ ಹಾನಿ, ತಲೆನೋವು, ಹೊಟ್ಟೆನೋವು, ಶ್ರವಣ-ದೃಷ್ಟಿದೋಷಗಳೂ ಉಂಟಾಗಬಹುದು. ಮಕ್ಕಳ ಬುದ್ಧಿಮತ್ತೆ ಮೇಲೂ ದುಷ್ಪರಿಣಾಮ ಆಗಬಲ್ಲದು, ಫ್ಲೋರೈಡ್ ಪ್ರಮಾಣ 250 ಮಿಲಿಗ್ರಾಂ/ಲೀ.ಗಿಂತ ಹೆಚ್ಚಾದರೆ ಮರಣ ಸಂಭವಿಸಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಅತಿಯಾದ ಫ್ಲೋರೈಡ್ ಭೂಮಿಯಲ್ಲಿದ್ದರೆ ಸಸ್ಯ, ಹಣ್ಣುಗಳಿಗೂ ಹಾನಿಯಾಗುತ್ತದೆ. ಸಸ್ಯಗಳಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆ ಪ್ರಮಾಣ ಕ್ಷೀಣಿಸುತ್ತದೆ. ಆರೋಗ್ಯಕರ ಬೆಳವಣಿಗೆ ಇರುವುದಿಲ್ಲ.
ಸಾಧ್ಯವಾದಷ್ಟು ಕಡಿಮೆ ಬಳಸಿ
ಫ್ಲೋರೈಡ್‌ಯುಕ್ತ ನೀರು, ಆಹಾರ ಸೇವನೆ ಕಡಿಮೆ ಮಾಡುವುದು ಸಮಸ್ಯೆ ಬಾರದಂತೆ ತಡೆಯಲು ಇರುವ ಏಕೈಕ ಮಾರ್ಗ. ಮಳೆ ನೀರು ಅತಿ ಕಡಿಮೆ ಫ್ಲೋರೈಡ್ ಅಂಶವನ್ನು ಹೊಂದಿರುತ್ತದೆಯಾದರೂ ಹೆಚ್ಚು ಸಂಗ್ರಹಿಸಿಡಲು ಸಾಧ್ಯವಿಲ್ಲ. ಫ್ಲೋರೈಡ್‌ರಹಿತ ಟೂಥ್‌ಪೇಸ್ಟ್ ಬಳಸಬೇಕು. ಬ್ಲ್ಯಾಕ್ ಟೀ, ರೆಡ್ ಟೀ, ತಂಬಾಕು, ಶೇಖರಿಸಿದ್ದ ಮೀನಿನಲ್ಲಿ ಫ್ಲೋರೈಡ್ ಪ್ರಮಾಣ ಹೆಚ್ಚಿರುತ್ತದೆ. ಅವುಗಳ ಸೇವನೆ ಕಡಿಮೆ ಮಾಡಬೇಕು. ಯುನೆಸ್ಕೋ-ಕೇಂದ್ರ ಸರ್ಕಾರದ ಸಹಯೋಗದಲ್ಲಿ ಫ್ಲೋರೈಡ್‌ಮುಕ್ತ ಕುಡಿಯುವ ನೀರನ್ನು ನೀಡಲು, ಜನರಲ್ಲಿ ಜಾಗೃತಿ ಮೂಡಿಸಲು ಹಲವು ಯೋಜನೆ ಹಮ್ಮಿಕೊಂಡಿದೆ. ಆದರೆ ಸ್ವಯಂ ಪ್ರೇರಿತ ಜಾಗೃತಿ ಮುಖ್ಯ.
ಶುದ್ದೀಕರಣ...?
ನೀರಿನಲ್ಲಿರುವ ಫ್ಲೋರೈಡ್ ಅಂಶವನ್ನು ಬೇರ್ಪಡಿಸುವುದು ಸುಲಭವಲ್ಲ. ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಹುತೇಕ ಫಿಲ್ಟರ್‌ಗಳಿಂದ ಈ ಕೆಲಸ ಸಾಧ್ಯವಿಲ್ಲ. ನೀರಿನಲ್ಲಿರುವ ಫ್ಲೋರೈಡ್ ಬೇರ್ಪಡಿಸಲು ಈಗ 'ರಿವರ್ಸ್ ಒಸ್ಮೋಸಿಸ್' ಎಂಬ ವಿಧಾನ ಬಳಸಲಾಗುತ್ತಿದೆ. ತೆಳುವಾದ ವಿಶೇಷ ಪೊರೆಯ ಮೂಲಕ ನೀರನ್ನು ಸೋಸಲಾಗುತ್ತದೆ. ಅದರಲ್ಲಿ ಹೆಚ್ಚು ಸಾಂದ್ರತೆಯಿಂದ ಫ್ಲೋರೈಡ್ ಕಡಿಮೆ ಸಾಂದ್ರತೆ ಇರುವೆಡೆ ಚಲಿಸಿ ಸಂಗ್ರಹವಾಗುತ್ತದೆ. ಇದು ಪರಿಣಾಮಕಾರಿ ವಿಧಾನ. ಆದರೆ ವೆಚ್ಚ ಹೆಚ್ಚು. ಮನೆಯಲ್ಲಿ ಸುಲಭವಾಗಿ ಉಪಯೋಗಿಸಲಾಗದು. ಆಧುನಿಕ ನ್ಯಾನೋ ತಂತ್ರಜ್ಞಾನದಿಂದ ನೀರನ್ನು ಫ್ಲೋರೈಡ್‌ಮುಕ್ತ ಮಾಡಲು ಸಾಧ್ಯ. ಇದು ಸುಲಭ, ವಿತವ್ಯಯಕಾರಿ ವಿಧಾನ. ಆದರೆ ಈ ತಂತ್ರಜ್ಞಾನ ಇನ್ನೂ ಜನಸಾಮಾನ್ಯರ ಬಳಕೆಗೆ ಲಭ್ಯವಾಗಿಲ್ಲ. ಮಾರುಕಟ್ಟೆಯಲ್ಲಿ ಬರುವ ಬಾಟಲಿ ನೀರುಗಳು ಎಲ್ಲವೂ ಫ್ಲೋರೈಡ್‌ಮುಕ್ತವಲ್ಲ. ಬಾಟಲಿ ಮೇಲೆ 'ರಿವರ್ಸ್ ಒಸ್ಮೋಸಿಸ್' ಅಥವಾ 'ಆರ್.ಒ.' ಎಂದು ನಮೂದಿಸಿದ್ದರೆ ಮಾತ್ರ ಫ್ಲೋರೈಡ್‌ಮುಕ್ತ ಎಂದರ್ಥ.
ಬಾರಿಸುತ್ತಲೇ ಇದೆ ಅಪಾಯದ ಗಂಟೆ
ದೇಶದಲ್ಲಿ ಆಂಧ್ರಪ್ರದೇಶ, ಕರ್ನಾಟಕ, ಗುಜರಾತ್, ರಾಜಸ್ತಾನ, ಪಂಜಾಬ್, ಹರ್ಯಾಣ, ಬಿಹಾರ ಮತ್ತು ಕೇರಳಗಳಲ್ಲಿ ಫ್ಲೋರೈಡ್ ಪ್ರಮಾಣ ಅಧಿಕವಿದೆ ಎಂದು ಸಮೀಕ್ಷೆಗಳಿಂದ ತಿಳಿದುಬಂದಿದೆ. ರಾಜಸ್ತಾನದ ಜೈಪುರದಲ್ಲಿ ಅತ್ಯಧಿಕ ಅಂದರೆ 18 ಮಿಲಿಗ್ರಾಂ/ಲೀ., ಉತ್ತರ ಪ್ರದೇಶದ ನವಾಬ್‌ಗಂಜ್‌ನಲ್ಲಿ 15 ಮಿಲಿಗ್ರಾಂ/ಲೀ ಇರುವುದು ಪತ್ತೆಯಾಗಿದೆ. ರಾಜ್ಯದಲ್ಲಿ ಶೇ. 4.6ರಷ್ಟು ನೀರಿನಲ್ಲಿ ಫ್ಲೋರೈಡ್ ಅಪಾಯಕಾರಿ ಪ್ರಮಾಣದಲ್ಲಿದೆ. ಗುಲ್ಬರ್ಗ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ತುಮಕೂರು, ಕೋಲಾರ ಜಿಲ್ಲೆಗಳಲ್ಲೂ ಗಣನೀಯ ಪ್ರಮಾಣದಲ್ಲಿದೆ. ಬಳ್ಳಾರಿ ಜಿಲ್ಲೆಯ ಶೇ. 60ರಷ್ಟು ನೀರಿನ ಮೂಲ ಫ್ಲೋರೈಡ್‌ಪೀಡಿತ ಎಂದು ಆರೋಗ್ಯ ಇಲಾಖೆ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.
ಕೆಲವು ಪ್ರದೇಶದ ನೀರು ನೀರು ಕುಡಿಯಲಷ್ಟೇ ಅಲ್ಲ, ದಿನನಿತ್ಯದ ಬಳಕೆ, ಕೃಷಿಗೂ ಯೋಗ್ಯವಲ್ಲ ಎಂದು ಹೇಳಿದೆ. ಯಾದಗಿರಿಯ ಭೀಮಾ ನದಿ ತಟದ 52 ಹಳ್ಳಿಗಳನ್ನು ಅತಿ ಫ್ಲೋರೈಡ್‌ಬಾಧಿತ ಪ್ರದೇಶ ಎಂದು ಸರ್ಕಾರ ಘೋಷಿಸಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕು, ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ಫ್ಲೋರೈಡ್ ಪ್ರಮಾಣ ಹೆಚ್ಚಿದೆ. ಗುಲ್ಬರ್ಗ ಜಿಲ್ಲೆಯ ಕೆಲವು ಹಳ್ಳಿಗಳ ನೀರಿನಲ್ಲಿ ಫ್ಲೋರೈಡ್ ಪ್ರಮಾಣ 7.4-5.75 ಮಿಲಿಗ್ರಾಂ/ಲೀ ಇದೆ. ರಾಯಚೂರು ಜಿಲ್ಲೆಯ ಗಬ್ಬೂರು ಗ್ರಾಮ, ಲಿಂಗಸೂರು ಪಟ್ಟಣದ ನೀರಿನಲ್ಲಿ 5 ಮಿಲಿಗ್ರಾಂ/ಲೀ ಕಂಡಬಂದಿದೆ. ಬಳ್ಳಾರಿ ಜಿಲ್ಲೆಯ ಕೆಲವೆಡೆ ಅತಿ ಹೆಚ್ಚು ಅಂದರೆ 7.4 ಮಿಲಿಗ್ರಾಂ/ಲೀ. ಇದೆ. ಕೋಲಾರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ 6 ಮಿಲಿಗ್ರಾಂ/ಲೀ. ಇರುವುದು ಪತ್ತೆಯಾಗಿದೆ.
ಫ್ಲೋರೈಡ್ ಎಷ್ಟು ಬೇಕು?
1984ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮನುಷ್ಯನ ದೇಹಕ್ಕೆ ಅಗತ್ಯವಿರುವ ಫ್ಲೋರೈಡ್ ಪ್ರಮಾಣ ನಿಗದಿಪಡಿಸಿದೆ. ಆದರೆ ಹವಾಮಾನ, ಪರಿಸರವನ್ನು ಅವಲಂಬಿಸಿ ಇದು ಪ್ರದೇಶಾನುಸಾರ ಭಿನ್ನವಾಗಿದೆ. ಉಷ್ಣ ಪ್ರದೇಶಗಳಲ್ಲಿ ಕುಡಿಯುವ ನೀರಿನಲ್ಲಿ 1 ಮಿಲಿ ಗ್ರಾಂ/ಲೀ (ಅಂದರೆ 1 ಲೀಟರ್ ನೀರಿನಲ್ಲಿ 1 ಮಿಲಿಗ್ರಾಂ ಫ್ಲೋರೈಡ್), ತಂಪು ಪ್ರದೇಶಗಳಲ್ಲಿ 1.2 ಮಿಲಿ ಗ್ರಾಂ/ಲೀ. ಸೂಕ್ತ ಎಂದು ಹೇಳಿದೆ. 1.5 ಮಿಲಿ ಗ್ರಾಂ/ಲೀ. ವರೆಗೆ ಅಪಾಯಕಾರಿಯಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.
- ಮಧುಕರ ನಾರಾಯಣ
madhu@kannadaprabha.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


