ಪರಿಸರ ಕ್ಲಬ್
ಅದು ಸೇವ್ ಅವರ್ ಅರ್ಥ್ ಕ್ಲಬ್. ಪರಿಸರ ಜಾಗೃತಿಯೇ ಅದರ ಕಹಳೆ. ಪರಿಸರಾಸಕ್ತರನ್ನು ಒಂದೆಡೆ...

ಅದು ಸೇವ್ ಅವರ್ ಅರ್ಥ್ ಕ್ಲಬ್. ಪರಿಸರ ಜಾಗೃತಿಯೇ ಅದರ ಕಹಳೆ. ಪರಿಸರಾಸಕ್ತರನ್ನು ಒಂದೆಡೆ ಕಲೆಹಾಕಿ ಅಭಿಪ್ರಾಯಗಳನ್ನು ಹೆಕ್ಕುತ್ತದೆ. ಹುಣಸೂರಿನಲ್ಲಿ ಅದು ಸಹಸ್ರ ಜನರಲ್ಲಿ ಪರಿಸರದ ಬಗ್ಗೆ ಹುರುಪು ತುಂಬುತ್ತಿದೆ.
ಮಾಲಿನ್ಯಮುಕ್ತ ನದಿಗಳು ಕ್ಲಬ್‌ನ ಕನಸು. ಜಾಗತಿಕ ತಾಪಮಾನದ ಏರುಪೇರಿನ ಬಗ್ಗೆ ಈ ಕ್ಲಬ್ಬಿನ ಸದಸ್ಯರು ತುಂಬಾ ತಲೆಕೆಡಿಸಿಕೊಂಡಿದ್ದಾರೆ. ಜತೆಗೆ ತಡೆಗಟ್ಟಲು ಅನೇಕ ಮಾರ್ಗಗಳನ್ನೂ ಹುಡುಕಿದ್ದಾರೆ. ಘನತ್ಯಾಜ್ಯ ವಸ್ತುಗಳ ಮರು ಬಳಕೆ ಇವರ ಇಷ್ಟದ ಕೆಲಸ.
ಪರಿಸರ ಹಿತರಕ್ಷಣೆಯ ಹೊಣೆ ಹೊತ್ತು ಮೂರು ವರ್ಷದ ಹಿಂದೆ ಸಂಜಯ್ ನೇತೃತ್ವದಲ್ಲಿ ವ್ಯಾಪಾರಿಗಳು, ರೈತರು ಹಾಗೂ ವಿದ್ಯಾರ್ಥಿಗಳು ಸೇರಿ 31 ಸದಸ್ಯರ ತಂಡ 'ಸೇವ್ ಅವರ್ ಅರ್ಥ್ ಕ್ಲಬ್' ಅನ್ನು ಸ್ಥಾಪಿಸಿದರು.
ಹುಣಸೂರನ್ನು ಪ್ಲಾಸ್ಟಿಕ್ ಮುಕ್ತ ಪಟ್ಟಣ ಮಾಡುವುದು, ಪಟ್ಟಣದ ಮಧ್ಯೆ ಹರಿಯುತ್ತಿರುವ ಲಕ್ಷ್ಮಣತೀರ್ಥ ನದಿ ಸಂರಕ್ಷಣೆ, ಪರಿಸರ ಸಮತೋಲನ ಕಾಪಾಡಲು ಗ್ರಾಮಕ್ಕೆ ಒಂದು ಶಾಲೆ, ಮನೆಗೊಂದು ಮಗು ಬೇಕು ಎಂಬಂತೆ, ಮಗುವಿಗೊಂದು ಗಿಡ ನೆಡುವ ಕಾರ್ಯಕ್ರಮಕ್ಕೆ ಸಂತ ಜೋಸೆಫರ ಶಾಲೆಯಲ್ಲಿ ಹಿಂದಿನ ಜಿಲ್ಲಾಧಿಕಾರಿ ಹರ್ಷಗುಪ್ತ ಮತ್ತು ಶಾಸಕ ಎಚ್.ಪಿ. ಮಂಜುನಾಥ್ ಚಾಲನೆ ನೀಡಿದ್ದು ಹುಣಸೂರು ಇಂದು ಹಸಿರಾಗಲು ಕಾರಣ.
ರಾಸಾಯನಿಕ ಗೊಬ್ಬರ ಬಳಕೆಯಿಂದ ಮಣ್ಣಿನ ಗುಣಮಟ್ಟ ನಶಿಸುತ್ತಿರುವುದನ್ನು ತಡೆಗಟ್ಟಲು ಜೀವ ಚೈತನ್ಯ ಕೃಷಿಯನ್ನು ಪ್ರಚುರಪಡಿಸಿದ್ದಾರೆ. ಹನುಮಕೊಳ, ಲಕ್ಷ್ಮಣತೀರ್ಥ ನದಿ, ನಂಜನಗೂಡಿನ ಕಪಿಲಾ ನದಿಗಳನ್ನು ಸ್ವಚ್ಛಗೊಳಿಸಿ ಸೂಚನಾ ಫಲಕಗಳನ್ನು ಅಳವಡಿಸಿ, ಎಲ್ಲ ಶಾಲಾ- ಕಾಲೇಜುಗಳಲ್ಲಿ ಸಾಕ್ಷ್ಯಚಿತ್ರಗಳನ್ನು ಕಣ್ಮುಂದೆಯಿಟ್ಟು ಅರಿವು ಮೂಡಿಸುತ್ತಿದ್ದಾರೆ.
ಪ್ಲಾಸ್ಟಿಕ್ ಮುಕ್ತ ಪಟ್ಟಣ
ಸದ್ಯ ಹುಣಸೂರು ಪ್ಲಾಸ್ಟಿಕ್ ಮುಕ್ತ ಪಟ್ಟಣ. ಗ್ರಾಮಾಂತರ ಪ್ರದೇಶವನ್ನೂ ಇದೇ ಗಾಳಿ ಬೀಸಲಿ ಎಂಬುದು ಸಂಸ್ಥೆಯ ಆಶಯ. ಕಾಡು ಪ್ಲಾಸ್ಟಿಕ್ ಮುಕ್ತವಾದರೆ, ಪ್ರಾಣಿಗಳು ನಿಟ್ಟುಸಿರು ಬಿಡುವಂತಾಗುತ್ತದೆ. ವಿಶ್ವವಿಖ್ಯಾತ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಪ್ಲಾಸ್ಟಿಕ್ ಸಂಗ್ರಹ ಹಾಗೂ ಕಾಡು ಉಳಿಸಿ ಬೆಳಸುವ ಬಗ್ಗೆ ಅರಿವಿನ ಜಾಥಾ ನಡೆಸಲಾಗಿದೆ ಎನ್ನುತ್ತಾರೆ ಸಂಸ್ಥೆ ಮುಖ್ಯಸ್ಥ ಸಂಜಯ್.
ಲಕ್ಷ್ಮಣತೀರ್ಥ ಸಂರಕ್ಷಣೆ
ಲಕ್ಷ್ಮಣತೀರ್ಥ ಹುಣಸೂರಿನ ಜೀವನದಿ. ಇದನ್ನು ಸಂರಕ್ಷಿಸುವ ಹೊಣೆ ಯಾವ ಇಲಾಖೆಗೆ ಸೇರಿದ್ದು ಎಂಬುದನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಮರೆತಿದ್ದರು. ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಅವರ ಗಮನ ಸೆಳೆದ ಸಂಸ್ಥೆ ಪುರಸಭೆಯಿಂದ 17 ಲಕ್ಷ ಹಣ ಸಂದಾಯ ಮಾಡಿಸಿ ರು. 45 ಕೋಟಿ ಅಂದಾಜು ವೆಚ್ಚ ತಯಾರಿಸಿ, ಸರ್ಕಾರದಿಂದ ಶುದ್ಧೀಕರಣ ಯೋಜನೆ ಮಂಜೂರು ಮಾಡಿಸಿದ್ದು ಹಳೇಕಥೆ.
ಸಮಗ್ರ ಮಾಹಿತಿ
ಮರದ ಉದ್ದಿಮೆಗೆ ವಿಶೇಷವಾಗಿ ಗುಣಮಟ್ಟದ ಹಾಗೂ ಬಾಳಿಕೆಗೆ ಹೆಸರುವಾಸಿಯಾದ ಹುಣಸೂರು 'ತೇಗದ ತವರು'. ಅಂತಾರಾಷ್ಟ್ರೀಯ ಗುಣಮಟ್ಟದ ತಂಬಾಕು ಬೇಸಾಯ ಮತ್ತು ಹರಾಜು ಇಲ್ಲಿನ ಇನ್ನಿತರೆ ಮುಖ್ಯ ಉದ್ದಿಮೆ. ಮರದ ಉದ್ದಿಮೆಯಲ್ಲಿ ಹುಣಸೂರಿನ ಖ್ಯಾತಿಯೇ ಅದಕ್ಕೆ ಶಾಪವಾಗಿ ಪರಿಣಮಿಸುತ್ತಿದೆ.
ಶೇ.80 ರೈತರು ನೆಚ್ಚಿಕೊಂಡಿರುವುದು ತಂಬಾಕು ಬೇಸಾಯವನ್ನು. ತಂಬಾಕು ಬೆಳೆಯಲು ಸುಮಾರು 55 ಸಾವಿರ ಎಕರೆಗಳಿಗಿಂತಲೂ ಹೆಚ್ಚು ಭೂಮಿಯ ಬಳಕೆಯಾಗುತ್ತಿದೆ. ತಂಬಾಕು ಸಂಸ್ಕರಣೆಗೆ ಮುಖ್ಯವಾಗಿ ಸೌದೆಯನ್ನು ಉಪಯೋಗಿಸುತ್ತಾರೆ. ಇದಕ್ಕಾಗಿ ವಾರ್ಷಿಕವಾಗಿ 20 ಲಕ್ಷ ಟನ್ನುಗಳಷ್ಟು ಸೌದೆಯನ್ನು ಉರುವಲಾಗಿ ಬಳಸುತ್ತಿದ್ದು, ಇದು ಜಾಗತಿಕ ತಾಪಮಾನದಲ್ಲಿ ಪ್ರಮುಖ ಪಾತ್ರ ವಹಿಸುವ ಇಂಗಾಲಾಮ್ಲದ ಹೆಜ್ಜೆಗುರುತಿಗೆ ಕಾರಣವಾಗಿದೆ. ರೈತರು ಮರಗಳನ್ನು ವಿವೇಚನಾರಹಿತವಾಗಿ ಕಡಿಯುತ್ತಿದ್ದು, ಬೆಲೆಬಾಳುವ ಅರಣ್ಯ ಸಂಪತ್ತಿನ ನಾಶದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಕಾವೇರಿ ಉಪನದಿಯಾದ ಲಕ್ಷ್ಮಣತೀರ್ಥ ಸಹ ಸ್ಥಳೀಯ ಜನರ ಅನಾರೋಗ್ಯಕರ ಅಭ್ಯಾಸಗಳಿಂದಾಗಿ ಶೇ.80ರಷ್ಟು ಕಲುಷಿತವಾಗಿದೆ ಮತ್ತು ಪಟ್ಟಣದಲ್ಲಿ ಅಂತರ್ಜಲದ ಮಟ್ಟ 1985ರಲ್ಲಿ 20 ಅಡಿ ಇದ್ದು, ಇಂದು ಅದು 120 ಅಡಿಗೆ ಕುಸಿದಿದೆ. ಅಂತಿಮವಾಗಿ, ಹುಣಸೂರಿನ ಸಮೀಪದಲ್ಲಿರುವ ನಾಗರಹೊಳೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಅರಣ್ಯವನ್ನೂ ಅರಣ್ಯೋತ್ಪನ್ನಗಳ ಅಕ್ರಮ ಸಾಗಣೆ, ಆಗಾಗ ವನಸ್ಪತಿಗಳ ಕಳ್ಳಸಾಗಣೆ ಮತ್ತು ಕಾಡಾನೆಗಳ ಹತ್ಯೆಯಂಥ ಕಾನೂನು ಬಾಹಿರ ಚಟುವಟಿಕೆಗಳಿಂದ ಹೊರತುಪಡಿಸಿಲ್ಲ. ಈ ದುರುದ್ದೇಶಗಳನ್ನೆಲ್ಲ ದೂರ ಮಾಡುವುದು ಕ್ಲಬ್ಬಿನ ಮುಖ್ಯ ಉದ್ದೇಶ.
- ಅಂಶಿ ಪ್ರಸನ್ನಕುಮಾರ್
- ಧರ್ಮಾಪುರ ನಾರಾಯಣ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


