ಗ್ರೀನ್ ಗುರುಕುಲ

ಹಸಿರು ಮನಸ್ಸಿಗೆ ಆಹ್ಲಾದ ನೀಡುತ್ತದೆ. ಸುತ್ತಲೂ ಹಸಿರು ಸಂಪತ್ತಿದ್ದರೆ ಕವಿ, ಗಾಯಕ, ಬರಹಗಾರರಿಗೆ ಸ್ಫೂರ್ತಿ. ಈ ಮಾತಿನಿಂದಲೇ ಏನೋ ಎಂಬಂತೆ ಹುಬ್ಬಳ್ಳಿಯ ಹೊರವಲಯದಲ್ಲಿರುವ ಡಾ. ಗಂಗೂಬಾಯಿ ಹಾನಗಲ್ ಗುರುಕುಲ ಹಸಿರು ಹಾಸಿನ ಮಧ್ಯೆ ತಲೆ ಎತ್ತಿರುವಂತಿದೆ.
ಹುಬ್ಬಳ್ಳಿ ಪಟ್ಟಣದಲ್ಲಿ ಗಿಜಿಗಿಡುವ ವಾತಾವರಣವಿದ್ದರೆ ಗುರುಕುಲ ಆಸುಪಾಸಿನಲ್ಲಿ ಹಸಿರಿನ ಹಂದರ. ಇಂಥ ಹಸಿರು ವಾತಾವರಣದೊಳಗಿಂದ ಸದಾ ಸಂಗೀತ ನಿನಾದ ಹೊರಹೊಮ್ಮುತ್ತಿರುತ್ತದೆ. ಇದು ಗುರುಕುಲದ ಮುಖ್ಯ ಕಳೆ.
ಇಲ್ಲಿ ಸಂಗೀತ ಪಾಠದ ಜತೆಗೆ ಹಸಿರ ಸಿರಿಯನ್ನು ಉಳಿಸಿ ಬೆಳೆಸುವ ನಿತ್ಯ ಕಾಯಕವೂ ನಡೆಯುತ್ತದೆ. ಗುರುಕುಲದೊಳಕ್ಕೆ ಕಾಲಿಡುತ್ತಿದ್ದಂತೆಯೇ ಕಣ್‌ಸೆಳೆಯುವ ಹಸಿರು ಹುಲ್ಲಿನ ಹಾಸು ಮನಕ್ಕೆ ಮುದ ನೀಡುತ್ತದೆ. ಹುಲ್ಲಿನ ಹಾಸು ಕಾಯಲೆಂದೇ ನಿಂತಿವೆಯೇನೋ ಎನ್ನುವಂತೆ ಭಾಸವಾಗುವ ಅದರ ಸುತ್ತ ಬೆಳೆದಿರುವ ನಾನಾ ಬಗೆಯ ಹೂಗಿಡಗಳು ಖುಷಿ ಕೊಡುತ್ತವೆ. ಗುಲಾಬಿ, ಮಲ್ಲಿಗೆ, ದಾಸವಾಳ, ಸೇವಂತಿ, ಡೇರೆ, ಅಬ್ಬಲಿಗೆ ಹೀಗೆ ಹತ್ತು ಹಲವು ಹೂವು ಸುಹಾಸನೆ ಹೊರ ಸೂಸುತ್ತಿವೆ. ಗುರುಕುಲದಲ್ಲಿ ನಿತ್ಯ ನಡೆಯುವ ಸಂಗೀತ ದೇವಿ ಶಾರದೆಯ ಆರಾಧನೆಗೆ ಇಲ್ಲಿಯದ್ದೇ ಹೂವು.
ಕಾಂಪೌಂಡ್ ಸುತ್ತಲೂ ಗಗನಮುಖಿಯಾಗಿರುವ ಮಾವು, ಹಲಸು, ಹುಣಸೆ, ಆಲ, ಅಶೋಕ, ನೀಲಗಿರಿ, ಬೇವು, ಹೊಂಗೆಯಂಥ ಗಿಡಗಳು ಗುರುಕುಲಕ್ಕೆ ರಕ್ಷಣೆ ನೀಡಲು ನಿಂತಿರುವಂತಿದೆ. ವಿಶೇಷವೆಂದರೆ ಗುರುಕುಲದಲ್ಲಿರುವ ವಿದ್ಯಾರ್ಥಿಗಳ ಭೋಜನಕ್ಕೆ ಬಳಸುವ ತರಕಾರಿಯೂ ಗುರುಕುಲದ ಕೈತೋಟದಲ್ಲಿ ಬೆಳೆಯಲಾಗುತ್ತದೆ. ಬೆಂಡೆಕಾಯಿ, ಟೊಮೇಟೊ, ಹೀರೆಕಾಯಿ, ಕುಂಬಳಕಾಯಿ, ಪುಂಡಿಸೊಪ್ಪು, ರಾಜಗಿರಿ ಸೊಪ್ಪು, ಕೋಸು, ಮೂಲಂಗಿ, ಸೌತೆಕಾಯಿ, ಹಸಿಮೆಣಸಿನಕಾಯಿ, ಈರುಳ್ಳಿಗಳನ್ನು ಇಲ್ಲಿಯೇ ಬೆಳೆಯಲಾಗುತ್ತದೆ. ಇದರೊಂದಿಗೆ ಪಪ್ಪಾಯಿ, ದಾಳಿಂಬೆ, ಬಾಳೆ, ಪೇರಳೆ ಹಣ್ಣಿನ ಗಿಡಗಳೂ ಸಮೃದ್ಧ.
ವಿದ್ಯಾರ್ಥಿಗಳು ಸಂಗೀತ ಪಾಠದೊಂದಿಗೆ ಬೆಳಗಿನ ಸ್ವಲ್ಪ ಸಮಯವನ್ನು ಕೈತೋಟದಲ್ಲಿ ಕಳೆಯುತ್ತಾರೆ. ಗಿಡ ನೆಡುವುದು, ನೀರುಣಿಸುವುದು ಮಾಮೂಲಿ ಪಾಠಗಳು. ಇದು ಸಂಗೀತ ಪಾಠದೊಂದಿಗೆ ಪರಿಪಾಠವಾಗಿ ಬೆಳೆದು ಬಂದಿದೆ. ಗುರುಗಳೂ ಕೈಜೋಡಿಸುತ್ತಾರೆ. ಕೈತೋಟಕ್ಕೆ ಅಗತ್ಯ ಸಾವಯವ ಗೊಬ್ಬರವೂ ಇಲ್ಲೇ ತಯಾರಾಗುತ್ತದೆ. ವಿದ್ಯಾರ್ಥಿಗಳಾಗಲಿ, ಗುರುಗಳಾಗಲಿ ಊರಿಗೆ ಹೋದಾಗ ಹೊಸ ಜಾತಿಯ ಸಸಿ ಸಿಕ್ಕರೆ, ಅದನ್ನು ತಂದು ಗುರುಕುಲದ ತೋಟದಲ್ಲಿ ನೆಡುತ್ತಾರೆ. ಇದು ಅವರ ಹಸಿರು ಪ್ರೀತಿಗೆ ಸಾಕ್ಷಿ. ಈ ಪ್ರೀತಿಯನ್ನು ಆ ಎಳೆ ಹೃದಯಗಳಲ್ಲಿ ಅರಳಿಸಿದವರು ಗುರುಕುಲದ ಆಡಳಿತಾಧಿಕಾರಿ ಬಿ.ವಿ. ಲಕ್ಷ್ಮೇಶ್ವರ.
- ಪ್ರಕಾಶ ಎಸ್. ಶೇಟ್
ಚಿತ್ರ- ಡಿ. ಹೇಮಂತ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


