ಆಯುರ್‌ವದ್ವ
ಭೌತಶಾಸ್ತ್ರ ಪಾಠ ಮಾಡುವ ಈ ಉಪನ್ಯಾಸಕರಿಗೆ ವಯಸ್ಸು 57. ಆದರೆ, ಈ ಮೇಷ್ಟ್ರಿಗೆ ಖುಷಿ ಕೊಡುವ ವಿಷಯ ಸಸ್ಯಶಾಸ್ತ್ರ!

ಭೌತಶಾಸ್ತ್ರ ಪಾಠ ಮಾಡುವ ಈ ಉಪನ್ಯಾಸಕರಿಗೆ ವಯಸ್ಸು 57. ಆದರೆ, ಈ ಮೇಷ್ಟ್ರಿಗೆ ಖುಷಿ ಕೊಡುವ ವಿಷಯ ಸಸ್ಯಶಾಸ್ತ್ರ! ಕಳೆದ 30 ವರ್ಷಗಳಿಂದ ನಿರಂತರವಾಗಿ ಹಸಿರನ್ನೇ ಉಸಿರಾಗಿಸಿರುವ ದ.ಕ. ಜಿಲ್ಲೆ ಬಂಟ್ವಾಳ ತಾಲೂಕಿನ ಅಳಿಕೆಯ ವದ್ವ ವೆಂಕಟ್ರಮಣ ಭಟ್ಟರು ಕಾಲೇಜಿನ ಬೋಧನೆ ಜೊತೆಗೆ ಮನೆ ಸುತ್ತಮುತ್ತಲಿನ ಅಷ್ಟೂ ಜಾಗದಲ್ಲಿ 3000ಕ್ಕೂ ಹೆಚ್ಚು ವೈವಿಧ್ಯಮಯ ಸಸ್ಯಗಳನ್ನು ನೆಟ್ಟು ಪೋಷಿಸುತ್ತಿದ್ದಾರೆ.
ಪಿತ್ರಾರ್ಜಿತವಾಗಿ ಬಂದ 10 ಎಕರೆ ಜಾಗದಲ್ಲಿ ಮನೆ ಅಂಗಳದಿಂದ ತೊಡಗಿ ಗುಡ್ಡ, ತೋಟ, ಇಳಿಜಾರು, ಎತ್ತ ನೋಡಿದರೂ ಬಗೆ ಬಗೆಯ ಗಿಡ, ಮರಗಳ ರಾಶಿ ಇಲ್ಲಿ ಕಣ್ಣು ತಣಿಸುತ್ತವೆ. ಹಣ್ಣುಗಳು, ಔಷಧೀಯ ಸಸ್ಯ, ಹೂವು, ಮರಮಟ್ಟು ಪ್ರಭೇದಗಳ ಬೃಹತ್ ಕಣಜವದು. ಹಿಂದೆ ಬೋಳು ಗುಡ್ಡವಾಗಿದ್ದ ಜಾಗ ಭಟ್ಟರ ಕೈಚಳಕದಿಂದ ಹಸಿರು ಕಾಶಿಯಾಗಿದೆ. ಅವರು 8ನೇ ತರಗತಿಯಲ್ಲಿದ್ದಾಗ ನೆಟ್ಟ ಗಿಡಗಳು ಈಗಲೂ ಬದುಕಿದ್ದು, ಹೆಮ್ಮರಗಳಾಗಿವೆ.
ಏನುಂಟು, ಏನಿಲ್ಲ?
ಹಲವು ವಿಧದ ಸೇಬು ಗಿಡಗಳು, ಆನೆಮುಚ್ಚಿರು ಹಣ್ಣು, ಸೀಮೆ ಹುಣಸೆ, ಸಿಹಿ ಹುಣಸೆ, ಪ್ಲರಿಗಳು (3-4 ಜಾತಿ), ವೆಲೈಟ್, ಮಿಲ್ಕ್ ಫ್ರೂಟ್, ಲಕೋಟ್, ರಾಂಬುಟಾನ್, ಅಭಿಯು, ಕಾರಾ, ಗರಂ ಮಸಾಲಾ ಇತ್ಯಾದಿ ವೈವಿಧ್ಯಗಳು... ಅಶ್ವಗಂಧ, ರುದ್ರಾಕ್ಷಿ, ಕ್ಯಾಂಡಲ್ ಟ್ರೀ, ಬಳ್ಳಿ ಅನಾನಸು, ಸಿಹಿ ಅಂಬಟೆ, ಬಿಳಿ ಸಣ್ಣ ನೇರಳೆ, ರಾಮನ ಅಡಕೆ, ನಾಯಿ ಅಂಕೋಲೆ, ಕೋಕೊ ಲೋಬ, ಬರೋಪ, ಲಚಿ, ಸ್ನೇಕ್ ಫ್ರೂಟ್, ಸಲಾಕ್, ಮೈಂದಪುಳಿ, ಸೀಶೋರ್ ಸೇರಿದಂತೆ ಸಾವಿರಗಟ್ಟಲೆ ಅಪರೂಪದ ಗಿಡಗಳಿವೆ.
ಕೇರಳದಿಂದ ತಂದ 'ಕೃಷ್ಣಾಲ' ಎಂಬ ವಿಶಿಷ್ಟ ಸಸ್ಯ ಇವರ ಬಳಿಯಿದೆ. 'ಬೆಣ್ಣೆ ಸಂಗ್ರಹಿಸುವ ಎಲೆ' ಎಂದೇ ಖ್ಯಾತಿ ಪಡೆದ ಈ ಗಿಡದ ಎಲೆ ಸಣ್ಣದಾಗಿ ಲಕೋಟೆ ಮಾದರಿಯಲ್ಲಿರುತ್ತದೆ. ಈ ಗಿಡ ಬೆಳೆಯಲು ಗುಟಿಕಶಿ ಲೇಯರಿಂಗ್ ಮಾಡಿದರೆ ಉತ್ತಮ ಎನ್ನುತ್ತಾರೆ ಭಟ್ಟರು.
ಸಂಗ್ರಹವೇ ಹವ್ಯಾಸ
ಹಿಂದೆಲ್ಲ ಭಟ್ಟರು ಚಾರಣ ತೆರಳಿ ಗುಡ್ಡ, ಕಾಡುಗಳಿಂದ ವಿವಿಧ ಗಿಡಗಳನ್ನು ಸಂಗ್ರಹಿಸುತ್ತಿದ್ದರು. ಸ್ನೇಹಿತರು, ಬಂಧುಗಳ ಮನೆ, ಪೇಟೆಗೆ ಹೋದಾಗ ನರ್ಸರಿಯಿಂದ ಈಗಲೂ ತಮ್ಮಲ್ಲಿಲ್ಲದ ಗಿಡಗಳನ್ನು ಹುಡುಕಿ ತಂದು ಪೋಷಿಸುತ್ತಾರೆ, ಕಸಿ ಕಟ್ಟುತ್ತಾರೆ, ಅಗತ್ಯವಿದ್ದವರಿಗೆ ಗಿಡ ನೀಡುತ್ತಾರೆ, ತೋಟಗಾರಿಕೆ ಮಾಹಿತಿಯನ್ನೂ ಕೊಡುತ್ತಾರೆ. ಅವರಿಗೆ 30 ವರ್ಷದಿಂದ ಫೋಟೋಗ್ರಫಿ ಹವ್ಯಾಸವೂ ಇದೆ. ಪ್ರತಿದಿನ ನೆಟ್ಟ ಗಿಡಗಳ ಜೊತೆಗೆ ಪಕ್ಷಿಗಳ ಫೋಟೊಗಳನ್ನೂ ಕ್ಲಿಕ್ಕಿಸುತ್ತಾರೆ. ಕಳೆದ ಮೂರು ವರ್ಷಗಳಿಂದ ಕಂಪ್ಯೂಟರ್‌ನಲ್ಲೂ ಪರಿಣತರಾಗಿದ್ದು, ಫೇಸ್‌ಬುಕ್ಕಿಗೂ ಫೋಟೋಗಳನ್ನು ಅಪ್‌ಲೋಡ್ ಮಾಡುತ್ತಾರೆ. ಹಿಂದೆಲ್ಲಾ ಸಸ್ಯಗಳ ಚಿತ್ರಗಳನ್ನು ಪ್ರಿಂಟ್ ಹಾಕಿಸುತ್ತಿದ್ದರು, ಈಗ ಕಂಪ್ಯೂಟರ್‌ನಲ್ಲಿ ಕಾಪಿಡುತ್ತಾರೆ. ಇಂಥ ಸಹಸ್ರಾರು ಫೋಟೋಗಳು ಅವರ ಸಂಗ್ರಹದಲ್ಲಿವೆ.
ಆಯುರ್ವೇದ ಶಾಸ್ತ್ರದಲ್ಲಿ ಬಳಕೆಯಾಗುವ ಗಿಡಗಳೂ ಇಲ್ಲಿವೆ. ಆಸಕ್ತರಿಗೆ ಗಿಡಗಳ ಕುರಿತು ಅಗತ್ಯ ಮಾಹಿತಿ ನೀಡುತ್ತಾರೆ. ಕಾಂಪೋಸ್ಟ್, ಎರೆಹುಳ, ಸ್ಲರಿ ವ್ಯವಸ್ಥೆಯೊಂದಿಗೆ ಗೇರುಬೀಜ, ಅಡಕೆ, ತೆಂಗು ಸಹಿತ ಹಲವು ತೋಟಗಾರಿಕಾ ಬೆಳೆಯುತ್ತಾರೆ. ಭಟ್ಟರ ಸಂಪರ್ಕ: venkatvadva@gmail.com
ಮರ ಠೇವಣಿಯ ಹಾಗೆ
ಗಿಡ ನೆಟ್ಟರೆ ಡೆಪಾಸಿಟ್ ಇಟ್ಟ ಹಾಗೆ. ನನಗೆ ಶಾಲೆಯಲ್ಲಿ ವಿದ್ಯಾರ್ಥಿಗಳು, ಮನೆಯಲ್ಲಿ ಗಿಡಗಳೇ ಜೀವನ. 'ನನ್ನ ಪಾಡಿಗೆ ನಾನಿರುವುದು' ನನ್ನ ಹವ್ಯಾಸ. ಯಾರಿಗೂ ತೊಂದರೆಯಾಗದ ಹವ್ಯಾಸವಿದು. ಪ್ರಚಾರಕ್ಕಾಗಿ ಮಾಡುತ್ತಿರುವುದಲ್ಲ. ವೈಯಕ್ತಿಕವಾಗಿ ಬಹಳ ತೃಪ್ತಿ ಕೊಡುತ್ತಿದೆ.
- ವದ್ವ ವೆಂಕಟ್ರಮಣ ಭಟ್ಟ
- ಚಿತ್ರ, ಬರಹ: ಕೃಷ್ಣಮೋಹನ ತಲೆಂಗಳ
kmohant@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


