ಕೃಷಿ-ಪರಿಸರ

ಮೃತ ವಲಯ

ಉತ್ತರ ಅಮೆರಿಕದ ಮೆಕ್ಸಿಕೋ ಕೊಲ್ಲಿಯಲ್ಲಿ ಈ ವರ್ಷ ಬೇಸಿಗೆಯಲ್ಲಿ ವಿಶ್ವದ ಅತಿದೊಡ್ಡ...

ಮೃತ ವಲಯ
Published On :

ಉತ್ತರ ಅಮೆರಿಕದ ಮೆಕ್ಸಿಕೋ ಕೊಲ್ಲಿಯಲ್ಲಿ ಈ ವರ್ಷ ಬೇಸಿಗೆಯಲ್ಲಿ ವಿಶ್ವದ ಅತಿದೊಡ್ಡ ಜಡ ವಲಯ ಅಥವಾ ಮೃತ ವಲಯ (Dead Zone) ನಿರ್ಮಾಣವಾಗಲಿದೆ- ಹೀಗೆಂದು ಹಲ್ಲಿಯಂತೆ ಭವಿಷ್ಯ ನುಡಿದಿದ್ದು  ಅಮೆರಿಕದ ರಾಷ್ಟ್ರಿಯ ಸಾಗರ ಮತ್ತು ಹವಾಮಾನ ಇಲಾಖೆ.
ಮಾನವ ಪ್ರಕೃತಿ ಮೇಲೆ ನಡೆಸಿದ ದಬ್ಬಾಳಿಕೆಗೆ ಇದು ಉತ್ತರ. ಆಹಾರ ತ್ಯಾಜ್ಯ, ರಾಸಾಯನಿಕದಿಂದ ಉಂಟಾಗುವ ಮಾಲಿನ್ಯದ ಇನ್ನೊಂದು ವಿಕೃತಿ ಈ ಮೃತವಲಯ. ಸಮುದ್ರ ಹಾಗೂ ಬೃಹತ್ ಸರೋವರಗಳಲ್ಲಿ ನಿರ್ಮಾಣವಾಗುತ್ತಿರುವ ಮೃತ ವಲಯ ಈಗಾಗಲೇ ಹಲವು ದೇಶಗಳ ಮತ್ಸ್ಯೋದ್ಯಮದ ಮೇಲೆ ಗಂಭೀರ ಪರಿಣಾಮ ಬೀರಿದೆ. ಕೆಲವೆಡೆ ಕಡಲು, ನದಿ, ಸರೋವರಗಳಲ್ಲಿ ಮೀನು ಸಂತತಿ ನಾಶವಾಗಿದೆ.

ಮೃತ ವಲಯ
ನೀರಿನಲ್ಲಿ ಆಮ್ಲಜನಕ ಪ್ರಮಾಣ ತೀರಾ ಕಡಿಮೆ ಆದಾಗ ಅಥವಾ ಸಂಪೂರ್ಣ ಇಲ್ಲವಾದಾಗ ಮೃತ ವಲಯ ನಿರ್ಮಾಣವಾಗುತ್ತದೆ. ಮೃತ ವಲಯ ಉಂಟಾಗಲು ಪ್ರಮುಖ ಕಾರಣ ನೀರಿನಲ್ಲಿ ಆಹಾರ ತ್ಯಾಜ್ಯ, ಕೃಷಿಗೆ ಬಳಸುವ ರಾಸಾಯನಿಕ ಗೊಬ್ಬರ (ವಿಶೇಷವಾಗಿ ಸಾರಜನಕ, ಫಾಸ್ಫರಸ್) ಪ್ರಮುಖ ಕಾರಣ. ಬೃಹತ್ ಪ್ರಮಾಣದ ಆಹಾರ ತ್ಯಾಜ್ಯ, ರಾಸಾಯನಿಕಗಳು ನೀರನ್ನು ಸೇರಿದಾಗ ದೊಡ್ಡಗಾತ್ರದ ಪಾಚಿ ಸಸ್ಯಗಳು ಬೆಳೆಯುತ್ತವೆ. ನಂತರ ಇವು ಸತ್ತು, ಕೊಳೆತು, ನೀರಿನ ತಳಭಾಗ ಸೇರುತ್ತವೆ. ಈ ಪ್ರಕ್ರಿಯೆ ನಡೆಯುವ ಹಂತದಲ್ಲಿ ಭಾರಿ ಪ್ರಮಾಣದ ಆಮ್ಲಜನಕ ಬಳಕೆಯಾಗುತ್ತದೆ. ಹೀಗಾಗಿ ನೀರಿನಲ್ಲಿ ಆಮ್ಲಜನಕ ಪ್ರಮಾಣ ತೀರಾ ಕಡಿಮೆಯಾಗುತ್ತದೆ ಅಥವಾ ಶೂನ್ಯ ಪ್ರಮಾಣಕ್ಕಿಳಿಯುತ್ತವೆ. ಅಂದರೆ ಸಾಮಾನ್ಯ ನೀರಿನಲ್ಲಿ ಶೇ. 6-8 ಪಿಪಿಎಂ (ಪಾರ್ಟ್ಸ್ ಪರ್ ಮಿಲಿಯನ್) ಇದ್ದರೆ ಜಡ ವಲಯದಲ್ಲಿ ಶೇ. 1-2 ಪಿಪಿಎಂಗೆ ಕುಸಿಯುತ್ತವೆ.
ನೀರಿನಲ್ಲಿ ಆಮ್ಲಜನಕ ಪ್ರಮಾಣ ತೀರಾ ಕಡಿಮೆಯಾದಾಗ ಅಥವಾ ಶೂನ್ಯವಾದಾಗ ಅಲ್ಲಿ ಯಾವುದೇ ಜಲಚರಗಳು ವಾಸಿಸಲಾರವು. ಬೃಹತ್ ಮೀನುಗಳು, ಇತರ ಜಲಚರಗಳು ಜಾಗ ಖಾಲಿ ಮಾಡಿದರೆ, ತಳಭಾಗದ ಸೂಕ್ಷ್ಮ ಜಲಚರಗಳು ಸಾವನ್ನಪ್ಪುತ್ತವೆ.

ಎಲ್ಲೆಲ್ಲಿವೆ?
ಇಂಥ ಮೃತ ವಲಯಗಳು ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಚೀನಾ, ಜಪಾನ್, ನ್ಯೂಜಿಲೆಂಡ್‌ಗಳಲ್ಲಿ ಹೆಚ್ಚು ಕಂಡುಬಂದಿವೆ. ಕೆನಡಾದ ಸೈಂಟ್ ಲಾರೆನ್ಸ್ ನದಿಯ ಆಳದಲ್ಲಿ ಮೃತ ವಲಯ ಸೃಷ್ಟಿಯಾಗಿರುವುದು 1930ರ ದಶಕದಲ್ಲೇ ವಿಜ್ಞಾನಿಗಳು ಗಮನಕ್ಕೆ ಬಂದಿತ್ತು. 1950ರ ಬಳಿಕ ಇಂಥ ಹಲವು ಮೃತ ವಲಯಗಳು ಜಗತ್ತಿನ ವಿವಿಧ ಜಲಧಿಗಳಲ್ಲಿ ಕಂಡುಬಂದವು. 1970ರ ಬಳಿಕ ವಿಜ್ಞಾನಿಗಳು ಮೃತ ವಲಯಗಳನ್ನು ಗುರುತಿಸಿ, ಸಂಶೋಧನೆ ಕೈಗೊಂಡರು.

2008ರಲ್ಲಿ ಸಮೀಕ್ಷೆಯೂ ಆಯಿತು. ಜಗತ್ತಿನ ವಿವಿಧೆಡೆ 405 ಮೃತವಲಯಗಳು ಪತ್ತೆಯಾದವು. ಕೆಲವೆಡೆ ಕಿ.ಮೀ. ವ್ಯಾಪ್ತಿಯಲ್ಲಿ ಕಂಡುಬಂದರೆ ಕೆಲವೆಡೆ ಸಾವಿರಾರು ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿ ನಿರ್ಮಾಣವಾಗಿತ್ತು. ವಿಶೇಷವೆಂದರೆ ಇಂತಹ ಮೃತ ವಲಯ ಕಡಲ ಅಥವಾ ಬೃಹತ್ ಸರೋವರದ ತೀರದಲ್ಲೇ ನಿರ್ಮಾಣವಾಗುತ್ತದೆ. ಜಲಚರಗಳು ಹೆಚ್ಚು ವಾಸಿಸುವುದು ತೀರ ಪ್ರದೇಶದಲ್ಲೇ. ಸಾಗರದ ಮಧ್ಯಭಾಗದಲ್ಲಿ ಮೃತ ವಲಯ ಉಂಟಾದರೆ ಅಂತಹ ಹಾನಿ ಉಂಟಾಗದು. ಬಹುತೇಕ ಕಡೆಗಳಲ್ಲಿ ಮೃತ ವಲಯ ಬೇಸಿಗೆಯಲ್ಲಿ ಮಾತ್ರ ನಿರ್ಮಾಣವಾಗಿ, ಮಳೆಗಾಲದಲ್ಲಿ ಮಾಯವಾಗುತ್ತವೆ. ಕಡಲಶಾಸ್ತ್ರಜ್ಞರು ಗಮನಿಸಿದ ಇನ್ನೊಂದು ಪ್ರಮುಖ ಅಂಶವೆಂದರೆ 1990ರ ಬಳಿಕ ಮೃತ ವಲಯ ಎರಡು ಪಟ್ಟು ಹೆಚ್ಚಿದೆ.

ಮೆಕ್ಸಿಕೋ ಕೊಲ್ಲಿ
ಉತ್ತರ ಅಮೆರಿಕದ ಮೆಕ್ಸಿಕೋ ಸಾಗರ ತೀರದಲ್ಲಿ 2002ರಲ್ಲಿ 21,966 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಮೃತ ವಲಯ ನಿರ್ಮಾಣವಾಗಿತ್ತು. ಅದು ಈ ವರೆಗಿನ ದಾಖಲೆ. ಆದರೆ ಈ ವರ್ಷ ಬೇಸಿಗೆಯಲ್ಲಿ ಈ ದಾಖಲೆ ಮುರಿಯಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. 18,871ರಿಂದ 22,173 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಜಡ ವಲಯ ನಿರ್ಮಾಣವಾಗಬಹುದು ಎಂದು ನಿರೀಕ್ಷಿಸಿದ್ದಾರೆ. ಕಳೆದವರ್ಷ ಇದೇ ಪ್ರದೇಶದಲ್ಲಿ 15,436 ಚದರ ಕಿ.ಮೀ. ವ್ಯಾಪ್ತಿಯಲ್ಲಿ ನಿರ್ಮಾಣವಾಗಿತ್ತು.

ಅಮೆರಿಕದ ಶೇ.41ರಷ್ಟು ಚರಂಡಿ ನೀರು, ಶೇ.70ರಷ್ಟು ಕೃಷಿ ಉದ್ಯಮದ ತ್ಯಾಜ್ಯಗಳು ಮಿಸಿಸಿಪ್ಪಿ ನದಿ ಮೂಲಕ ಈ ಕಡಲ ತೀರವನ್ನು ಸೇರುತ್ತದೆ. ಅದರಲ್ಲಿ ನೈಟ್ರೋಜನ್, ಫಾಸ್ಫರಸ್ ಅತಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಅಂದಾಜಿನ ಪ್ರಕಾರ ಪ್ರತಿ ವರ್ಷ 1.7 ಮಿಲಿಯನ್ ಟನ್ ನೈಟ್ರೋಜನ್, ಪೊಟ್ಯಾಷಿಯಂ ಮೆಕ್ಸಿಕೋ ಕಡಲ ತೀರವನ್ನು ಸೇರುತ್ತಿದೆ. ಇದೇ ಮೃತ ವಲಯವನ್ನು ನಿರ್ಮಿಸುತ್ತಿದೆ.

1950ರ ಬಳಿಕ ಈ ಪ್ರದೇಶದಲ್ಲಿ ಭಾರಿ ಪ್ರಮಾಣದ ಕಾಡು ಕಡಿದು ಕೃಷಿ ಚಟುವಟಿಕೆಗೆ ಬಳಸಲಾಗುತ್ತಿದೆ. 1950-1976ರ ಅವಧಿಯಲ್ಲಿ ಮೂರರಲ್ಲಿ ಒಂದು ಭಾಗ ಕಾಡು ಕೃಷಿ ವಲಯವಾಗಿತ್ತು. ಹೀಗಾಗಿ ಕೃಷಿ ತ್ಯಾಜ್ಯಗಳು ಸಮುದ್ರ ಸೇರುವ ಪ್ರಮಾಣ ಗಣನೀಯವಾಗಿ ಹೆಚ್ಚಿತು. ಈ ಮೃತ ವಲಯ ಅಮೆರಿಕ, ಕೆನಡ ದೇಶಗಳ ಮತ್ಸ್ಯೋದ್ಯಮಕ್ಕೆ ಭಾರಿ ಪೆಟ್ಟು ನೀಡಿದೆ.

ಸದ್ಯ ನಮ್ಮ ದೇಶದಲ್ಲಿ ಅಂಥ ಬೃಹತ್ ಪ್ರಮಾಣದ ಮೃತ ವಲಯ ಕಂಡುಬಂದಿಲ್ಲ. ಚರಂಡಿ ನೀರು, ತ್ಯಾಜ್ಯ ಸೇರಿ ಅಲ್ಲಲ್ಲಿ ಕಡಿಮೆ ವ್ಯಾಪ್ತಿಯಲ್ಲಿ ನಿರ್ಮಾಣ ಆಗುತ್ತಿದೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ, ಊರಿಗೆ ಬಂದ ಮಾರಿ ಮನೆಗೆ ಬಾರದಿದ್ದೀತೇ?

ಕಪ್ಪು ಸಮುದ್ರ
ಅಚ್ಚರಿಯೆಂದರೆ, ಜಗತ್ತಿನ ಅತಿ ದೊಡ್ಡ ಮೃತ ವಲಯ ಎಂದೇ ಹೆಸರಾಗಿರುವ ಯುರೋಪಿನ ಕಪ್ಪು ಸಮುದ್ರದಲ್ಲಿ ಅದರ ವ್ಯಾಪ್ತಿ ಕುಗ್ಗುತ್ತಿದೆ. ಸೋವಿಯತ್ ಒಕ್ಕೂಟ ವಿಸರ್ಜನೆಯಾದ ಬಳಿಕ, 1990-2001ರ ಅವಧಿಯಲ್ಲಿ ಯುರೋಪಿನಲ್ಲಿ ಆರ್ಥಿಕ ಹಿಂಜರಿತವಾಗಿ, ರಸಗೊಬ್ಬರದ ಬೆಲೆ ಗಗನಕ್ಕೇರಿತು. ರೈತರು ರಸಗೊಬ್ಬರ ಬಳಕೆ ಕಡಿಮೆ ಮಾಡಿ, ಮತ್ಸ್ಯೋದ್ಯಮದ ಕಡೆಗೆ ಹೊರಳಿದರು. ಅದರಿಂದ ಗಣನೀಯ ಪ್ರಮಾಣದಲ್ಲಿ ಸಮುದ್ರ ಸೇರುವ ಕೃಷಿ ತ್ಯಾಜ್ಯ ಕಡಿಮೆಯಾಯಿತು.  ಈಗಾಗಲೇ ಹಲವು ರಾಷ್ಟ್ರಗಳು ತ್ಯಾಜ್ಯ, ಚರಂಡಿ ನೀರು, ರಾಸಾಯನಿಕಗಳು ನದಿ, ಸಮುದ್ರಕ್ಕೆ ನೇರವಾಗಿ ಸೇರದಂತೆ ನಾನಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ಕೃಷಿ, ಕೈಗಾರಿಕೆ ತ್ಯಾಜ್ಯಗಳನ್ನು ಸಂಸ್ಕರಿಸಿ ಬಿಡುತ್ತಿವೆ. ಹಲವು ರಾಷ್ಟ್ರಗಳಲ್ಲಿ ಸಾವಯವ ಕೃಷಿಗೆ ಆದ್ಯತೆ ನೀಡಲಾಗುತ್ತಿದೆ. ತ್ಯಾಜ್ಯದಲ್ಲಿ ಫಾಸ್ಫೇಟ್ ಪ್ರಮಾಣ ಕುಗ್ಗಿಸಲು ಅಲ್ಯೂಮಿನಿಯಂ ಸಲ್ಫೇಟ್ ಬಳಸಲಾಗುತ್ತಿದೆ.

- ಮಧುಕರ ನಾರಾಯಣ
madhu@kannadaprabha.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.