ಕೃಷಿ-ಪರಿಸರ

ಸಣ್ಣಗಾದ ಮೀನುಖಂಡ!

ಸಣ್ಣಗಾದ ಮೀನುಖಂಡ!
Published On :

ಹವಾಮಾನ ವೈಪರೀತ್ಯದ ಬಿಸಿ ಮನುಷ್ಯರನ್ನಷ್ಟೇ ತಟ್ಟಿಲ್ಲ. ಸಮುದ್ರದ ಆಳದಲ್ಲಿ ಜೀವಿಸುವ ಮೀನುಗಳಿಗೂ ಈಗ ಕಂಟಕ. ಮೀನುಗಳ ತೂಕದಲ್ಲಿ ಗಣನೀಯವಾಗಿ ಇಳಿಮುಖವಾಗುತ್ತಿದೆ ಎನ್ನುವುದು ಅಧ್ಯಯನದಿಂದ ಬೆಳಕಿಗೆ ಬಂದಿರುವ ಆತಂಕಕಾರಿ ಸತ್ಯ.

ವಿಶ್ವದ ಆಹಾರೋದ್ಯಮದಲ್ಲಿ ಮೀನಿಗೆ ಪ್ರಮುಖ ಸ್ಥಾನ. ಮೀನುಗಾರಿಕೆ ಲಕ್ಷಾಂತರ ಜನರಿಗೆ ಉದ್ಯೋಗ ಕಲ್ಪಿಸಿರುವ ಉದ್ಯಮ. ಕಡಲ ತಡಿಯ ಜನರು ಬದುಕು ಕಟ್ಟಿಕೊಳ್ಳುವ ಮಾರ್ಗ. ಮನುಷ್ಯ 'ಜೀರೋ ಸೈಜ್‌'ಗೂ, 'ಸಮ ತೂಕ'ಕ್ಕೆ ಬಳಸುವ ಆಹಾರ. ಆದರೆ, ಇನ್ನೊಬ್ಬರ ಹೊಟ್ಟೆ ತುಂಬಿಸುವ ಮೀನಿನ ತೂಕದಲ್ಲೇ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುತ್ತಿದೆ!
ಆಶ್ಚರ್ಯವಾದರೂ ಇದು ಸತ್ಯ. ಸಮುದ್ರದಲ್ಲಿ ದೈತ್ಯಾಕಾರದ ಶಾರ್ಕ್‌ನಿಂದ ಹಿಡಿದು ಸಣ್ಣಪುಟ್ಟ ಮೀನುಗಳವರೆಗೆ ಸುಮಾರು 600 ಬಗೆಯ ಮೀನುಗಳು ಬದುಕುತ್ತವೆ. ಸಮುದ್ರದ ಆಳದಲ್ಲಿ ಹಾಯಾಗಿ ಅಲೆದಾಡುತ್ತ ಜೀವಿಸುವ, ಜಲಚರಗಳನ್ನು ತಿಂದು ಬದುಕುವ ಮೀನುಗಳಿಗೂ ಹವಾಮಾನದ ವೈಪರಿತ್ಯ ಹಾಗೂ ಕಲುಷಿತ ವಾತಾವರಣದ 'ಬಿಸಿ' ತಟ್ಟಿದೆ. ಹೀಗಾಗಿ ತೂಕದಲ್ಲಿ ವ್ಯತ್ಯಾಸವಾಗುತ್ತಿದ್ದು ಮುಂದಿನ ದಿನಗಳಲ್ಲಿ ಅಪಾಯದ ಮುನ್ಸೂಚನೆ ನೀಡಿವೆ. ಆಹಾರೋದ್ಯಮದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ.

ತೂಕ ಏಕೆ ಕಡಿಮೆಯಾಗುತ್ತಿದೆ?
ಲಂಡನ್‌ನ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಕಂಡುಕೊಂಡ ಮಾಹಿತಿ ಪ್ರಕಾರ, ಸಮುದ್ರದಾಳದಲ್ಲಿ ಬದುಕುವ ಮೀನುಗಳಿಗೆ ಹವಾಮಾನ ವೈಪರೀತ್ಯದಿಂದ ತಾಪಮಾನ ಹೆಚ್ಚಳವಾಗುತ್ತಿದೆ. ಇದು ನೇರವಾಗಿ ಮೀನುಗಳ ಮೇಲೆ ಪರಿಣಾಮ ಬೀರುತ್ತಿದೆ. ಅಲ್ಲದೇ ಕಲುಷಿತ ವಾತಾವರಣದಿಂದ ಸಮುದ್ರದ ಆಳದಲ್ಲಿ ಅಗತ್ಯವಾದ ಆಮ್ಲಜನಕ ಕೂಡ ಲಭ್ಯವಾಗುತ್ತಿಲ್ಲ. ಮೀನುಗಳು ಕೇವಲ ಜಲಚರಗಳನ್ನು ತಿಂದು ಬದುಕಿದರೆ ಸಾಲದು. ತೂಕ ಹೆಚ್ಚಾಗುವ ಹಾಗೂ ಸದೃಢವಾಗಿ ಬೆಳೆಯಲು ಪೂರಕ ವಾತಾವರಣ ಬೇಕಾಗುತ್ತದೆ. ಆದರೆ, ದಿನದಿಂದ ದಿನಕ್ಕೆ ಮೀನುಗಳಿಗೆ ಇದು ಲಭ್ಯವಾಗುತ್ತಿಲ್ಲ. ಆದ್ದರಿಂದ ಮೀನುಗಳ ತೂಕ ಶೇ.14ರಿಂದ ಶೇ.20ರಷ್ಟು ಕಡಿಮೆಯಾಗುತ್ತಿದೆ.
ಸದ್ಯಕ್ಕೆ ಸಣ್ಣ ಪುಟ್ಟ ಮೀನುಗಳ ಮೇಲೆ ಇದು ಅಷ್ಟೊಂದು ಪರಿಣಾಮ ಬೀರುತ್ತಿಲ್ಲ. ಶಾರ್ಕ್ ಸೇರಿದಂತೆ ಇನ್ನಿತರೆ ದೊಡ್ಡ ಪ್ರಮಾಣದ ಮೀನುಗಳಿಗೆ ಅನಾನುಕೂಲವಾಗುತ್ತಿದೆ. ಜಲಚರಗಳು ಹೇರಳ ಪ್ರಮಾಣದಲ್ಲಿ ಲಭ್ಯವಿದ್ದರೂ ಪೂರಕ ವಾತಾವರಣ ಇಲ್ಲದ್ದರಿಂದ ಸಮಸ್ಯೆ ಉಲ್ಬಣಿಸುತ್ತಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಭಾರೀ ಅಪಾಯ ಎದುರಿಸಬೇಕಾಗುತ್ತದೆ ಎಂದು ಕೂಡ ಎಚ್ಚರಿಸಿದ್ದಾರೆ.

ಆಹಾರೋದ್ಯಮದ ಮೇಲೆ ಪರಿಣಾಮ
ಮೀನುಗಳ ತೂಕದಲ್ಲಿ ವ್ಯತ್ಯಾಸವಾದರೆ ನೇರವಾಗಿ ಆಹಾರೋದ್ಯಮದ ಮೇಲೆ ಪರಿಣಾಮ ಬೀರುತ್ತದೆ. ಅಗತ್ಯಕ್ಕೆ ತಕ್ಕಂತೆ ಮೀನುಗಳು ಪೂರೈಕೆಯಾಗುವುದು ಕಷ್ಟವಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಮೀನುಗಾರಿ ವ್ಯವಹಾರಕ್ಕೆ ಹಿನ್ನಡೆಯಾಗುತ್ತದೆ. ಇದು ಕಡಲ ತಡಿಯಲ್ಲಿ ಮೀನುಗಾರಿಕೆಯನ್ನೇ ನಂಬಿ ಬದುಕುತ್ತಿರುವವರಿಗೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಪರಿಹಾರ ಏನು?
ಇದ್ದಕ್ಕಿದ್ದಂತೆ ಒಂದೆರಡು ದಿನಗಳಲ್ಲಿ ಇದಕ್ಕೆ ಪರಿಹಾರ ಕಂಡುಕೊಳ್ಳುತ್ತೇವೆ ಎಂಬುದು ಮೂರ್ಖತನ. ತಾಪಮಾನದ ಬಗ್ಗೆ ತಲೆ 'ಬಿಸಿ' ಮಾಡಿಕೊಂಡು ಸಮುದ್ರಾದಳದಲ್ಲಿ ಸಭೆ ನಡೆಸಿದರೆ ಪರಿಹಾರ ಸಿಗುವುದಿಲ್ಲ.
=     ಸಮುದ್ರದ ಸೇರುವ ಕಲ್ಮಶವನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು.
=     ನಗರ ಪ್ರದೇಶದಲ್ಲಿರುವ ಕೊಳಚೆ ಪ್ರದೇಶಗಳನ್ನು ಕಡಿಮೆಗೊಳಿಸಬೇಕು.
=     ತಾಪಮಾನ ಹೆಚ್ಚಳದಂತೆ ಕ್ರಮ ಕೈಗೊಳ್ಳಬೇಕು.
=     ಸಮುದ್ರದಲ್ಲಿ ನಡೆಸುವ ತೈಲ ವ್ಯವಹಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಕಚ್ಚಾ ವಸ್ತು ಸಮುದ್ರ ಸೇರಿ ಮೀನುಗಳು ಹಾಗೂ ಇನ್ನಿತರೆ ಜಲಚರಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು.
=     ಹಡಗು ಸಂಚಾರ ವೇಳೆ ಅನಗತ್ಯ ಹಾಗೂ ಮಾರಕ ಅಂಶಗಳು ಸಮುದ್ರ ಸೇರದಂತೆ ಎಚ್ಚರಿಕೆ ವಹಿಸಬೇಕು.

-ಚನ್ನು ಮೂಲಿಮನಿ
kp.channu@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.