ವನ ಸುಂದರಿಯರು!

ಪಶ್ಚಿಮ ಘಟ್ಟದಮಡಿಲಲ್ಲಿರುವ ಜೋಯಿಡಾದ ತೆರಾಳಿ ಗುಡ್ಡದಲ್ಲಿ ಅಪರಿಚಿತ ಪುಷ್ಪ ರಾಣಿಗಳದ್ದೇ ಕಾರುಬಾರು.
ವನ ಸುಂದರಿಯರಿವರು. ಹೆಸರು ಗೊತ್ತಿಲ್ಲ, ಮೂಲ ತಿಳಿದಿಲ್ಲ. ಆದರೆ ತಮ್ಮದೇ ಆದ ಮೈಬಣ್ಣ, ಸುಂದರ ಮೈಮಾಟ, ಸುವಾಸನೆಯಿಂದ ಬರ ಸೆಳೆಯುತ್ತಾರೆ. ಮನಸ್ಸು ಪ್ರಫುಲ್ಲಗೊಳಿಸುತ್ತಾರೆ.
ನಿಜ, ಪಶ್ಚಿಮ ಘಟ್ಟದ ಹಸಿರು ಸೆರಗಿನಲ್ಲಿ ಅದೇನೋ ವಿಸ್ಮಯ ಅಡಗಿದೆ. ಅದರಲ್ಲಿಯೂ ಜೋಯಿಡಾ ಸುತ್ತಲಿನ ಕಾಡು ಬಣ್ಣಿಸಲಸದಳ. ಕಾಡು ಸುತ್ತುವ ಖಯಾಲಿ ಬೆಳೆಸಿಕೊಂಡಿರುವ ನನ್ನನ್ನು ಮಿತ್ರ ಶರತ್ ಹೆಗಡೆ ಈ ಬಾರಿ ಕರೆದುಕೊಂಡು ಹೋಗಿದ್ದು ಜೋಯಿಡಾ ಸಮೀಪದ ತೆರಾಳಿ ಗುಡ್ಡಕ್ಕೆ.
ಕಾಲ್ನಡಿಗೆಯಲ್ಲಿ ಗುಡ್ಡದತ್ತ ಪಯಣ ಆರಂಭಿಸಿ ಬುಡ ತಲುಪಿದಾಗ ಮುಗಿಲೆತ್ತರಕ್ಕೆ ನಿಂತಿತ್ತು ಗುಡ್ಡ. ಹೇಗಪ್ಪಾ ಹತ್ತುವುದು ಎಂದು ಯೋಚಿಸುತ್ತಲೇ ಕೈಯಲ್ಲೊಂದು ಉರುಗೋಲು ಹಿಡಿದು ಗಗನ ಚುಂಬಿಯಾಗಿರುವ ಗುಡ್ಡ ಕ್ರಮಿಸಲಾರಂಭಿಸಿದೆವು. ಎತ್ತರಕ್ಕೆ ಹೋದಂತೆಲ್ಲ ಬೀಸುತ್ತಿದ್ದ ತಂಗಾಳಿ ನಮ್ಮ ದಣಿವಿಳಿಸುತ್ತಿತ್ತು. ಇನ್ನೂ ಒಂದಿಷ್ಟು ಎತ್ತರಕ್ಕೆ ಹೋದಾಗ ಘಮ ಮೂಗಿಗೆ ಬಡಿಯಿತು. ಕುತೂಹಲ ಹೆಚ್ಚಾಗಿ ಘಮದ ದಿಕ್ಕತ್ತಿ ಹೋದಾಗ ಮರದ ಮೇಲೆ ದೇಹ ಹರಿಯ ಬಿಟ್ಟಂತಿದ್ದ ಬಿಳಿ ಗುಲಾಬಿ ಬಣ್ಣ ಮಿಶ್ರಿತ ಸೀತಾಳೆ ಹೂವಿನ ಗುಚ್ಚ ಕಣ್ಣಿಗೆ ಬಿತ್ತು. ಹೂವಿನ ಚೆಲುವು ಆಸ್ವಾದಿಸಿ ಫೋಟೋ ಕ್ಲಿಕ್ಕಿಸಿ ಮುನ್ನಡೆದೆವು.
ಮುಂದೆ ಸಾಗಿದಾಗ ಬಿಳಿ ಬಣ್ಣದ ಕೊಡೆಯನ್ನು ಹಿಡಿದು ಸುಂದರಿಯೊಬ್ಬಳು ನಿಂತಿದ್ದಾಳೋ ಎನ್ನುವಂತಹ ಹೂವು ಗಮನ ಸೆಳೆಯಿತು. ಆಗ ತಾನೆ ಬಿದ್ದ ಮಂಜಿನ ಹನಿ ಆ ಹೂವಿನಿಂದ ತೊಟ್ಟಿಕ್ಕುತ್ತಿತ್ತು. ಈ ಹೂವು ನೋಡಿದಾಗಲಂತೂ ಕುತೂಹಲ ಹೆಚ್ಚಿತು. ಹೂವಿನ ಹುಡುಕಾಟ ಶುರುವಾಯಿತು. ಅದೇನಾಶ್ಚರ್ಯ, ಪುಟ್ಟ ಬಾಲೆಯರಿಬ್ಬರು ಬಿಳಿ ಬಣ್ಣದ ಬಟ್ಟೆ ಧರಿಸಿ ನಮ್ಮತ್ತಲೇ ದೃಷ್ಟಿ ನೆಟ್ಟಿರುವಂತಹ ವಿಸ್ಮಯಕಾರಿ ಹೂವು ಕಾಣಸಿಕ್ಕಿತು. ನಮಗೆ ಖುಷಿಯೋ ಖುಷಿ. ಹೀಗೆ ಗುಡ್ಡದ ತುತ್ತ ತುದಿಯತ್ತ ಮುಖ ಮಾಡಿ ಹೋಗುತ್ತಿದ್ದರೆ ನಾವು ಪುಷ್ಪ ಪ್ರಪಂಚವನ್ನೇ ಪ್ರವೇಶಿಸಿದ್ದೇವೆ ಎನ್ನುವಂತೆ ಭಾಸವಾಗುತ್ತಿತ್ತು. ಹಳದಿ, ನೀಲಿ, ಕೆಂಪು, ಹಸಿರು ಹೀಗೆ ನಾನಾ ಬಣ್ಣಗಳನ್ನು ಮೈಗೆ ಮೆತ್ತಿಕೊಂಡು ತಮ್ಮ ಬಿಟ್ಟರಿಲ್ಲ ಎಂದು ಬೀಗುತ್ತಿದ್ದವು ಆ ಸುಂದರ ಪುಷ್ಪಗಳು.
ಎಂದೂ ಕಂಡಿರದ ಸುಂದರಿಯರನ್ನು ಪತ್ತೆ ಹಚ್ಚುತ್ತಾ ಅದರ ಫೋಟೋ ಕ್ಲಿಕ್ಕಿಸುತ್ತಾ ಹೊರಟರೆ ಗುಡ್ಡದ ತುತ್ತ ತುದಿಗೆ ಬಂದು ನಿಂತಿದ್ದು ಅರಿವಾಗಲೇ ಇಲ್ಲ. ಬೆಟ್ಟ ಹತ್ತಿ ಸಾಹಸಗೈದೆವು ಎನ್ನುವ ಖುಷಿಯೊಂದಿಗೆ, ಆ ದಿನ ಕಣ್ತುಂಬ ಕಾನ ಸುಂದರಿಯರು ಮತ್ತವರದ್ದೇ ಕನವರಿಕೆ.
-ಪ್ರಕಾಶ ಎಸ್. ಶೇಟ್
prakashjoida@gmail.com
ಚಿತ್ರಗಳು: ಶರತ್ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


