ಅವರ್ ಗ್ರೀನ್
ಮಳೆ ಕೊರತೆಯಾದರೆ ಮರಗಳು ಸೊರಗುತ್ತವೆ. ಮರಗಳು ಸೊರಗುತ್ತಾ ಹೋದರೆ ಮನುಷ್ಯನಿಗೆ ಉಸಿರಾಡಲು ಆಮ್ಲಜನಕವೂ ಸಿಗದೇ ಹೋಗಬಹುದು. ಹೀಗೆಯೇ ಬೆಳೆಯುತ್ತದೆ ಸಮಸ್ಯೆಗಳ ಕೊಂಡಿ. ಕೊಂಚ ಪ್ರಯತ್ನಪಟ್ಟರೆ ನಮ್ಮ ಪರಿಸರದಲ್ಲಿ ಹಸಿರು ಉಳಿಸಿಕೊಳ್ಳುವುದು ಕಷ್ಟವಲ್ಲ.
ಒಂದು ವೇಳೆ ನೀರಿನ ಕೊರತೆಯಿದ್ದಲ್ಲಿ ಯಾವುದೇ ಕಾರಣಕ್ಕೂ ಗೊಬ್ಬರ ಬಳಸಬೇಡಿ. ನೆಲವನ್ನು ಅಗೆದು ಸಡಿಲುಗೊಳಿಸಬೇಡಿ. ಸಾವಯವ ಗೊಬ್ಬರವನ್ನೇ ಬಳಸಿ. ಇದರಿಂದ ಎರೆಹುಳುಗಳು ತೇವಾಂಶವನ್ನು ಕಾಪಾಡುತ್ತವೆ. ಅಲ್ಲದೆ, ಭೂ ಫಲವತ್ತತೆಯೂ ಹೆಚ್ಚುತ್ತದೆ.
ಉಸಿರಾಡುವ ಆಮ್ಲಜನಕದಿಂದ ಹಿಡಿದು ತಿನ್ನುವ ಆಹಾರದವರೆಗೂ ಮಾನವನ ಬದುಕಿನಲ್ಲಿ ಹಸಿರು ಬೆರೆತಿದೆ. ಅದಕ್ಕಾಗೇ ಹೇಳುವುದಲ್ಲವೆ 'ಹಸಿರೇ ಉಸಿರು' ಎಂದು. ಆದರೀಗ ಹಸಿರು ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ಉತ್ತಮ ಗಾಳಿ ಸಿಗದೆ ಉಸಿರಾಡುವುದೂ ಕಷ್ಟವಾಗುತ್ತಿದೆ. ಪೌಷ್ಟಿಕ ಆಹಾರ ಪದಾರ್ಥಗಳೂ ದುರ್ಲಭವಾಗುತ್ತಿವೆ. ಇದಕ್ಕೆ ಅಗತ್ಯ ಮಳೆ ಹಾಗೂ ನಿರ್ವಹಣೆ ಕೊರತೆ, ಮಾಲಿನ್ಯಗಳಿಂದ ಉತ್ಪಾದನೆಗೆ ಹಿನ್ನಡೆಯಾಗಿರುವುದು ಕಾರಣ.
ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ಈ ವರ್ಷದ ಸ್ಥಿತಿಯಂತೂ ಗಂಭೀರ. ನಮ್ಮ ರಾಜ್ಯದಲ್ಲಿ ಕನಿಷ್ಠ ಪ್ರಮಾಣದ ಮಳೆಯೂ ಬಿದ್ದಿಲ್ಲ. ಇಂತಹ ಸಂದರ್ಭದಲ್ಲೇ ಬೇಸಿಗೆ ಎದುರಾಗುತ್ತಿದೆ. ಸ್ವಲ್ಪ ನಿರ್ಲಕ್ಷಿಸಿದರೂ ಬಿಸಿಲಿನ ಬೇಗೆಗೆ ಅಳಿದುಳಿದ ಹಸಿರೂ ಕಣ್ಮರೆಯಾಗುವುದರಲ್ಲಿ ಸಂದೇಹವಿಲ್ಲ.
ಇಂತಹ ವೇಳೆ ನಾವು ಹಸಿರನ್ನು ಹೇಗೆ ಉಳಿಸಿಕೊಳ್ಳಬೇಕು, ಮಾಡಬೇಕಾದ ಕಾರ್ಯಗಳೇನು, ವಹಿಸಬೇಕಾದ ಮುಂಜಾಗ್ರತಾ ಕ್ರಮಗಳೇನು? ಒಂದಿಷ್ಟು ಮಾಹಿತಿ...
ರಕ್ಷಣಾ ಕಾರ್ಯ ಹೀಗಿರಲಿ...
ಮನೆ ಸುತ್ತಮುತ್ತಲಿರುವ ತೋಟ, ಉದ್ಯಾನ, ಅರಣ್ಯದಲ್ಲಿನ ಸಸ್ಯ, ಗಿಡ- ಮರಗಳಿಗೆ ಜೀವಜಲ ಅತೀ ಅವಶ್ಯ. ಕುಡಿಯಲೂ ನೀರು ಸಿಗದಂತ ಇಂದಿನ ಸ್ಥಿತಿಯಲ್ಲಿ ಅವುಗಳಿಗೆ ತೃಪ್ತಿದಾಯಕವಾಗಿ ಕುಡಿಸುವುದಂತೂ ಅಸಾಧ್ಯ. ಆದಾಗ್ಯೂ ಅವುಗಳ ಉಸಿರಿಗೋಸ್ಕರವಾದರೂ ಕನಿಷ್ಠ 15 ದಿನಗಳಿಗೊಮ್ಮೆ ನೀರುಣಿಸಲೇಬೇಕು.
ಸಸ್ಯಗಳ ಸುತ್ತಮುತ್ತ ಅನಗತ್ಯವಾಗಿ ಬೆಳೆದು ನಿಂತಿರುವ ಕಳೆ, ಕಸವನ್ನು ಮತ್ತೆ ಚಿಗುರದಂತೆ ಕತ್ತರಿಸಿ ಹಾಕಿ. ಏಕೆಂದರೆ ತೇವಾಂಶವನ್ನು ಇವೇ ಹೀರುತ್ತವೆ. ನೀರಿನ ಕೊರತೆಯಿದ್ದಲ್ಲಿ ಕಾಂಡದ ಸುತ್ತಮುತ್ತಲಿರುವ ಮಣ್ಣನ್ನು ಆಳವಾಗಿ ಅಗೆಯದಿರಿ. ಅಗೆದರೆ ಇರುವ ತೇವಾಂಶವೂ ಆರಿಹೋಗುತ್ತದೆ. ಅಲ್ಪಪ್ರಮಾಣದ ನೀರಿದ್ದರೆ ಹನಿ ನೀರಾವರಿ ಪದ್ಧತಿ ಮೂಲಕ ನೀರುಣಿಸಿ.
ಭೂ ತೇವಾಂಶ ರಕ್ಷಿಸಿ
ಭೂಮಿಯ ಹೊರ ಪದರಿನಲ್ಲೂ ಬೇರುಗಳನ್ನು ಚಾಚುವ ತೆಂಗು, ಪೇರಲ, ದಾಳಿಂಬೆ ಮುಂತಾದ ಮರಗಳ ಬೇರುಗಳ ಸುತ್ತಲೂ ಮಣ್ಣನ್ನು ಶೇಖರಿಸಿ. ಇದರಿಂದ ತೇವಾಂಶ ಕಳೆದುಕೊಳ್ಳದೆ ಮರಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಇದಕ್ಕೆ ಇನ್ನೂ ಉತ್ತಮವೆಂದರೆ- ಮಳೆಗಾಲದಲ್ಲೇ ಮರಗಳ ಸುತ್ತ ಅಗತಿ (ಮರಗಳ ಸುತ್ತಲೂ ಸುಮಾರು 3 ಅಡಿ ಭೂಮಿಯನ್ನು ಅಗೆದು ಸಡಿಲಗೊಳಿಸಿ ಮಣ್ಣಿನೊಳಗೆ ಸಾವಯವ ಗೊಬ್ಬರ ತುಂಬುವುದು) ಮಾಡಿದ್ದರೆ ಮಣ್ಣು ಸಂಪೂರ್ಣ ತೇವಾಂಶ ಹಿಡಿದಿಟ್ಟುಕೊಂಡು ಬೇಸಿಗೆಯಲ್ಲೂ ನೀರಿನ ಅಗತ್ಯತೆ ಬಾರದು. ಮಣ್ಣೂ ಹದವಾಗಿರುತ್ತದೆ.
ಉದ್ಯಾನ, ತೋಟದ ನಿರ್ವಹಣೆ
ಸಾಮಾನ್ಯವಾಗಿ ಪಾರ್ಕ್‌ಗಳಿರುವುದು ನಗರಗಳಲ್ಲೇ. ಇಲ್ಲೇ ನೀರಿನ ಕೊರತೆ ಅಧಿಕ. ಮಳೆನೀರು ಭೂಮಿಯಲ್ಲಿ ಇಂಗದೆ ನಗರದಾಚೆ ಹರಿದು ಹೋಗಿರುತ್ತದೆ. ಬೇಸಿಗೆಯಲ್ಲಿ ಹುಲ್ಲು, ಲಾನ್, ಹೂವಿನ ಗಿಡಗಳು, ಪಾಚಿ ಜಾತಿಯ ಸಸ್ಯಗಳು, ಸೌಂದರ್ಯೀಕರಣದ ಗಿಡಗಳು ಬಾಯ್ದೆರೆಯುತ್ತವೆ. ಅದೇ ವೇಳೆ ವಾಹನಗಳು ಉಗುಳುವ ಬಿಸಿಯಾದ ಇಂಗಾಲದ ಡೈ ಆಕ್ಸೈಡ್ ಸಸ್ಯಗಳ ಎಲೆ ಮತ್ತು ಚಿಗುರಿನ ಮೇಲೆ ಬಂದು ಕುಳಿತುಕೊಳ್ಳುತ್ತದೆ. ಇದರಿಂದ ಸಸಿಗಳು ನಂಜಾಗಿ ಮತ್ತಷ್ಟು ನೆಲಕಚ್ಚುತ್ತವೆ. ಆದ್ದರಿಂದ ಕನಿಷ್ಠ 3 ದಿನಕ್ಕೊಮ್ಮೆ ಗಿಡಗಳ ಮೇಲೆ ನೀರನ್ನು ಸಿಂಪಡಿಸಿದರೆ ಮತ್ತೆ ಚಿಗುರುತ್ತವೆ.
ತೋಟದಲ್ಲಿ ಬೆಳೆವ ತರಕಾರಿ ಬೆಳೆಗಳಿಗೆ ನೀರೇ ಆಧಾರ. ಬೇಸಿಗೆಯಲ್ಲಿ ನೀರಿಲ್ಲದೆ ತರಕಾರಿ ಬೆಳೆಗಳು ಒಣಗುತ್ತವೆ. ಉತ್ಪಾದನೆಯಲ್ಲಿ ಇಳಿಕೆಯಾಗಿ ತರಕಾರಿ ಬೆಲೆ ಗಗನಕ್ಕೇರುತ್ತದೆ. ಅದಕ್ಕಾಗಿ ಮಳೆಗಾಲದಲ್ಲಿ ಬಿದ್ದ ನೀರನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಬೇಸಿಗೆಯಲ್ಲಿ ಅಗತ್ಯ ಪ್ರಮಾಣದಲ್ಲಿ ನೀರನ್ನು ಉಣಿಸುವ ಮೂಲಕ ಉತ್ತಮ ಬೆಳೆ ತೆಗೆಯಬಹುದು. ಇದರಿಂದ ಹಸಿರೂ ಉಳಿಯುತ್ತದೆ, ಸಂಪಾದನೆಯೂ ಆಗುತ್ತದೆ.
ಗಮನದಲ್ಲಿಡಬೇಕಾದ ಅಂಶಗಳು...
= ನಿತ್ಯ ಗಿಡ- ಮರಗಳನ್ನು ಪರಿಶೀಲಿಸಿ.
= ಬೇಸಿಗೆ ಕೊನೆಯಲ್ಲಿ ಮಡಿ ಮಾಡಿ ಬಿದ್ದ ಮಳೆ ನೀರನ್ನು ಅಲ್ಲಿಯೇ ಇಂಗುವಂತೆ ಮಾಡಿ.
= ಬೆಳೆಯಬೇಕಾದ ಸಸ್ಯ, ಗಿಡ- ಮರ ಹೊರತುಪಡಿಸಿ ಅನಗತ್ಯವಾದ ಕಸ- ಕಡ್ಡಿ ತೆಗೆದು ಸ್ವಚ್ಛತೆ ಕಾಪಾಡಿ.
= ವರ್ಷದಲ್ಲಿ ಕನಿಷ್ಠ ಎರಡು ಬಾರಿಯಾದರೂ ಮಣ್ಣು ಸಡಿಲಗೊಳಿಸಿ ಸಾವಯವ ಗೊಬ್ಬರನ್ನು ಹಾಕಿ.
= ಸಸ್ಯ ಸಂಕುಲಕ್ಕೆ ನಂಜಾಣು ಸೇರಿದಂತೆ ವಿವಿಧ ರೋಗ ಬಾಧೆ ತಗುಲದಂತೆ ಎಚ್ಚರ ವಹಿಸಿ.
= ಫಲ ಕೊಡುವ ಗಿಡ- ಮರಗಳು ಎಲೆ ಉದುರಿಸುವ, ಚಿಗುರುವ, ಹೂ ಬಿಡುವ ಮತ್ತು ಫಲ ಕೊಡುವ ಹಂತಗಳನ್ನು ತಿಳಿದು ಸಮಯಕ್ಕೆ ಸರಿಯಾಗಿ ನಿರ್ವಹಣೆ ಮಾಡಿ.
-ವೀರೇಶ ಜಿ. ಮಠ
mathvg@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

