ಕೃಷಿ-ಪರಿಸರ

ವಟ ವಟ ಕೇಳಲ್ಲ

ಪಾಪ, ನಗರಗಳಲ್ಲಿ ಕಪ್ಪೆಗಳ ವಟವಟ ನಿಧಾನಕ್ಕೆ ಕಡಿಮೆಯಾಗ್ತಿದೆ ಕಣ್ರಿ.

ವಟ ವಟ ಕೇಳಲ್ಲ
Published On :

ಸಿಕ್ಕಾಪಟ್ಟೆ ಮಾತನಾಡೋರನ್ನ 'ಕಪ್ಪೆ ಥರ ವಟಗುಡ್ಬೇಡ' ಅಂತ ಬೈತೀವಿ. ಪಾಪ, ನಗರಗಳಲ್ಲಿ ಕಪ್ಪೆಗಳ ವಟವಟ ನಿಧಾನಕ್ಕೆ ಕಡಿಮೆಯಾಗ್ತಿದೆ ಕಣ್ರಿ.
ಕಪ್ಪೆ ಉಭಯವಾಸಿ ಜೀವಿ. ನೀರಿನಲ್ಲೂ ವಾಸಿಸಬಲ್ಲದು; ನೆಲದ ಮೇಲೂ ಸಹ. ಸದ್ಯಕ್ಕೆ ಗ್ರಾಮೀಣ ಪ್ರದೇಶಗಳಲ್ಲಂತೂ ಇವು ಹೇರಳವಾಗಿ ಕಂಡುಬರುತ್ತದೆ. ಹಾಗಾದರೆ ನಗರ ಪ್ರದೇಶಗಳಲ್ಲಿ ಇಲ್ಲವಾ? ಇಲ್ಲೂ ಇವೆ, ಆದರೆ ಸಂತತಿ ದಿನದಿಂದ ದಿನಕ್ಕೆ ನಶಿಸುತ್ತಿದೆ.
ಬೆಂಗಳೂರನ್ನೇ ಆಯ್ದುಕೊಳ್ಳೋಣ. ಇಲ್ಲಿ ದೊಡ್ಡ ಕೆರೆಗಳು ಉಳಿದಿರುವುದು ಕೇವಲ 80 ಎಂಬ ಮಾಹಿತಿ ಉಪಗ್ರಹ ಚಿತ್ರೀಕರಣದಿಂದ ಸಿಗುತ್ತದೆ. 1990ರಲ್ಲಿ ರಂಜಿತ್ ಡೇನಿಯಲ್ ಎಂಬ ವಿಜ್ಞಾನಿ ತನ್ನ ಸಹಚರರೊಂದಿಗೆ ಬೆಂಗಳೂರಿನ ಒಂದು ಕೆರೆಯಲ್ಲಿ ಅಧ್ಯಯನ ನಡೆಸಿದಾಗ 16 ಬಗೆಯ ಕಪ್ಪೆಗಳಿರುವುದು ಪತ್ತೆಯಾಗಿತ್ತು ಎನ್ನುತ್ತಾರೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಜೀವ ವೈವಿಧ್ಯ ಶಾಖೆ ವಿಜ್ಞಾನಿ ಡಾ. ಗುರುರಾಜ್ ಕೆ.ವಿ. ಐಐಎಸ್‌ಸಿಯ ಜೀವ ವೈವಿಧ್ಯ ಸಂಶೋಧನಾ ವಿಭಾಗವು ಬೆಂಗಳೂರಿನ 20 ಶಾಖೆಗಳನ್ನು ಆಯ್ದುಕೊಂಡು ಯಾವ ಕೆರೆಯಲ್ಲಿ ಯಾವ ಜಾತಿಯ ಕಪ್ಪೆಗಳಿವೆ. ಕಪ್ಪೆಗಳ ಸಂತತಿ ಇಲ್ಲದಿದ್ದರೆ ಅದಕ್ಕೆ ಕಾರಣವೇನು? ಎಂಬ ಅಂಶವನ್ನು ಕಂಡುಕೊಂಡಿತು.
ಈ ಸಂಶೋಧನೆ ಪ್ರಕಾರ ಬೆಂಗಳೂರಿನ ಮಧ್ಯ ಭಾಗ ಅಂದರೆ ವಿಧಾನಸೌಧ, ಮಲ್ಲೇಶ್ವರಂ ಪ್ರದೇಶಗಳಲ್ಲಿರುವ ಸಣ್ಣಪುಟ್ಟ ಕೆರೆಗಳಾದ ಸ್ಯಾಂಕಿ ಕೆರೆ, ಹಲಸೂರು ಕೆರೆಗಳ ಜಾಗದಲ್ಲಿ ಕಪ್ಪೆಗಳು ಸಂಪೂರ್ಣವಾಗಿ ನಶಿಸಿವೆ. ಆದರೆ ಬೆಂಗಳೂರಿನ ಹೊರಭಾಗದ ವಿಮಾನನಿಲ್ದಾಣ, ಬನ್ನೇರುಘಟ್ಟ ನ್ಯಾಶನಲ್ ಪಾರ್ಕ್, ಹೊಸೂರು ರಸ್ತೆ ಕಡೆಯಲ್ಲಿರುವ ಕೆಲವು ಕೆರೆಗಳಲ್ಲಿ ಕಪ್ಪೆಗಳು ಕಾಣಸಿಗುತ್ತಿವೆ.

ಸಂತತಿ ನಶಿಸಿದ್ದೇಕೆ?
ಅತಿಯಾದ ಜನಸಾಂದ್ರತೆ, ಕಲ್ಮಶಗಳು ಕೆರೆಗಳನ್ನು ಸೇರುವುದರಿಂದ ಈ ಕೆರೆಗಳಲ್ಲಿ ಯಾವುದೇ ರೀತಿಯ ಜೀವಿಗಳು ಉಳಿಯುವುದು ಅಸಾಧ್ಯ. ಎರಡನೇ ಅಂಶವೆಂದರೆ, ನಗರದಲ್ಲಿ ಇರುವ ಕೆರೆಗಳು ತಾಂತ್ರಿಕತೆಯಿಂದ ಕೂಡಿವೆ. ಅವುಗಳಲ್ಲಿ ಯಾವುದೇ ರೀತಿಯ ನೈಸರ್ಗಿಕತೆ ಉಳಿದಿಲ್ಲ. ಇವುಗಳ ಒಡ್ಡುಗಳನ್ನು ಕಾಂಕ್ರಿಟ್, ಕಲ್ಲು ಮಣ್ಣಿನಿಂದ ಕಟ್ಟಿರುವುದರಿಂದ ಮನರಂಜನೆಗಷ್ಟೇ ಸೀಮಿತವಾಗಿವೆ. ಹೀಗಾಗಿ ಅಲ್ಲಿ ಕಪ್ಪೆಗಳಾಗಲೀ ಅಥವಾ ಇನ್ನಾವುದೇ ಜೀವ ಪ್ರಭೇದ ಜೀವಿಸುವುದು ಹೇಗೆ ಸಾಧ್ಯ? ಎಂಬುದು ವಿಜ್ಞಾನಿಗಳ ವಾದ. ಇನ್ನೂ ಕಳವಳದ ಸಂಗತಿ ಎಂದರೆ, ಕಪ್ಪೆಗಳ ಚರ್ಮದಲ್ಲಿ ಆ್ಯಂಟಿ ಮೈಕ್ರೋಬಿಯಲ್ ಪೆಪ್ರ್ಯಡ್ ಎಂಬ ರೋಗನಿರೋಧಕ ರಸಾಯನಿಕಗಳು ಇರುತ್ತವೆ. ಇವು ರೋಗವನ್ನು ನಿಯಂತ್ರಿಸುತ್ತವೆ. ಆದರೂ ಕೈಕ್ಟಿಡಿಯೋ ಮೈಕೋಸಿಸ್ ಎಂಬ ರೋಗ ಇವುಗಳಿಗೆ ಕಾಡುತ್ತಿದೆ. ಪರಿಸರ ನಾಶ, ಅತಿಯಾದ ರಾಸಾಯನಿಕಗಳ ಬಳಕೆ, ಓಝೋನ್ ಪದರದಿಂದ ಸೋರುತ್ತಿರುವ ನೇರಳಾತೀತ ಕಿರಣಗಳು ಇವುಗಳ ರೋಗನಿರೋಧಕ ಶಕ್ತಿಯನ್ನು ಕಿತ್ತುಕೊಳ್ಳುತ್ತಿವೆ.
ಕಪ್ಪೆಗಳನ್ನು ಉಳಿಸಿಕೊಳ್ಳುವ ಬಗ್ಗೆ ಸಂಶೋಧಕರು ಚಿಂತನೆ ನಡೆಸಿದ್ದಾರೆ. ಪಶ್ಚಿಮ ಘಟ್ಟಗಳಲ್ಲಿ ಈ ನಿಟ್ಟಿನಲ್ಲಿ 'ಪ್ರೊಟೆಕ್ಷನ್ ಏರಿಯಾ ನೆಟ್‌ವರ್ಕ್‌' ಎಂಬ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಹಲವಾರು ಕಪ್ಪೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಈಗ ಬಹಳಷ್ಟು ಕಾಫಿ, ಟೀ ತೋಟಗಳಲ್ಲಿ ಸಿಗುವ ಕಪ್ಪೆಗಳು ಈ ಪ್ರೊಟೆಕ್ಷನ್ ಪ್ರದೇಶಗಳಲ್ಲಿ ಸಿಗುವುದಿಲ್ಲ. ಇದಕ್ಕೆ ಪರಿಹಾರ ಎಂದರೆ ಇವುಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣ ಮಾಡುವುದು.

ಜೀವ ವೈವಿಧ್ಯಸೂಚ್ಯಂಕ
ಪರಿಸರದಲ್ಲಾಗುವ ಬದಲಾವಣೆಯನ್ನು ಕಪ್ಪೆಗಳು ಬೇಗನೆ ಗ್ರಹಿಸುತ್ತವೆ. ಬೇರೆ ಜೀವಿಗಳಲ್ಲಿ ಗ್ರಹಿಕೆ ಪ್ರಮಾಣ ಕಡಿಮೆ ಎಂದೇ ಹೇಳಬಹುದು. ಕಪ್ಪೆಗಳು ವಾಸಿಸುವ ಜಾಗದಲ್ಲಿ ಸಣ್ಣ ಪ್ರಮಾಣದ ಕೀಟನಾಶಕಗಳನ್ನು ಬಳಸಿದರೂ ಸಾಕು, ಕೇವಲ ಎರಡು ಗಂಟೆಯಲ್ಲಿ ಆ ಜಾಗದಲ್ಲಿ ಯಾವುದೇ ಕಪ್ಪೆಗಳಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಕಪ್ಪೆಗಳನ್ನು ಬಯೋಇಂಡಿಕೇಟರ್ ಅಥವಾ ಜೀವ ವೈವಿಧ್ಯ ಸೂಚ್ಯಂಕ ಎಂದು ಪರಿಗಣಿಸಬಹುದು.
ಇವು ಭೂಕಂಪ ಸೂಚಕಗಳೂ ಹೌದು. ಇವುಗಳ ಚರ್ಮದಲ್ಲಿ ಒಂದು ರೀತಿಯ ರಂಧ್ರಗಳಿದ್ದು, ಅವುಗಳ ಮುಖಾಂತರ ವಾಯುಮಂಡಲದಲ್ಲಿರುವ ಗಾಳಿಯಲ್ಲಿನ ಕೆಲವು ಅಂಶಗಳನ್ನು ತನ್ನ ದೇಹದೊಳಗೆ ಆಹ್ವಾನಿಸಿಕೊಳ್ಳುತ್ತವೆ. ಅದೇ ರೀತಿ ದೇಹದ ಉಸಿರಾಟ ಕ್ರಿಯೆಯಲ್ಲಿ ಶ್ವಾಸಕೋಶದೊಂದಿಗೆ ಚರ್ಮಗಳನ್ನು ಬಳಸುವುದುಂಟು. ಭೂಕಂಪನವಾಗುವ ಪ್ರದೇಶಗಳಲ್ಲಿ ಕೆಲವು ದಿನಗಳ ಮುನ್ನ ವಿಎಲ್‌ಎಫ್ (Very Low Frequency)ಗಳು ವಾತಾವರಣದಲ್ಲಿ ಸೇರಿಕೊಂಡು 'ರೆಡಾನ್‌' ಎಂಬ ಅಂಶವನ್ನು ಏರುಪೇರು ಮಾಡುತ್ತದೆ. ಈ ರೆಡಾನ್ ಅಂಶವನ್ನು ಕಪ್ಪೆಗಳು ಗ್ರಹಿಸಿ ಅಲ್ಲಿಂದ ಪಲಾಯನಗೈಯುತ್ತವೆ!

-ಸುಜಿತ್
sujithputhran@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.