ಕೃಷಿ-ಪರಿಸರ

ಛಬ್ಬೀಸ್ ಸಂಡೆ

ಮೈಸೂರಿಗೆ ಹೋದವರು ಅಲ್ಲಿನ ಮೃಗಾಲಯಕ್ಕೂ ತಪ್ಪದೇ ಭೇಟಿ ಕೊಡ್ತಾರೆ. ಶ್ರೀ ಚಾಮರಾಜೇಂದ್ರ ಮೃಗಾಲಯ ಕೇವಲ...

ಛಬ್ಬೀಸ್ ಸಂಡೆ
Published On :

ಮೈಸೂರಿಗೆ ಹೋದವರು ಅಲ್ಲಿನ ಮೃಗಾಲಯಕ್ಕೂ ತಪ್ಪದೇ ಭೇಟಿ ಕೊಡ್ತಾರೆ. ಶ್ರೀ ಚಾಮರಾಜೇಂದ್ರ ಮೃಗಾಲಯ ಕೇವಲ ಪ್ರಾಣಿಗಳ ವೀಕ್ಷಣೆಗಷ್ಟೇ ಸೀಮಿತವಾಗಿಲ್ಲ. ಪ್ರಾಣಿಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಹಾಗೇ ವಿದ್ಯಾರ್ಥಿಗಳಲ್ಲಿ ವನ್ಯಜೀವಿ ಹಾಗೂ ಪರಿಸರ ಬಗ್ಗೆ ಕಾಳಜಿ, ಅರಿವು ಮೂಡಿಸುವ ಸಲುವಾಗಿ ಯೂತ್ ಕ್ಲಬ್ 20 ವರ್ಷಗಳಿಂದ ನಡೆಸಿಕೊಂಡು ಬರುತ್ತಿದೆ. 1,200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.

26 ಭಾನುವಾರ
ಮೈಸೂರಿನ ವಿವಿಧ ಶಾಲಾ-ಕಾಲೇಜುಗಳಿಂದ 12ರಿಂದ 18 ವರ್ಷ ವಯೋಮಿತಿಯ 60 ವಿದ್ಯಾರ್ಥಿಗಳನ್ನು ಕ್ಲಬ್ ಸದಸ್ಯರಾಗಿ ಆಯ್ಕೆ ಮಾಡಿಕೊಂಡು 26 ಭಾನುವಾರ ಬೆಳಗ್ಗೆ 9.30ರಿಂದ ಮಧ್ಯಾಹ್ನ 1.30 ರವರೆಗೆ ತರಬೇತಿ ನೀಡಲಾಗುತ್ತದೆ. ಸದಸ್ಯರನ್ನು ಮೃಗಾಲಯ ವೀಕ್ಷಕರೊಡನೆ ಸಂವಾದಿಸಲು, ವೀಕ್ಷಕರು ಮೃಗಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉತ್ತಮ ರೀತಿಯಲ್ಲಿ ವರ್ತಿಸಲು ಹುರಿದುಂಬಿಸಲಾಗುತ್ತದೆ.

ಪ್ರಾಣಿ ಜಗತ್ತು
ಕ್ಷೇತ್ರ ಕಾರ್ಯ ಜತೆಯಲ್ಲಿ ಖ್ಯಾತ ಸಂಪನ್ಮೂಲ ವ್ಯಕ್ತಿಗಳು, ಜೀವಶಾಸ್ತ್ರಜ್ಞರು, ಪರಿಸರ ತಜ್ಞರು, ವಿಜ್ಞಾನಿಗಳಿಂದ ಉಪನ್ಯಾಸ ಏರ್ಪಡಿಸಲಾಗುತ್ತದೆ. ವನ್ಯಜೀವಿಗಳ ಕುರಿತ ಚಲನಚಿತ್ರ ಪ್ರದರ್ಶನ, ಆನೆಗಳಿಗೆ ಆಹಾರ ನೀಡುವಿಕೆ ಮತ್ತು ಸ್ನಾನ ಮಾಡಿಸುವಿಕೆ, ಮೃಗಾಲಯಲ್ಲಿ ಸಂಭವಿಸಬಹುದಾದ ವಿಧ್ವಂಸಕ ಕೃತ್ಯಗಳು, ವೀಕ್ಷಕರೊಂದಿಗೆ ಸಂವಾದ, ಮೃಗಾಲಯ ಗಸ್ತು ತಿರುಗುವಿಕೆ, ಪ್ರಾಣಿ ವರ್ತನೆಯ ಅಧ್ಯಯನ, ಯೋಜನೆಗಳ ತಯಾರಿಕೆ, ಮಂಡಿಸುವಿಕೆ, ಕಾರ್ಯಭಾರ ಮುಂತಾದವುಗಳ ಬಗ್ಗೆ ಸದಸ್ಯರಿಗೆ ವಿವರಣೆನೀಡಲಾಗುತ್ತದೆ.

ವನ್ಯಜೀವಿಗಳ ಅಧ್ಯಯನ
ಪಕ್ಷಿಗಳನ್ನು ಗುರುತಿಸುವಿಕೆ, ಪ್ರಾಣಿಗಳ ಮುಖವಾಡ ತಯಾರಿಕೆ, ಪ್ರಾಣಿಗಳ ಹೆಜ್ಜೆ ಗುರುತುಗಳ ಮಾದರಿಯನ್ನು ಪಡೆದು ಅಭ್ಯಾಸ ಮಾಡಿಸುವುದು. ಝೂ ಉಗ್ರಾಣ, ಎರೆಹುಳು ಗೊಬ್ಬರ ತಯಾರಿಕಾ ಘಟಕ, ತೋಟಗಾರಿಕೆ ಘಟಕಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯ ವೈಖರಿ ಬಗ್ಗೆ ತಿಳಿಸುವುದು. ಜತೆಗೆ ವಿದ್ಯಾರ್ಥಿಗಳನ್ನು ಯಾವುದಾದರೂ ರಾಷ್ಟ್ರೀಯ ಉದ್ಯಾನ, ಚಾಮುಂಡಿಬೆಟ್ಟ, ಕಾರಂಜಿ ಕೆರೆ ಪ್ರಕೃತಿ ಉದ್ಯಾನ, ರಂಗನತಿಟ್ಟು ಪಕ್ಷಿಧಾಮ ಮತ್ತು ಪ್ರಾದೇಶಿಕ ವಿಜ್ಞಾನ ಸಂಗ್ರಹಾಲಯಕ್ಕೆ ಕರೆದೊಯ್ದು ಅರಿವು ಮೂಡಿಸಲಾಗುತ್ತದೆ.
ಈ ಮೂಲಕ ಮೃಗಾಲಯವೂ ವನ್ಯಜೀವಿ ಮತ್ತು ಪರಿಸರ ವಿಷಯ ಕುರಿತ ಒಂದು ಕಲಿಕಾ ಕೇಂದ್ರವಾಗಿದ್ದು, ಪ್ರತಿ ವರ್ಷ ಹೆಚ್ಚು ವಿದ್ಯಾರ್ಥಿಗಳು ಆಸಕ್ತಿ ವಹಿಸಿ ಸಂಘಟನೆಯ ಸದಸ್ಯರಾಗುತ್ತಿದ್ದಾರೆ. ನೋಂದಾಯಿತ ಈ ಸದಸ್ಯರಿಗೆ ಟಿ ಶರ್ಟ್, ಟೋಪಿ, ಬ್ಯಾಗ್, ವಿವರಣಾ ಪುಸ್ತಕ ಮತ್ತು ಇತರೆ ಅಧ್ಯಯನ ವಸ್ತುಗಳನ್ನು ಒದಗಿಸಲಾಗುತ್ತದೆ.

ಉದ್ದೇಶವೇನು?
ಶಿಕ್ಷಣ, ಸಂಶೋಧನೆ, ಅಪಾಯದಂಚಿನಲ್ಲಿರುವ ಪ್ರಾಣಿಗಳ ವಂಶಾಭಿವೃದ್ಧಿ, ಸಂರಕ್ಷಣೆ ಇತ್ಯಾದಿ ವಿಚಾರಗಳನ್ನು ಯುವ ಪೀಳಿಗೆಯ ಮನದಾಳದಲ್ಲಿ ತುಂಬುವುದರ ಜತೆಗೆ ವನ್ಯಜೀವಿ ಮತ್ತು ಪರಿಸರ ಬಗ್ಗೆ ಕಾಳಜಿಯನ್ನು ಸೃಷ್ಟಿಸಲು, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಲು ಪ್ರಾಮಾಣಿಕ ಪ್ರಯತ್ನ ಮಾಡಲು ಈ ಸಂಘಟನೆಯನ್ನು ಆರಂಭಿಸಲಾಗಿದೆ. ಆಸಕ್ತರು ಮೈಸೂರು ಮೃಗಾಲಯವನ್ನು ದೂರವಾಣಿ (0821) 2440752 ಮೂಲಕ ಸಂಪರ್ಕಿಸಬಹುದು.

- ಅಂಶಿ ಪ್ರಸನ್ನಕುಮಾರ್
ಚಿತ್ರ:  ಎಸ್. ಮಂಜುನಾಥ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.