ಥಂಡಿ ಸಡಕ್

ನೀವು ನಡೆದಾಡುವ ರಸ್ತೆ ಕೂಲ್ ಆಗಿದ್ದರೆ, ಚಳಿ ಚಳಿ ವಾತಾವರಣ ಇದ್ದರೆ, ಕಣ್ಣು ಹಾಯಿಸಿದಷ್ಟು ದೂರ ಹಸಿರೇ ಕಾಣುತ್ತಿದ್ದರೆ... ಹೀಗೆ ಕಲ್ಪಿಸಿಕೊಳ್ಳುವುದಕ್ಕೆ ಚೆನ್ನ. ಆದರೆ ಸಾಧ್ಯವಾ? ಎಂಬ ಪ್ರಶ್ನೆಯೂ ಉದ್ಭವಿಸದೇ ಇರದು. ಆದರೆ ಅಂಥದ್ದೊಂದು ರಸ್ತೆಯೂ ಇದೆ. ಅದೂ ಮೈಸೂರಿನಲ್ಲಿ.
ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಥಂಡಿ ಸಡಕ್ ಹೆಸರಿನ ಹಚ್ಚ ಹಸಿರಿನ ಚಪ್ಪರದ ರಸ್ತೆ ಇದೆ. ಅಲ್ಲಿ ನಡೆದರೆ ತಂಪು ತಂಪು. ಮನಕ್ಕೆ ಆಹ್ಲಾದಕರ ವಾತಾವರಣ.
ಮೃಗಾಲಯದ ಪಕ್ಕದಲ್ಲಿ ಲೋಕರಂಜನ್ ಮಹಲ್ ಹೆಸರಿನ ರಾಜರಿಗೆ ಸೇರಿದ ಅರಮನೆ ಇತ್ತು. ಅಲ್ಲಿಂದ ಮಹಾರಾಜರು ಈಗಿನ ಮೃಗಾಲಯ ಆವರಣದಲ್ಲಿರುವ ಥಂಡಿ ಸಡಕ್ ಮೂಲಕ ಬೇಸಿಗೆ ಅರಮನೆವರೆಗೆ ವಾಯುವಿಹಾರಕ್ಕೆ ತೆರಳುತ್ತಿದ್ದರು. ಕೆಲವೊಮ್ಮೆ ಈ ಮಾರ್ಗದಲ್ಲಿ ಕುದುರೆ ಗಾಡಿಯಲ್ಲಿ ಕೂಡ ಹೋಗುತ್ತಿದ್ದರು.
ಮೈಸೂರು ಮೃಗಾಲಯಕ್ಕೆ ಪ್ರತಿದಿನ ದೇಶ- ವಿದೇಶಗಳ ಸಹಸ್ರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಹೆಚ್ಚಿನ ಮಂದಿ ಥಂಡಿಸಡಕ್‌ನಲ್ಲಿ ಓಡಾಡುತ್ತಾ ಖುಷಿ ಪಡುತ್ತಾರೆ. ಆ ರಸ್ತೆಗುಂಟ ತಂಪಾದ ವಾತಾವರಣ ಇರುವುದಕ್ಕೆ ಸಂತಸ ಪಡುತ್ತಾರೆ. ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಈ ಥಂಡಿ ಸಡಕ್ ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯಲ್ಲಿ ನಿರ್ಮಾಣವಾಗಿದ್ದು. ಮೈಸೂರು ಮೃಗಾಲಯವನ್ನು 1892ರಲ್ಲಿ ಆರಂಭಿಸಿದ್ದು ಮಹಾರಾಜರಾಗಿದ್ದ ಚಾಮರಾಜ ಒಡೆಯರ್ ಅವರೇ. ಹೀಗಾಗಿ ಇದಕ್ಕೆ ಶ್ರೀ ಚಾಮರಾಜೇಂದ್ರ ಮೃಗಾಲಯ ಎಂಬ ಹೆಸರು ಬಂದಿದೆ. ಮಮ್ಮುಡಿ ಕೃಷ್ಣರಾಜ ಒಡೆಯರ್ ಅವರು ನಿರ್ಮಿಸಿದ್ದ ಬೇಸಿಗೆ ಅರಮನೆಯ ಪಕ್ಕದಲ್ಲಿ ಆರಂಭದಲ್ಲಿ 10 ಎಕರೆ ಪ್ರದೇಶದಲ್ಲಿ ಖಾಸಗಿಯಾಗಿ ಮೃಗಾಲಯ ಆರಂಭಿಸಲಾಗಿತ್ತು. ಹೀಗಾಗಿಯೇ ಇದಕ್ಕೂ ಹಳೆಯ ಮೈಸೂರಿಗರು ಖಾಸ್ ಬಂಗ್ಲೆ ಎಂದೇ ಕರೆಯುತ್ತಿದ್ದರು. ನಂತರ ಇದನ್ನು 45 ಎಕರೆಗೆ ವಿಸ್ತರಿಸಲಾಯಿತು. 1902ರಿಂದ ಸಾರ್ವಜನಿಕರಿಗೆ ಮುಕ್ತವಾಯಿತು.
ಆಧುನಿಕ ಮೈಸೂರಿನ ಶಿಲ್ಪಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು. ಅವರ ಕಾಲದಲ್ಲಿಯೇ ದೊಡ್ಡ ದೊಡ್ಡ ರಸ್ತೆಗಳು, ಕಟ್ಟಡಗಳೊಂದಿಗೆ ಮೈಸೂರು ಯೋಜಿತ ನಗರವಾಗಿ ರೂಪುಗೊಂಡಿತು. ಅವರ ಕಾಲದಲ್ಲಿ ನಿರ್ಮಾಣವಾದ ಹಲವಾರು ಕಟ್ಟಡಗಳು ಈಗ ಸಾರ್ವಜನಿಕ ಉಪಯೋಗಿ ಕಟ್ಟಡಗಳಾಗಿವೆ. ಆಗಲೇ ಥಂಡಿ ಸಡಕ್ ನಿರ್ಮಾಣವಾಗಿದ್ದು. ಹಸಿರು ಬಳ್ಳಿಗಳನ್ನು ಈ ರಸ್ತೆಗುಂಟ ಬೆಳೆಸಲಾಗಿದೆ.
ಡಾ. ಎಂ.ಎಚ್. ಮರೀಗೌಡರು ತೋಟಗಾರಿಕೆ ಇಲಾಖೆ ನಿರ್ದೇಶಕರಾಗಿದ್ದಾಗ ಮೃಗಾಲಯಕ್ಕೆ ನೀಡಿರುವ 45 ಎಕರೆ ಜಾಗ ಸಾಲದು ಎಂದರು. ಅದರಂತೆ ಅದನ್ನು 245 ಎಕರೆಗೆ ವಿಸ್ತರಿಸಲಾಯಿತು. ಹೀಗಾಗಿ ರಾಜಮಹಾರಾಜರ ಕಾಲದ ಥಂಡಿ ಸಡಕ್ ಈಗಿನ ಮೃಗಾಲಯದ ಒಳಾವರಣಕ್ಕೆ ಸೇರ್ಪಡೆಯಾಯಿತು. ಥಂಡಿ ಸಡಕ್ ಮಾರ್ಗದಲ್ಲಿ ಹಸಿರು ಬಳ್ಳಿಯ ಜೊತೆಗೆ ಬೊಗನ್‌ವಿಲ್ಲಾ ಕೂಡ ಬೆಳೆಸಲಾಗಿದೆ. ಇಲ್ಲಿ ಹಲವಾರು ಚಿತ್ರಗಳ ಚಿತ್ರೀಕರಣ ಕೂಡ ನಡೆದಿದೆ. ಈ ರಸ್ತೆ 417 ಮೀಟರ್ ಉದ್ದ ಮತ್ತು ಕಂಬಗಳ ಎತ್ತರ 340 ಮೀಟರ್ ಇದೆ. ಒಟ್ಟಾರೆ 166 ಕಂಬಗಳಿವೆ. ಮೃಗಾಲಯಕ್ಕೆ ಭೇಟಿ ನೀಡುವವರಿಗೆ ಈ ಥಂಡಿ ಸಡಕ್ ಅಚ್ಚುಮೆಚ್ಚಿನ ತಾಣ. ಅದರಲ್ಲಂತೂ ಬೇಸಿಗೆಯಲ್ಲಿ ಹೆಚ್ಚು ಜನರು ಇಲ್ಲಿ ಕೂರುತ್ತಾರೆ. ಮಕ್ಕಳಂತೂ ಇಲ್ಲಿಂದ ಕದಲುವುದಿಲ್ಲ. ನೀವು ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿ, ಥಂಡಿ ಸಡಕ್‌ನಲ್ಲಿ ಓಡಾಡದಿದ್ದಲ್ಲಿ ಮತ್ತೆ ಭೇಟಿ ನೀಡಿದಾಗ ಈ ರಸ್ತೆಯಲ್ಲಿ ಓಡಾಡುವುದನ್ನು, ಕಾಲ ಕಳೆಯುವುದನ್ನು ಮರೆಯಬೇಡಿ.
-ಅಂಶಿ ಪ್ರಸನ್ನಕುಮಾರ್
ಚಿತ್ರ: ಎಸ್. ಮಂಜುನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


