ಅಗಿ ಕಲ್ಚರ್

'ಹಸಿರೇ ಉಸಿರು' ಎನ್ನುವ ಮಾತು ಈ ಗ್ರಾಮಗಳ ಜನತೆ ಬರೀ ಮಾತಲ್ಲೇ ಹೇಳಿಲ್ಲ. ಬದಲಾಗಿ ಕೈಯಲ್ಲಿ ಮಾಡಿ ತೋರಿಸಿದ್ದಾರೆ. ಅಗಿ (ಸಸಿ)ಗಳನ್ನು ಹಿಡಿದು ಜಾಗ ಸಿಕ್ಕಲ್ಲೆಲ್ಲ ನೆಟ್ಟು ನಾಡನ್ನೇ ಕಾಡು ಮಾಡಿದ್ದಾರೆ. ಬಯಲನ್ನು ಹಸಿರಿನಿಂದ ಬೆಳಗಿದ್ದಾರೆ. ಭೂದೇವಿಗೆ ಹಚ್ಚ ಹಸುರಿನ ಸಿರಿಮುಡಿ ಮುಡಿಸಿ ಸಂಭ್ರಮಿಸಿದ್ದಾರೆ. ಇಷ್ಟರ ಮಟ್ಟಿಗೆ ಇಲ್ಲಿನ ಅನ್ನದಾತರು ನಾಡಿಗೆ, ದೇಶಕ್ಕೇ ಮಾದರಿ.
ಹೌದು. ಧಾರವಾಡ ತಾಲೂಕು ಬೆನಕಟ್ಟಿ, ನಿಗದಿ, ಮುಗದ ಮತ್ತು ಮಂಡಿಹಾಳ ಎಂಬ ಪುಟ್ಟ ಹಳ್ಳಿಗಳನ್ನು ಒಂದೇ ಒಂದು ಸುತ್ತು ಹಾಕಿ ಬಂದರೆ, ಇಲ್ಲವೇ ಈ ಗ್ರಾಮಗಳ ಬಳಿ ಇರುವ ಗುಡ್ಡವನ್ನು ಹತ್ತಿ ಕಣ್ಣು ಹಾಯಿಸಿದರೆ ಇಂಥದೊಂದು ಹಸಿರಿನ ತಂಪು ತಂಪು ಅನುಭವ ಆಗುತ್ತದೆ. ಬರೋಬ್ಬರಿ 18 ಸಾವಿರ ಮರಗಳನ್ನು ಬೆಳೆದ ಅನ್ನದಾತರ ಕೈಗಳಿಗೆ ಅದೆಷ್ಟು ಕೃತಜ್ಞತೆ ಸಲ್ಲಿಸುವುದು ಎನ್ನುವ ಋಣಬಾರದ ಮಾತು ಒಳಗಿನಿಂದ ಒದ್ದುಕೊಂಡು ಬರುತ್ತದೆ.
ತಲೆ ಎತ್ತಿ ನಿಂತಿರುವ ಸ್ಥಳೀಯವಾಗಿ ಸಿಗುವ ವಿವಿಧ ತಳಿಯ ಮರಗಳನ್ನು ನೋಡುವುದೇ ಕಣ್ಣಿಗೊಂದು ಹಬ್ಬವಾಗುತ್ತಿದ್ದರೆ, ಇಂಥ ಸಾಧನೆಗೆ ಅನ್ನದಾತರು ನಾಮಕರಣ ಮಾಡಿದ್ದು ಕೂಡ ಅಗಿ ಹಬ್ಬ. ಪ್ರತಿ ವರ್ಷ ಜೂನ್, ಜುಲೈ ತಿಂಗಳಲ್ಲಿ ಹದವಾದ ಮಳೆ ಸುರಿಯುತ್ತಿದ್ದಂತೆ ಈ ನಾಲ್ಕೂ ಗ್ರಾಮಗಳ ವೃದ್ಧರು, ಮಹಿಳೆಯರು, ಮಕ್ಕಳು ಎನ್ನುವ ಭೇದವಿಲ್ಲದೇ ಒಟ್ಟಾಗಿ ಸಸಿ ನೆಟ್ಟು ಅಗಿ ಹಬ್ಬ ಆಚರಿಸುತ್ತಾ ಬಂದಿದ್ದಾರೆ. ಕಳೆದ ಜುಲೈ ಅಂತ್ಯದಲ್ಲೂ ಈ ಅಗಿ ಹಬ್ಬವನ್ನು ಅಷ್ಟೇ ಸಂಭ್ರಮದಿಂದ ಆಚರಿಸಿದರು.
ಗ್ರಾಮಗಳ ವ್ಯಾಪ್ತಿಯಲ್ಲಿ ಇರುವ ಸರ್ಕಾರಿ ಭೂಮಿ, ಗೋಮಾಳ, ಅರಣ್ಯ, ಹಾಳು ಬಿದ್ದಿರುವ ಖಾಸಗಿ ಜಮೀನು, ಕೆರೆಯ ದಂಡೆ ಇತ್ಯಾದಿ ಸ್ಥಳಗಳಲ್ಲಿ ಬೇಸಿಗೆ ಸಂದರ್ಭದಲ್ಲಿಯೇ ಜೆಸಿಬಿ, ಟ್ರ್ಯಾಕ್ಟರ್ ಮೂಲಕ ಗುಂಡಿ ತೋಡಿಸಿರುತ್ತಾರೆ. ಮುಂಗಾರು ಆರಂಭದಲ್ಲಿ ನಾಲ್ಕು ಮಳೆಗಳು ಹದವಾಗಿ ಸುರಿಯುತ್ತಿದ್ದಂತೆ ಆ ಗುಂಡಿಗಳಲ್ಲಿ ತುಸು ಗೊಬ್ಬರದೊಂದಿಗೆ ಅಗಿಗಳನ್ನು ನೆಡುತ್ತಾರೆ. ಸಾಮೂಹಿಕವಾಗಿ ಇವರೆಲ್ಲ ಆಚರಿಸುವ 'ಅಗಿ ಹಬ್ಬ' ನಿಜಕ್ಕೂ ಯಾವುದೇ ಹಬ್ಬ-ಹರಿದಿನಗಳಿಗೆ ಸಾಟಿ ಇಲ್ಲದ ಸಂಭ್ರಮ ಉಕ್ಕಿಸುತ್ತದೆ.
90ಕ್ಕೂ ಹೆಚ್ಚು ರೈತರು ಸ್ಕೋಪ್ ಸಂಸ್ಥೆ ಮತ್ತು ಅರಣ್ಯ ಇಲಾಖೆಯವರ ಸಹಾಯದಿಂದ 18 ಸಾವಿರಕ್ಕೂ ಹೆಚ್ಚು ಕಾಡು ಗಿಡಗಳನ್ನು ತಮ್ಮ ಹೊಲಗಳಲ್ಲಿ ಸಮಗ್ರ ಕೃಷಿಯ ಭಾಗವಾಗಿ ನೆಟ್ಟಿದ್ದಾರೆ ಎಂದರೆ ಸಣ್ಣ ಮಾತೇನಲ್ಲ.
ಹೀಗಿರುತ್ತೆ ಅಗಿ ಹಬ್ಬ
ಹದವಾದ ಮಳೆ ಸುರಿಯುತ್ತಿದ್ದಂತೆ ಅಗಿ ಹಬ್ಬಕ್ಕೆ ದಿನ ಗೊತ್ತು ಮಾಡಿ ನಾಲ್ಕೂ ಗ್ರಾಮಗಳಲ್ಲಿ ಡಂಗುರ ಸಾರಲಾಗುತ್ತದೆ. ಅಂದು ಮಳೆ ಇರಲಿ, ಬಿಸಿಲಿರಲಿ ಯಾವುದನ್ನೂ ಲೆಕ್ಕಿಸದೇ ಅನ್ನದಾತರ ಮ್ಯಾಳ ಮನೆಗಳನ್ನು ಬಿಟ್ಟು ದಂಡಿಯಾಗಿ ಹೊರಗೆ ಬರುತ್ತದೆ. ಸುಮಂಗಲೆಯರು ಆರತಿ ತಟ್ಟೆಯೊಂದಿಗೆ ಬಂದರೆ, ಯುವಕರು ವಿವಿಧ ವಾದ್ಯಗಳನ್ನು ನುಡಿಸುತ್ತ ಸಾಗುತ್ತಾರೆ. ವಾದ್ಯ, ಓಲಗ, ಆರತಿಯೊಂದಿಗೆ ಸಾಗುವ ಈ ಗ್ರಾಮಸೈನ್ಯ ನಿಗದಿತ ಪ್ರದೇಶಕ್ಕೆ ಬಂದು ತಲುಪುತ್ತದೆ.
ಈ ಅಗಿ ಹಬ್ಬದಲ್ಲಿ ಭಾಗಿಯಾದ ಎಲ್ಲರಿಗೂ ಸುಮಂಗಲೆಯರು ಹಸಿರು ಕಂಕಣ ಕಟ್ಟಿ, ಅಲ್ಲಿ ಸಾಲಾಗಿ ಇಟ್ಟಿರುವ ಸಸಿ (ಅಗಿ)ಗಳಿಗೆ ಪೂಜೆ ಸಲ್ಲಿಸುತ್ತಾರೆ. ಆಗ ಧಾರವಾಡದ ಸ್ಕೋಪ್ ಸಂಸ್ಥೆಯ ಮುಖ್ಯಸ್ಥ ಮತ್ತು ಈ ಅಗಿ ಹಬ್ಬದ ರೂವಾರಿ ಡಾ.ಪ್ರಕಾಶ್ ಭಟ್ ಎಲ್ಲರ ಕೈಯಲ್ಲಿ ಅಗಿಗಳನ್ನು ಇಟ್ಟು ಹಸಿರನ್ನು ಕಾಪಾಡುವ, ಪ್ರತಿವರ್ಷ ಕನಿಷ್ಟ 10 ಗಿಡಗಳನ್ನಾದರೂ ನೆಟ್ಟು ಪೋಷಿಸುತ್ತೇನೆ ಎನ್ನುವ ಪ್ರತಿಜ್ಞಾವಿಧಿ ಬೋಧಿಸುತ್ತಾರೆ. ವನದೇವತೆಯ ಪೂಜೆ ಮತ್ತು ರೈತಗೀತೆಯೊಂದಿಗೆ ಈ ಅಗಿ ಹಬ್ಬ ಶುರುವಾಗುತ್ತದೆ.
ಬಳಿಕ ಶುರುವಾಗುವುದೇ ನಿಜವಾದ ಹಸಿರು ಆರಾಧನೆ. ನಾ ಮುಂದು, ತಾ ಮುಂದು ಎಂದು ಕೈಯಲ್ಲಿದ್ದ ಸಸಿಗಳನ್ನು ಪ್ರೀತಿಯಿಂದ ಶಿಸ್ತುಬದ್ಧವಾಗಿ ನೆಡುತ್ತಾರೆ. ವಯಸ್ಸು, ಬಳಲಿಕೆಯನ್ನು ಮರೆತು ಎಲ್ಲರೂ ಸಂಭ್ರಮಿಸುತ್ತಾರೆ. ಹಸಿರು ಬೆಳೆಸುವ ಮೂಲಕ ಸೃಷ್ಟಿಯ ಆರಾಧನೆ ಮಾಡುವ ಈ ಅನ್ನದಾತರ ಹಸಿರು ಕೈಂಕರ್ಯ ನಿಜಕ್ಕೂ ಮಾದರಿ.
ಸಸಿ ನೆಟ್ಟ ಕೈಗಳಿಗೆ ಬಿಸಿಯೂಟ
ನಮ್ಮ ಸಂಸ್ಕೃತಿಯಲ್ಲಿ ಸಾಮೂಹಿಕ ಭೋಜನಕ್ಕೆ ಎಲ್ಲಿಲ್ಲದ ಗೌರವ ಮತ್ತು ಮಹತ್ವ ಇದೆ. ಎಲ್ಲ ಎಲ್ಲೆಗಳನ್ನು ಮೀರಿ ಮಾನವೀಯ ಸಂಬಂಧ ಬೆಸೆಯುವ ಸಾಮೂಹಿಕ ಭೋಜನ ಈ ಅಗಿ ಹಬ್ಬದ ಪ್ರಮುಖ ಅಂಗವಾಗಿದೆ.
ತಲಾ 10 (ಹೆಚ್ಚು ಸಸಿಗಳನ್ನು ನೆಡಲು ಅವಕಾಶವಿದೆ) ಅಗಿಗಳನ್ನು ನೆಡುವ ಕಾರ್ಯ ಸಾಂಗವಾಗುತ್ತಿದ್ದಂತೆ ಇತ್ತ ಆರೇಳು ಜನ ಪುರುಷರು ಬಾಣಸಿಗ ಕಾರ್ಯಕ್ಕೆ ಸಿದ್ಧರಾಗಿರುತ್ತಾರೆ. ಊರಿಂದ ಹೊತ್ತು ತಂದ ಪಾತ್ರೆಗಳಲ್ಲಿ ಸಿಹಿ, ಪಲ್ಯ, ಅನ್ನ, ಸಾರು ಇತ್ಯಾದಿಗಳನ್ನು ಸ್ಥಳದಲ್ಲಿಯೇ ತಯಾರಿಸುತ್ತಾರೆ. ಎಲ್ಲರೂ ಸಾಮೂಹಿಕವಾಗಿ ಪಂಕ್ತಿಗಳಲ್ಲಿ ಕುಳಿತುಕೊಂಡು ಸುಮಾರು ಹೊತ್ತು ಪ್ರಾರ್ಥನೆ ಗೀತೆಗಳನ್ನು ಹಾಡುತ್ತಾರೆ. ಭೂದೇವಿ, ಅನ್ನಪೂರ್ಣೇಶ್ವರಿಯರನ್ನು ಮನತುಂಬಿ ಸ್ಮರಿಸುತ್ತಾರೆ. ನಂತರ ಊಟ ಸವಿಯುತ್ತಾರೆ.
- ಮಲ್ಲಿಕಾರ್ಜುನ ಸಿದ್ದಣ್ಣವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


