ಕೃಷಿ-ಪರಿಸರ

ಫ್ಲೆಕ್ಸ್ ಪ್ರಾಬ್ಲಂ!

40 ಮೈಕ್ರಾನ್ಗಳಿಗಿಂತ ಕಡಿಮೆಯ ಪ್ಲಾಸ್ಟಿಕ್ ಹಾಳೆಗಳಲ್ಲಿ ತಯಾರಿಸಿದ ಕ್ಯಾರಿಬ್ಯಾಗ್ಗಳನ್ನು ಕೆಲವು ಸ್ಥಳೀಯ ಸಂಸ್ಥೆಗಳು ನಿಷೇಧಿಸಿವೆ.

ಫ್ಲೆಕ್ಸ್ ಪ್ರಾಬ್ಲಂ!
Published On :

ಈ ಪ್ಲಾಸ್ಟಿಕ್ ಬಳಕೆಯ ಅನಾಹುತಗಳು ಬರೆದಷ್ಟೂ ಮುಗಿಯದ ಕಥೆ. 40 ಮೈಕ್ರಾನ್ಗಳಿಗಿಂತ ಕಡಿಮೆಯ ಪ್ಲಾಸ್ಟಿಕ್ ಹಾಳೆಗಳಲ್ಲಿ ತಯಾರಿಸಿದ ಕ್ಯಾರಿಬ್ಯಾಗ್ಗಳನ್ನು ಕೆಲವು ಸ್ಥಳೀಯ ಸಂಸ್ಥೆಗಳು ನಿಷೇಧಿಸಿವೆ. ಆದರೆ ಇಂತಹ ಆದೇಶಗಳು ಜಾರಿಯಾದಂತೆ ಕಾಣುವುದಿಲ್ಲ. ಈ ರೀತಿಯ ಕ್ಯಾರಿಬ್ಯಾಗ್ಗಳನ್ನು ಗುರುತಿಸುವ ಬಗೆಗೆ ಜನಸಾಮಾನ್ಯರನ್ನು ಎಚ್ಚರಿಸುವ ಪ್ರಚಾರವನ್ನೂ ಸರ್ಕಾರಿ ಸಂಸ್ಥೆಗಳು ಮಾಡಿಲ್ಲ. ಪರಿಸರವಾದಿಗಳ ಒತ್ತಡಕ್ಕೆ ಮಣಿದು ಹೊರಡಿಸುವ ಇಂತಹ ಆದೇಶಗಳನ್ನು ಜಾರಿಗೊಳಿಸುವ ಉದ್ದೇಶವೇ ಸರ್ಕಾರಕ್ಕೆ ಇದ್ದಂತಿಲ್ಲ.
ಇತ್ತೀಚೆಗೆ ತೀರಾ ಅತಿರೇಕವೆನಿಸುವ ಮಟ್ಟಕ್ಕೆ ಮುಟ್ಟಿರುವ ಮತ್ತೊಂದು ಪ್ಲಾಸ್ಟಿಕ್ ಬಳಕೆಯೆಂದರೆ ಫ್ಲೆಕ್ಸ್ಗಳದ್ದು. ಹಿಂದೆಲ್ಲಾ ಬಟ್ಟೆಯನ್ನು ಉಪಯೋಗಿಸಿ ಬ್ಯಾನರ್ಗಳನ್ನು ಬರೆಯುವುದು ಒಂದು ಕಲೆಯಾಗಿತ್ತು. ಅದು ಸ್ವಲ್ಪ ದುಬಾರಿಯಾದರೂ ಪರಿಸರಕ್ಕೆ ಹಾನಿ ಮಾಡುತ್ತಿರಲಿಲ್ಲ. ಆದರೆ ಫ್ಲೆಕ್ಸ್ಗಳನ್ನು ಬ್ಯಾನರ್ ಮತ್ತು ಹೋರ್ಡಿಂಗ್ಗಳಿಗಾಗಿ ಬಳಸಲು ಶುರುಮಾಡಿದ ಮೇಲೆ ಚಿತ್ರಣ ಸಂಪೂರ್ಣ ಬದಲಾಗಿದೆ. ಇದು ಅಗ್ಗ ಮತ್ತು ಅತಿ ಕಡಿಮೆ ಸಮಯದಲ್ಲಿ, ಅತಿ ವೈವಿಧ್ಯಮಯವಾದ ಬ್ಯಾನರ್ಗಳನ್ನು ತಯಾರಿಸಲು ಸಹಕಾರಿಯಾಗಿದೆ. ಹಾಗಾಗಿ ನಾವು ಇವುಗಳ ಬಳಕೆಯ ಔಚಿತ್ಯವನ್ನೇ ಮರೆತಿದ್ದೇವೆ. ಯಾರದ್ದೋ ಸ್ವಾಗತ, ಯಾವ್ಯಾವುದೋ ಕಾರ್ಯಕ್ರಮಗಳು, ಹುಟ್ಟುಹಬ್ಬದ ಶುಭಾಶಯ-ಹೀಗೆ ಬ್ಯಾನರ್ಗಳನ್ನು ಎಲ್ಲ ನಗರಗಳಲ್ಲಿ ಕಾಣಬಹುದು. ರಾಜಕಾರಣಿಗಳ ಹಿಂಬಾಲಕರು ಮತ್ತು ಧರ್ಮಾಧಿಕಾರಿಗಳ ಭಕ್ತವೃಂದ ತಮ್ಮ ಧಣಿಗಳನ್ನು ಖುಷಿಯಾಗಿಸಲು ಬಳಸುವ ಈ ಫ್ಲೆಕ್ಸ್, ಬ್ಯಾನರ್ಗಳಂತೂ ನಾಗರಿಕ ಸಮಾಜದ ಸೌಜನ್ಯ ಮೀರಿರುತ್ತದೆ. ಇಂತಹ ಬ್ಯಾನರ್ಗಳು ಹೆಚ್ಚಾಗಿದ್ದಷ್ಟೂ ಹೆಚ್ಚು ಸಂತೋಷಪಡುವ ಇವರ ಮನಸ್ಥಿತಿಗೆ ಏನು ಹೇಳೋಣ?
ಇತ್ತೀಚೆಗೆ ಹತ್ತಿರದ ಕಾಲೇಜಿನಲ್ಲಿ ಪರಿಸರ ಸಂರಕ್ಷಣೆ ಬಗೆಗೆ ನಡೆಯುತ್ತಿದ್ದ ಒಂದು ಚರ್ಚೆಯನ್ನು ಸುಮ್ಮನೆ ಗಮನಿಸುತ್ತಿದ್ದೆ. ಅಲ್ಲಿನ ವೇದಿಕೆಯ ಮೇಲೂ ಫ್ಲೆಕ್ಸ್ ಬ್ಯಾನರ್ಗಳನ್ನು ಅಂಟಿಸಲಾಗಿತ್ತು. ಹೆಚ್ಚಿನವರಿಗೆ ಫ್ಲೆಕ್ಸ್ ಕೂಡ ಪ್ಲಾಸ್ಟಿಕ್, ಅಷ್ಟೇ ಅಲ್ಲ ತೀರಾ ಅಪಾಯಕಾರಿಯಾದ ಪ್ಲಾಸ್ಟಿಕ್ ಎನ್ನುವ ಅಂಶ ತಿಳಿದಂತಿಲ್ಲ. ಇಂತಹ ಫ್ಲೆಕ್ಸ್ಗಳನ್ನು ಒಂದೇ ಒಂದು ನಿಮಿಷ ಮೂಗಿನ ಹತ್ತಿರ ಹಿಡಿದರೆ ವಾಸನೆ ಸಹಿಸುವುದು ಎಷ್ಟು ಹಿಂಸೆ ಎನ್ನುವುದು ತಿಳಿಯುತ್ತದೆ.
ಪ್ರಸ್ತುತ ಬೆಂಗಳೂರು ಮತ್ತು ಜಿಲ್ಲಾ ಕೇಂದ್ರಗಳ ಯಾವುದೇ ವೃತ್ತ ಅಥವಾ ರಸ್ತೆಯನ್ನು ಗಮನಿಸಿದರೆ ಈ ಫ್ಲೆಕ್ಸ್ಗಳ ಹಾವಳಿ ಮಟ್ಟ ಅರಿವಾಗುತ್ತದೆ. ಬಳಸಿ ಬಿಸಾಕಿದ ನಂತರ ಮುಂದೇನಾಗುತ್ತದೆ ಎಂಬುದಕ್ಕೆ ಯಾರಲ್ಲಿಯೂ ಉತ್ತರವಿಲ್ಲ. ಇವು ಇತರ ಪ್ಲಾಸ್ಟಿಕ್ ಕಸದ ಜೊತೆ ಸೇರಿ ಇನ್ನೂ ಸಾವಿರಾರು ವರ್ಷ ನಮ್ಮ ಪರಿಸರಕ್ಕೆ ವಿಷ ತುಂಬುತ್ತಲೇ ಇರುತ್ತವೆ. ಸುಟ್ಟರೆ ಡಯಾಕ್ಸಿನ್ ಎಂಬ ಅತ್ಯಂತ ಅಪಾಯಕಾರಿ ಅನಿಲವನ್ನು ಹೊರಹಾಕಿ ಬೂದಿಯಾಗಿಯಾದರೂ ನಮ್ಮನ್ನು ನಿರಂತರ ಕಾಡುತ್ತದೆ. ನಮಗಿಂತ ಹದಿನಾಲ್ಕು ಪಟ್ಟು ಹೆಚ್ಚು ಪ್ಲಾಸ್ಟಿಕ್ ಬಳಸುವ ಅಮೆರಿಕ ಇವತ್ತು ಎಲ್ಲ ಹೊಲಸನ್ನು ಶಾಂತ ಸಾಗರಕ್ಕೆ ತುಂಬುತ್ತಿದೆ. ಇದೂ ಕೂಡ ಅತ್ಯಂತ ಭಯಾನಕ ದೂರಗಾಮಿ ಪರಿಣಾಮ ಬೀರುತ್ತದೆ. ಆದರೆ ನಾವು ಎಲ್ಲ ಹೊಲಸನ್ನೂ ನಮ್ಮ ಒಡಲಲ್ಲೇ ಇಟ್ಟುಕೊಂಡು ತಕ್ಷಣ ಅಪಾಯವನ್ನು ಆಹ್ವಾನಿಸಿಕೊಳ್ಳುತ್ತಿದ್ದೇವೆ.
ಭಾರತದಲ್ಲಿ ಅಗ್ಗವಾಗಿ ದೊರೆಯುವ ಹೆಚ್ಚಿನ ಪ್ಲಾಸ್ಟಿಕ್ಗಳು ಮರುಬಳಕೆಗಾಗಿ ಸಿದ್ಧವಾದಂಥವು. ಅಭಿವೃದ್ಧಿ ಹೊಂದಿದ ದೇಶಗಳು ಹಡಗುಗಳಲ್ಲಿ ತುಂಬಿ ಕಳಿಸುವ ಪ್ಲಾಸ್ಟಿಕ್ ಕಸವನ್ನು ನಮ್ಮಲ್ಲಿ ಅತ್ಯಂತ ಅವೈಜ್ಞಾನಿಕವಾಗಿ, ಅಪಾಯಕಾರಿ ವಿಧಾನಗಳಲ್ಲಿ ಮರುಬಳಕೆಗೆ ತಯಾರಿಸಲಾಗುತ್ತದೆ. ಹೀಗೆ ಆಮದಾದ ಪ್ಲಾಸ್ಟಿಕ್ನಲ್ಲಿ ಆಸ್ಪತ್ರೆಯಿಂದ ಹೊರಬಂದ ಕಸ, ಹೋಟೆಲ್ಗಳಲ್ಲಿ ತಿಂದು ಬಿಸಾಕಿರುವುದು, ಕಾರ್ಖಾನೆಗಳಲ್ಲಿ ಬಳಸಿರುವುದು ಮುಂತಾದ ಅತ್ಯಂತ ಹಾನಿಕಾರಕ ವಸ್ತುಗಳು ಇರುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ಮರುಬಳಕೆಗಾಗಿ ತಯಾರಾದ ಪ್ಲಾಸ್ಟಿಕ್ಗಳ ಗುಣಮಟ್ಟವನ್ನು ದೃಢೀಕರಿಸುವ ಯಾವ ವೈಜ್ಞಾನಿಕ ಮಾನದಂಡಗಳನ್ನೂ ನಾವು ಅಳವಡಿಸಿಕೊಂಡಿಲ್ಲ. ಎಲ್ಲವನ್ನೂ ನೋಟುಗಳಾಗಿ ಪರಿವರ್ತಿಸುವುದಷ್ಟೇ ನಮ್ಮ ಗುರಿ. ಇದು ನಮ್ಮನ್ನಾಳುವವರಿಂದ ಕಲಿತ ಪರಮವಿದ್ಯೆ!
ಸಂಘಟಿತ ಗುಂಪುಗಳನ್ನು-ಅವು ಎಷ್ಟೇ ಚಿಕ್ಕದಿರಲಿ ಅಥವಾ ಅಪಾಯಕಾರಿಯಾಗಿರಲಿ-ಎದುರಿಸಲು ನಮ್ಮ ಯಾವ ಸರ್ಕಾರಗಳೂ ಸಿದ್ಧವಿರುವುದಿಲ್ಲ. ಅವರಿಗೆ ಮುಂದಿನ ಚುನಾವಣೆಗಳು ಮಾತ್ರ ಗುರಿಯಾಗಿರುತ್ತದೆ. ಹಾಗಾಗಿ ನಾಗರಿಕರು ತಮ್ಮ ಮಕ್ಕಳ ಭವಿಷ್ಯದ ಬಗೆಗೆ ಚಿಂತಿಸಲೇಬೇಕಾಗಿದೆ. ಇಂತಹ ಅಪಾಯಕಾರಿಯಾದ ಮತ್ತು ಅತ್ಯಂತ ಹೊಲಸು ಪ್ಲಾಸ್ಟಿಕ್ಗಳಿಂದ ಮರುಬಳಕೆಗಾಗಿ ತಯಾರಿಸಿರುವ ವಸ್ತುಗಳನ್ನು ದೇವರಿಗಾಗಿ ಮತ್ತು ತಿಂಡಿತಿನಿಸುಗಳಿಗಾಗಿ ಬಳಕೆ ಮಾಡಲೇಬಾರದೆಂದು ಇವರೆಲ್ಲಾ ಚಳವಳಿ ಶುರುಮಾಡಿದರೆ ಜನಸಾಮಾನ್ಯರಲ್ಲಿ ಕ್ರಾಂತಿಕಾರಿ ಬದಲಾವಣೆ ತರಬಹುದು. ಪ್ಲಾಸ್ಟಿಕ್ ಬಳಕೆ ಅನಿವಾರ್ಯವಲ್ಲ, ಅವಮಾನಕರ ಎನ್ನುವ ವಾತಾವರಣದಲ್ಲಿ ಮಾತ್ರ ನಮ್ಮ ಮಕ್ಕಳಿಗೆ ಭವಿಷ್ಯವಿರುತ್ತದೆ.



ಹಾಳು ಮಾಡುವುದೇ ಅಭಿವೃದ್ಧಿ!

ಫ್ಲೆಕ್ಸ್ ಅನ್ನು ನಿಷೇಧಿಸುವ ವಿಷಯವೇನಾದರೂ ಬಂದರೆ ತಕ್ಷಣ ಅದರಿಂದ ಇರುವ ಉಪಯೋಗಗಳ ದೊಡ್ಡ ಪಟ್ಟಿಯನ್ನೇ ಮುಂದಿಡಲಾಗುತ್ತದೆ. ಜತೆಗೆ ಇದರ ತಯಾರಕರಿಂದ ಮತ್ತು ಮುದ್ರಣಾಲಯಗಳಿಂದ  ಪ್ರತಿಭಟನೆ ಇದ್ದೇ ಇರುತ್ತದೆ. ನಿಷೇಧದಿಂದ ಸಾವಿರಾರು ಜನ ನಿರುದ್ಯೋಗಿಗಳಾಗುತ್ತಾರೆ ಎನ್ನುವ ಕಣ್ಣೀರಿನ ಕಥೆಯನ್ನೂ ಹೇಳಲಾಗುತ್ತದೆ. ಆದರೆ ಫ್ಲೆಕ್ಸ್ಗಳು ಪರಿಸರಕ್ಕೆ ಮತ್ತು ಜನರ ಆರೋಗ್ಯಕ್ಕೆ ಮಾಡುವ ಹಾನಿ ಬಗೆಗೆ ಸರ್ಕಾರಗಳು ಚಿಂತಿಸುವುದೇ ಇಲ್ಲ. ಹಾಗೆ ನೋಡಿದರೆ ಕೆಲವೇ ಸಾವಿರ ಜನರಿಗಾಗಿ ಕೋಟ್ಯಂತರ ಜನರ ಭವಿಷ್ಯವನ್ನೇ ಹಾಳುಮಾಡುತ್ತಿರುವುದು ಭಾರತದ ಅಭಿವೃದ್ಧಿಯ ಕಥೆ.

-ನಡಹಳ್ಳಿ ವಸಂತ್
 nvasanth1@hotmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.