ದೈವೀ ವನ
ನೀವು ಮೈಸೂರಿಗೆ ಭೇಟಿ ನೀಡಿದಾಗ ಖಂಡಿತವಾಗಿಯೂ ಚಾಮುಂಡಿಬೆಟ್ಟಕ್ಕೆ ಹೋಗಿ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯುತ್ತೀರಿ...

-ಚಾಮುಂಡಿಯಲ್ಲಿ ವನ ಲೋಕ
ನೀವು ಮೈಸೂರಿಗೆ ಭೇಟಿ ನೀಡಿದಾಗ ಖಂಡಿತವಾಗಿಯೂ ಚಾಮುಂಡಿಬೆಟ್ಟಕ್ಕೆ ಹೋಗಿ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆಯುತ್ತೀರಿ. ಆದರೆ ಅದೇ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ದೈವಿವನಕ್ಕೆ ಹೋಗಿರಲಾರಿರಿ. ಇನ್ನು ಮುಂದೆ ಹೋದಾಗ ಮಾತ್ರ ತಪ್ಪದೇ ಭೇಟಿ ನೀಡಿ.
ರಾಜ್ಯ ಸರ್ಕಾರದ ಯೋಜನೆಯಾದ 'ದೈವಿವನ'ವನ್ನು ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಇಲ್ಲಿ ರೂಪಿಸಲಾಗಿದೆ. ಅಲ್ಲಿಗೆ ಭೇಟಿ ನೀಡಿ, ಅರಣ್ಯೀಕರಣದ ಬಗ್ಗೆ ಮಾಹಿತಿ ಪಡೆಯಿರಿ. ಸಾಧ್ಯವಾದರೆ ನಿಮ್ಮ ಅಥವಾ ನಿಮ್ಮ ಮಕ್ಕಳ ಜನ್ಮದಿನದ ನೆನಪಿಗಾಗಿ ಒಂದು ಸಸಿ ನೆಟ್ಟು ಬನ್ನಿ. ಆ ಮೂಲಕ ಅರಣ್ಯ ಇಲಾಖೆಯ ಹಸಿರೀಕರಣ ಕಾರ್ಯಕ್ರಮಕ್ಕೆ ಕೈಜೋಡಿಸಿ.
ದೈವಿವನಕ್ಕೆ ಹೋದರೆ ಚಾಮುಂಡಿಬೆಟ್ಟ ಸಸ್ಯಕ್ಷೇತ್ರ, ಚಾಮುಂಡಿ ದೈವಿವನ ಹೆಸರಿನ ಕಮಾನು ನಿಮ್ಮನ್ನು ಸ್ವಾಗತಿಸುತ್ತದೆ. ಒಳ ಹೊಕ್ಕರೆ ಗಣ್ಯರು ನೆಟ್ಟ ಗಿಡಗಳು ಕಾಣಸಿಗುತ್ತವೆ. ಮುಂದೆ ಸಾಗಿದಂತೆಲ್ಲ ಬೇವು, ಅಶೋಕ, ಸುರಗಿ, ಹೊಂಗೆ, ಹಿಪ್ಪಲಿ ಸಸಿಗಳನ್ನು ಉದ್ಯಾನ ಅಥವಾ ಮನೆ ನಿರ್ಮಾಣಕ್ಕೆ ಮುಂಚಿತವಾಗಿ ಬೆಳೆಸಿದಲ್ಲಿ ಶುಭಪ್ರದ ಎಂದು ಬರೆಸಲಾಗಿದೆ. ಅರಣ್ಯದ ಸಮೀಪ, ನದಿತೀರ, ದೇವಾಲಯ ಸುತ್ತ, ಉದ್ಯಾನಗಳಲ್ಲಿ ದೇವತೆಗಳು ರಮಿಸುತ್ತಾರೆ ಎಂದು ಬರೆಸಿ, ಅರಣ್ಯದ ಮಹತ್ವ ಸಾರಲಾಗಿದೆ. ತಗ್ಗಿನ ಪ್ರದೇಶಗಳಲ್ಲಿ ಐದು ಅಥವಾ ಏಳು ಹುಣಸೆ ಮರಗಳನ್ನು ಬೆಳೆಸಿದವನು ಸಮಸ್ತ ಪಾಪಗಳಿಂದ ಮುಕ್ತನಾಗಿ, ಭೂಮಂಡಲದಲ್ಲಿ ಇರುವವರೆಗೆ ಶ್ರೀಮಂತವಾಗಿರುತ್ತಾನೆ ಎಂದು ಬರೆಸಲಾಗಿದೆ.
ನಕ್ಷತ್ರಗಳ ವಿವರ
ನಕ್ಷತ್ರ ವನದಲ್ಲಿ ಅಶ್ವಿನಿಯೇ ಮುಂತಾದ 27 ನಕ್ಷತ್ರಗಳ ವಿವರಗಳಿವೆ. ಮಂತ್ರ ಮಹಾವರ್ಣದಲ್ಲಿ ವಿವಿಧ ನಕ್ಷತ್ರಗಳಿಗೆ ವಿವಿಧ ವನಗಳನ್ನು ಬೆಳೆಸುವ ಮಾಹಿತಿ ನೀಡಲಾಗಿದೆ. ನಕ್ಷತ್ರಗಳ ಪ್ರಕಾರ ಕಾಸರಕ, ನೆಲ್ಲಿ, ಅತ್ತಿ, ನೇರಳೆ, ಕಾಚು ಅಥವಾ ಕಗ್ಗಲಿ, ಬಿದಿರು, ಅರಳಿ, ನಾಗಸಂಪಿಗೆ, ಆಲ, ಮುತ್ತುಗ, ಬಸರಿ, ಅಮಟೆ, ಬಿಲ್ವಪತ್ರೆ, ಹೊಳೆಮತ್ತಿ, ಹಣ್ಣುಸಂಪಿಗೆ, ರಂಜಲ, ಬೂರಲ, ಶ್ರೀಗಂಧ, ಕರಿಮುತ್ತಲ, ಹಲಸು, ಎಕ್ಕ, ಬನ್ನಿ, ಕದಂಬ, ಬೇವು, ಮಾವು, ಹಿಪ್ಪೆ ಸಸಿಗಳನ್ನು ಬೆಳೆಸುವ ಸಲಹೆ ಮಾಡಲಾಗಿದೆ. ನೇರಳೆ ಮರವನ್ನು ಉದ್ಯಾನವನದಲ್ಲಾಗಲಿ ಅಥವಾ ಜಲಾಶಯಗಳ ಸಮೀಪದಲ್ಲಾಗಲಿ ನೆಟ್ಟು ಬೆಳೆಸಿದಾತ ಅಗಣಿತವಾದ ಸತ್ಫಲವನ್ನು ಪಡೆಯುತ್ತಾನೆ ಎಂದು ತಿಳಿಸಲಾಗಿದೆ.
ಅಶೋಕವನದಲ್ಲಿ ಅಶೋಕ, ಹಲಸು, ಕಕ್ಕೋಲ, ಹಿಂತಲ, ವಾಟೆ, ಕುರಂಟಿ, ಶ್ರೀಗಂಧ, ಕೆಂಡಸಂಪಿಗೆ, ತಾಳೆಮರ, ಬೆತ್ತ, ಮುತ್ತುಗ, ಬೀಟೆ, ಲವಂಗ, ಕಬ್ಬು, ಕಕ್ಕೆ, ಬೇಲ, ಬೆಟ್ಟದ ನೆಲ್ಲಿ, ಅರಳಿ, ಹಣ್ಣು ಸಂಪಿಗೆ, ನಾಗಸಂಪಿಗೆ, ರಂಜಲ, ಪಾರಲ, ದಾಲ್ಜಿನ್ನಿ, ಅತ್ತಿ, ಕಣಗಲೆ, ಎಳ್ಳು, ಚಳ್ಳೆ, ಕಸ್ತೂರಿ, ಊರಹೊನ್ನಿ, ಕರಿಮುತ್ತಲ, ಕೇದಿಗೆ, ಮಾವು, ಮರಗ, ಬೆಟ್ಟತಾವರೆ, ಸುರಭಿ ಗಿಡಗಳ ವಿವರಗಳು ಸಿಗುತ್ತವೆ. ಅಷ್ಟದಿಕ್ಪಾಲಕ ವನದಲ್ಲಿ ಬೂರಗ, ಅತ್ತಿ, ನೆಲ್ಲಿ, ಶ್ರೀಗಂಧ, ಕದಂಬ, ಕರಿಮುತ್ತುಗ, ನೇರಳೆ, ಶಿವನೆ ವಿವರ ಸಿಗುತ್ತವೆ.
ಸಸ್ಯಗಳ ಮಹತ್ವ
ನವಗ್ರಹ ವನದಲ್ಲಿ ಗ್ರಹಗಳಿಗೆ ಅನುಗುಣವಾಗಿ ಬಿಳಿ ಎಕ್ಕ, ಮುತ್ತುಗ, ಕಗ್ಗಲಿ, ಉತ್ತರಾಗಿ, ಅರಳಿ, ಅತ್ತಿ, ಬನ್ನಿ, ಗರಿಕೆ ಹಾಗೂ ದರ್ಬೆಯ ಮಹತ್ವ ತಿಳಿಸಲಾಗಿದೆ. ಪಂಚವಟಿ ವನದಲ್ಲಿ ಬಿಲ್ಪಪತ್ರೆ, ಅಶೋಕ, ಆಲ, ನೆಲ್ಲಿ, ಅರಳಿ, ಶಿವಪಂಚಾಯತ್ ವನದಲ್ಲಿ ಬಿಲ್ಪ, ತುಂಬೆ, ಅರಳಿ, ತುಳಸಿ, ಕಣಗಿಲೆ, ಬಿಳಿ ಎಕ್ಕ, ಕಗ್ಗಲಿ, ಗರಿಕೆ, ಅಶೋಕ, ಶಂಖಪುಷ್ಪದ ವಿವರಗಳಿವೆ.
ದೈವಿವನದ ಚೈನ್ ಲಿಂಕ್ ಬೇಲಿ, ಚೆಕ್ ಡ್ಯಾಮ್, ಶಿವಪಂಚಾಯತ್ ವನ, ರಾಶಿವನ, ನಕ್ಷತ್ರ ವನ, ನವಗ್ರಹ ವನ, ಅಶೋಕ ವನ, ಬೃಹತ್ ಪಂಚವಟಿ ವನ, ಸಪ್ತರ್ಷಿ ವನ, ಅಷ್ಟ ದಿಕ್ಪಾಲಕರ ವನ, ನಂದನ ವನ, ಸ್ಮೃತಿವನ, ಸಸ್ಯಗಳಿಗೆ ಜೀವಾಮೃತ ಸಿಂಪರಣೆ, ಕೊಳವೆ ಬಾವಿ ಹಾಗೂ ಪೈಪ್‌ಲೈನ್ ಕಾಮಗಾರಿ, ಔಷಧಿ, ಹಣ್ಣಿನ ಸಸಿಗಳನ್ನು ನೆಡುವುದು ಮತ್ತಿತರ ಕಾಮಗಾರಿಗಳಿಗೆ ಕಳೆದ ಮೂರು ವರ್ಷಗಳಿಂದ ಪ್ರತಿವರ್ಷ 1.6 ಕೋಟಿ ರು. ವೆಚ್ಚ ಮಾಡಲಾಗುತ್ತಿದೆ ಎನ್ನುತ್ತಾರೆ ಅರಣ್ಯಾಧಿಕಾರಿ ಗಾಂವ್ಕರ್. <
ಸ್ಮೃತಿ ವನ
ಹುಟ್ಟುಹಬ್ಬ ಆಚರಿಸಿಕೊಳ್ಳುವವರು 3 ಸಾವಿರ ಅಥವಾ 5 ಸಾವಿರ ನೀಡಿದರೆ ಅವರ ಹೆಸರಿನಲ್ಲಿ ಗಿಡನೆಟ್ಟು, ಐದು ವರ್ಷ ಪೋಷಣೆ ಮಾಡಲು ಅರಣ್ಯ ಇಲಾಖೆಯು ದೈವಿವನದ ಪಕ್ಕದಲ್ಲಿಯೇ ಸ್ಮೃತಿ ವನ ಆರಂಭಿಸಿದೆ. ಯಾರು ಬೇಕಾದರೂ ಬಂದು, ಹಣ ಪಾವತಿಸಿ, ಗಿಡ ನೆಡಬಹುದು. ಸ್ಮೃತಿ ವನದಲ್ಲಿ ಹೆಚ್ಚಾಗಿ ಗಿಡಮೂಲಿಕೆಗಳು, ಪಕ್ಷಿಗಳಿಗೆ ಆಹಾರವಾಗುವ ಹಣ್ಣಿನ ಗಿಡಗಳನ್ನು ಬೆಳೆಸಲಾಗುತ್ತಿದೆ. ಆ ಮೂಲಕ ಜನರಲ್ಲಿ ಹಸಿರೀಕರಣದ ಬಗ್ಗೆ ಕಾಳಜಿ ಬೆಳೆಸಲಾಗುತ್ತದೆ.
- ಡಿ.ಎಸ್. ಗಾಂವ್ಕರ್,
ಉಪ ಅರಣ್ಯ ಸಂರಕ್ಷಣಾಧಿಕಾರಿ ಮೈಸೂರು ವಿಭಾಗ
- ಅಂಶಿ ಪ್ರಸನ್ನಕುಮಾರ್
ಚಿತ್ರ- ಎಸ್. ಮಂಜುನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


