ಸಾಧನೆ

ಕ್ಯಾಸೆಟ್ ರಾಜ

ಬಾಗಲಕೋಟೆಯ ಕವಿ ಬಸವರಾಜ ಕೊಣ್ಣೂರ ಹಾಡು ಬರೆದಿರುವ 600ನೇ ಧ್ವನಿಸುರುಳಿ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಕಂಡು ದಾಖಲೆ ಸೃಷ್ಟಿಸಲಿದೆ...

ಕ್ಯಾಸೆಟ್ ರಾಜ
Published On :

ಬಾಗಲಕೋಟೆಯ ಕವಿ ಬಸವರಾಜ ಕೊಣ್ಣೂರ ಹಾಡು ಬರೆದಿರುವ 600ನೇ ಧ್ವನಿಸುರುಳಿ ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಕಂಡು ದಾಖಲೆ ಸೃಷ್ಟಿಸಲಿದೆ...

ಒಂದಲ್ಲ, ಎರಡಲ್ಲ, ನೂರಲ್ಲ... ಕನ್ನಡ ಧ್ವನಿಸುರುಳಿಗಳಿಗೆ ಈವರೆಗೆ ಇವರು ಬರೆದಿರುವ ಹಾಡುಗಳ ಸಂಖ್ಯೆ ಬರೋಬ್ಬರಿ 6 ಸಾವಿರ! ಇನ್ನು ಕೆಲದಿನಗಳಲ್ಲೇ ಇವರು ಹಾಡು ಬರೆದಿರುವ 600ನೇ ಧ್ವನಿಸುರುಳಿ ಬಿಡುಗಡೆಯಾಗಲಿದೆ!
ಕನ್ನಡ ಧ್ವನಿಸುರುಳಿ ಗಳ ಇತಿಹಾಸದಲ್ಲಿ ದಾಖಲೆಯೆನ್ನಬಹುದಾದ ಇಂಥದ್ದೊಂದು ಸಾಧನೆಯನ್ನು ಸದ್ದಿಲ್ಲದೆ ಮಾಡಿದವರು ಬಾಗಲಕೋಟೆಯ ಕವಿ ಬಸವರಾಜ ಕೊಣ್ಣೂರ.
ಇಂದು ರಾಜ್ಯದಲ್ಲಿ ಯಾರೇ ಆದರೂ, ಯಾವುದೇ ಕ್ಯಾಸೆಟ್ ಕಂಪನಿಯವರಾಗಲಿ ಜಾನಪದ ಗೀತೆಗಳ ಮುಖ್ಯವಾಗಿ ದೇಗುಲ, ಮಠಮಾನ್ಯಗಳ ಕುರಿತು ಧ್ವನಿಸುರುಳಿಯನ್ನು ಸಿದ್ಧಪಡಿಸಬೇಕು, ಅವುಗಳಿಗೆ ಹಾಡು ಬರೆಸಬೇಕು ಎನಿಸಿದಾಗ ಅವರು ಮೊದಲು ಸಂಪರ್ಕಿಸುವುದು ಬಾಗಲಕೋಟೆಯ ಕೊಣ್ಣೂರರನ್ನು.
ಬೀಳಗಿ ತಾಲೂಕಿನ ಗಿರಿಸಾಗರದವರಾದ ಕೊಣ್ಣೂರ ಅವರಿಗೆ ಬಾಲ್ಯದಿಂದಲೂ ಬೆಳೆದು ಬಂದ ಕವನಗಳನ್ನು ಬರೆಯುವ ಹವ್ಯಾಸವಿಂದು ಅವರ ಬದುಕಿನ ಹಾದಿಯಾಗಿದೆ. ಅವರು ಬರೆದ ಹಾಡುಗಳಿಂದು ರಾಜ್ಯದ ಮೂಲೆ ಮೂಲೆಗಳಲ್ಲಿ ಕೇಳುತ್ತಿವೆ.
ಬಹುತೇಕ ಪ್ರೇಮಗೀತೆಗಳನ್ನು ಬರೆದು ಕವಿಗೋಷ್ಠಿಗಳಲ್ಲಿ, ಗೆಳೆಯರೆದುರಿಗೆ ಓದುತ್ತಿದ್ದ ಇವರಿಗೆ 1978ರಲ್ಲಿ ಸಿಲೋನ ಆಕಾಶವಾಣಿಯಲ್ಲಿ ಬರುತ್ತಿದ್ದ ಏಸುಕ್ರಿಸ್ತನ ಕುರಿತ ಹಾಡುಗಳ ಕಾರ್ಯಕ್ರಮ, ಹಾಡು ಬರೆಯಲು ಪ್ರೇರಣೆ ನೀಡಿತು. ಅಲ್ಲಿ ಇವರು ಬರೆದು ಕಳಿಸಿದ ನೂರಕ್ಕೂ ಅಧಿಕ ಏಸುಕ್ರಿಸ್ತನ ಕುರಿತ ಹಾಡುಗಳಲ್ಲಿ ಬಹುತೇಕ ಪ್ರಸಾರ ಕಂಡವು.
1990ರಲ್ಲಿ ಬೆಂಗಳೂರಿನ ವಿಕ್ರಂ ಕ್ಯಾಸೆಟ್ ಕಂಪನಿ 'ಶ್ರೀ ಯಲ್ಲಾಲಿಂಗ ಶರಣಾರ್ಥಿ' ಧ್ವನಿಸುರುಳಿಗೆ ಹಾಡು ಬರೆಯಲು ಅವಕಾಶ ನೀಡಿತು. ನಂತರ ಬಾಗಲಕೋಟೆಯ ಕಮತಗಿ ರೇಕಾರ್ಡಿಂಗ್ ಸರ್ವರ್ಸ್ನ ದಿ. ಬಸವರಾಜ ಕಮತಗಿ ಅವರು ಕ್ಯಾಸೆಟ್ಗಾಗಿ ಜಾನಪದ ಹಾಡನ್ನು ಬರೆಯಲು ಅವಕಾಶ ನೀಡಿದರು. ಅಂದು ಆರಂಭವಾದ ಗೀತಸಾಹಿತ್ಯ ಯಾತ್ರೆ ಇಂದಿಗೂ ಸಾಗಿದೆ.
ಖ್ಯಾತ ಕ್ಯಾಸೆಟ್ ಕಂಪನಿಗಳಾದ ಅಶ್ವಿನಿ, ಟಿ ಸೀರೀಸ್, ಝೇಂಕಾರ, ಆನಂದ ಮುಂತಾದವು ಇವರು ಬರೆದ ಹಾಡುಗಳನ್ನು ಬಳಸಿಕೊಂಡು ಕ್ಯಾಸೆಟ್ಗಳನ್ನು ಹೊರತಂದಿವೆ. ಖ್ಯಾತ ಗಾಯಕರಾದ ಎಸ್.ಪಿ. ಬಾಲಸುಬ್ರಮಣ್ಯಂ, ಚಿತ್ರಾ, ಪುತ್ತೂರು ನರಸಿಂಹ ನಾಯಕ, ಬಿ.ಆರ್. ಛಾಯಾ, ಶಶಿಧರ ಕೋಟೆ, ಮಂಜುಳ ಗುರುರಾಜ, ಸಂಗೀತಾ ಕಟ್ಟಿ, ರತ್ನಮಾಲಾ ಪ್ರಕಾಶರಂಥ ಗಾಯಕ ದಿಗ್ಗಜರು ಇವರು ಬರೆದ ನೂರಾರು ಹಾಡುಗಳಿಗೆ ಧ್ವನಿಯಾಗಿ ಜೀವ ತುಂಬಿದ್ದಾರೆ. ಹಂಸಲೇಖಾ, ಟಿ.ಜಿ. ಲಿಂಗಪ್ಪ, ಗುರುಕಿರಣ, ಮನೋರಂಜನ ಪ್ರಭಾಕರ, ರಾಜೇಶ ರಾಮನಾಥರಂಥ ಸಂಗೀತ ನಿರ್ದೇಶಕರ ರಾಗಸಂಯೋಜನೆಗಳಿಗೆ ಜಾನಪದ, ದೇವರ, ಸಂತ ಮಹಾತ್ಮರ ಕುರಿತ ಹಾಡುಗಳನ್ನು ಹೊಸೆದಿದ್ದಾರೆ.
ಉತ್ತರ ಕರ್ನಾಟಕದ ಅಂದಾಜು ಮುನ್ನೂರಕ್ಕೂ ಅಧಿಕ ದೇಗುಲ ಮತ್ತು ಮಠಗಳಿಗೆ ಸಂಬಂಧಿಸಿದ ಧ್ವನಿಮುದ್ರಿಕೆಗಳಿಗೆ ಸಾಹಿತ್ಯ ಬರೆದಿರುವುದು ಇವರ ಹೆಗ್ಗಳಿಕೆ. 'ಶಾಯಿರಿ ಲೋಕ' ಪುಸ್ತಕ ಇತ್ತೀಚೆಗಷ್ಟೆ ಬಿಡುಗಡೆ ಕಂತು. ಇವರು ಸಾಹಿತ್ಯ ಬರೆದಿರುವ 600ನೇ ಶ್ರೀ ತುಳಸೀಗಿರಿಯ ಹನುಮಂತದೇವರ ಕುರಿತ ಭಕ್ತಿಗೀತೆಗಳ 'ತುಳಸಿಗಿರಿ ಆಂಜನೇಯ' ಇಷ್ಟರಲ್ಲೇ ಬಿಡುಗಡೆಯಾಗಲಿದ್ದು, ಈ ಮೂಲಕ ಕನ್ನಡ ಕ್ಯಾಸೆಟ್ ಲೋಕದಲ್ಲಿ ದಾಖಲೆಯೊಂದು ನಿರ್ಮಾಣವಾಗಲಿದೆ.

-ಪ್ರವೀಣರಾಜು ಸೊನ್ನದ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.