ದಿವಾಕರ ಮ್ಯಾಜಿಕ್

ಕುಂಚಗಳ ನೆರವಿಲ್ಲದೆ ಕೇವಲ ಡ್ರಾಯಿಂಗ್ ಶೀಟ್‌ಗಳನ್ನು ಬಳಸಿ ವಿವಿಧ ಪ್ರಾಣಿಗಳ, ಗಣ್ಯ ವ್ಯಕ್ತಿಗಳ ಬಣ್ಣದ ಭಾವಚಿತ್ರ ರಚನೆ ಸಾಧ್ಯವೇ?
ಸಾಧ್ಯ ಎನ್ನುತ್ತಾರೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಮಲೇಬೆನ್ನೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಚಿತ್ರಕಲಾ ಶಿಕ್ಷಕ ಎಂ.ಸಿ. ದಿವಾಕರ್. ಪುಸ್ತಕದ ಅಂಗಡಿಗಳಲ್ಲಿ 10- 20ಕ್ಕೆ ಸಿಗುವ ವಿವಿಧ ಕಲರ್‌ನ ಡ್ರಾಯಿಂಗ್ ಶೀಟ್, ಕತ್ತರಿ, ಗಂ ಬಾಟಲ್ ಇವರ ಕೈಗೆ ಸಿಕ್ಕರೆ ಸಾಕು, 2-3 ದಿನಗಳಲ್ಲಿ ಯಾವುದೇ ಫೋಟೋದ ಕಲರ್‌ಫುಲ್ ಚಿತ್ರ ಸಿದ್ಧ.
ಅರೆ! ಕಲರ್ ಬಳಸದೆ ಕಲರ್‌ಫುಲ್ ಚಿತ್ರ ಹೇಗೆ ಸಾಧ್ಯ ಎನ್ನುತ್ತೀರಾ? ಇಲ್ಲಿ ಬಣ್ಣದ ಡ್ರಾಯಿಂಗ್ ಶೀಟ್‌ಗಳೇ ಬಗೆ ಬಗೆಯ ಬಣ್ಣ, ಹಾವಭಾವ, ಉಬ್ಬು ತಗ್ಗು, ಬೆಳಕು ನೆರಳುಗಳಾಗಿ ಪರಿವರ್ತಿತವಾಗುತ್ತವೆ. ಬಣ್ಣದ ಹಂಗೇ ಇಲ್ಲದೇ ಭಾವ ಬೆಳಕು ಬೆರಗುಗಳನ್ನು ಸೃಷ್ಟಿಸುವ ಕಲೆಯನ್ನು ಸಿದ್ಧಿಸಿಕೊಂಡಿರುವುದು ದಿವಾಕರ್‌ರ ಸೃಜನಶೀಲತೆಗೆ ಸಾಕ್ಷಿ.
ಬಿಳಿ ಬಣ್ಣದ ಡ್ರಾಯಿಂಗ್ ಶೀಟ್‌ನಲ್ಲಿ ಪೆನ್ಸಿಲ್‌ನಿಂದ ವನ್ಯಪ್ರಾಣಿಗಳ, ಗಣ್ಯ ವ್ಯಕ್ತಿಗಳ ಔಟ್‌ಲೈನ್ ಸಿದ್ಧಪಡಿಸಿದ ನಂತರ ಅದಕ್ಕೆ ಒಪ್ಪುವ ಬಣ್ಣದ ಡ್ರಾಯಿಂಗ್ ಶೀಟನ್ನು ಅರ್ಧ ಅಥವಾ ಕಾಲು ಇಂಚಿನ ಅಳತೆಯಲ್ಲಿ ಕತ್ತರಿಸಿಕೊಳ್ಳುತ್ತಾರೆ. ನಂತರ ಔಟ್‌ಲೈನ್ ಮೇಲೆ ಗಂ ಸಹಾಯದಿಂದ ಕತ್ತರಿಸಿಕೊಂಡ ಕಲರ್ ಡ್ರಾಯಿಂಗ್ ಶೀಟ್‌ಗಳನ್ನು ನೇರವಾಗಿ ಅಂಟಿಸುತ್ತಾ ಹೋಗುತ್ತಾರೆ. 2-3 ದಿನಗಳಲ್ಲಿ ಯಾವುದೇ ಭಾವಚಿತ್ರ ಸಿದ್ಧ.
ಸಾಮಾನ್ಯವಾಗಿ ರಚಿಸುವ ಚಿತ್ರಕಲೆ, ಕೋಲ್ಯಾಜ್ ಕಲೆಯ ಹೊರತಾಗಿ ಹೊಸತಾಗಿ ಏನಾದರೂ ಮಾಡಬೇಕೆಂಬ ಇವರ ನಿರಂತರ ಹುಡುಕಾಟದ ಪ್ರತಿಫಲವೇ ಡ್ರಾಯಿಂಗ್‌ಶೀಟ್ ಚಿತ್ರಗಳು. ಹೊಸದುರ್ಗ ತಾಲೂಕು ಮದುರೆಯ ದಿವಾಕರ್ ಬಾಲ್ಯದಲ್ಲೇ ಚಿತ್ರಕಲೆಯೆಡೆ ಆಕರ್ಷಿತವಾಗಿದ್ದರು. ಆಸಕ್ತಿ ಅಭ್ಯಾಸವಾಗಿ ಚಿತ್ರರಚನೆಯಲ್ಲಿ ಪರಿಣಿತರಾದ ಇವರು ದಾವಣಗೆರೆ ಡಿಪ್ಲೋಮಾ ಇನ್ ಕಮರ್ಷಿಯಲ್ ಆರ್ಟ್ಸ್‌ನಲ್ಲಿ 1996ರಲ್ಲಿ ಪದವಿ ಪಡೆದಿದ್ದಾರೆ. ನಂತರ ಚಿತ್ರಕಲಾ ಶಿಕ್ಷಕರಾಗಿ ಶಾಲೆಯ ಅಗತ್ಯ ಕಲಿಕೋಪಕರಣ (ಟಿಎಲ್‌ಎಮ್)ಗಳಾದ ಭುಜಾಕೃತಿ, ತ್ರಿಭುಜ, ಚೌಕ, ಅಯತ, ಅಷ್ಟ ಭುಜಾಕೃತಿ, ಷಟ್‌ಭುಜಾಕೃತಿ, ವಜ್ರಾಕೃತಿ, ಪಿರಮಿಡ್, ಕೋನ, ವಾಲಿಬಾಲ್, ಸಿಲಿಂಡರ್‌ಗಳನ್ನು ಅತಿ ಕಡಿಮೆ ವೆಚ್ಚದಲ್ಲಿ ರಚಿಸತೊಡಗಿದರು.
ಇದಲ್ಲದೇ ಪಾಪ್‌ಆಪ್‌ನಲ್ಲಿ (ಪೇಪರ್ ಕಲೆ) ಡ್ರಾಯಿಂಗ್ ಶೀಟ್‌ಗಳನ್ನು ಬಳಸಿ ಸಮುದ್ರದಲ್ಲಿ ತೇಲುವ ಹಡಗು, ಬಹು ಮಹಡಿ ಕಟ್ಟಡಗಳ ತ್ರೀಡಿ ವಿನ್ಯಾಸ, ಮಹಲ್, ಹೂಗಳು, ಕ್ರೀಡಾಂಗಣ, ವಾದ್ಯಗೋಷ್ಠಿಗಳ ಮಾಡೆಲ್, 16 ಹಾಗೂ 64 ಮುಖದ ನಕ್ಷತ್ರಾಕೃತಿ, ಆಕಾಶಬುಟ್ಟಿ, ಗೋಲಾಕೃತಿ ಸೇರಿದಂತೆ ನೂರಾರು ಮಾಡೆಲ್‌ಗಳನ್ನು ರಚಿಸಿದ್ದಾರೆ. ಕಳೆದ ವರ್ಷ ಫೈನ್ ಆರ್ಟ್ಸ್‌ನಲ್ಲಿ ಮಾಸ್ಟರ್ಸ್ ಪೂರೈಸಿದರು.
ಡ್ರಾಯಿಂಗ್‌ಶೀಟ್ ಬಳಸಿ ರಚಿಸಿದ ಸಿಂಹದ ಚಿತ್ರ ಮೈಸೂರಿನಲ್ಲಿ ನಡೆದ ಚಿತ್ರಕಲಾ ಪ್ರದರ್ಶನದಲ್ಲಿ 3 ತಿಂಗಳು ಪ್ರದರ್ಶನಗೊಂಡಿತ್ತು. ಇವರ 'ಓರಿಗಾಮಿ-1' ಕಿರುಪುಸ್ತಕ ಕಳೆದ ವರ್ಷ ಉಡುಪಿಯಲ್ಲಿನ ರಾಜ್ಯ ಚಿತ್ರಕಲಾ ಶಿಕ್ಷಕರ ಸಮ್ಮೇಳನದಲ್ಲಿ ಬಿಡುಗಡೆಯಾಗಿತ್ತು. ಅನೇಕ ವರ್ಷಗಳಿಂದ ಹರಿಹರದ ಕೆ.ಆರ್. ನಗರದ ನಿವಾಸಿಯಾಗಿರುವ ದಿವಾಕರ್‌ಗೆ ನೀವೊಂದು ಹಲೋ ಹೇಳಿ... ಮೊ. 99004 34595.
ಕಲೆಯೊಳಗೆ ಕುಳಿತವರು...
ದಿವಾಕರ್ ರಚಿಸುರುವ ವಿರೇಂದ್ರ ಹೆಗ್ಗಡೆ, ನರೇಂದ್ರ ಮೋದಿ, ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ವಿಶ್ವೇಶ್ವರ ಭಟ್, ಸಾಯಿಬಾಬಾ, ವನ್ಯಜೀವಿಗಳಾದ ಹುಲಿ, ಸಿಂಹ ಇತ್ಯಾದಿ ಚಿತ್ರಗಳು ಚಿತ್ರಕಲಾಕಾರರನ್ನೂ ಆಶ್ಚರ್ಯ ಚಕಿತರನ್ನಾಗಿ ಮಾಡಿವೆ.
= ರವಿಶಂಕರ ಗದ್ಗಿಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


