ಆಯುರ್ವೇದ ತ್ರಿಪದಿ
ಹಣಕ್ಕಾಗಿ ಹೆಣವೂ ಬಾಯಿ ಬಿಡುವ ಇಂದಿನ ಕಾಲದಲ್ಲಿ ಬಡ ರೋಗಿಗಳಿಗೆ ಪುಕ್ಕಟೆ ಚಿಕಿತ್ಸೆ, ಊಟೋಪಚಾರ...

ಹಣಕ್ಕಾಗಿ ಹೆಣವೂ ಬಾಯಿ ಬಿಡುವ ಇಂದಿನ ಕಾಲದಲ್ಲಿ ಬಡ ರೋಗಿಗಳಿಗೆ ಪುಕ್ಕಟೆ ಚಿಕಿತ್ಸೆ, ಊಟೋಪಚಾರ ಹಾಗೂ ಬಸ್ ಪ್ರಯಾಣ ದರದ ಖರ್ಚು ನೀಡಿ ಉದಾರತೆ ಮೆರೆಯುವ ವೈದ್ಯರು ಈಗಲೂ ನಮ್ಮ ಮಧ್ಯ ಇದ್ದಾರೆ ಎಂದರೆ ಯಾರೂ ನಂಬಲಿಕ್ಕಿಲ್ಲ. ಆದರೆ ಬಿಜಾಪುರದಲ್ಲಿ ಇದನ್ನು ನಂಬಲೇಬೇಕಾದ ವೈದ್ಯ ಸಾಹಿತಿಯೊಬ್ಬರಿದ್ದಾರೆ. ಬಿಜಾಪುರದ ಡಾ. ಆರ್.ಸಿ. ಮುದ್ದೇಬಿಹಾಳ 81ನೇ ವರ್ಷದ ಹೊಸ್ತಿಲಲ್ಲಿದ್ದಾರೆ. ಅವರ ಮನೆಗೆ ಕಾಲಿಟ್ಟರೆ ಸಾಕು, ಮನೆ ತುಂಬೆಲ್ಲ ಪುಸ್ತಕಗಳ ರಾಶಿಯೇ ಕಾಣಿಸುತ್ತದೆ. ಬಹಳಷ್ಟು ಪುಸ್ತಕಗಳು ವೈದ್ಯ ಸಾಹಿತ್ಯದ ಮೇಲೆ ಬರೆದಂಥವು. 42 ಕೃತಿಗಳನ್ನು ರಚಿಸಿದ್ದಾರಿವರು. ಆಯುರ್ವೇದ ಚಿಕಿತ್ಸೆಗೆ ಸಂಬಂಧಿಸಿದಂತೆ 32,000 ತ್ರಿಪದಿ ಬರೆದು ತ್ರಿಪದಿ ಪಿತಾಮಹ ಎನಿಸಿಕೊಂಡಿದ್ದಾರೆ. ನಾನಾ ರೋಗಗಳಿಗೆ ಲಭ್ಯವಿರುವ ಆಯುರ್ವೇದ ಔಷಧಿಯ ಬಗ್ಗೆ ತ್ರಿಪದಿಗಳಲ್ಲಿ ಅಮೂಲ್ಯ ಮಾಹಿತಿ ಇದೆ.
ಮುದ್ದೇಬಿಹಾಳ ಅವರು ರಚಿಸಿರುವ ಗಿಡಮೂಲಿಕೆಗಳ ದರ್ಶನ ಪುಸ್ತಕ ಸರ್ವರೋಗಗಳಿಗೂ ದಿವ್ಯೌಷಧಿಯಾಗಿದೆ. ಹೀಗಾಗಿ ಈ ಪುಸ್ತಕ ಮರುಮುದ್ರಣಗೊಂಡಿದೆ. 'ಸಿಂಧೂರ ಲಕ್ಷ್ಮಣ', 'ಬಸವ ಬೆಳಗು' ಎಂಬ ಎರಡು ಮಹಾಕಾವ್ಯಗಳನ್ನು ರಚಿಸಿದ್ದಾರೆ. ಉರ್ದು ಕವಿ ಇಕ್ಬಾಲ್ ಬರೆದಿರುವ 40 ಉರ್ದು ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಸಿಂಧೂರ ಲಕ್ಷ್ಮಣ ಮಹಾಕಾವ್ಯದ ಒಂದೆರಡು ಅಧ್ಯಾಯಗಳನ್ನು ಮಹಾರಾಷ್ಟ್ರ ಸರ್ಕಾರ 8ನೇ ತರಗತಿ ಪಠ್ಯಕ್ರಮದಲ್ಲಿ ಸೇರಿಸಿರುವುದು ಮುದ್ದೇಬಿಹಾಳ ಅವರ ಸಾಹಿತ್ಯ ಕೃಷಿಗೆ ಗರಿ ಮೂಡಿಸಿದೆ.
25 ವರ್ಷಗಳಿಂದ ನರಸಂಬಂಧಿ ಕಾಯಿಲೆಯಾದ ಪಾರ್ಕಿನ್ಸನ್ ರೋಗದಿಂದ ಬಳಲುತ್ತಿದ್ದರೂ ಮುದ್ದೇಬಿಹಾಳ ಅವರು ಸಾಹಿತ್ಯ ರಚನೆ ಕೈಬಿಟ್ಟಿಲ್ಲ. ಭೀಮಾಜಿ ಕುಲಕರ್ಣಿ ಎಂಬ ಸಹಾಯಕರ ಮೂಲಕ ತಮ್ಮ ಕೃತಿಗಳನ್ನು ಈಗಲೂ ಹೇಳಿ ಬರೆಸುತ್ತಾರೆ.
ಇಸುಬು, ಗಜಕರ್ಣ, ಸೂರ್ಯಾಸಿಸ್, ಕತ್ತುನೋವು, ಸೊಂಟದಿಂದ ಕಾಲಿನವರೆಗಿನ ಹೊಡೆತ, ಹಲ್ಲುನೋವು, ಅರೆತಲೆನೋವು, ನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ, ಮೂಲವ್ಯಾಧಿ, ಸ್ತ್ರೀಯರ ಗುಪ್ತ ರೋಗಗಳು, ಪುರುಷತ್ವ, ಸಂತಾನ ಸಮಸ್ಯೆಗಳು, ಸಂಧಿವಾತ ಮುಂತಾದ ರೋಗಗಳಿಗೆ ವೈದ್ಯ ಮುದ್ದೇಬಿಹಾಳ ಅವರ ಔಷಧ ರಾಮಬಾಣ ಇದ್ದಂತೆ ಎಂದು ಬಿಜಾಪುರದ ಸುತ್ತಮುತ್ತಲಿನ ಹಳ್ಳಿಗಳ ಜನರು ಚಿಕಿತ್ಸೆಗಾಗಿ ಮುಗಿ ಬೀಳುತ್ತಾರೆ.
ಮುದ್ದೇಬಿಹಾಳ ಅವರು ರೋಗಿಗಳಿಂದ ನೋಂದಣಿ ಶುಲ್ಕ, ತಪಾಸಣೆ ಶುಲ್ಕ, ಯಾವುದನ್ನೂ ಪಡೆಯುವುದಿಲ್ಲ. ರೋಗಿಗಳು ಕೈಮುಚ್ಚಿ ಕೊಟ್ಟಷ್ಟು ಹಣ ಪಡೆಯುತ್ತಾರೆ. ಈ ಹಣವನ್ನು ವೈದ್ಯಸಾಹಿತ್ಯದ ಕೃತಿಗಳ ಮುದ್ರಕ್ಕೆ ಬಳಸುತ್ತಾರೆ. ಕಡುಬಡ ರೋಗಿಗಳ ಬಳಿ ಹಣವಿಲ್ಲದಿದ್ದರೆ ಉಚಿತವಾಗಿ ತಪಾಸಣೆ ನಡೆಸಿ ಔಷಧೋಪಚಾರ ಮಾಡುತ್ತಾರೆ.
ರೋಗಿಗಳಿಗೆ ವಾಪಸ್ ತಮ್ಮ ಊರಿಗೆ ತೆರಳಲು ಕಾಸಿಲ್ಲದಿದ್ದರೆ ಹಣ ನೀಡಿ ಕಳುಹಿಸುವ ಮಾನವೀಯತೆ ಇವರಲ್ಲಿದೆ. ಹಸಿವಿನಿಂದ ಬರುವ ರೋಗಿಗಳಿಗೆ ತಮ್ಮ ಮನೆಯಲ್ಲಿಯೇ ಊಟವೂ ಹಾಕುವ ಮಹಾನುಭಾವ ಇವರು. ಈ ಭಾಗದಲ್ಲಿ 'ಧನ್ವಂತರಿ' ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಉಡುಪಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಡಾ. ಮುದ್ದೇಬಿಹಾಳ ಅವರ ಕಾರ್ಯ ಮೆಚ್ಚಿ ಸನ್ಮಾನಿಸಿದ್ದಾರೆ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕೂಡಾ ಬಂದಿದೆ. ಗೊಳಸಂಗಿಯ ಕಾ.ಹು. ಬಿಜಾಪುರ ಸಾಹಿತಿಗಳ ಬಳಗದ ವತಿಯಿಂದ ವೈದ್ಯ ಸಾಹಿತಿ ಆರ್.ಸಿ. ಮುದ್ದೇಬಿಹಾಳ ಅವರಿಗೆ ಅಭಿನವ ಸರ್ವಜ್ಞ ಬಿರುದು ನೀಡಿ ಗೌರವಿಸಲಾಗಿದೆ.
ಇಂದಿಗೂ, 81ರ ಇಳಿವಯಸ್ಸಿನಲ್ಲೂ ನಿಸ್ವಾರ್ಥ ವೈದ್ಯಕೀಯ ಹಾಗೂ ಸಾಹಿತ್ಯ ಸೇವೆ ಸಲ್ಲಿಸುತ್ತಿರುವ ಮುದ್ದೇಬಿಹಾಳ ಅವರ ಸಾಧನೆಯನ್ನು ಸರ್ಕಾರ ಗುರುತಿಸದಿರುವುದು ಮಾತ್ರ ವಿಪರ್ಯಾಸ!
- ರುದ್ರಪ್ಪ ಆಸಂಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


