SMART ತಾತ
ತಾತ ಅಂದ ತಕ್ಷಣ ನೆನಪಾಗೋದು ಒಂದು ಕೈಯ್ಯಲ್ಲಿ ಪೇಪರ್ ಹಿಡ್ಕೊಂಡು ಇನ್ನೊಂದು ಕೈಯ್ಯಲ್ಲಿ ಚಹಾ..
ತಾತ ಅಂದ ತಕ್ಷಣ ನೆನಪಾಗೋದು ಒಂದು ಕೈಯ್ಯಲ್ಲಿ ಪೇಪರ್ ಹಿಡ್ಕೊಂಡು ಇನ್ನೊಂದು ಕೈಯ್ಯಲ್ಲಿ ಚಹಾ ಹೀರುತ್ತಾ ಹತ್ತಿರ ಸುಳಿದವರಿಗೆಲ್ಲ ಬುದ್ಧಿಮಾತು ಹೇಳ್ತಾ ಕೂತಿರೋ ಚಿತ್ರಣ. ಆದರೆ ಈಗಿನ ಸ್ಮಾರ್ಟ್ ಮೊಮ್ಮಕ್ಕಳ ಜೊತೆ ಸೇರಿ ತಾತಂದಿರು ಸಹ ಸ್ಮಾರ್ಟ್ ಆಗ ಹೊರಟಿದ್ದಾರೆ. ಸ್ಮಾರ್ಟ್ ಫೋನ್ಗಳು, ಐ-ಪ್ಯಾಡ್ಗಳು ಕಂಡ ಕಂಡವರ ಕೈಯ್ಯಲ್ಲಿ ಕುಣಿದಾಡುತ್ತಿರುವ ಈ ದಿನಗಳಲ್ಲಿ ಅದೆಷ್ಟೋ ಸಂಖ್ಯೆಯ ಅಪ್ಲಿಕೇಷನ್ಗಳು ಬಹು ವಿಧದಲ್ಲಿ ಉಪಕಾರಿಯೆನಿಸಿವೆ. ಅಂಥವುಗಳಲ್ಲಿ ಹಿರಿಯ ನಾಗರಿಕರ ಸಲುವಾಗಿಯೇ ಇರುವಂಥ ಹಲವಾರು ಅಪ್ಲಿಕೇಶನ್ಗಳು ತಾತಂದಿರ ಬೆರಳ ಬೊಂಬೆಗಳಾಗಿವೆ.
ಹೆಲ್ತ್ಕೇರ್ ಅಪ್ಲಿಕೇಶನ್
ರಕ್ತದೊತ್ತಡ (BP) ಪರೀಕ್ಷಿಸುವಂಥ ಅಪ್ಲಿಕೇಶನ್ಗಳು ತಾತಂದಿರ ಆರೋಗ್ಯದ ಮೇಲೆ ಗಮನವಿರಿಸಲು ಬಹಳ ಉಪಕಾರಿ. ಕಾಲ ಕಾಲಕ್ಕೆ ರಕ್ತದೊತ್ತಡವನ್ನು ಪರೀಕ್ಷಿಸಿ ಸ್ಮಾರ್ಟ್ಫೋನ್ನಲ್ಲೆ ಮಾಹಿತಿ ಸಂಗ್ರಹಿಸಿಡಬಹುದು. ವ್ಯತ್ಯಾಸವೇನಾದರೂ ಕಂಡುಬಂದಲ್ಲಿ ವೈದ್ಯರ ಬಳಿ ತೋರಿಸಿ ಸಲಹೆ ಪಡೆಯಬಹುದು. ಇನ್ನು ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವವರು ಚಿಕಿತ್ಸೆಯ ಸಂಪೂರ್ಣ ಮಾಹಿತಿಯನ್ನು ಸ್ಮಾರ್ಟ್ಫೋನಿನಲ್ಲಿ ಸಂಗ್ರಹಿಸಿಡಬಹುದು. ಅಷ್ಟೇ ಅಲ್ಲದೆ ಸಮಯಕ್ಕೆ ಸರಿಯಾಗಿ ಔಷಧಿ ತೆಗೆದುಕೊಳ್ಳಲು ರಿಮೈಂಡರ್ ಇಟ್ಟುಕೊಳ್ಳುವ ಸೌಲಭ್ಯವೂ ಇದೆ.
ಮರೆಗುಳಿತನಕ್ಕೆ ಸ್ಮಾರ್ಟ್ ಚಿಕಿತ್ಸೆ
ಮರೆವು ಮುಪ್ಪಿನ ಸಮಸ್ಯೆಗಳಲ್ಲೊಂದು. ಹಾಗೆಯೇ ತಾತಂದಿರಿಗೆ ನನಗೆ ಮರೆತೇ ಹೋಯ್ತು ಎಂಬ ನೆಪ ಹೇಳಿ ತಪ್ಪಿಸಿಕೊಳ್ಳುವ ಯಂತ್ರವೂ ಹೌದು. ನೆನಪಿನ ಶಕ್ತಿಯನ್ನು ವೃದ್ಧಿಸುವ ಸಲುವಾಗಿ ಅಪ್ಲಿಕೇಶನ್ಗಳು, ಗೇಮ್ಗಳು ಮಾರ್ಕೆಟ್ನಲ್ಲಿ ಲಭ್ಯವಿದೆ. ನಿಮ್ಮ ತಾತಂದಿರ ಮೆದುಳಿಗೆ ಅಭ್ಯಾಸ ನೀಡಿ ಏಕಾಗ್ರತೆ ಹೆಚ್ಚಿಸಿ ಮಾನಸಿಕ ಸ್ಥಿತಿಯನ್ನು ಆರೋಗ್ಯವಾಗಿಟ್ಟುಕೊಳ್ಳುವಂತೆ ಇಂಥ ಅಪ್ಲಿಕೇಶನ್ಗಳನ್ನು ವಿನ್ಯಾಸಗೊಳಿಸಲಾಗಿದೆ. ಇನ್ನು ತಾತಂದಿರು ನೆಪ ಹೇಳುವಂತೆಯೇ ಇಲ್ಲ.
ಸಾಮಾಜಿಕ ತಾಣಗಳು
ತಾತಂದಿರಿಗೂ ಇತ್ತೀಚೆಗೆ ಫೇಸ್ಬುಕ್ ಇನ್ನಿತರೆ ಸಾಮಾಜಿಕ ತಾಣಗಳಲ್ಲಿ ಆಸಕ್ತಿ ಹೆಚ್ಚಿದೆ. ತಮ್ಮ ಹಳೆಯ ಸ್ನೇಹಿತರು, ಬಂಧುಗಳ ಜೊತೆ ಹರಟಲು ಸ್ಮಾರ್ಟ್ಫೋನಿನಲ್ಲೇ ಹರಟೆಕಟ್ಟೆ ನಿರ್ಮಿಸಿಕೊಂಡಿದ್ದಾರೆ. ಇನ್ನು ಹೊರದೇಶದಲ್ಲೋ, ದೂರದ ಊರಿನಲ್ಲೆಲ್ಲೋ ಇರುವ ಮಕ್ಕಳೊಡನೆ ಮುಖಾಮುಖಿ ಹರಟಲು ಸ್ಕೈಪ್ ಹಾಗೂ ಇನ್ನಿತರ ಅಪ್ಲಿಕೇಶನ್ಗಳನ್ನು ಹುಡುಕಿಕೊಳ್ಳುವಲ್ಲಿ ತಾತಂದಿರು ಹಿಂದೆ ಬಿದ್ದಿಲ್ಲ.
ಆಸಕ್ತಿ, ಹವ್ಯಾಸಗಳಿಗಾಗಿ...
ಇ- ರೀಡರ್ ಅಪ್ಲಿಕೇಶನ್ಗಳು ದೊಡ್ಡ ಅಕ್ಷರಗಳಲ್ಲಿ ತಮ್ಮ ನೆಚ್ಚಿನ ಪುಸ್ತಕಗಳನ್ನು ಓದಲು ಅನುಕೂಲವಾಗುವಂತೆ ಹಾಗು ಸುಲಭವಾಗಿ ಬಳಸುವಂತೆ ವಿನ್ಯಾಸಗೊಂಡಿವೆ. ಇನ್ನು ಕೆಲವು ತಾತಂದಿರಿಗೆ ಹವಾಮಾನವನ್ನು ಅವಲೋಕಿಸಿ ಹೇಳುವಂಥದ್ದು ಹವ್ಯಾಸ. ನಾಳೆ ಯಾವ ದಿಕ್ಕಿನಲ್ಲಿ ಮಳೆಯಾಗುತ್ತದೆ, ಯಾವಾಗ ಮಳೆಗಾಲ ಕೊನೆಯಾಗುತ್ತದೆ, ಎಲ್ಲಿ ಸೆಖೆ ಇದೆ ಇನ್ನಿತರೆ ಅಂಶಗಳನ್ನು ಊಹಿಸುತ್ತಿರುತ್ತಾರೆ. ಅಂಥವರಿಗಾಗಿ ಹವಾಮಾನ ಮಾಹಿತಿ ಅಪ್ಲಿಕೇಶನ್ಗಳು ಲಭ್ಯವಿದೆ. ಮೊಮ್ಮಕ್ಕಳಿಗಾಗಿ ಕಥೆ ಹಾಡುಗಳನ್ನು, ದೃಶ್ಯಗಳನ್ನು ರೆಕಾರ್ಡ್ ಮಾಡಿ ಕಳಿಸುವಂಥ ಅಪ್ಲಿಕೇಶನ್ಗಳು ಕೂಡ ಲಭ್ಯ.
ಟಾರ್ಚ್, ಭೂತಗನ್ನಡಿ
ಮಂದ ಬೆಳಕಿನಲ್ಲಿ ಚಿಕ್ಕ ಅಕ್ಷರಗಳನ್ನೋದಲು ಬಹು ಉಪಕಾರಿ ಅಪ್ಲಿಕೇಶನ್ಗಳು ಮಾರ್ಕೆಟ್ನಲ್ಲಿ ಲಭ್ಯವಿದೆ. ಅಷ್ಟೇ ಅಲ್ಲ, ಕಣ್ಣಿನ ಬಗ್ಗೆ ಕಾಳಜಿ ವಹಿಸುವಂಥ, ದೃಷ್ಟಿಯಲ್ಲಿ ವ್ಯತ್ಯಾಸಗಳನ್ನು ತಿಳಿಯಲು ಉಪಕಾರಿಯಾಗುವಂಥ ಅಪ್ಲಿಕೇಶನ್ಗಳೂ ಇವೆ.
ತಾತಂದಿರ ಕಾಳಜಿಗಾಗಿ...
ಇನ್ನು ಮನೆಯಲ್ಲಿ ಒಬ್ಬರೇ ಇರುವ ಅಥವಾ ಒಬ್ಬರೇ ಹೊರಗೆ ಸುತ್ತಾಡುವ ತಾತಂದಿರಿಗಾಗಿ ಕಳವಳಪಡಬೇಕಾಗಿಲ್ಲ. ಏನಾದರೂ ತುರ್ತು ಅಥವಾ ಅಗತ್ಯ ಸಂದರ್ಭಗಳಲ್ಲಿ ಎಮರ್ಜೆನ್ಸಿ ಅಪ್ಲಿಕೇಶನ್ಗಳು ಒಂದೇ ಬಟ್ಟನ್ ಒತ್ತುವುದರ ಮೂಲಕ ತಾತಂದಿರು ತಾವಿರುವ ಸ್ಥಳದ ಮಾಹಿತಿಯನ್ನು ಜಿಪಿಎಸ್ ಮುಖಾಂತರ ಮನೆಯವರಿಗೆ ಅಥವಾ ಹತ್ತಿರದವರಿಗೆ ಇ-ಮೇಲ್/ ಎಸ್ಎಂಎಸ್ ಅಲರ್ಟ್ ನೀಡಬಹುದು. ಇದರಿಂದ ಮನೆಯವರು ಜಾಗೃತರಾಗಬಹುದು. ಇನ್ನು ಕೆಲವು ಅಪ್ಲಿಕೇಶನ್ಗಳು ಹತ್ತಿರದ ಆಸ್ಪತ್ರೆ, ಮೆಡಿಕಲ್ ಸ್ಟೋರ್, ಪೋಲಿಸ್ ಠಾಣೆ ಇನ್ನಿತರ ವಿವರಗಳನ್ನು ಒದಗಿಸಬಲ್ಲವು.
- ಭರತ್ ಆರ್. ಭಟ್ ಹೊಸನಗರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

