ಜಿಲೇಬಿ ಗುಂಡಮ್ಮಜ್ಜಿ

ಬೆಳಗಿನ ವೇಳೆಯಲ್ಲಿ ಜನರೆಲ್ಲ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಜಿಯಾಗಿರುವಾಗಲೇ 'ಜಿಲೇಬಿ ಬೇಕೇ ಜಿಲೇಬಿ' ಎಂದು ತಲೆ ಮೇಲೆ ದೊಡ್ಡ ಜಿಲೇಬಿಯ ಬುಟ್ಟಿಯನ್ನು ಹೊತ್ತುಕೊಂಡು ಗುಂಡಮ್ಮಜ್ಜಿ ಕೂಗುತ್ತಿದ್ದರೆ ಎಲ್ಲರ ಕಣ್ಗಳೂ ಅರಳುತ್ತವೆ.
ಬುಟ್ಟಿಯನ್ನು ಮನೆಯ ಮುಂದಿನ ಕಟ್ಟೆಯ ಮೇಲೆ ಇಡುತ್ತಿದ್ದಂತೆ ಜನರೆಲ್ಲ ಪೈಪೋಟಿಗೆ ಬಿದ್ದವರಂತೆ 'ನಮಗೊದು ಕೆಜಿ ಜಿಲೇಬಿ ಕೊಡಿ' ಎಂದು ಮುಗಿಬೀಳುತ್ತಾರೆ. ಗುಂಡಮ್ಮಜ್ಜಿ ನಗುನಗುತ್ತಲೇ ಸಮಾಧಾನದಿಂದಲೇ ಎಲ್ಲರಿಗೂ ಜಿಲೇಬಿ ತೂಕ ಮಾಡಿಕೊಡುತ್ತಾಳೆ. ಜಿಲೇಬಿಯನ್ನು ಮನೆಯೊಳಗೆ ತರುತ್ತಿದ್ದಂತೆ ಸಂಭ್ರಮವೋ ಸಂಭ್ರಮ. ಬಾಯಿಯೊಳಗಿಟ್ಟುಕೊಂಡ್ರೆ ಸಾಕು, ಕರಗುವ ಗರಿಗರಿ ಜಿಲೇಬಿಯನ್ನು ಸವಿಯುವ ರಸನಿಮಿಷಗಳು ಶುರುವಾಗುತ್ತವೆ. ಚಿಕ್ಕಮಕ್ಕಳು ಹಿರಿಯರು ಮುದುಕರು ಎಲ್ಲರೂ ಒಂದೊಂದು ಜಿಲೇಬಿ ಗಾಲಿಯನ್ನು ಕೈಗೆತ್ತಿಕೊಂಡು ತಿನ್ನಲಾರಂಭಿಸುತ್ತಾರೆ.
ಗುಂಡಮ್ಮಜ್ಜಿ ದಿನಾ ಬೆಳಿಗ್ಗೆ 5ಕ್ಕೆ ಎದ್ದು ಬಿಸಿಬಿಸಿ ಜಿಲೇಬಿ ಮಾಡಿ ಬುಟ್ಟಿ ತುಂಬ ತುಂಬಿಕೊಂಡು ಹೊರಟರೆ ಗಂಟೆಯೊಳಗೆ ಖಾಲಿಯಾಗಿಬಿಡುತ್ತವೆ. ನಂತರ ಹೊಲದ ಕೆಲಸಕ್ಕೆ ಹೋಗುತ್ತಾರೆ. ಜಾಲಹಳ್ಳಿಯ ರಂಗನಾಥ ಜಾತ್ರೆ, ಎಲ್ಲಮ್ಮ ಜಾತ್ರೆಯಲ್ಲಿ ಜಿಲೇಬಿಗೆ ಭಾರಿ ಬೇಡಿಕೆ ಇರುತ್ತದೆ. ಆಗ ಗುಂಡಮ್ಮಜ್ಜಿಗೆ ಜಿಲೇಬಿ ಮಾಡಲು 4-5 ಜನ ಸಹಾಯಕ್ಕೆ ಬೇಕೇ ಬೇಕು. ಎಲ್ಲಮ್ಮ ಜಾತ್ರೆಗೆ ಆಗಮಿಸುವ ಸಾವಿರಾರು ಜನರಿಗೆ ಜಿಲೇಬಿಯೇ ಅತ್ಯಂತ ಪ್ರಿಯ ಪದಾರ್ಥ.
ಕಳೆದ ನಲವತ್ತು ವರ್ಷಗಳಲ್ಲಿ ಜಾಲಹಳ್ಳಿಯಲ್ಲಿ ಏನೆಲ್ಲ ಬದಲಾವಣೆಗಳಾಗಿವೆ. ನಾಯಿಕೊಡೆಯಂತೆ ತಲೆಯೆತ್ತುತ್ತಿರುವ ರಾಜಸ್ಥಾನಿ ಸ್ವೀಟ್ಸ್, ಬೇಕರಿಗಳ ಗಾಜಿನ ಡಬ್ಬಾಗಳಲ್ಲಿ ಬಣ್ಣಬಣ್ಣದ ಜಿಲೇಬಿಗಳು ಖರೀದಿಸುವರಿಲ್ಲದೇ ವಾರಗಟ್ಟಲೇ ಸಂಗ್ರಹವಾಗಿರುತ್ತವೆ. ಆದರೆ ಗುಂಡಮ್ಮಜ್ಜಿಯ ಜಿಲೇಬಿ ಮಾತ್ರ ಅದೇ ಸಕತ್ ರುಚಿ, ಸ್ವಾದದಿಂದಾಗಿ ಜನಮನ ಗೆದ್ದಿದೆ.
ಗುಂಡಮ್ಮಜ್ಜಿ ಜಿಲೇಬಿಯೊಂದಿಗೆ ಇಲ್ಲಿನ ಪ್ರತಿಯೊಬ್ಬರ ಬಾಲ್ಯದ ಬಲು ಚೆಂದದ ನೆನಪುಗಳು ಬೆಸೆದುಕೊಂಡಿವೆ. ಹಾಗಾಗಿ ಗುಂಡಮ್ಮಜ್ಜಿಯ ಜಿಲೇಬಿಯೊಂದಿಗೆ ಜಾಲಹಳ್ಳಿಯ ಜನ ಭಾವನಾತ್ಮಕ ಬಾಂಧವ್ಯ ಹೊಂದಿದ್ದಾರೆ. ಜಿಲೇಬಿ ಮಾಡುವ ಕಾಯಕವನ್ನು ಗುಂಡಮ್ಮಜ್ಜಿ ಒಂದು ವ್ರತದಂತೆ ಶ್ರದ್ಧೆಯಿಂದ ಮಾಡುತ್ತಾ ಬಂದಿದ್ದಾರೆ. ಎಲ್ಲ ಕಾಲಘಟ್ಟಗಳಲ್ಲೂ ಎಲ್ಲ ವರ್ಗದ ಜನರಿಗೂ ಕೈಗೆಟುಕುವ ದರದಲ್ಲಿ ಜಿಲೇಬಿ ಮಾಡಿ ಹಂಚುತ್ತಿರುವ, ಒಂದೊಂದು ಸಲ ದುಡ್ಡು ಇಲ್ಲವೆಂದರೂ 'ಪರವಾಗಿಲ್ಲ ಬಿಡಿ, ನಾಳೆ ಕೊಡಿ' ಎನ್ನುತ್ತಾ, ಸಣ್ಣಪುಟ್ಟ ಮಕ್ಕಳಿಗೂ ಜಿಲೇಬಿ ಕೊಡುತ್ತಾ ಪ್ರೀತಿ ತೋರುವ ಗುಂಡಮ್ಮಜ್ಜಿಯ ಹೃದಯವಂತಿಕೆ ದೊಡ್ಡದು.
ಜಾಲಹಳ್ಳಿಯಲ್ಲಿ ಗುಂಡಮ್ಮಜ್ಜಿಯನ್ನು ಬಿಟ್ಟು ಜಿಲೇಬಿಯನ್ನು, ಜಿಲೇಬಿಯನ್ನು ಬಿಟ್ಟು ಗುಂಡಮ್ಮಜ್ಜಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ 'ಜಿಲೇಬಿ ಗುಂಡಮ್ಮಜ್ಜಿ' ಪ್ರಸಿದ್ಧರಾಗಿದ್ದಾರೆ.
ಚಿತ್ರ-ಲೇಖನ:ಸುರೇಶ ಜಾಲಹಳ್ಳಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


