ಕೌದಿಯೇ ಕ್ಯಾನ್ವಾಸ್

ಅಜ್ಜಿ ತನ್ನ ಮೊಮ್ಮಕ್ಕಳಿಗೆ ಪ್ರೀತಿಯ ಉಡುಗೊರೆ ಕೊಡುವುದು ಸಾಮಾನ್ಯ. ಆದರೆ ಕೊಡುವ ಉಡುಗೊರೆ ವಿಶೇಷವಾಗಿರಬೇಕು, ಸದಾ ಕಾಲ ನೆನಪಿನಲ್ಲಿರಬೇಕು ಎನ್ನುವ ಉದ್ದೇಶದಿಂದ ಇಲ್ಲೊಬ್ಬಳು ಅಜ್ಜಿ ಕೌದಿ (ಹೊದಿಕೆ) ಮೇಲೆ ಬಗೆ ಬಗೆಯ ಸಂದೇಶಗಳನ್ನು ಸಾರುವ, ಗ್ರಾಮೀಣ ಸೊಗಡು ಬಿಂಬಿಸುವ ಚಿತ್ರಗಳನ್ನು ರಚಿಸುತ್ತಾರೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ವಾಸಿಸುವ ಈ ಅಜ್ಜಿ ಕಮಾಲಾದೇವಿ ಕೋಠಿವಾಲೆ. ವಯಸ್ಸು 84. ಈ ವಯಸ್ಸಿನಲ್ಲೂ ಅಜ್ಜಿಯ ಸುಕ್ಕುಗಟ್ಟಿದ ಕೈಗಳಲ್ಲಿ ವಿಶೇಷ ಮೋಡಿ ಇದೆ. ಕೌದಿ ಹೊಲೆಯುವುದೇ ಒಂದು ಕಲೆ. ಅಂಥ ಕೆಲಸದ ಜತೆಗೆ ಅದರ ಮೇಲೆ ಚಿತ್ರಗಳನ್ನು ರಚಿಸುವುದು ಸವಾಲಿನ ಕೆಲಸವೇ ಸರಿ. ಇಂಥ ಸವಾಲಿನ ಕೆಲಸದಲ್ಲಿ ಈ ಅಜ್ಜಿ ಯಶಸ್ವಿಯಾಗಿದ್ದಾರೆ.
ಹೇಗೆ ಚಿತ್ರ ಬಿಡಿಸ್ತಾರೆ?
ಮೊದಲಿಗೆ ಮನೆಯಲ್ಲಿನ ನಿರುಪಯುಕ್ತ ಹಳೆಯ ಬಟ್ಟೆಗಳನ್ನು ಉಪ್ಪು ನೀರಿನಲ್ಲಿ ನೆನೆಸಿಟ್ಟು ಒಣಗಿಸಿ ಕೌದಿ ಹೊಲೆಯಲು ಸಿದ್ಧಗೊಳಿಸಿಕೊಳ್ಳುತ್ತಾರೆ. ನಂತರ ರಚಿಸಬೇಕಾದ ಚಿತ್ರಗಳನ್ನು ಬೇರೊಂದು ನಿರುಪಯುಕ್ತ ಬಟ್ಟೆಯಲ್ಲಿಯೇ ಕತ್ತರಿಸಿಕೊಂಡು ಕವದಿ ಮೇಲಿಟ್ಟು ಅತಿ ಸೂಕ್ಷ್ಮವಾಗಿ ಕೈ ಹೊಲಿಗೆ ಹಾಕಲಾಗುತ್ತದೆ. ನಂತರ ಸಾಂಪ್ರದಾಯಿಕವಾಗಿ ಕೌದಿಗೆ ದಪ್ಪ ಹೊಲಿಗೆ ಹಾಕಲಾಗುತ್ತದೆ. ಇದು ಅಷ್ಟು ಸುಲಭದ ಕೆಲಸವಲ್ಲ. ಪ್ರತಿ ಚಿತ್ರವನ್ನೂ ಬಟ್ಟೆಯಲ್ಲಿಯೇ ಕತ್ತರಿಸಿಕೊಳ್ಳಬೇಕು. ಅಲ್ಲದೇ ಚಿತ್ರಕ್ಕೆ ಹೊಂದುವ ಬಣ್ಣದ ಬಟ್ಟೆಯನ್ನು ಮೊದಲು ಆಯ್ಕೆ ಮಾಡಿಕೊಳ್ಳಬೇಕು. ಇಷ್ಟೆಲ್ಲಾ ಸರ್ಕಸ್ ಮಾಡಿ ಅಜ್ಜಿ ಕೌದಿ ಹೊಲೆಯಲು ತೆಗೆದುಕೊಳ್ಳುವ ಸಮಯ ಮೂರು ತಿಂಗಳು.
ಕವದಿ ಮೇಲೆ ಚಿತ್ತಾರ
ಒಂದು ಕೌದಿಯಲ್ಲಿ ಒಟ್ಟು ನಾಲ್ಕು ಭಾಗಗಳನ್ನು ಮಾಡಿರುವ ಅಜ್ಜಿ, ಒಂದೊಂದು ಭಾಗದಲ್ಲೂ ಒಂದೊಂದು ಸಂದೇಶ ಸಾರುವ ಚಿತ್ರ ರಚಿಸಿದ್ದಾರೆ. ಮಗುವಿನ ನಾಮಕರಣ ಸಮಾರಂಭ, ಹಳ್ಳಿಯ ಜೀವನ, ಆಧುನಿಕ ಬದುಕು, ಅಕ್ಕಮಹಾದೇವಿ ಮಲ್ಲಿಕಾರ್ಜುನನನ್ನು ಅರಸಿ ಹೊರಟ ಕ್ಷಣ, ಬಸವಣ್ಣ ಮತ್ತು ನೀಲಾಂಬಿಕೆಯ ಸಂಭಾಷಣೆ, ಮಕ್ಕಳು ಶಾಲೆಗೆ ಹೊರಟದ್ದು, ಸರ್ಕಸ್, ಸಾಕು ಪ್ರಾಣಿಗಳು, ಕಾಡು ಪ್ರಾಣಿಗಳು, ಪಕ್ಷಿಗಳು ಅಜ್ಜಿ ಕೌದಿಯ ಚಿತ್ರಗಳಾಗಿವೆ.
ಅಜ್ಜಿಗೆ ಓರ್ವ ಹೆಣ್ಣು, ಮೂವರು ಗಂಡು ಮಕ್ಕಳಿದ್ದಾರೆ. ಆರು ಮೊಮ್ಮಕ್ಕಳು. ಎಲ್ಲರಿಗೂ ಈ ಕೌದಿ ಗಿಫ್ಟ್ ನೀಡಿದ್ದಾರೆ. ಅಕ್ಕಪಕ್ಕದ ಮಕ್ಕಳಿಗೂ ಕೊಟ್ಟಿದ್ದಾರೆ. 84ರ ಇಳಿ ವಯಸ್ಸಿನಲ್ಲಿಯೂ ಅಜ್ಜಿ ನಿತ್ಯ, ಧ್ಯಾನ, ಓದು, ಪ್ರವಚನ ಆಲಿಸುವುದು, ಮನೆ ಕೆಲಸ ಮಾಡುತ್ತಾರೆ. ಕೌದಿ ಹೊಲೆಯುವ ಜತೆಗೆ ಬುಟ್ಟಿ ಹೆಣಿಗೆ, ಕುಲಾಯಿ, ಗೊಂಬೆ ತಯಾರಿಕೆ ಹೀಗೆ ಅನೇಕ ಕೆಲಸ ಮಾಡುತ್ತಿದ್ದಾರೆ. ಇಂತಹ ಅಜ್ಜಿಗೆ ಒಂದೆರಡು ಮೆಚ್ಚುಗೆಯ ಮಾತುಗಳನ್ನು ಹೇಳಬೇಕೆಂದರೆ ಮೊ. 9342166175 ಕರೆ ಮಾಡಿ.
-ಸಲೀಮ ಬಳಬಟ್ಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


