ನೀನು ನನ್ನೊಟ್ಟಿಗೆ ಮಾಡಿದ್ದು ಟೈಂಪಾಸ್ ಪ್ರೀತೀನಾ?

ಗೆಳತಿ,
ನಿನ್ನನ್ನು 'ಗೆಳತಿ' ಅನ್ನುವುದಕ್ಕಿಂತ ಆತ್ಮಬಂಧು ಎನ್ನುವುದೇ ಸೂಕ್ತವಾದ ಪದ. ಹೌದು ನಮ್ಮಿಬ್ಬರ ಸಂಬಂಧ ಕೇವಲ ಹತ್ತು ತಿಂಗಳಿನದ್ದೇ ಇರಬಹುದು. ಆದರೆ ಅದರೊಳಗೆ ನಾವು ಕುಂತು ಲೆಕ್ಕ ಹಾಕಲು ಬಾರದಷ್ಟು ಸಂವತ್ಸರಗಳ ಕಳೆದಿರುವೆವು ಎನ್ನುವುದು ನನ್ನ ಹೃದಯದ ಭಾವನೆ. ಹಾಗನಿಸುತ್ತಿರುವುದು ನನಗಷ್ಟೇನಾ? ಎನ್ನುವುದಕ್ಕೆ ಉತ್ತರ ನೀನೇ ಹೇಳಬೇಕು. ನನ್ನೊಳಗೆ ನೀನು ಆವರಿಸಿ ಮೂಡಿಸುತಿರುವ ಪ್ರೀತಿ ಎಂಬ ಕಾಣದ ಭಾಷೆ ನಿನ್ನಲ್ಲೂ ತಕಧಿಮಿತ ಮೂಡಿಸದಿರಲು ಕಾರಣ ಏನು? ಎಂದು ಯೋಚಿಸಿ ಯೋಚಿಸಿ ಸೋತು ಹೋಗಿರುವೆ... ನಿನ್ನೆಗಳಲ್ಲಿ ನಾವು ಹಂಚಿಕೊಂಡ ಇಷ್ಟಗಳು, ಕನಸುಗಳು, ನಾಳೆಗಳು, ನಿನ್ನ ಬಾಯಿಂದ ಕೇಳಿದ್ದ ಮೊದಲ ಹಾಡು, ನಾನು ನಿನಗಾಗಿ ಕೇಳಿಸಿದ್ದ ನಮ್ಮೂರಿನ ಕಡಲ ಅಲೆಗಳ ಸಂಗೀತ ಒಂದಾ, ಎರಡಾ... ನಮ್ಮಿಬ್ಬರ ಪ್ರೀತಿಯ ಗೋಪುರಕ್ಕೆ ಪ್ರತಿ ತಿಂಗಳು ಸಾವಿರ ಸಾವಿರದ ಲೆಕ್ಕದಲ್ಲಿ ಬಂದ ಏರ್‌ಟೆಲ್ ಮೊಬೈಲ್ ಬಿಲ್ಲೇ ಸಾಕ್ಷಿ.
ನಮ್ಮ ಪ್ರೀತಿ, ಕಾಲಹರಣಕೆ ಮಾಡಿದ ಕೆಲಸವಲ್ಲ, ವಯಸ್ಸಿನ ವಾಂಛೆಯೂ ಅಲ್ಲ, ನನ್ನೊಳಗೆ ನೀನು ಮೀನಾಗಿ ಪುಟಿಯುತ್ತಿರುವುದು ಪ್ರೀತಿಯ ಅಭಿವ್ಯಕ್ತ ರೂಪ ಎನ್ನುವುದು ನನ್ನ ಹೃದಯದ ಕೋಗಿಲೆಯ ಕುಹೂ... ಕುಹೂ.... ನನ್ನೊಡನಿದ್ದ ನೀನು ಚೆಲ್ಲಿದ ಕನಸಿನ ಬಿತ್ತನೆ ರೂಪಿಸಿದ್ದು, ಭಾವಲೋಕಗಳ ನಕ್ಷತ್ರಗಳ, ಆದರೆ ನನ್ನ ಮನದಿಂಗಿತ ಅರಿತ ಮೇಲೆ ನೀನು ತೋರಿದ ಧೋರಣೆ ಮಾತ್ರ ನನ್ನನ್ನು ಕಾದ ಬಾಣಲೆಗೆ ತಳ್ಳಿದೆ. ಯೋಚಿಸಿ ನೋಡೇ ಗೆಳತಿ, ನನ್ನ ಪ್ರೀತಿಯ ಪ್ರಸ್ತಾವನೆಯಲ್ಲಿ ಎಲ್ಲಾದರೂ ಏನಾದರೂ ತಪ್ಪಿದೆಯಾ? ನಮ್ಮಲ್ಲಿ ಇರುವುದು ಸ್ನೇಹಕ್ಕೆ ಮೀರಿದ ಸಂಬಂಧವಲ್ಲದೆ ಮತ್ತೇನು? ಮುಚ್ಚುಮರೆ ಇಲ್ಲದೆ ಬಿಚ್ಚಿಟ್ಟ ತನುಮನಕೆ ನೀನು ನೀಡಿದ ಘಾಸಿ ವಾಸಿಯಾಗುವುದು ಯಾವಾಗ? ನಿನ್ನ ಪ್ರೀತಿಸುತ್ತೇನೆ ಎಂದಿದ್ದಕ್ಕೆ ನನ್ನ ಗೆಳತಿ ನಿನ್ನದೇ ಜಾತಿಯವಳು ಅವಳನ್ನು ನಾನು ಒಪ್ಪಿಸುತ್ತೇನೆ ಎಂದು ಸೂಚಿಸಿದೆಯಲ್ಲ, ಇದು ಸರೀನಾ? ನಾನು ಬಯಸಿದ್ದು ನನ್ನೊಳಗಿನ ರಾಗಕ್ಕೆ ಜೊತೆಯಾಗಲು. ಇಲ್ಲಿ ನಿನ್ನ ರೂಪ, ಜಾತಿ, ಅಂತಸ್ತು ಯಾವುದೂ ನನಗೆ ಬೇಕಾಗಿಲ್ಲ. ನನಗೆ ಬೇಕಿರುವುದು ನೀನು ಮಾತ್ರ.
ಮಧುರ ನಿಷ್ಕಲ್ಮಶ ಸಂಬಂಧವ ನೀನು ಕಲ್ಪಿಸಿಕೊಂಡ ರೀತಿ ಎಷ್ಟು ಸಮಂಜಸ ಎಂದು ಒಮ್ಮೆ ಯೋಚಿಸಿ ನೋಡು. ಪರಿಹಾರ ಅಂತ ಏನಾದರೂ ದೊರೆತರೆ ನನ್ನ ಕೆಲವು ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಮಾಡು. ನನ್ನೊಳಗಿನ ಇಂಚಿಂಚನ್ನೂ ಬಿಚ್ಚಿಡುವಾಗ, ನಿನ್ನ ನೋವುಗಳಿಗೆ ನಾನು ಸಾಂತ್ವನದ ಬೆಣ್ಣೆ ಹಚ್ಚುವಾಗ, ಕಣ್ಣಲ್ಲಿ ಕಣ್ಣಿಟ್ಟಾಗ... ನೀನು ಹೇಳಿದ ಮಾತು ಜನ್ಮಗಳಾಚೆಗೂ ನೀನೇ ಬೇಕು ಕಣೋ ಎಂಬುದು. ಅಂಥವಳು, ಈಗ ಕುಂಟುನೆಪ ಮುಂದಿಟ್ಟು ದೂರಾಗುವ ಅವಸರದಲ್ಲಿದ್ದೀ, ಅದನ್ನು ಗಮನಿಸಿಯೇ ಕೇಳುತ್ತಿದ್ದೇನೆ. ಇವೆಲ್ಲಾ ನೀನು ಮಾಡಿದ ಟೈಂಪಾಸ್ ಪ್ರೀತಿಯಾ? ಮಾತಿಗೆ ಬಾರದ ಪ್ರಶ್ನೆಗಳು ನಿನ್ನ ಮುಂದಿವೆ. ಉತ್ತರಿಸುವೆಯಾ?
ನಿನ್ನವನು...
ಜಮುನಾ ರಾಣಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


