ಸಾಧನೆ

ಮುನಿಯಜ್ಜನೆಂಬ ಬೆಸುಗೆ ಯೋಗಿ

ಬೆಂಗಳೂರಿನ ಬಸವನಗುಡಿಯ ಗಾಂಧಿಬಜಾರಿನಲ್ಲಿ ಅಡ್ಡಾಡಿದರೆ ಮುನಿಯಪ್ಪನ ..

ಮುನಿಯಜ್ಜನೆಂಬ ಬೆಸುಗೆ ಯೋಗಿ
Published On :

ಬೆಂಗಳೂರಿನ ಬಸವನಗುಡಿಯ ಗಾಂಧಿಬಜಾರಿನಲ್ಲಿ ಅಡ್ಡಾಡಿದರೆ ಮುನಿಯಪ್ಪನ ಕಾಣದಿರಲಾರಿರಿ. ಆತನೊಬ್ಬ ವಿರಳ ಶ್ರಮಯೋಗಿ. ತನ್ನ ಪಾಡಿಗೆ ತಾನು ಪಾತ್ರೆ, ಪಡಗ, ಸ್ಟೌ, ಬಾಯ್ಲರ್ ವಗೈರೆ ರಿಪೇರಿಸುತ್ತಾ ಕೂರುವ ಈ ಕಲಾಯಿ ಋಷಿಗೆ ಈಗ 80 ಪ್ಲಸ್. ಆರವತ್ತೈದು ವರುಷಗಳಿಂದ ಅದೇ ಕಾಯಕ! ಅಲ್ಲೇ ಬಸ್ ನಿಲ್ದಾಣದ ಮಗ್ಗುಲು ಕಾಯಕ ತಾಣ. ಹಿಂದೆ ಒಂದು ಬಹುಕಾಲ ಬಂದ್ ಆದ ಮಳಿಗೆಯ ಮೆಟ್ಟಿಲ ಮೇಲೆಯೆ ಆಶ್ರಯ.
ತನ್ನ ಸುಧೀರ್ಘ ಅನುಭವದಿಂದ ಮುನಿಯಪ್ಪ ಅಕ್ಷರಶಃ ಪಾತ್ರೆ ಪಡಗ ಮಾತನಾಡಿಸಬಲ್ಲರು! ಬೆಸುಗೆ, ಕಲಾಯಿ, ಅಡಿ ಕಟ್ಟುವುದು, ನಲ್ಲಿ ಅಳವಡಿಕೆ, ಹಿಡಿ ದುರಸ್ತಿ... ಹೀಗೆ ಆತ ಸಕಲ ರಿಪೇರಿ ಬಲ್ಲವನ್. ಮುನಿಯಪ್ಪನವರು ಕೈಯಾಡಿಸಿದರೆ ಒಗೆಯೋಣವೆನ್ನಿಸಿದ ಪರಿಕರಗಳು ಮತ್ತೆ ಅಡುಗೆಮನೆ ಸೇರಿಯಾವು. ಇನ್ನಷ್ಟು ಕಾಲ ಬಳಕೆಯಾದಾವು. ಉರಿಯಲು ಮರೆತ ಸ್ಟೌ- ಧಗಧಗ ಉರಿಯಲಾರಂಭಿಸುವುದು. ಸೋರುವ ಹಂಡೆ ನೀರಿನ ಕಿಮ್ಮತ್ತು ಅರಿಯುವುದು. ಮೊಂಡು ಹಿಡಿದ ಕಾಫಿ ಫಿಲ್ಟರ್‌ನಲ್ಲಿ ಕಷಾಯ ಹದ ಇಳಿದೀತು. ಅವರದು ಪರಂಪರಾಗತವಾಗಿ ಬಂದ ಕಸುಬು. ಅದರಲ್ಲಿ ಕಲಾತ್ಮಕತೆಯಿದೆ. ಕಲಿಯಲು ಯಾರಾದರೂ ಮುಂದೆ ಬಂದರೆ ಕಲಿಸಲು ತಾವು ತಯಾರು ಎನ್ನುತ್ತಾರವರು. ಮುನಿಯಪ್ಪರಿಗೆ ಭಾನುವಾರ, ಹಬ್ಬದ ದಿನ ಎನ್ನುವುದಿಲ್ಲ. ಎಲ್ಲ ದಿನವೂ ಅವರಿಗೆ ಕೆಲಸದ ದಿನ.
ಒಮ್ಮೆ ಮುನಿಯಜ್ಜ ಕಾಫಿ ಹುಡಿ ಮಾಡುವ ಕೈ ಯಂತ್ರ ರಿಪೇರಿಸುತ್ತಾ ಲೋಕಾಭಿರಾಮಕ್ಕಿಳಿದರು. 'ಇಂಥದ್ದು ಶಾನೆ ಹಿಂದೆ ಬಹಳ ಸರಿ ಮಾಡಿವ್ವಿನಿ ಬುಡಿ ಸಾಮಿ. ಇವಾಗ ಅಪರೂಪ. ಕರೆಂಟು ಉಳಿತಾಯ. ಜೊತೆಗೆ ನಮ್ಗೂನು ವ್ಯಾಯಾಮ ಅಲ್ಲವರ? ಒಂದು ಮಾತು ಯೋಳ್ತೀನಿ... ಓಬಿರಾಯನ ಕಾಲದ್ದು ಅಂತ ಹಿಂದಿನದ್ನ ಯಾವುದ್ನು ಬಿಸಾಡ್ಬಾರದು ಸಾಮಿ. ಭೂಮಿಯಾಗೆ ಚಿನ್ನ, ಬೆಳ್ಳಿ, ತವರ, ಏನು ಕಬ್ಬಿಣ, ತಗಡು ಖಾಲಿಯಾಗದೆ' ಮುಂತಾಗಿ ಅಲ್ಲೊಂದು ಉಪನ್ಯಾಸವೇ ಸಾಗಿತ್ತು. ಮುನಿಯಜ್ಜನಿಗೆ ಈಗಲಾದರೂ ಮಹಾನಗರಪಾಲಿಕೆ ಅಥವಾ ಯಾವುದಾದರೂ ಸ್ವಯಂಸೇವಾ ಸಂಘ ಒಂದು ಸಣ್ಣ ಸೂರನ್ನಾದರೂ ಕಲ್ಪಿಸಿಕೊಡುವುದೆ?


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.