ಫೋಟೋ ಪಂಪಯ್ಯ
ಓದಿದ್ದು ಡಿಪ್ಲೊಮೊ ಮೆಕಾನಿಕಲ್. ಖಾಸಗಿ ಫ್ಯಾಕ್ಟರಿಯಲ್ಲಿ 10 ವರ್ಷ ದುಡಿದು ಬೇಸತ್ತು, ಸ್ವಂತ ಸ್ಟೇಷನರಿ..

ಓದಿದ್ದು ಡಿಪ್ಲೊಮೊ ಮೆಕಾನಿಕಲ್. ಖಾಸಗಿ ಫ್ಯಾಕ್ಟರಿಯಲ್ಲಿ 10 ವರ್ಷ ದುಡಿದು ಬೇಸತ್ತು, ಸ್ವಂತ ಸ್ಟೇಷನರಿ ಅಂಗಡಿ ತೆರೆದ ಮೇಲೆ ಸಿಕ್ಕಿದ್ದು ತೃಪ್ತಿ. ಅಚಾನಕ್ಕಾಗಿ ರಾಜಕೀಯ ಪ್ರವೇಶಿಸಿ ಪಪಂ ಸದಸ್ಯ, ಅಧ್ಯಕ್ಷರಾಗಿ ಜನಮನ್ನಣೆ ಗಳಿಸಿದರೂ ರಾಜ್ಯ- ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ವನ್ಯಜೀವಿಗಳನ್ನು ಅದ್ಭುತವಾಗಿ ತನ್ನ ಕ್ಯಾಮೆರಾ ಕಣ್ಣುಗಳಿಂದ ಸೆರೆ ಹಿಡಿದಿದ್ದರಿಂದ. ಇವರೇ ಹವ್ಯಾಸಿ ಛಾಯಾಗ್ರಾಹಕ ಪಂಪಯ್ಯಸ್ವಾಮಿ ಮಳಿಮಠ.
ಹೊಸಪೇಟೆ ತಾಲೂಕಿನ ಕಮಲಾಪುರ ನಿವಾಸಿಯಾದ ಪಂಪಯ್ಯಸ್ವಾಮಿ ಮಳಿಮಠ ಹುಟ್ಟಿ ಬೆಳೆದಿದ್ದೆಲ್ಲ ಹಂಪಿ ಪರಿಸರದಲ್ಲಿ. ಇಲ್ಲಿ 1996ರಲ್ಲಿ ದರೋಜಿ ಕರಡಿಧಾಮದ ಕೆಲಸಗಳು ಪ್ರಾರಂಭವಾದವು. ಆ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಂಪರ್ಕದಲ್ಲಿದ್ದ ಪಂಪಯ್ಯಸ್ವಾಮಿಗೆ ದರೋಜಿ ಕರಡಿಧಾಮಕ್ಕೆ ಬರುವ ಅನೇಕ ಅಧಿಕಾರಿಗಳು ಹಾಗೂ ಖ್ಯಾತ ಛಾಯಾಗ್ರಾಹಕರ ಪರಿಚಯವಾಯಿತು. ವನ್ಯಜೀವಿಗಳ ರಕ್ಷಣೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದ ಕಾರಣ, ಅಸಕ್ತ ಛಾಯಾಗ್ರಾಹಕರಿಗೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಈ ಧಾಮಕ್ಕೆ ಭೇಟಿ ನೀಡಿದ ಎಂ.ವೈ. ಘೋರ್ಪಡೆ, ಎಸ್‌ಸಿಜೆ ನೇಗಿನಾಳ, ಟಿಎನ್‌ಎ ಪೆರುಮಾಳ್, ಅನಂತ ಚಾಂದಲೆ, ಎಂ.ಎನ್. ಜಯಕುಮಾರ್, ನಾರಾಯಣಸ್ವಾಮಿ ಅಂಥವರ ಪರಿಚಯವಾಯಿತು. ಅವರಿಂದೆಲ್ಲ ಪಂಪಯ್ಯಸ್ವಾಮಿಗೆ ವನ್ಯಜೀವಿಗಳ ಕುರಿತು ಪಾಠ, ಪ್ರವಚನ ಕಿವಿಗೆ ಬಿದ್ದವು.
ಈ ಖ್ಯಾತನಾಮರ ಊಟೋಪಚಾರ ಮತ್ತು ವಾಸ್ತವ್ಯದ ಜವಾಬ್ದಾರಿಯನ್ನು ಹೊತ್ತ ಪಂಪಯ್ಯಸ್ವಾಮಿಯ ನಿಷ್ಠೆಗೆ ಮನಸೋತ ಅದೆಷ್ಟೋ ಛಾಯಾಗ್ರಾಹಕರು ಕ್ಯಾಮೆರಾ ಪರಿಚಯಿಸಿದರು (2010). ತುಂಬಾ ಸಂಕೋಚದಿಂದ ಒಬ್ಬ ಕಲಾವಿದನನ್ನ ಕೇಳಿದ್ರಂತೆ ಪಂಪಯ್ಯಸ್ವಾಮಿ, 'ಕಣ್ಣಲ್ಲಿಟ್ಟು ನೋಡ್ತಿರಲ್ಲ ಅದು ಏನ್ರೀ ಸಾರ್' ಅಂತ! ಆಗ ಆ ಕಲಾವಿದರು ಇದು ಬೈನಾಕ್ಯುಲರ್ ಪರಿಚಯಿಸಿದರು. ಬೈನಾಕ್ಯುಲರ್ ಖರೀದಿಸಿದ ಪಂಪಯ್ಯಸ್ವಾಮಿ ಅದರಲ್ಲಿ ವೀಕ್ಷಿಸಿ, ದರೋಜಿ ಕರಡಿಧಾಮಕ್ಕೆ ಬರುವ ಪ್ರವಾಸಿಗರಿಗೆ ಗೈಡ್ ಆದರು.
ಪಕ್ಷಿಗಳ ಕಲರವ ವೀಕ್ಷಿಸಿಲು, ಛಾಯಾಚಿತ್ರ ಮಾಡಲು ಬರುವವರ ಸಂಖ್ಯೆ ದಿನೇದಿನೆ ಬೆಳೆಯುತ್ತಿರುವ ಸಂದರ್ಭದಲ್ಲಿ ನಾನೇಕೆ ಒಂದು ಕ್ಯಾಮೆರಾ ತೆಗೆದುಕೊಳ್ಳಬಾರದೆಂಬ ಆಲೋಚನೆ ಮಾಡಿದ ಪಂಪಯ್ಯಸ್ವಾಮಿಗೆ ಅವರ ಶಿಸ್ತುಬದ್ಧ ಜೀವನ ಕಂಡು ರು. 2 ಲಕ್ಷ ರುಪಾಯಿ ಮೌಲ್ಯದ ಬೆಲೆ ಬಾಳುವ ಕ್ಯಾಮೆರಾಕ್ಕೆ ಧನಸಹಾಯ ಮಾಡಿದವರು ಹೊಸಪೇಟೆಯ ಶಾಸಕ ಆನಂದ್ ಸಿಂಗ್. ಅವರ ಸಹಕಾರದಿಂದಲೇ ಇವತ್ತು ಈ ಮಟ್ಟಕ್ಕೆ ಛಾಯಾಚಿತ್ರ ಮಾಡಲು ಸಾಧ್ಯವಾಯಿತು ಎಂದು ಶಾಸಕರನ್ನು ಸ್ಮರಿಸಿಕೊಳ್ಳುವ ಪಂಪಯ್ಯರ ಚಿತ್ರಗಳು ರಾಜ್ಯ ಮತ್ತು ರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಶಂಸೆಗೊಳಗಾಗಿವೆ. ಮುಂದಿನ ದಿನಗಳಲ್ಲಿ ಹೆಸರಾಂತ ನಗರದಲ್ಲಿ ತಾವು ತೆಗೆದ ಛಾಯಾಚಿತ್ರ ಪ್ರದರ್ಶನ ಮಾಡುವುದು ಪಂಪಯ್ಯ ಅವರ ಕನಸು.
ಪೆಂಟೇಡ್ ಸ್ಯಾಂಡ್ಗೌಜ್ ಎಂಬ ಪಕ್ಷಿಯ ಬದುಕಿನ ನಾನಾ ಅವತಾರಗಳನ್ನು ಕಾದು ಛಾಯಾಗ್ರಹಣ ಮಾಡಿ ಸೀರೀಸ್‌ನಲ್ಲಿ ಜೋಡಿಸಿ ಜಾಲತಾಣಗಳಲ್ಲಿ ಬಿತ್ತರಿಸಿ ಶಹಬ್ಬಾಸ್ ಪಡೆದಿದ್ದಾರೆ.
ಇವರ ಸಾಧನೆಯನ್ನು ಪ್ರಶಂಸಿಸಲು ನೀವೊಂದು ಹಲೋ ಹೇಳಿ... ಮೊ. 9449136252.
ಹಾವು ಎಂದರೆ ಪ್ರೀತಿ!
ಕರಡಿಧಾಮಕ್ಕೆ ಬಂದ ಖ್ಯಾತ ಉರಗತಜ್ಞರಾದ ಗೌರಿಶಂಕರ್, ವೇಣುಗೋಪಾಲ ನಾಯ್ಡು, ಸ್ನೇಕ್ ಶ್ಯಾಮ್ ಮತ್ತು ಶಿವಕುಮಾರ್‌ರನ್ನು ಪರಿಚಯಿಸಿಕೊಂಡು ಉರಗ ಹಿಡಿಯುವ ಕಲೆಯನ್ನು ಕಲಿತಿದ್ದಾರೆ. ಒಂದು ವರ್ಷದಲ್ಲಿ 49 ನಾಗರಹಾವನ್ನು ಸಂರಕ್ಷಿಸಿ, ಕಾಡಿಗೆ ಬಿಟ್ಟಿದ್ದಾರೆ! ವನ್ಯಜೀವಿಗಳ ರಕ್ಷಣೆ ಕುರಿತು ಅನೇಕ ಶಾಲಾ- ಕಾಲೇಜುಗಳಿಗೆ ಭೇಟಿ ನೀಡಿ ಪ್ರವಚನ ಮಾಡುವ ಅವರು, ನಮ್ಮ ರಾಜ್ಯದವನಾಗಿ ರಾಷ್ಟ್ರ, ಅಂತಾರಾಷ್ಟ್ರೀಯ ಖ್ಯಾತಿ ಪಡೆಯಬೇಕೆನ್ನುವ ಗುರಿ ಹೊಂದಿದ್ದಾರೆ.
-ಡಿ.ಆರ್. ಸುರೇಂದ್ರನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


