ಸಾಧನೆ

ಓಹ್ ರಜನೀಶ್!

ರಜನೀಶ್‌ಗೆ ಇನ್ನೂ ಇಪ್ಪತ್ತಮೂರರ ಹರೆಯ. ಮಂಗಳೂರಿನ ಕಾಲೇಜಿನಲ್ಲಿ ಬಿಬಿಎಂ ಪರೀಕ್ಷೆ ಮುಗಿಸಿ ಉದ್ಯೋಗಿಯಾಗಿದ್ದಾರೆ...

ಓಹ್ ರಜನೀಶ್!
Published On :

ರಜನೀಶ್‌ಗೆ ಇನ್ನೂ ಇಪ್ಪತ್ತಮೂರರ ಹರೆಯ. ಮಂಗಳೂರಿನ ಕಾಲೇಜಿನಲ್ಲಿ ಬಿಬಿಎಂ ಪರೀಕ್ಷೆ ಮುಗಿಸಿ ಉದ್ಯೋಗಿಯಾಗಿದ್ದಾರೆ. ಇಷ್ಟರಲ್ಲೇ ತೃಪ್ತಿಯಿಲ್ಲ, ಈ ಯುವಕನಿಗೆ ತುಪಾಕಿ ಹೆಗಲಿಗೇರಿಸಿ ದೇಶ ಕಾಯುವ ಅದಮ್ಯ ಆಕಾಂಕ್ಷೆ. ಎಲ್ಲರೂ ಬೆರಳು ಮೂಗಿಗೇರಿಸುವಂತೆ ಭಾರತೀಯ ಭೂಸೇನೆಯ ಸೇವಾ ಆಯ್ಕೆ ಸಮಿತಿಯವರು ನಡೆಸುವ ರಾಷ್ಟ್ರಮಟ್ಟದ ಪರೀಕ್ಷೆಯಲ್ಲಿ ಹತ್ತನೇ ರ್ಯಾಂಕ್ ಗಳಿಸಿ ತರಬೇತಿಗೆ ಆಯ್ಕೆಯಾಗಿದ್ದಾರೆ. ಇದು ನಮ್ಮ ನಾಡಿಗೆ ಒಂದು ಅಭಿಮಾನದ ಸಂಗತಿ.
ರಜನೀಶ್ ಪಾದರಸದಂಥ ಪ್ರತಿಭೆ. ಚಿಕ್ಕಂದಿನಲ್ಲೇ ಅವರಿಗೆ ಯೋಧನಾಗುವ ಕನಸಿತ್ತು. ತಂದೆಯ ತಂದೆ ಸಿದ್ಧಿ ಗಣಪತಿ ಭಟ್ಟರು ಸಂಪಾಜೆಯಲ್ಲಿ ಖ್ಯಾತಿವೆತ್ತ ವಿದ್ವಾಂಸ. ಸಹಸ್ರಾರು ಪುಸ್ತಕ, ಪತ್ರಿಕೆಗಳ ಅಪೂರ್ವ ಸಂಗ್ರಾಹಕ. ತಂದೆ ಲೈನ್ಕಜೆ ರಾಮಚಂದ್ರ  ಅವರು ಸಾಹಿತಿ, ಕಾನೂನು ಪದವೀಧರ. ಅಮ್ಮ ಲಕ್ಷ್ಮಿಯೂ ಪ್ರತಿಭಾವಂತೆ. ಸುಳ್ಯದ ಸ್ನೇಹಾ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದ ರಜನೀಶ್ ಎನ್‌ಸಿಸಿ ಸೇರಲು ಬಯಸಿದಾಗ ಅವರ ಎತ್ತರ ಕಡಿಮೆ ಎಂಬ ಕಾರಣಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಆಗ ಶಿಕ್ಷಕ ಗಣಪತಿ ಹೆಗಡೆಯವರು ಹುಡುಗನಲ್ಲಿ ಹುದುಗಿರುವ ಪ್ರತಿಭೆಯನ್ನು ಗುರುತಿಸಿ ಅವಕಾಶದ ಬಾಗಿಲು ತೆರೆಯಲು ಪ್ರೋತ್ಸಾಹಿಸಿದರು.
ಸರ್ವವಿದ್ಯೆ ಪಾರಂಗತ
ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪದವಿಪೂರ್ವ ತರಗತಿ ಮುಗಿಸಿದ ರಜನೀಶ್ ನೀನಾಸಂ ರಂಗ ತರಬೇತಿಯತ್ತ ಆಕರ್ಷಿತರಾದರು. ಜೀವನ್‌ರಾಂ ಅವರ ಗರಡಿಯಲ್ಲಿ ರಂಗ ಚಟುವಟಿಕೆಗಳಲ್ಲಿ ಪಾಲ್ಗೊಂಡು ಪಡೆದ ಅನುಭವ ನೀನಾಸಂ ತರಬೇತಿ ಶಾಲೆಯೊಳಗೆ ಪ್ರವೇಶಿಸಲು ನೆರವಾಯಿತು. ಒಂದು ವರ್ಷ ಅಲ್ಲಿದ್ದ ಅವಧಿಯಲ್ಲಿ ಪಂಜರಶಾಲೆ, ಜುಂ ಜುಂ ಆನೆ ಮತ್ತು ಪುಟ್ಟ ಜರ್ಮನ್ ನಾಟಕ ವಾಯ್ಸಕ್ ಇತ್ಯಾದಿಗಳಲ್ಲಿ ನಟನಾಕಲೆಯ ಅಭಿವ್ಯಕ್ತಿ ಅನಾವರಣಗೊಂಡಿತು.
ಬಿಬಿಎಂ ಮುಗಿಸಿ ಬೆಂಗಳೂರಿನ ಎಕ್ಸೆಂಚರ್ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರೂ ರಜನೀಶ್ ಒಲವು ಸೇನೆಯ ಕಡೆಗೇ ಇತ್ತು. ಇದರೊಂದಿಗೆ ಹಲವು ಸಲ ಜಿಲ್ಲಾ ಮಟ್ಟದ ಫೈರಿಂಗ್ ಸ್ಪರ್ಧೆಗಳಲ್ಲಿ ಗೆದ್ದು ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಸೈಕ್ಲಿಂಗ್ ಸಾಹಸ ಅವರಿಗೆ ಅತಿ ಇಷ್ಟವಾದುದು. ಬೆಂಗಳೂರಿನಿಂದ ಮೈಸೂರಿನ ಮೂಲಕ ಸೈಕಲ್ಲಿನಲ್ಲೇ ಮಂಗಳೂರಿಗೆ ಬರುತ್ತಿದ್ದರು. ವಿಶ್ವ ಪರಿಸರ ದಿನ ಹಾಗೂ ಸ್ವಾತಂತ್ರ್ಯ ದಿನದಂದು ಸೈಕಲ್ ಯಾತ್ರೆ ಕೈಗೊಂಡು ಸಾಯುತ್ತಿರುವ ಪರಿಸರದ ಉಳಿವಿನತ್ತ ಜನರ ಗಮನ ಸೆಳೆಯುವ ಸಂದೇಶ ನೀಡುತ್ತಿದ್ದರು. ತನಗೆ ತಾನೇ ಗುರುವಾಗಿ ಚುಕ್ಕಿ ಚಿತ್ರ ಕಲೆ ಕಲಿತು ಅನೇಕ ಸಾಧಕರ ಮುಖಭಾವವನ್ನು ಭಟ್ಟಿ ಇಳಿಸಿದ್ದಾರೆ ರಜನೀಶ್. ಡಾ. ವೀರೇಂದ್ರ ಹೆಗ್ಗಡೆ ಸೇರಿದಂತೆ ಹಲವರು ಅವರ ಕಲೆಯನ್ನು ಮೆಚ್ಚಿ ಹರಸಿದ್ದಾರೆ.
ಪ್ರಸ್ತುತ ಒಬ್ಬನೇ ಮಗ ಸೇನೆಗೆ ಸೇರಿರುವುದರಿಂದ ತಂದೆ ಲೈನ್ಕಜೆ ರಾಮಚಂದ್ರರಿಗೆ ಅಂಥದ್ದೇನೂ ಬೇಸರವಿಲ್ಲ. ಕಾರ್ಕಳ ತಾಲೂಕಿನ ಬೆಳ್ವಾಯಿಯ ಬಳಿ ಬಾರಾಡಿಯಲ್ಲಿ ಕೃಷಿಕರಾಗಿರುವ ಅವರು ಅದಕ್ಕಾಗಿ ಹೆಮ್ಮೆ ಪಡುತ್ತಾರೆ. ಸೇನೆಯ ಐವತ್ತು ಹುದ್ದೆಗಳಿಗೆ ದೇಶಾದ್ಯಂತ 3797 ಮಂದಿ ಸ್ಪರ್ಧಿಸಿದ್ದರು. ಅಭ್ಯರ್ಥಿಯ ವ್ಯಕ್ತಿತ್ವ, ಪ್ರತಿಭೆ, ಬುದ್ಧಿಮತ್ತೆಗಳನ್ನು ವೈಜ್ಞಾನಿಕ ವಿಧಾನಗಳಿಂದ ಒರೆಗೆ ಹಚ್ಚಿ ಐವತ್ತು ಮಂದಿಯನ್ನು ಮಾತ್ರ ಆರಿಸುವ ಈ ಆಯ್ಕೆಯಲ್ಲಿ ತನ್ನ ಮಗ ಹತ್ತನೇ ಸ್ಥಾನ ಗಳಿಸಿದ್ದು ಅವರಿಗೆ ಸಂತೋಷ ತಂದಿದೆ. ಅದಲ್ಲದೆ ಮಗ ದೇಶಾಭಿಮಾನದಿಂದ ಯೋಧನಾಗುವುದಿದ್ದರೆ ಕೊಡಗಿನ ಮಣ್ಣಿನಲ್ಲಿ ಬೆಳೆದ ತಾನು ದುಃಖಿಸಲು ಸಾಧ್ಯವೇ ಎಂದು ಕೇಳುತ್ತಾರೆ.
ಸೇನಾ ತರಬೇತಿಗಾಗಿ ಚೆನ್ನೈಗೆ ತೆರಳುವ ಸಿದ್ಧತೆಯಲ್ಲಿರುವ ಈ ಪ್ರತಿಭಾವಂತನಿಗೆ ಶುಭ ಹಾರೈಸೋಣ ಅಲ್ಲವೆ? (ದೂ. 8105171099)

-ಪ. ರಾಮಕೃಷ್ಣ ಶಾಸ್ತ್ರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.