ಕಲಾ ಸರಸ್ವತಿ

ಅರವತ್ತು ಆಗ್ತಾ ಇದ್ದ ಹಾಗೇ ಶುರುವಾಗತ್ತೆ ಅರಳು ಮರಳು..! ಮುಂದಿನ ಜೀವನದ ಬಗ್ಗೆ ಏನೇನೋ ಆತಂಕ. ಹೊತ್ತು, ಹೆತ್ತ ಮಕ್ಕಳು ದೊಡ್ಡೋರಾಗಿ ಕೆಲಸಕ್ಕೆ ಹೋಗೋ ಹೊತ್ತು, ಮೊಮ್ಮಕ್ಕಳೂ ಶಾಲೆ, ಕಾಲೇಜು ಮೆಟ್ಟಿಲೇರಿ ಅವರದೇ ಲೋಕದಲ್ಲಿ ವಿಹರಿಸುವ ಕಾಲ.., ಇನ್ನು ನಾವಂತೂ ನಿಜಕ್ಕೂ ಒಂಟಿ... ಹೀಗೆ ಶೇ. 90 ಜನ ಹಿರಿಯ ನಾಗರಿಕರು ಬೇಡದ ಚಿಂತೆಯಲ್ಲಿ ಕೊರಗುತ್ತಾ ಕೂತುಬಿಡುತ್ತಾರೆ.
ಎಲ್ಲೋ ಸುಮಾರು ಶೇ. 10 ಮಂದಿ ಈ ಇಳಿವಯಸ್ಸಿನಲ್ಲಿಯೂ ತಮ್ಮ ವಯಸ್ಸಿಗೆಲ್ಲಾ ತಲೆ ಕೆಡಿಸಿಕೊಳ್ಳದೇ, ಹಲವು ಕ್ರಿಯಾಶೀಲ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಹೊಸ ಹೊಸ ಹವ್ಯಾಸ ಬೆಳೆಸಿಕೊಂಡು ಕಿರಿಯರಿಗೂ ಮಾದರಿಯಾಗಿರುತ್ತಾರೆ. ಅಂಥವರಲ್ಲಿ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಸರಸ್ವತಿಯೂ ಒಬ್ಬರು.
ಮೂಲತಃ ಮಲೆನಾಡಿನವರಾದ ಸರಸ್ವತಿಯವರಿಗೆ ವಯಸ್ಸು 76. ಈ ವಯಸ್ಸಿನಲ್ಲಿಯೂ ಹಲವು ಕಲೆಗಳನ್ನು ಕರಗತ ಮಾಡಿಕೊಂಡಿರುವ ಇವರು ಮಂಗಳಕಾರ್ಯ ಅದರಲ್ಲೂ ಮದುವೆ, ವರಪೂಜೆ, ಉಪನಯನದಂತಹ ಸಂದರ್ಭದಲ್ಲಿ ಹೆಚ್ಚು ಬೇಡಿಕೆಯಲ್ಲಿರುವ ವಿವಿಧ ನಮೂನೆಯ ಬೊಂಬೆಗಳನ್ನು ಮಾಡುವಲ್ಲಿ ಸಿದ್ಧ ಹಸ್ತರು.
ಏನೇನಿದೆ?: ಮದುವೆ ಸಂದರ್ಭದಲ್ಲಿ ನಡೆಯುವಂತಹ ಒರಳುಕಲ್ಲು ಪೂಜೆಯ ಮಾದರಿ, ಕೊಬ್ಬರಿಯಿಂದ ತಯಾರಿಸಿದ ದೋಣಿಯಲ್ಲಿ ಹೋಗುವ ಹುಡುಗಿ, ಶಂಕು, ಬೀಸಣಿಗೆ, ವೆಲ್ಕಮ್ ಡಾಲ್ ಸೇರಿದಂತೆ ಇದುವರೆಗೆ ಸಾವಿರಾರು ಬೊಂಬೆಗಳನ್ನು ಮಾಡಿದ ಕೀರ್ತಿ ಇವರದ್ದು.
ಒಣ ಕೊಬ್ಬರಿಯನ್ನೂ ಸದ್ಬಳಕೆ ಮಾಡಿಕೊಂಡಿರುವ ಇವರು ಅದರಲ್ಲಿ ಈಶ್ವರ, ಗಣಪತಿ, ಗೋಪುರ, ಲಕ್ಷ್ಮೀ, ದುರ್ಗೆಯರು ಹೀಗೆ ಹಲವರು ದೇವತೆಗಳನ್ನು ಚಿತ್ರಿಸಿದ್ದಾರೆ. ಜತೆಗೆ ಈ ಹಿಂದೆ ಭಗವದ್ಗೀತೆ, ಕುರುಕ್ಷೇತ್ರ ಯುದ್ಧಗಳನ್ನು ಕೊಬ್ಬರಿಯಲ್ಲಿ ಕೆತ್ತನೆ ಮಾಡಿದ್ದರು.
ಹಣ್ಣು, ತರಕಾರಿ ಬೀಜಗಳನ್ನೂ ತಮ್ಮ ಕಲಾ ಸೇವೆಗೆ ಯಥೇಚ್ಚವಾಗಿ ಬಳಸಿಕೊಳ್ಳುವ ಸರಸ್ವತಿ, ಅಡಕೆಯನ್ನು ಬಳಸಿ ಮುತ್ತೈದೆಯರ ಕಲಾಕೃತಿ, ತೆಂಗಿನ ಕಾಯಿಯಿಂದ ವೆಂಕಟರಮಣ... ಹೀಗೆ ನಾನಾ ನಮೂನೆಯನ್ನು ತಯಾರಿಸಿದ್ದಾರೆ.
ಕುಂದನ್ ರಂಗೋಲಿ: ಇತ್ತೀಚೆಗೆ ಪ್ರಸಿದ್ಧಿ ಪಡೆಯುತ್ತಿರುವ ಕುಂದನ್ ರಂಗೋಲಿಯೂ ಇವರಲ್ಲಿ ಸಿಗುತ್ತದೆ. ಎಲ್ಲಿಂದ ಎಲ್ಲಗೆ ಬೇಕಾದರೂ ಕೊಂಡೊಯ್ದು ಉಪಯೋಗಿಸಿ, ಮರಳಿ ತಂದಿಡಬಹುದಾದ ಈ ಪ್ರಕಾರವಾದ ರಂಗೋಲಿಯಲ್ಲಿ ತಮ್ಮದೇ ಆದ ವಿಶಿಷ್ಟ ಡಿಸೈನ್ಗಳನ್ನೂ ಮಾಡಿದ್ದಾರೆ.
ವಿದೇಶದಲ್ಲೂ ಲಭ್ಯ: ಬೆಂಗಳೂರಿನ ಮೂಲೆಯಲ್ಲಿ ಕುಳಿತು ಸರಸ್ವತಿಯವರು ತಯಾರಿಸುವ ಕಲಾ ಕೌತುಕಗಳು ವಿದೇಶಗಳಿಗೂ ಪಯಣಿಸುವುದುಂಟು. ಮಲೇಷ್ಯಾ, ಸಿಂಗಾಪುರ, ಆಸ್ಟ್ರೇಲಿಯಾ, ಜರ್ಮನಿ ಸೇರಿದಂತೆ ವಿವಿಧ ದೇಶಗಳಲ್ಲಿರುವ ಇವರ ಪರಿಚಯಸ್ಥರು ಪ್ರತಿ ಬಾರಿ ಬಂದಾಗಲೂ ಅದನ್ನು ತೆಗೆದುಕೊಂಡು ಹೋಗುತ್ತಾರೆ. ಅಮೇರಿಕಾದ ವೆಂಕಟರಮಣಸ್ವಾಮಿ ದೇವಸ್ಥಾನದ ಹೊರ ಭಾಗದಲ್ಲಿಯೂ ಇವರ ಕಲಾಕೃತಿಗಳು ಮಾರಾಟಕ್ಕಿದ್ದು, ವಿದೇಶಕ್ಕೂ ಇವರ ಕೀರ್ತಿ ಹಬ್ಬಿರುವುದು ಕನ್ನಡಿಗರಿಗೂ ಹೆಮ್ಮೆಯೇ ಸರಿ.
ಹೊಟ್ಟೆಪಾಡಿಗಾಗಿ ಆರಂಭಿಸಿದ ಇಂತಹ ಕಲೆ, ಕುಸುರಿಗಳು ಈಗ ಹವ್ಯಾಸವಾಗಿ ಮುಂದುವರಿದಿರುವುದು ಹೆಮ್ಮೆ ಎನಿಸುತ್ತದೆ ಎನ್ನುವ ಸರಸ್ವತಿಯವರು ಇದೀಗ ಇದರಿಂದ ಬರುತ್ತಿರುವ ಆದಾಯಕ್ಕಿಂತ ಮಾನಸಿಕ ತೃಪ್ತಿಯೇ ಹೆಚ್ಚು ಮಹತ್ವದ್ದಾಗಿದೆ ಎನ್ನುತ್ತಾರೆ. ಈ ನಿಟ್ಟಿನಲ್ಲಿ ಇವರಿಗೊಂದು ಅಭಿನಂದನೆ ಸಲ್ಲಿಸೋಣ ಮೊ. 9483268740
-ಸುಧೀಂದ್ರ ಜಮ್ಮಟಿಗೆ
æsudheeja@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


