ಸಾಧನೆ

ಯಕ್ಷ ಜಲಧಾರೆ

ಯಕ್ಷ ಜಲಧಾರೆ
Published On :

ಯಕ್ಷಗಾನ ಸರ್ವಾಂಗ ಸುಂದರ ಕಲೆ. ಇದು ಮಾತುಗಾರಿಕೆ, ರಸಾಭಿನಯ, ನೃತ್ಯ ವಿನ್ಯಾಸ ಮುಂತಾದ ಆಯಾಮವನ್ನೊಳಗೊಂಡಿದೆ. ಯಕ್ಷಗಾನ ರಂಗದಲ್ಲಿ ಪ್ರಸಿದ್ಧಿಗೆ ಬರಬೇಕಾದರೆ ಶ್ರದ್ಧೆ, ಕಠಿಣ ಪರಿಶ್ರಮ, ಅಧ್ಯಯನ ಅಗತ್ಯ.
ಎರಡು ದಶಕದಿಂದ ಯಕ್ಷರಂಗದ ಏಳುಬೀಳುಗಳನ್ನು ಕಂಡು ಇದೀಗ ಯುವಜನಾಂಗದ ಕಣ್ಮಣಿಯಾಗಿ ಬಹು ಬೇಡಿಕೆಯ ಕಲಾವಿದರಾಗಿ ಪ್ರಸಿದ್ಧಿಗೆ ಬಂದವರು ಜಲವಳ್ಳಿ ವಿದ್ಯಾಧರರಾವ್. ಇವರ ತಂದೆ ಜಲವಳ್ಳಿ ವೆಂಕಟೇಶರಾವ್ ರಾಜ್ಯಪ್ರಶಸ್ತಿ ಪುರಸ್ಕೃತ ಹಿರಿಯ ಯಕ್ಷಗಾನ ಕಲಾವಿದರು.
ಸಮಾಜದ ಕೆಳವರ್ಗದಿಂದ ಜಾತಿ, ಹಣ ಬಲವಿಲ್ಲದೆ ಬದುಕನ್ನು ಸವಾಲಾಗಿ ಸ್ವೀಕರಿಸಿ, ಕಲಾರಾಧಕರಾಗಿ ಮೇಲೆ ಬಂದಿರುವ ವಿದ್ಯಾಧರರಾವ್ ಅಪ್ಪಟ ಗ್ರಾಮೀಣ ಯುವ ಪ್ರತಿಭೆ.
23 ವರ್ಷದಿಂದ ಯಕ್ಷರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ವಿದ್ಯಾಧರರಾವ್, ಯಕ್ಷಗಾನದ ವೃತ್ತಿ ಮೇಳವಾದ ಪೆರ್ಡೂರು, ಸಾಲಿಗ್ರಾಮ, ಕಮಲಶಿಲೆ, ಗೋಳಿಗರಡಿ ಮೇಳದಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಆರಂಭದಲ್ಲಿ ಯಕ್ಷಗಾನ ತರಬೇತಿ ಕೇಂದ್ರವೆಂದೇ ಹೆಸರಾದ ಗುಂಡಬಾಳಾದಲ್ಲಿ ಅಭ್ಯಾಸ ಮಾಡಿದರು. ನಂತರ ಸ್ವಯಂ  ಅಭ್ಯಾಸದಿಂದ  ಯಕ್ಷಕಲೆ ಕರಗತ ಮಾಡಿಕೊಂಡರು. ನನಗೆ ಗುರುಗಳು ಎಂದೂ ಯಾರಿಲ್ಲ. ನೋಡಿ ಕಲಿತಿದ್ದೇ ಹೆಚ್ಚು ಎನ್ನುತ್ತಾರೆ. ಆರಂಭದಲ್ಲಿ ಸುಧನ್ವ, ಕೃಷ್ಣ, ಅಭಿಮನ್ಯು ಮುಂತಾದ ಪಾತ್ರ ನಿರ್ವಹಿಸಿದರು. ಈಗ ಖಳನಾಯಕನ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ವಿಶೇಷವಾಗಿ ಪ್ರತಿನಾಯಕನ ಪಾತ್ರದಲ್ಲಿ ಇವರ ಪ್ರತಿಭೆ ಎದ್ದು ಕಾಣುತ್ತದೆ. ಉತ್ತಮ ಶಾರೀರ, ಗಂಭೀರ ಧ್ವನಿ, ಗತ್ತುಗೈರತ್ತಿನ ಕುಣಿತ, ಮಾದಕ ಶೃಂಗಾರಾಭಿನಯ ಇವರ ಹೆಗ್ಗಳಿಕೆ.
ಕೀಚಕ, ಮಾಗಧ, ಗದಾಯುದ್ಧದ ಕೌರವ, ಅರ್ಜುನ, ರಾವಣ, ಕಂಸ, ಹರಿಶ್ಚಂದ್ರ, ಕರ್ಣ, ಲವಕುಶದ ರಾಮ ಮುಂತಾದ ಪಾತ್ರಗಳು ಇವರ ಹೆಸರನ್ನು ಎತ್ತರಕ್ಕೇರಿಸಿವೆ. 4-5 ತಿಂಗಳ ಹಿಂದೆ ಹೊನ್ನಾವರದಲ್ಲಿ ನಡೆದ ರಾಣಿ ಶಶಿಪ್ರಭೆ ಯಕ್ಷಗಾನ ಪ್ರಸಂಗದಲ್ಲಿ ಇವರು ಶಶಿಪ್ರಭೆಯಾಗಿ ಸ್ತ್ರೀ ಪಾತ್ರವನ್ನೂ ನಿರ್ವಹಿಸಿ ಹೊಸ ಪ್ರಯೋಗಕ್ಕೆ ಮುನ್ನುಡಿ ಬರೆದರು.
ಈಗ ಸ್ವಂತ ಮೇಳ ಕಟ್ಟಿ ಎರಡು ವರ್ಷವಾಗಿದೆ. ಕಲಾಧರ ಯಕ್ಷ ಬಳಗ, ಜಲವಳ್ಳಿ ಹೆಸರಿನ ಇವರ ಮೇಳದಲ್ಲಿ 15 ಕಲಾವಿದರನ್ನು ಸಂಘಟಿಸಿದ್ದಾರೆ. ವರ್ಷಕ್ಕೆ 200 ಆಟ ಮಾಡುವುದಾಗಿ ಹೇಳುತ್ತಾರೆ. ಈ ವರ್ಷದಿಂದ ಜಲವಳ್ಳಿ ಪ್ರಶಸ್ತಿ ಹೆಸರಿನಲ್ಲಿ ಹಿರಿಯ ಕಲಾವಿದರೊಬ್ಬರಿಗೆ ರು. 5 ಸಾವಿರ ನಗದು ನೀಡಿ ಸನ್ಮಾನಿಸುವ ಯೋಜನೆ ಜಾರಿಗೆ ತಂದಿದ್ದಾರೆ. ಈ ಬಾರಿ ನ. 16ರಂದು ಜಲವಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಮದ್ದಳೆ ವಾದಕ ಮಂಜುನಾಥ ಭಂಡಾರಿಗೆ ಜಲವಳ್ಳಿ ಪ್ರಶಸ್ತಿ ನೀಡಿದ್ದಾರೆ.
ಇಂಥ ಸಾಧಕ ಯಕ್ಷ ಕಲಾವಿದ ವಿದ್ಯಾಧರ ಅವರು ಪ್ರಪ್ರಥಮವಾಗಿ ಬೆಂಗಳೂರಿನಲ್ಲಿ ಜೂನ್ 6ರಿಂದ 15 ರವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ (ಒಂದು ದಿನ ಮಾತ್ರ ಬೇರೆ ಕಡೆ) ಪ್ರತಿದಿನ ರಾತ್ರಿ 10ರಿಂದ ಪ್ರಸಿದ್ಧ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ವಿವಿಧ ಪೌರಾಣಿಕ ಪ್ರಸಂಗ ಹಮ್ಮಿಕೊಂಡಿದ್ದಾರೆ. ಅವರಿಗೆ ಬೆಸ್ಟ್ ಆಫ್ ಲಕ್ ಹೇಳೋಣ. ಅವರ ಸಂಪರ್ಕಕ್ಕೆ ಮೊ.9481952827.

= ಗಣಪತಿ ಶಿರಳಗಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.