ಕರಾಟೆ ಕರಾಮತ್ತು

ಕಂಜರ್ಪಣೆ ರಾಮಚಂದ್ರಯ್ಯ ಬೆಳ್ತಂಗಡಿ ತಾಲೂಕಿನ ಮಡಂತ್ಯಾರಿನ ನಿವಾಸಿ. ಹರೆಯದಿಂದಲೇ ಕ್ರೀಡೆ ಮತ್ತು ಅಂಗಸಾಧನೆಯಲ್ಲಿ ವಹಿಸಿದ ತೀವ್ರ ಆಸಕ್ತಿಯಿಂದಾಗಿ ಐವತ್ತರ ಅಂಚಿನಲ್ಲೂ ದೇಹದಾರ್ಢ್ಯವನ್ನು ಮುಕ್ಕಾಗದಂತೆ ಸಂರಕ್ಷಿಸಿಕೊಂಡು ಬಂದಿದ್ದಾರೆ. ಕರಾಟೆಯಲ್ಲಿ ಅವರದು ಉತ್ತಮ ಸಾಧನೆ. ಐದು ಸಾವಿರಕ್ಕಿಂತ ಅಧಿಕ ಮಂದಿಗೆ ಈ ಕಲೆಯನ್ನು ಧಾರೆಯೆರೆದಿದ್ದಾರೆ. ಅವರಲ್ಲಿ 500 ಮಂದಿಗೆ ಬ್ಲ್ಯಾಕ್ ಬೆಲ್ಟ್ ಸಿಕ್ಕಿದೆ. ದೇಶೀ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಚಿನ್ನದ ಪದಕವನ್ನೂ ಗಳಿಸಿದವರಿದ್ದಾರೆ. 15 ಮಂದಿ ಹೆಣ್ಮಕ್ಕಳೂ ಬ್ಲ್ಯಾಕ್ ಬೆಲ್ಟ್ ಪಡೆದಿದ್ದಾರೆ. ಮೇಲ್ನೋಟಕ್ಕೆ ರಾಮಚಂದ್ರಯ್ಯನ ಸಾಧನೆ ಗೋಚರವೇ ಆಗದಷ್ಟು ಸರಳತನ ಅವರ ಹೆಗ್ಗಳಿಕೆ.
1965ರಲ್ಲಿ ಸುಳ್ಯದ ಕಂಜರ್ಪಣೆಯಲ್ಲಿ ಜನಿಸಿದ ರಾಮಚಂದ್ರಯ್ಯ ಚಿಕ್ಕಂದಿನಲ್ಲಿ ಉದ್ದ ಜಿಗಿತ ಮತ್ತು ಎತ್ತರ ಜಿಗಿತದಲ್ಲಿ ನಿಷ್ಣಾತ, ಈಜುವ ಸ್ಪರ್ಧೆಗಳಲ್ಲಿ ಮೊದಲಿಗ. ಪಿಯುಸಿ ಕಲಿತದ್ದು ಉಡುಪಿಯ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ. ಅಲ್ಲಿ ಮಠದ ಬೆಳ್ಳಿ ಕೆಲಸ ಮಾಡುವ ಬೆಳ್ಳಿ ಸಾಹೇಬರಿಂದ ವ್ಯಾಯಾಮದ ಮೊದಲ ಪಾಠ, ಎರಡು ವರ್ಷ ಕಾಲ ರಮಾನಂದ ಪೈಯವರ ಜೈ ಭಜರಂಗ ವ್ಯಾಯಾಮ ಶಾಲೆಯಲ್ಲಿ ಅಂಗಸಾಧನೆ ಮಾಡಿದರು. ನಂತರ ಮನೆಯ ಕೋಣೆಯೇ ವ್ಯಾಯಾಮ ಶಾಲೆಯಾಯಿತು. ಊರಿಂದೂರು ಸಾಗಿದ ಜೀವನ ಯಾತ್ರೆಯಲ್ಲಿ ಈ ವ್ಯಾಯಾಮ ಶಾಲೆಯೂ ಜತೆಗೇ ಬಂತು.
1992ರಲ್ಲಿ ಮಡಂತ್ಯಾರಿಗೆ ಬಂದ ರಾಮಚಂದ್ರಯ್ಯ ಕರಾಟೆ ಕಲೆಯತ್ತ ಆಕರ್ಷಿತರಾದರು. ಶಾಜೂ ಎಂ. ಅವರ ಗುರುಗಳು, ಬುಡೋಕಾನ್ ಪದ್ಧತಿಯಲ್ಲಿ ನಾಲ್ಕು ವರ್ಷಗಳ ಸಾಧನೆಯಿಂದ ಬ್ಲ್ಯಾಕ್‌ಬೆಲ್ಟ್ ದೊರಕಿತು. ಶಾಲೆಗೆ ಭೇಟಿ ನೀಡುತ್ತಿದ್ದ ಅತಿಥಿ ಮಾರ್ಗದರ್ಶಕರ ನೆರವಿನಿಂದ ಶೂಟೋಕಾನ್ ಪದ್ಧತಿಯನ್ನೂ ಕಲಿತು ಬ್ಲ್ಯಾಕ್‌ಬೆಲ್ಟ್ ಪಡೆದರು. ಶೊರಿನ್ ರಿವ್ಯೂನಲ್ಲೂ ಬ್ಲ್ಯಾಕ್‌ಬೆಲ್ಟ್ ಬಂತು. 1996ರಿಂದ 2012ರ ತನಕ ಅವಿರತವಾಗಿ ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕುಗಳಲ್ಲಿ ಎಂಟು ಕಡೆ ತರಗತಿ ನಡೆಸಿ ಸಹಸ್ರಾರು ಜನರಿಗೆ ಕರಾಟೆ ಕಲೆ ಬೋಧಿಸಿದ್ದು ಅವರ ಸಾಧನೆ.
ಕರಾಟೆಯ ಮುಂದುವರಿದ ಭಾಗವೆನಿಸಿದ ನನ್ಚಾಕ್ ಮತ್ತು ಕೇರಳದ ಕಳರಿ ಉರುಮೆ ಎಂಬ ಕತ್ತಿ ತಾಲೀಮಿನಲ್ಲೂ ರಾಮಚಂದ್ರಯ್ಯ ಅಸಾಧಾರಣ ಪರಿಣತಿ ಗಳಿಸಿ ಬ್ಲಾಕ್‌ನ 5ನೇ ಹಂತ ತಲುಪಿದ್ದಾರೆ. ತ್ರಿಶೂರ್, ಕ್ಯಾಲಿಕಟ್, ಕಣ್ಣಾನೂರ್ ಮೊದಲಾದೆಡೆ ಈ ಕಲೆಯನ್ನು ಪ್ರದರ್ಶಿಸಿ ಸುವರ್ಣ ಪದಕಗಳನ್ನು ಪಡೆದಿದ್ದಾರೆ.
ಕರಾಟೆಯಲ್ಲಿ ಪ್ರಸ್ತುತ ಬಳಕೆಯಾಗುತ್ತಿರುವುದು ಶಾಸ್ತ್ರೀಯ ವಿಧಾನ ಅಲ್ಲ ಎಂಬುದು ಅವರ ವಿಷಾದ. ಅಭ್ಯಾಸದ ಕೊರತೆಯಿದೆ. ಪಂಚ್ ಆ್ಯಕ್ಷನ್ ಕಿಕ್ ಎಲ್ಲದರಲ್ಲೂ ಸಮಗ್ರ ಬದಲಾವಣೆ ಬೇಕು. ಹಣ ಮಾಡುವ ಆತುರದಿಂದಾಗಿ ಕಲಿಸುವವರಲ್ಲೂ ಸಾಧನೆಯ ಕೊರತೆ ಕಾಡುತ್ತಿದೆ. ಇದರಲ್ಲಿ ನಾಜೂಕಾದ ಕರಾರುವಾಕ್ಕಾದ ಹೊಡೆತವೇ ಪ್ರಧಾನವಾಗಿದೆ ಎನ್ನುತ್ತಾರವರು. ಕಲಿಕೆಯನ್ನು ಅರ್ಧದಲ್ಲೇ ಕೈಬಿಡುವವರ ಸಂಖ್ಯೆಯೇ ಅಧಿಕವೆಂಬ ದುಃಖ ಅವರಿಗಿದೆ.
ಕರಾಟೆ ಕ್ಷೇತ್ರಕ್ಕೆ ಸರ್ಕಾರ ಏನೇನೂ ಪ್ರೋತ್ಸಾಹ ಕೊಡುವುದಿಲ್ಲ. ಹೀಗಾಗಿ ಬಡ ವಿದ್ಯಾರ್ಥಿಗಳಲ್ಲಿ ಕೌಶಲ ಇದ್ದರೂ ಸ್ಪರ್ಧೆಗಳಿಗೆ ಹೋಗಲು ಬಸ್ ವೆಚ್ಚಕ್ಕೂ ಹಣವಿಲ್ಲದೆ ವಂಚಿತರಾಗುತ್ತಾರೆ. ಕಲಿಸಿದವರಿಗೆ ಶುಲ್ಕವನ್ನೂ ಕೊಡದವರಿದ್ದಾರೆ. ಹೀಗಾಗಿ ಈ ಕಲೆಯಿಂದ ರಾಮಚಂದ್ರಯ್ಯ ಗಳಿಸಿದ್ದೂ ಉಳಿಸಿದ್ದೂ ಏನೂ ಇಲ್ಲ. ರಾಮಚಂದ್ರಯ್ಯ ಅವರಿಗೆ ನೀವೂ ಒಂದು ಹಲೋ ಹೇಳಿ, ಮೊ. 9141502531.
= ಪ. ರಾಮಕೃಷ್ಣ ಶಾಸ್ತ್ರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


