ಕಸದಿಂದ ಕುಸುಮಾ

ಹಲ್ಲುಜ್ಜುವ ಪೇಷ್ಟಿನ ಮುಚ್ಚಳಗಳು, ಬೆಂಡಿನಿಂದ ಬಾಗಿಲಿಗೆ ತೋರಣ, ಹಾರಗಳು, ಬೆಂಡಿನ ಕಡ್ಡಿಗಳಿಂದ ಮಾಡಿದ ಹಂಸ, ಜರಿಗಳಿಂದ ಮಾಡಿದ ಬಾತುಕೋಳಿ, ಇಂಜೆಕ್ಷನ್ ಬಾಟಲ್‌ಗಳ ಮುಚ್ಚಳದಿಂದ ಸರ, ತಲೆ ಕೂದಲಿಂದ ಹೊಲಿಗೆ ಮಾಡಿದ ನವಿಲು, ಬತ್ತದಿಂದ ಹೆಣೆದ ಶಿವಲಿಂಗ ನೆಕ್ಲೇಸ್, ಬೀಸಣಿಗೆ, ತೆಂಗಿನ ಚಿಪ್ಪುಗಳಿಂದ ವೀಣೆ, ಪೆನ್‌ಸ್ಟ್ಯಾಂಡ್, ಆಮೆ, ಹೂದಾನಿ, ಪೌಡರ್ ಡಬ್ಬಿ, ಹಳೆಯ ವಾಟರ್‌ಕ್ಯಾನ್ ಹೀಗೆ ಇವನ್ನೆಲ್ಲಾ ವಿಶೇಷವಾಗಿ ಕಾಣುವಂತೆ ಮಾಡುವಲ್ಲಿ ಮುಂದಾದವರು ತೀರ್ಥಹಳ್ಳಿಯ ಜಮುನಾ.
ನಿರುಪಯುಕ್ತ ವಸ್ತುಗಳನ್ನು ಉಪಯೋಗಿಸಿ ಅದಕ್ಕೊಂದು ರೂಪ ಕೊಡುವುದು ವಿಶಿಷ್ಟ ಕಲೆ. ಕಲಾವಿದನ ಕಣ್ಣಿಗೆ ಯಾವ ವಸ್ತುವಾದರೂ ಕಲಾತ್ಮಕವಾಗಿ ಕಾಣುತ್ತದೆ ಎಂಬ ಮಾತು ಜಮುನಾರಿಗೆ ಸೂಕ್ತವಾಗಿದೆ. ತಮ್ಮ ನಿಷ್ಠೆ, ಪ್ರಾಮಾಣಿಕತೆಯಿಂದ ಯಾರ ಸಹಾಯವನ್ನೂ ಪಡೆಯದೆ ತಮ್ಮ ಕೈಚಳಕದಲ್ಲಿ ವಿವಿಧ ಮಾದರಿಗಳನ್ನು ತಯಾರಿಸಿ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.
ಕಸದಿಂದ ರಸ ಎನ್ನುವ ಪರಿಕಲ್ಪನೆಯಲ್ಲಿ, ನಿರುಪಯುಕ್ತ ವಸ್ತುಗಳನ್ನು ಹೇಗೆ ಉಪಯುಕ್ತಗೊಳಿಸಿ, ಕಣ್ಣಿಗೆ ಆನಂದ, ಮನಸ್ಸಿಗೆ ಉಲ್ಲಾಸ ನೀಡಬಹುದು ಎಂದು ಸಾರುತ್ತಿರುವ ಅರವತ್ತರ ಜಮುನಾ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದಾಗಲೇ ಈ ಹವ್ಯಾಸಕ್ಕೆ ಇಳಿದವರು. ಮಕ್ಕಳಿಗೂ ಇದರ ಬಗ್ಗೆ ಮಾಹಿತಿ ನೀಡಲು ಮುಂದಾದರು. ಜಮುನಾರಿಗೆ ಶಿಕ್ಷಣ ಕ್ಷೇತ್ರ ಕೈ ಹಿಡಿದಿತ್ತಾದರೂ ಹೆಸರು ಗಳಿಸಿಕೊಟ್ಟದ್ದು ಕರಕುಶಲ ವಸ್ತು ತಯಾರಿಕೆಯೇ.
ಹದಿನೈದು ವರ್ಷಗಳಿಂದ ಬಾಟಲ್ ಒಂದರಲ್ಲಿ ಶೇಖರಿಸಿದ ಸಂಪಿಗೆ ಹೂಗಳನ್ನು ಇಂದಿಗೂ ಜೋಪಾನವಾಗಿರಿಸಿ ಆಶ್ಚರ್ಯವನ್ನುಂಟು ಮಾಡಿರುವ ಜಮುನಾ, ಅಮಟೇಕಾಯಿ ಗೊರಟಿನಿಂದ ಹಕ್ಕಿಯೊಂದನ್ನು ತಯಾರಿಸಿ ನೋಡುಗರ ಮನಗೆದ್ದಿದ್ದಾರೆ. ಅಷ್ಟೇ ಅಲ್ಲದೆ ಎಕ್ಸರೇ ಶೀಟ್‌ಗಳು ಕೆಸುವಿನ ಎಲೆಗಳಾದರೆ, ಡ್ರಿಪ್ ಬಾಟಲ್‌ಗಲ್ಲಿ ಅರಳಿದ ಕಲಾಕೃತಿಗಳು ಎಂಥವರನ್ನೂ ತನ್ನತ್ತ ಆಕರ್ಷಿಸುತ್ತವೆ.
ಸಾಹಿತ್ಯ ಸಮ್ಮೇಳನ ಸೇರಿದಂತೆ ಅನೇಕ ಕಡೆಗಳಲ್ಲಿ ಇವರ ಕಲಾಕೃತಿಗಳು ಪ್ರದರ್ಶನ ಕಂಡಿವೆ. ಆದರೂ ತೀರ್ಥಹಳ್ಳಿಯ ಬ್ರಾಹ್ಮಣ ಸಂಘದವರ ಹೊರತು ಇನ್ನಾವ ಸಂಘಸಂಸ್ಥೆಗಳು ಗುರುತಿಸದಿರುವುದು ವಿಪರ್ಯಾಸವೇ ಸರಿ! ಜಮುನಾ ಅವರಿಗೊಂದು ಅಭಿನಂದನೆ ಹೇಳಬೇಕೇ? ಮೊ. 9482479099 ನಂ. ಚಲಾಯಿಸಿ.
-ಸಂಧ್ಯಾ ಎಸ್. ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


