ಅಪ್ಪ ಮಗನಾದನು...

ಆ ಅಪ್ಪ ಅಮ್ಮನಿಗಿದ್ದದ್ದು ಒಬ್ಬನೇ ಮಗ. ಮಗನ ಭವಿಷ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ತಮ್ಮೆಲ್ಲ ಸುಖ ಸಂತೋಷಗಳನ್ನು ಬದಿಗಿರಿಸಿ ಕೂಲಿ ಮಾಡಿ ಅವನನ್ನು ಓದಿಸುತ್ತ ಮಗನ ಸಂತೋಷದಲ್ಲೇ ತಮ್ಮ ಸಂತೋಷವನ್ನು ಕಂಡರು. ಮಗನೂ ಅಪ್ಪ ಅಮ್ಮಂದಿರ ಕಷ್ಟವನ್ನು ಅರ್ಥ ಮಾಡಿಕೊಳ್ಳುತ್ತಲೇ ಚೆನ್ನಾಗಿ ಓದಿ ಮುಂದೆ ಪಟ್ಟಣ ಸೇರಿ ದೊಡ್ಡ ಕಂಪನಿಯಲ್ಲಿ ಎಂಜಿನಿಯರ್ ಆದ.
ಅಂದಿನಿಂದ ಅವರ ಮನೆಯ ಆರ್ಥಿಕ ಪರಿಸ್ಥಿತಿ ಕೊಂಚ ಸುಧಾರಿಸಿತು. ಅವರಿಗಿದ್ದ ಏಕೈಕ ಸಮಸ್ಯೆ ಸಾರಿಗೆಯದ್ದು. ಅವರಿದ್ದ ಹಳ್ಳಿ ಮುಖ್ಯರಸ್ತೆಗೆ ದೂರದಲ್ಲಿದ್ದರಿಂದ ಬಸ್ಸುಗಳ ಸೌಕರ್ಯ ಬಹಳ ಕಡಿಮೆ. ಅಪ್ಪ ಮುಂಚೆಯಿಂದಲೂ ಪಕ್ಕದೂರುಗಳಿಗೆ ಹೋಗಬೇಕಾದರೂ ಅದೇನೇ ಕೆಲಸವಿದ್ದರೂ ನಡೆದೇ ಹೋಗುತ್ತಿದ್ದರು. ತಮ್ಮ ಗೆಳೆಯರ ಬಳಿ ಬೈಕಿದ್ದರೂ ಒಮ್ಮೆಯೂ ಕೇಳಿದವರಲ್ಲ.
ಅಂದು ಆಯುಧಪೂಜೆಯ ದಿನ. ಪಟ್ಟಣದಿಂದ ಊರಿಗೆ ಬಂದ ಮಗನ ಕೈಲಿ ಹೊಸ ಬೈಕ್ ಇತ್ತು. ಅಪ್ಪನ ಕೈಗೆ ಕೀ ಕೊಟ್ಟವನೇ 'ಇದು ನಿಂಗೆ ಅಪ್ಪ' ಅಂದ. ಅಪ್ಪನ ಕಣ್ಣುಗಳಲ್ಲಿ ಹನಿಯಿತ್ತು. ಬೈಕಿಗೆ ಪೂಜೆ ಮಾಡಿ ಅಕ್ಕಪಕ್ಕದ ಮನೆಯವರಿಗೆಲ್ಲ ಸಿಹಿ ಹಂಚಿ ಅದೇ ಮೊದಲ ಬಾರಿಗೆ ಹಳ್ಳಿಯಲ್ಲಿ ಬೈಕ್ ಓಡಿಸುವಾಗ ಅಪ್ಪ ಅಕ್ಷರಶಃ ಮಗುವಾಗಿದ್ದ. ಮಗ ಅಪ್ಪನಾಗಿದ್ದ!
ಹೌದು. ಅಪ್ಪ ಅಮ್ಮಂದಿರು ನಮಗಾಗಿ ಅವರ ಜೀವವನ್ನೇ ತೇದಿರುತ್ತಾರೆ. ನಮ್ಮ ಒಂದು ಕ್ಷಣದ ಖುಷಿಗಾಗಿ ಅದೆಷ್ಟೋ ತ್ಯಾಗ ಮಾಡಿರುತ್ತಾರೆ. ನಮ್ಮ ಕಾಲ ಮೇಲೆ ನಿಂತುಕೊಳ್ಳುವವರೆಗೆ ಅವರೇ ನಮಗೆ ಆಧಾರಸ್ತಂಭವಾಗಿರುತ್ತಾರೆ. ನಂತರ ಅವರ ಋಣವನ್ನು ತೀರಿಸುವುದು ಎಂದರೆ ಹಾಸ್ಯಾಸ್ಪದವಾದೀತು. ಕಡೇ ಪಕ್ಷ ಅವರ ಮುಖದಲ್ಲೂ ಅಂಥದ್ದೊಂದು ಸಂಭ್ರಮವನ್ನು ಕಾಣಬೇಕೆಂದು ಬಯಸುವುದು ತಪ್ಪೇನಲ್ಲ ಮತ್ತು ಅದು ಅಸಾಧ್ಯವೂ ಅಲ್ಲ.
ಹೇಗೆ?
ಹೆತ್ತವರ ಇಷ್ಟದ ಯಾವುದೇ ಒಂದು ಎಳೆಯನ್ನು ಪರಿಗಣಿಸಿದರೂ ಸಾಕು, ನಮ್ಮ ಬದುಕು ಸಾರ್ಥಕ. ನಮ್ಮ ಆಶಯ ಈಡೇರಿದಂತೆಯೇ. ಒಂದು ದಿಢೀರ್ ಪಿಕ್ನಿಕ್, ಟಿವಿ, ಅವರಿಗಿಷ್ಟದ ಯಾತ್ರಾಸ್ಥಳ, ಮೊಬೈಲ್, ಅವರಿಷ್ಟದ ತಿನಿಸು, ಪುಸ್ತಕ, ಸಂಗೀತ ವಾದ್ಯ, ಮ್ಯೂಸಿಕ್ ಪ್ಲೇಯರ್, ಬೈಕು, ಕಾರು, ಪುಟ್ಟಮನೆ ಇತ್ಯಾದಿ ಅದೇನೇ ಇರಲಿ. ನಮ್ಮ ಈಗಿನ ಆರ್ಥಿಕ ಪರಿಸ್ಥಿತಿಗನುಗುಣವಾಗಿ ಅವರ ಇಷ್ಟಗಳನ್ನು ಪೂರೈಸಬಹುದು.
ಅನೇಕ ಬಾರಿ ಮನಸ್ಸಿದ್ದರೂ ಸದ್ಯದ ಪರಿಸ್ಥಿತಿಯನ್ನು ಯೋಚಿಸುತ್ತ ಇವುಗಳನ್ನು ಮುಂದೂಡುವುದರಿಂದ ಅಪ್ಪ ಅಮ್ಮ ನಿಜವಾಗಿಯೂ ಸಂಭ್ರಮಿಸುವ ಕಾಲ ಮುಗಿದಿರುತ್ತದೆ. ಉದಾಹರಣೆಗೆ, ಪ್ರಯಾಣಿಸಲು ದೇಹ ಸಹಕರಿಸುವುದಿಲ್ಲ ಅನ್ನುವಷ್ಟು ವಯಸ್ಸಾದಾಗ ಅವರನ್ನು ಅವರಿಷ್ಟದ ದೂರದೂರಿಗೆ ಕರೆದೊಯ್ಯುವುದು. ಆಗ ಅವರಿಗೆ ಬಹಳ ಖುಷಿಯಾಗುತ್ತದೆ.
ಕೆಲಸಕ್ಕೆ ಸೇರಿ ಒಂದು ವರ್ಷವಾಗಿದ್ದ ಆ ಹುಡುಗಿ ಪ್ರತಿ ತಿಂಗಳು ಒಂದಷ್ಟು ಹಣ ಕೂಡಿಟ್ಟು ತನ್ನ ಅಪ್ಪ ಅಮ್ಮನನ್ನು ಅವರು ನೋಡಬೇಕೆನ್ನುತ್ತಿದ್ದ ಯಾತ್ರಾಸ್ಥಳದ ಪ್ರವಾಸ ಮಾಡಿಸಿ ಕರೆತಂದಳು, ಅದೂ ವಿಮಾನದಲ್ಲಿ! ಕನಸಿನಲ್ಲೂ ಅವರು ಎಣಿಸಿರಲಿಲ್ಲ. ನಂತರ ತಮ್ಮ ವಿಮಾನದ ಅನುಭವ, ಹೊಸ ಜಾಗ ಕೊಟ್ಟ ಖುಷಿಯನ್ನು ಅವರು ತಮ್ಮ ಊರಿನವರಿಗೆಲ್ಲ ತಿಂಗಳುಗಟ್ಟಲೆ ಹೇಳಿಕೊಂಡಿದ್ದರು. ಆ ಹುಡುಗಿಯ ಮುಖದಲ್ಲಿ ಒಂದು ಮಹತ್ಕಾರ್ಯವನ್ನು ನೆರವೇರಿಸಿದ್ದ ಸಂತೃಪ್ತಿಯಿತ್ತು.
ನಿಮಗೂ ಒಮ್ಮೆ ನಿಮ್ಮ ಅಪ್ಪ ಅಮ್ಮ ಮಕ್ಕಳಾಗುವುದನ್ನು ನೋಡಬೇಕೆಂಬ ಆಸೆಯಿದೆಯಲ್ಲವೇ? ಮತ್ತೇಕೆ ತಡ... ಕಾಲ ಮಿಂಚಿ ಹೋದೀತು!
- ಸಂತೋಷ್‌ಕುಮಾರ್ ಎಲ್.ಎಂ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


