ರವಿ ಆರ್ಟ್ಸ್
ಮಲೆನಾಡಿನ ಮಡಿಲಾದ ತೀರ್ಥಹಳ್ಳಿಯಲ್ಲಿ ಅಡಗಿರುವ ಒಂದು ಕುಗ್ರಾಮದಲ್ಲಿ ಕರಿಯಮ್ಮ ಮತ್ತು ಸೀನ ನಾಯ್ಕ ...

ಮಲೆನಾಡಿನ ಮಡಿಲಾದ ತೀರ್ಥಹಳ್ಳಿಯಲ್ಲಿ ಅಡಗಿರುವ ಒಂದು ಕುಗ್ರಾಮದಲ್ಲಿ ಕರಿಯಮ್ಮ ಮತ್ತು ಸೀನ ನಾಯ್ಕ ದಂಪತಿಯ ಏಳು ಮಕ್ಕಳ ಪೈಕಿ ಆರನೆಯವನಾಗಿ ಹುಟ್ಟಿದ ರವಿಗೆ ಬಾಲ್ಯದಲ್ಲೇ ಒಂದು ಅಂತರ್ಮುಖತೆ. ಜಗತ್ತನ್ನು ಬೆರಗಿನಿಂದ ನೋಡುತ್ತಿದ್ದವನಿಗೆ ಕಂಡದ್ದೆಲ್ಲ ಚಿತ್ರವಾಗಿ ಗೋಚರಿಸುತ್ತಿತ್ತು. ಅಲ್ಲದೇ ಅದನ್ನು ಚಿತ್ರವಾಗಿಸುವ ಗೀಳು ಅಂಟಿತು. ಜೊತೆಯಲ್ಲಿದ್ದ ಮಕ್ಕಳು ಕಲ್ಲು-ಮಣ್ಣು ಆಡುತ್ತಿದ್ದರೆ ಈತನಿಗೆ ಆ ಮಣ್ಣಿನ ಮೇಲೆ ಚಿತ್ರ ಮೂಡಿಸುವ ಹುಚ್ಚು. ಶಾಲೆಯಲ್ಲಿ ಸ್ಲೇಟಿನ ಮೇಲೆ ಎಲ್ಲರೂ ಬರೆಯುತ್ತಿದ್ದರೆ ರವಿ ಮಾತ್ರ ಚಿತ್ರ ಬಿಡಿಸುತ್ತಿದ್ದ ಎಂಬುದು ಮಾಸ್ಟರ್‌ನ ಕಂಪ್ಲೇಂಟ್.
ಕಿತ್ತು ತಿನ್ನುತ್ತಿದ್ದ ಬಡತನದಲ್ಲಿದ್ದ ರವಿಯ ಮನೆಯಲ್ಲಿ ಕೂಲಿ ಕೆಲಸವೇ ಪ್ರಧಾನವಾಗಿತ್ತು. ಹೀಗಿರುವಾಗ ರವಿಯಲ್ಲಿ ಅಡಗಿರುವ ಕಲೆಯ ಬಗ್ಗೆ ಆಸಕ್ತಿ ವಹಿಸುವ ಮನಸ್ಸು ಯಾರಲ್ಲೂ ಇರಲಿಲ್ಲ. ಪ್ರತಿಭೆಯನ್ನು ಗಮನಿಸುವ ಪರಿ ರವಿಯ ತಂದೆ-ತಾಯಿಗೆ ತಿಳಿದಿರಲಿಲ್ಲ. ಪಿಯುಸಿ ಮುಗಿದ ನಂತರ ತನ್ನ ಜೀವನ ಕಲೆಗಾಗಿಯೇ ಮುಡಿಪು ಎನ್ನುತ್ತಾ ಕಲಾಪ್ರಪಂಚದಲ್ಲಿ ಏನನ್ನಾದರೂ ಸಾಧಿಸುವ ಹೋರಾಟಕ್ಕೆ ಇಳಿದ ರವಿ, ಮೈಸೂರಿನಲ್ಲಿರುವ ಡಿಎಂಎಸ್ ಲಲಿತಕಲಾ ಕಾಲೇಜಿನಲ್ಲಿ ಬಿಎಫ್‌ಎ ಪದವಿ ಪಡೆದು ನಂತರ ಎಂವಿಎ ಮುಗಿಸಿದರು.
ಮುಂದಿನ ದಿನಗಳಲ್ಲಿ ತಮ್ಮ ಕೈಚಳಕದಿಂದ ರಚಿಸಿದ ಹಲವು ಕಲಾಕೃತಿಗಳು ಸ್ನೇಹಿತರ ಪ್ರೋತ್ಸಾಹದಿಂದ ಅನೇಕ ಕಡೆಗಳಲ್ಲಿ ಪ್ರದರ್ಶನ ಕಂಡು ನೋಡುಗರನ್ನು ನಿಬ್ಬೆರಗಾಗಿಸಿದವು. ಅದಾದ ಕೆಲ ದಿನಗಳ ನಂತರ ಕೊಡಗಿನ ವಿರಾಜಪೇಟೆಯ ಮಹಿಂದ್ರಾ ಹಾಲಿಡೇ ರೆಸಾರ್ಟ್‌ನಲ್ಲಿ ಕಲಾವಿದರಾಗಿ ಸೇರ್ಪಡೆಗೊಂಡು ಅಲ್ಲಿ ಕಲಾ ಗ್ಯಾಲರಿಯನ್ನು ಸ್ಥಾಪಿಸಿದರು. ದೇಶ-ವಿದೇಶಗಳಿಂದ ಬರುವ ಪ್ರವಾಸಿಗರು ರವಿಯವರ ಕಲಾಕೃತಿಗಳನ್ನು ನೋಡಿ ಕಣ್ತುಂಬಿಕೊಳ್ಳುವುದಲ್ಲದೆ ತಮ್ಮ ಸಂಗ್ರಹಕ್ಕೆ ಬೇಕೆಂದು ಕೊಂಡುಕೊಳ್ಳುತ್ತಿದ್ದಾರೆ.
ಇದೀಗ ತಮ್ಮ ಕಾರ್ಯಕ್ಷೇತ್ರವನ್ನು ಬೆಂಗಳೂರಿಗೆ ಸ್ಥಳಾಂತರಿಸುತ್ತಿರುವ ಕೋಟೆಗದ್ದೆ ರವಿಯವರಿಗೆ ನಿಮ್ಮ ಹಾರೈಕೆ ಸದಾ ಇರಲಿ. ಸಂಪರ್ಕಕ್ಕಾಗಿ ಮೊ. 9980403839.
- ಸಂಧ್ಯಾ ಭಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


