ಕಲೆಯುಗದ ಕೃಷ್ಣ!
ಹೊಲ, ತೋಟಗಳ ಸಂಪರ್ಕವೇ ಬೇಡವೆಂದು ಪೇಟೆ ಪಟ್ಟಣಗಳ ಸದ್ದು ಗದ್ದಲಗಳಿಗೆ ಮಾರು ಹೋಗುತ್ತಾರೆ ....

ಹೊಲ, ತೋಟಗಳ ಸಂಪರ್ಕವೇ ಬೇಡವೆಂದು ಪೇಟೆ ಪಟ್ಟಣಗಳ ಸದ್ದು ಗದ್ದಲಗಳಿಗೆ ಮಾರು ಹೋಗುತ್ತಾರೆ ಈಗಿನವರು. ಆದರೆ ಇದಕ್ಕೆ ಅಪವಾದವೆಂಬಂತೆ ಈ ಪೋರ ತನ್ನ ಬಾಲ್ಯದ ದಿನಗಳಲ್ಲಿ ತಂದೆ ಟಿಲ್ಲರ್ ಉಳುಮೆ ಮಾಡುತ್ತಿರುವಾಗ ಕುಳಿತುಕೊಂಡು ಅಲ್ಲೇ ನಿದ್ದೆ ಹೋದ ದಿನಗಳೆಷ್ಟೋ... ಇದೇ ಅವನಿಗೆ ಸಂಗೀತ. ಈತ ಸರಾಗವಾಗಿ ಗದ್ದೆ ಉಳುಮೆ ಮಾಡುವುದು ನೋಡುತ್ತಿದ್ದರೆ ಕೃಷಿ ಮಕ್ಕಳಾಟವಾಯಿತೇ ಎನಿಸುತ್ತದೆ!
ಕಾಸರಗೋಡು ಅಗಲ್ಪಾಡಿ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಶ್ರೀಕೃಷ್ಣ ಶರ್ಮ. ಓದಿನಲ್ಲೂ ಮುಂದಿದ್ದು, ಕೃಷಿಯಲ್ಲೂ ಖುಷಿ ಕಂಡವ. ದಿನಾಲೂ ಶಾಲೆ ಬಿಟ್ಟು ಬಂದು ಸ್ವಲ್ಪ ಸಮಯವಾದರೂ ಕೃಷಿಯಲ್ಲಿ ತೊಡಗಿದಾಗಲೇ ಈತನ ಮನಸ್ಸಿಗೆ ಹಿತ. ಪಾತೇರಿ ಮಹಾಲಿಂಗೇಶ್ವರ ಶರ್ಮ (ಶಿವ)- ಸಂಧ್ಯಾ ಸರಸ್ವತಿಗಳ ಪುತ್ರ. ಬರೆಕ್ಕಿಲು ಗೋಪಾಲ ಕೃಷ್ಣ ಭಟ್ ಪಾತೇರಿಯವರ ಮೊಮ್ಮಗ. ಇವರೂ ಕೃಷಿಯಲ್ಲಿ ಎತ್ತಿದ ಕೈ. ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು.
ಸುಮ್ಮನೆ ಎಂದುಕೊಳ್ಳಬೇಡಿ, ಈ ಕೃಷ್ಣ ವ್ಯಂಗ್ಯಚಿತ್ರ, ಡ್ರಾಯಿಂಗ್, ಗ್ಲಾಸ್ ಪೇಟಿಂಗ್‌ನಲ್ಲೂ ಬಹುಮಾನ ಪಡೆದಿದ್ದಾನೆ. ಕೃಷಿಯಲ್ಲಿ, ಅಡಕೆ ಮರ ಹತ್ತುವ ಮಷಿನ್, ಔಷಧಿ ಸಿಂಪಡಿಸುವ ಮಷಿನ್ ಸಂಶೋಧಿಸಿದ್ದು ಹೆಮ್ಮೆಯ ವಿಷಯ. ಇವಕ್ಕೆ ಇನ್ನಷ್ಟು ತಾಂತ್ರಿಕ ಅಳವಡಿಕೆ ಅವಶ್ಯ ಇದ್ದು, ಕೃಷಿಕರಿಗೆ ಸದ್ಬಳಕೆ ಆಗುವುದರಲ್ಲಿ ಎರಡು ಮಾತಿಲ್ಲ. ಗೆರಟೆಯಿಂದ ಟೇಬಲ್ ಲ್ಯಾಂಪ್, ಬ್ಯಾಟರಿಯಿಂದ ಚಾರ್ಜ್ ಲೈಟ್, ಗೆರಟೆಯಿಂದ ಗಣಪತಿ, ಹೂವಿನಿಂದ ಹಲವಾರು ದೇವರ ಚಿತ್ರಗಳು, ಸೋಪಿನಿಂದ ಕಲಾಕೃತಿಗಳು, ಟಾರ್ಚ್ ಲೈಟ್ ತಯಾರಿಸಿದ್ದಾನೆ. ವೀಡ್ ಕಟ್ಟರ್‌ನಲ್ಲಿ ಕಳೆ ನಿಯಂತ್ರಣ ಮಾಡುವುದು, ಬಾಳೆ, ಅಡಕೆ, ಹಲಸು, ವಿವಿಧ ತರಕಾರಿ, ಹಣ್ಣುಗಳ ಗಿಡಗಳನ್ನು ಬೆಳೆಸಿದ ಬಗ್ಗೆ ಕೇರಳದ ಕೃಷಿ ಅಧಿಕಾರಿಗಳು ಕಣ್ಣಾರೆ ನೋಡಿ ಯಾವುದೇ ಅರ್ಜಿಗಳಿಲ್ಲದೆ, ಕೇರಳದ ಕೃಷಿ ಭವನದ ವತಿಯಿಂದ 'ಉತ್ತಮ ಕೃಷಿಕ' ಪುರಸ್ಕಾರ ನೀಡಿದ್ದಾರೆ.
ಹೆತ್ತವರೇ ಮಕ್ಕಳು ಓದಿ ಆಫೀಸರ್ ಆಗಲಿ ಎಂದು ಬಯಸುವ ಈ ದಿನಗಳಲ್ಲಿ, ಯುವಕರು ಕೃಷಿ ಎಂದರೆ ಮೂಗು ಮುರಿದು, ಯಾರದೋ ಕೈಕೆಳಗೆ ಪರದೇಶಕ್ಕೆ ದುಡಿಯುತ್ತಿರುವ ಈ ವೇಳೆ, ಭಾರತದ ಬೆನ್ನೆಲುಬನ್ನು ನೀವಿ ಗಟ್ಟಿಗೊಳಿಸುತ್ತಿರುವ ಬಾಲಕನ ಆಸಕ್ತಿ ಮೆಚ್ಚುವಂಥದ್ದು.
- ಕುಮಾರ್ ಪೆರ್ನಾಜೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


